ಹಾಸನದ ಅಸ್ಸಾಮಿಗರಿಗೂ ತಟ್ಟಿದ ಎನ್‌ಆರ್‌ಸಿ ಬಿಸಿ, ಪ್ರಯಾಣಕ್ಕೆ ಸಿದ್ಧತೆ

ಬೇಲೂರು ತಾಲೂಕು ಅರೇಹಳ್ಳಿ ಸಮೀಪದ ಕಾಫಿ ತೋಟವೊಂದರಲ್ಲಿ 9 ವರ್ಷದಿಂದ ಕೆಲಸ ಮಾಡುತ್ತಿರುವ ಹರುನ್ ಅಲಿ ತನ್ನ ಕುಟುಂಬದೊಂದಿಗೆ ಅಸ್ಸಾಂನ ದರಂಗ್ ಜಿಲ್ಲೆಯ ಹುಟ್ಟೂರಿಗೆ ಹೊರಟು ನಿಂತಿದ್ದಾನೆ. ಇದಕ್ಕೆ ಕಾರಣ ಎನ್ಆರ್‌ಸಿ. ಇದು ಅಲಿಯಂಥ ಅನೇಕರ ಕತೆಯೂ ಹೌದು

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಪಟ್ಟಿಯಿಂದ 40 ಲಕ್ಷ ಜನರನ್ನು ಹೊರಗಿಟ್ಟಿರುವ ಕುರಿತು ರಾಷ್ಟ್ರಾದ್ಯಂತ ಚರ್ಚೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಪರ-ವಿರೋಧ ಗುಂಪುಗಳಾಗಿ ವಾದ-ವಿವಾದಗಳಲ್ಲಿ ತೊಡಗಿವೆ. ಆದರೆ, ಇವಾವುದರ ಅರಿವೂ ಇಲ್ಲದೆ, ಅಸ್ಸಾಂನಿಂದ ಮೂರು ಸಾವಿರಕ್ಕೂ ಹೆಚ್ಚು ಕಿಮೀ ದೂರದ ಊರುಗಳಿಗೆ ಬಂದು ಕೂಲಿಕಾರ್ಮಿಕರಾಗಿ ದುಡಿಯುತ್ತ ಬದುಕು ಕಟ್ಟಿಕೊಳ್ಳುತ್ತಿರುವವರಿಗೂ ಎನ್ಆರ್‌ಸಿ ಬಿಸಿ ತಟ್ಟತೊಡಗಿದೆ. ತಾವು ಭಾರತೀಯರೆಂದು ಸಾಬೀತುಪಡಿಸಲು ತುತ್ತು ಹುಟ್ಟುವ ಕೂಲಿ ಬಿಟ್ಟು, ಸಾಲ ಮಾಡಿಕೊಂಡು ಮತ್ತೆ ಸಾವಿರಾರು ಕಿಮೀ ದೂರವಿರುವ ತಮ್ಮ ಊರಿಗೆ ಮರಳಿ, ಎನ್ಆರ್‌ಸಿ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಯತ್ನ ನಡೆಸಬೇಕಾದ ಅಸ್ತಿತ್ವದ ಅನಿವಾರ್ಯತೆ ಇವರಿಗೆ ಎದುರಾಗಿದೆ.

ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ ಮತ್ತು ಬೇಲೂರು ತಾಲೂಕುಗಳ ಕಾಫಿ ತೋಟಗಳಲ್ಲಿ ಹಾಗೂ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಐದಾರು ವರ್ಷಗಳ ಹಿಂದಿನಿಂದಲೂ ಅಸ್ಸಾಂನ ನೂರಾರು ಕಾರ್ಮಿಕ ಕುಟುಂಬಗಳು ಬಂದು ದುಡಿಯುತ್ತಿವೆ. ಸ್ಥಳೀಯವಾಗಿ ಕೂಲಿಕಾರ್ಮಿಕರು ದೊರೆಯದ ಪರಿಸ್ಥಿತಿ ನಿರ್ಮಾಣವಾದಾಗ ಕಾರ್ಮಿಕರನ್ನು ಸರಬರಾಜು ಮಾಡುವ ಏಜೆಂಟ್‌ಗಳು ಕರೆತಂದದ್ದು ದೂರದ ಅಸ್ಸಾಂ ಜನರನ್ನು. ಅಲ್ಲಿ ಸ್ವಂತ ಜಮೀನು, ಉದ್ಯೋಗ ಇಲ್ಲದ ಕಡು ಬಡ ಕುಟುಂಬಗಳು ಹತ್ತು ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆ ಬಂದು ಕಟ್ಟಡ ನಿರ್ಮಾಣ ಮತ್ತಿತರ ಶ್ರಮ ಬೇಡುವ ಕ್ಷೇತ್ರಗಳಲ್ಲಿ ಕೂಲಿ ಅರಸಿ ನೆಲೆ ಕಂಡುಕೊಂಡಿವೆ. ಅದೇ ರೀತಿ, ಕಳೆದ ಐದು ವರ್ಷಗಳಿಂದೀಚೆಗೆ ಮಲೆನಾಡಿನ ಕಾಫಿ ತೋಟಗಳಲ್ಲೂ ಬದುಕು ಕಟ್ಟಿಕೊಂಡಿರುವ ನೂರಾರು ಕುಟುಂಬಗಳಿವೆ.

ಅಸ್ಸಾಂನಲ್ಲಿ ಶ್ರೀಮಂತರ ಜಮೀನುಗಳಲ್ಲಿ ಕೆಲವೇ ತಿಂಗಳುಗಳ ಕಾಲ ಕೆಲಸ ದೊರೆಯುತ್ತದೆ, ಉಳಿದಂತೆ ತುತ್ತಿನ ಚೀಲ ತುಂಬಿಸುವುದು ಕಷ್ಟ. ಅಲ್ಲದೆ, ಅಲ್ಲಿ ಮಹಿಳೆಯರಿಗೆ ಕೆಲಸ ನೀಡುವುದು ಕಡಿಮೆ. ಆದರೆ ಇಲ್ಲಿ ಕಾಫಿ ತೋಟಗಳಲ್ಲಿ ವರ್ಷಪೂರ್ತಿ ಕೆಲಸ ದೊರೆಯುತ್ತದೆ, ಜೊತೆಗೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ. ಈ ಕಾರಣಕ್ಕೆ ಬಹುತೇಕ ಕುಟುಂಬಗಳು ಸಾವಿರಾರು ಕಿಮೀ ದೂರದಿಂದ ಬಂದು ಮಲೆನಾಡಿನ ಕಾಫಿ ತೋಟಗಳಲ್ಲಿ ಆಶ್ರಯ ಪಡೆದುಕೊಂಡಿವೆ. ಇಂತಹ ಕುಟುಂಬಗಳು ಈಗ ಎನ್ಆರ್‌ಸಿ ಪಟ್ಟಿಯಿಂದ ಸಮಸ್ಯೆ ಎದುರಿಸುತ್ತಿವೆ. ಇಲ್ಲಿರುವ ಅಸ್ಸಾಂ ಕಾರ್ಮಿಕರ ಕೆಲ ಕುಟುಂಬಗಳಲ್ಲಿ ಪತಿಯ ಹೆಸರು ಎನ್ಆರ್‌ಸಿ ಪಟ್ಟಿಯಲ್ಲಿದ್ದರೆ, ಪತ್ನಿಯ ಹೆಸರು ಕಾಣೆಯಾಗಿದೆ. ಕೆಲ ಕುಟುಂಬಗಳ ಮಕ್ಕಳ ಹೆಸರೇ ಪಟ್ಟಿಯಲ್ಲಿಲ್ಲ. ಮತದಾರರ ಪಟ್ಟಿಯಲ್ಲೋ, ಮತ್ತಾವುದಾದರೂ ಪಟ್ಟಿಯಲ್ಲೋ ಹೆಸರು ಬಿಟ್ಟುಹೋಗಿದ್ದರೆ ಇವರು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೆಂದು ಕಾಣುತ್ತದೆ. ಆದರೆ, ಇದು ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಾಗಿರುವುದರಿಂದ ಈ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.

ಬೇಲೂರು ತಾಲೂಕು ಅರೇಹಳ್ಳಿ ಸಮೀಪದ ಕಾಫಿ ತೋಟವೊಂದರಲ್ಲಿ ಕಳೆದ 9 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಹರುನ್ ಅಲಿ ಎಂಬ 32ರ ಯುವಕ ಈಗ ತನ್ನ ಕುಟುಂಬದೊಂದಿಗೆ ಅಸ್ಸಾಂನ ದರಂಗ್ ಜಿಲ್ಲೆಯ ಹುಟ್ಟೂರಿಗೆ ಹೊರಟು ನಿಂತಿದ್ದಾನೆ. ಎನ್ಆರ್‌ಸಿ ಪಟ್ಟಿಯಲ್ಲಿ ಈತ ಮತ್ತು ಮೂವರು ಮಕ್ಕಳ ಹೆಸರಿದೆ, ಆದರೆ ಈತನ ಪತ್ನಿ ವಹಿದಾ ಬೇಗಂ ಹೆಸರು ಬಿಟ್ಟುಹೋಗಿದೆಯಂತೆ.

ಎನ್ಆರ್‌ಸಿ ನಿಯಮಗಳ ಪ್ರಕಾರ, 1971ರ ಮಾರ್ಚ್ 24ರ ಮೊದಲಿನಿಂದಲೂ ತಾವು ಅಸ್ಸಾಂ ರಾಜ್ಯದ ನಿವಾಸಿಗಳಾಗಿದ್ದೇವೆ ಎಂಬುದಕ್ಕೆ ದಾಖಲೆ ಒದಗಿಸಬೇಕಂತೆ. ಅದರಂತೆ, ಹರುನ್ ಅಲಿ ತನ್ನ ತಂದೆ ಅಕ್ಬರ್ ಅಲಿ ಅವರ ವಾಸ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಸ್ವೀಕೃತಗೊಂಡಿದೆ. ಅದೇ ರೀತಿ, ಹರುನ್ ಅಲಿ ಅವರ ಪತ್ನಿ ವಹಿದಾ ಬೇಗಂ ಸಹ ತನ್ನ ತಂದೆಯ ವಾಸ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದ್ದರೂ ಸ್ವೀಕೃತಗೊಂಡಿಲ್ಲ. ಆದರೆ, ಆಕೆಯ ತಂದೆಯ ಹೆಸರು ಪಟ್ಟಿಯಲ್ಲಿ ಸೇರಿದೆ! ಇಂತಹ ಲೋಪಗಳಿಂದಾಗಿ ಬಡಕುಟುಂಬಗಳು ಸಾವಿರಾರು ಕಿಮೀ ಅಲೆಯುವಂತಾಗಿದೆ.

ಇಂತಹ ಪರಿಸ್ಥಿತಿಯನ್ನು ಹಲವಾರು ಕಾರ್ಮಿಕ ಕುಟುಂಬಗಳು ಎದುರಿಸುತ್ತಿವೆ. ಅವರೆಲ್ಲ ಊರಿನಲ್ಲಿರುವ ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ, ತಮ್ಮ ಹೆಸರು ಎನ್ಆರ್‌ಸಿ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ಇಲ್ಲದಿದ್ದವರು ಮುಂದೇನು ಮಾಡಬೇಕೆಂಬ ಬಗ್ಗೆ ಸಲಹೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಅಸ್ಸಾಂ ಅಂತಿಮ ಎನ್‍ಆರ್‌ಸಿ ಕರಡಿನಲ್ಲಿ ಮಾಜಿ ರಾಷ್ಟ್ರಪತಿ ಸಂಬಂಧಿಕರೇ ಇಲ್ಲ!

ಎನ್ಆರ್‌ಸಿ ಪಟ್ಟಿಗೆ ಹೆಸರು ಸೇರಿಸಲು ಆಗಸ್ಟ್ 7ರಂದು ಮರು ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಆ ವೇಳೆಗೆ ಅಲ್ಲಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ‘ದಿ ಸ್ಟೇಟ್’ ಜೊತೆ ಮಾತಾಡಿದ ಹರುನ್ ಅಲಿ ತನ್ನ ದುಗುಡ ತೋಡಿಕೊಂಡರು. “ರಾಜ್ಯದ ನಿಜವಾದ ನಾಗರಿಕರನ್ನು ಗುರುತಿಸಲು ಮಾಡುವ ಎನ್ಆರ್‌ಸಿಯಂತಹ ಕ್ರಮ ಒಳ್ಳೆಯದೇ. ಎನ್ಆರ್‌ಸಿ ಗುರುತಿನ ಚೀಟಿ ದೊರೆತರೆ ಯಾರೂ ನಮ್ಮ ರಾಷ್ಟ್ರೀಯತೆಯನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ, ಕೆಲ ಲೋಪಗಳಿಂದಾಗಿ ಮೂಲ ನಾಗರಿಕರೂ ಆತಂಕ ಎದುರಿಸಬೇಕಾಗುತ್ತದೆ ಎಂಬುದಕ್ಕೆ ನಾವೇ ಸಾಕ್ಷಿ,” ಎನ್ನುತ್ತಾರವರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More