ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ ೯ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಸ್ಟ್‌ ೨೯ಕ್ಕೆ, ಸೆ.೧ಕ್ಕೆ ಮತ ಎಣಿಕೆ

ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಆಗಸ್ಟ್ ೨೯ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದ್ದು, ಸೆಪ್ಟೆಂಬರ್‌ ೧ಕ್ಕೆ ಮತ ಎಣಿಕೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಪಿ ಎನ್‌ ಶ್ರೀನಿವಾಸಾಚಾರಿ ಗುರುವಾರ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ೨೯ ನಗರಸಭೆಗಳ ೯೨೭ ವಾರ್ಡ್, ೫೩ ಪುರಸಭೆಗಳ ೧,೨೪೭ ವಾರ್ಡ್‌ ಹಾಗೂ ೨೩ ಪಟ್ಟಣ ಪಂಚಾಯಿತಿಗಳ ೪೦೦ ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಇವಿಎಂಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣ: ಸಿಬಿಐ, ಎಸ್‌ಐಟಿಗೆ ಬಾಂಬೆ ಹೈಕೋರ್ಟ್ ತರಾಟೆ

ವಿಚಾರವಾದಿ ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ್ ಪನ್ಸಾರೆ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಎಸ್‌ಐಟಿಯನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಉಭಯ ತನಿಖಾ ಸಂಸ್ಥೆಗಳು ಹತ್ಯೆ ಪ್ರಕರಣ ಸಂಬಂಧ ಹೈಕೋರ್ಟ್‌ಗೆ ಸಲ್ಲಿಸಿದ್ದ ತನಿಖಾ ಪ್ರಗತಿ ವರದಿಯಲ್ಲಿ ಯಾವುದೇ ಬದಲಾವಣೆಯ ಉಲ್ಲೇಖ ಕಾಣದಿದ್ದಕ್ಕೆ ತನಿಖಾ ಸಂಸ್ಥೆಗಳ ವಿರುದ್ಧ ಅಸಮಾಧಾನ ಹೊರಹಾಕಿದೆ. ಪನ್ಸಾರೆ ಮತ್ತು ಕರ್ನಾಟಕದ ವಿಚಾರವಾದಿ ಎಂ ಎಂ ಕಲಬುರ್ಗಿ ಹತ್ಯೆಗೆ ಒಂದೇ ಗನ್ ಬಳಸಲಾಗಿದೆ ಎಂದು ಸಿಬಿಐ ಮತ್ತು ಎಸ್‌ಐಟಿ ಸಲ್ಲಿಕೆ ಮಾಡಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರಷ್ಯಾದ ಶಸ್ತ್ರಾಸ್ತ್ರ ಖರೀದಿಸಲು ಭಾರತಕ್ಕೆ ಅಮೆರಿಕ ಹೇರಿದ್ದ ನಿರ್ಬಂಧ ಮುಕ್ತಾಯ

ರಷ್ಯಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಭಾರತದ ಮೇಲೆ ಅಮೆರಿಕ ಹೇರಿದ್ದ ನಿರ್ಬಂಧಗಳನ್ನು ರದ್ದುಪಡಿಸುವ ಮಸೂದೆಯನ್ನು ಅಮೆರಿಕ ಸೆನೆಟ್‌ನಲ್ಲಿ ಬುಧವಾರ ಮಂಡಿಸಲಾಗಿದೆ. ಮಸೂದೆಗೆ ಒಪ್ಪಿಗೆ ನೀಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಕಳುಹಿಸಲಾಗಿದೆ. ಈ ಹಿಂದೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಷ್ಯಾ ದೇಶದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅಮೆರಿಕ ಹೇರಿದ್ದ ನಿರ್ಬಂಧವನ್ನು ಮೀರಿ ಎಸ್-೪೦೦ ಹೆಸರಿನ ಶಸ್ತ್ರಗಳನ್ನು ಖರೀದಿಸಲು ಮುಂದಾಗಿದ್ದರು.

ಗುರಗಾಂವ್‌ನಲ್ಲಿ ಮುಸ್ಲಿಂ ಯುವಕನಿಗೆ ಬಲವಂತವಾಗಿ ಗಡ್ಡ ಬೋಳಿಸಿದ ಮೂವರ ಬಂಧನ

ದೆಹಲಿಯ ಮೀವತ್ ಪ್ರದೇಶದ ಜಫ್ರುದ್ದೀನ್ ಹೆಸರಿನ ಮುಸ್ಲಿಂ ಯುವಕನನ್ನು ಮೂವರು ನಿಂದಿಸಿ, ಆತನನ್ನು ಬಲವಂತವಾಗಿ ಕ್ಷೌರದ ಅಂಗಡಿಗೆ ಕರೆದೊಯ್ದು ಗಡ್ಡ ಬೋಳಿಸಿದ ಘಟನೆ ವರದಿಯಾಗಿದೆ. ಆರೋಪಿಗಳನ್ನು ಉತ್ತರ ಪ್ರದೇಶದ ಗೌರವ್, ಏಕ್ಲಾಶ್ ಹಾಗೂ ಹರ್ಯಾಣದ ನಿತಿನ್ ಎಂದು ಗುರುತಿಸಲಾಗಿದೆ. “ಜಫ್ರುದ್ದೀನ್ ಸ್ನೇಹಿತನ ಮನೆಗೆ ತೆರೆಳುತ್ತಿರುವಾಗ ಈ ಘಟನೆ ಸಂಭವಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು,” ಎಂದು ಗುರಗಾಂವ್ ಡಿಸಿಪಿ ಸುಮಿತ್ ಕುಹಾರ್ ಎಎನ್‌ಐ ಸುದ್ದಿವಾಹಿನಿಗೆ ಹೇಳಿಕೆ ನೀಡಿದ್ದಾರೆ.

ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಧನ ಶೇ.0.50ರಷ್ಟು ಕಡಿತ

ಪೆಟ್ರೋಲ್ ಮತ್ತು ಡಿಸೇಲ್ ಖರೀದಿಸಿದಾಗ ಡಿಜಿಟಲ್ ಪೇಮೆಂಟ್ ಮಾಡಿದರೆ ಶೇ.0.75ರಷ್ಟು ನೀಡುತ್ತಿದ್ದ ಪ್ರೋತ್ಸಾಹಧನವನ್ನು ಶೇ.0.50ರಷ್ಟು ಕಡಿತ ಮಾಡಲಾಗಿದ್ದು, ಶೇ.0.25ಕ್ಕೆ ತಗ್ಗಿಸಲಾಗಿದೆ. 20 ತಿಂಗಳ ಹಿಂದೆ ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸಲು ಈ ಯೋಜನೆ ಜಾರಿ ಮಾಡಲಾಗಿತ್ತು. 2016ರ ಡಿಸೆಂಬರ್ 12ರಿಂದ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್, ಡಿಸೇಲ್ ಖರೀದಿಸಿದ ಗ್ರಾಹಕರು ಕಾರ್ಡ್ ಮೂಲಕ ಪಾವತಿಸಿದಾಗ ಅವರ ಖಾತೆಗೆ ಶೇ.0.75ರಷ್ಟು ಮೊತ್ತ ಹಿಂದಿರುಗಿಸಲಾಗುತ್ತಿತ್ತು. ಅಪನಗದೀಕರಣದ ನಂತರ ಉದ್ಭವಿಸಿದ ನಗದು ಕೊರತೆ ಸಮಸ್ಯೆಗೆ ಪರಿಹಾರೋಪಾಯವಾಗಿ ಈ ಕ್ರಮವನ್ನು ಬಳಸಲಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಪಂಪ್‌ಗಳಿಗೆ ಸೂಚನೆ ನೀಡಿ ಪ್ರೋತ್ಸಾಹ ಧನ ತಗ್ಗಿಸುವಂತೆ ಸೂಚಿಸಿವೆ. 1000 ರುಪಾಯಿ ಪೆಟ್ರೋಲ್ ಖರೀದಿಸಿದಾಗ 7.50 ರುಪಾಯಿ ಖಾತೆಗೆ ಹಿಂತಿರುಗುತ್ತಿತ್ತು. ಈಗ ಆ ಮೊತ್ತವು 2.50 ರುಪಾಯಿಗೆ ತಗ್ಗಿದೆ.

ನಟ ಕಮಲ್ ಹಾಸನ್ ವಿರುದ್ಧ ದೂರು ದಾಖಲು

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ. ತಮಿಳು ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ 2 ಸೀಸನ್‌ನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಸರ್ವಾಧಿಕಾರಿಯಂತೆ ಬಿಂಬಿಸಲಾಗಿದೆ ಎಂದು ಕಮಲ್ ವಿರುದ್ಧ ದೂರು ದಾಖಲಿಸಲಾಗಿದೆ. ಕಾರ್ಯಕ್ರಮದ ಟಾಸ್ಕ್‌ವೊಂದರಲ್ಲಿ ಸ್ಪರ್ಧಿಗಳು ಸರ್ವಾಧಿಕಾರಿಯಂತೆ ನಡೆದುಕೊಳ್ಳಬೇಕಿತ್ತು. ಈ ಸಂದರ್ಭ ಮಾತನಾಡಿದ ಕಮಲ್ ಹಾಸನ್, “ರಾಜ್ಯದಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಂಡವರಿಗೆ ಏನಾಯಿತು ಎಂಬುದು ನಿಮಗೆಲ್ಲ ಗೊತ್ತೆ ಇದೆಯಲ್ವಾ?” ಎಂದಿದ್ದರು. ಹೀಗಾಗಿ, ಕಮಲ್ ಹಾಸನ್ ಹಾಗೂ ವಿಜಯ್ ಟಿವಿ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗಿದೆ.

ಬಾಲಿವುಡ್ ಸಂಗೀತ ಅನಾಥ ಮಗುವಿನಂತಾಗಿದೆ: ಎ ಆರ್ ರೆಹಮಾನ್

ಪ್ರಸ್ತುತ ಬಾಲಿವುಡ್ ಸಂಗೀತ ತಂದೆ-ತಾಯಿ ಇಲ್ಲದ ಅನಾಥ ಮಗುವಿನಂತಾಗಿದೆ ಎಂದಿದ್ದಾರೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ ಆರ್ ರೆಹಮಾನ್‌. ಒಂದು ಸಿನಿಮಾಗೆ ಹಲವು ಸಂಗೀತ ಸಂಯೋಜಕರು ಸಂಗೀತ ಮಾಡುವ ಬೆಳವಣಿಗೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡೆ ನೈಜ ಸಂಗೀತದ ಸತ್ವವನ್ನು ಕುಂದಿಸುತ್ತದೆ ಎನ್ನುವುದು ಅವರ ಅಭಿಪ್ರಾಯ. ಅಮೆಜಾನ್‌ ಪ್ರೈಂ ವಿಡಿಯೋಸ್‌ನ ಹೊಸ ಶೋ ‘ಹಾರ್ಮನಿ ವಿಥ್ ಎ ಆರ್ ರೆಹಮಾನ್‌’ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಭಾರತದ ವಿವಿಧೆಡೆಯ ಸಂಗೀತ ವೈವಿಧ್ಯತೆ ಪರಿಚಯಿಸುವುದು ಈ ಶೋ ಉದ್ದೇಶ. ಶೋನಲ್ಲಿ ಮಹಾರಾಷ್ಟ್ರ, ಕೇರಳ, ಸಿಕ್ಕಿಂ ಮತ್ತು ಮಣಿಪುರಿಯ ಸಂಗೀತಗಾರರನ್ನು ರೆಹಮಾನ್ ಪರಿಚಯಿಸಲಿದ್ದಾರೆ.

ಕೊಹ್ಲಿ ಪಡೆಗೆ ಆತಿಥೇಯರಿಂದ ತಿರುಗೇಟು

ಬರ್ಮಿಂಗ್‌ಹ್ಯಾಮ್‌ನ ಎಜ್‌ಬ್ಯಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಿರುಗೇಟು ನೀಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಪಂದ್ಯದ ಎರಡನೇ ದಿನವಾದ ಗುರುವಾರ ೨೮೭ ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದ ಇಂಗ್ಲೆಂಡ್ ವಿರುದ್ಧ ಭಾರತ ಆರಂಭದಿಂದಲೂ ಅಸ್ಥಿರ ಬ್ಯಾಟಿಂಗ್‌ನಿಂದ ದಿಕ್ಕೆಟ್ಟಿತು. ಕನ್ನಡಿಗ ಕೆ ಎಲ್ ರಾಹುಲ್ (೪) ಎರಡಂಕಿ ದಾಟದೆ ವಿಕೆಟ್ ಒಪ್ಪಿಸಿದರೆ, ಆರಂಭಿಕರಾದ ಮುರಳಿ ವಿಜಯ್ (೨೦) ಮತ್ತು ಶಿಖರ್ ಧವನ್ (೨೬) ಕೂಡಾ ತ್ವರಿತಗತಿಯಲ್ಲೇ ಕ್ರೀಸ್ ತೊರೆದರು. ಎಲ್ಲಕ್ಕಿಂತ ಮಿಗಿಲಾಗಿ ಮಧ್ಯಮ ಕ್ರಮಾಂಕಿತ ಆಟಗಾರರಾದ ಅಜಿಂಕ್ಯ ರಹಾನೆ (೧೫) ಮತ್ತು ದಿನೇಶ್ ಕಾರ್ತಿಕ್ (೦) ಬೆನ್ ಸ್ಟೋಕ್ಸ್‌ಗೆ ಬಲಿಯಾದರು. ೪೧ ಓವರ್‌ಗಳಾದಾಗ ಭಾರತ ೫ ವಿಕೆಟ್ ನಷ್ಟಕ್ಕೆ ೧೨೯ ರನ್ ಗಳಿಸಿತ್ತು. ನಾಯಕ ಕೊಹ್ಲಿ (೩೭) ಮತ್ತು ಹಾರ್ದಿಕ್ ಪಾಂಡ್ಯ ೧೩ ರನ್ ಗಳಿಸಿ ಹೋರಾಟ ಮುಂದುವರಿಸಿದ್ದರು.

ಏಷ್ಯಾಡ್‌ಗೂ ಮುನ್ನ ಮತ್ತೊಂದು ಡೋಪಿಂಗ್ ಪತ್ತೆ!

ಪ್ರತಿಷ್ಠಿತ ಏಷ್ಯಾ ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿರುವ ನಡುವೆ ಭಾರತ ಡೋಪಿಂಗ್‌ನಿಂದ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಜಾವೆಲಿನ್ ಎಸೆತಗಾರ ಅಮಿತ್ ಕುಮಾರ್ ಡೋಪಿಂಗ್ ಪರೀಕ್ಷೆಯಲ್ಲಿ ನಪಾಸಾಗಿದ್ದರು. ಇದೀಗ, ಸ್ಟೀಪಲ್‌ಚೇಸ್ ರನ್ನರ್ ನವೀನ್ ಡಾಗರ್ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಪತ್ತೆಯಾಗಿದೆ. ಗುವಾಹತಿಯಲ್ಲಿ ನಡೆದ ಅಂತರ ರಾಜ್ಯ ಅಥ್ಲೆಟಿಕ್ಸ್ ಕೂಟದ ವೇಳೆ ನಡೆಸಲಾದ ಪರೀಕ್ಷೆಯಲ್ಲಿ ಅವರು ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ೨೦೧೪ರ ಇಂಚಾನ್ ಏಷ್ಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಡಾಗರ್, ಗುವಾಹತಿ ಕೂಟದಲ್ಲಿ ೮:೪೧ ಸೆ.ಗಳಲ್ಲಿಯೇ ನಿಗದಿತ ಗುರಿ ತಲುಪಿದ್ದರು. ನಿಷೇಧಿತ ಉದ್ದೀಪನಾ ಮದ್ದಿನ ಅಂಶ ಪತ್ತೆಯಾಗುತ್ತಿದ್ದಂತೆ ಜುಲೈ ೨೩ರಂದೇ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ) ನವೀನ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More