ಸಾಹಿತಿಗಳಿಗೆ ಜೀವಬೆದರಿಕೆ; ಸಾಹಿತ್ಯ ಅಕಾಡೆಮಿ ಸ್ಪಂದನೆಗೆ ಆಗ್ರಹಿಸಿ ಸಾಹಿತಿಗಳ ಪತ್ರ

ಕಳೆದ ಕೆಲ ವಾರಗಳಲ್ಲಿ ಕೇರಳ ಮತ್ತು ಗೋವಾದ ಲೇಖಕರ ಮೇಲೆ ಒತ್ತಡ ಹೇರುವ, ಜೀವಬೆದರಿಕೆ ಒಡ್ಡುವ ಆತಂಕಕಾರಿ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ದೇಶದ ೨೦ ಲೇಖಕರು, ಬೆದರಿಕೆಗೆ ಒಳಗಾದ ಸಾಹಿತಿಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಸಾಹಿತ್ಯ ಅಕಾಡೆಮಿಗೆ ಪತ್ರ ಬರೆದಿದ್ದಾರೆ

ಸಾಹಿತಿ, ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಬಳಿಕ ದೇಶದ ಲೇಖಕರೆಲ್ಲರೂ ಪ್ರಶಸ್ತಿ ಹಿಂದಿರುಗಿಸುವ ಮೂಲಕ ಪ್ರತಿಭಟಿಸಿದ್ದರು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ದನಿ ಎತ್ತಿದ್ದರು. ಆಗ ಸಾಹಿತ್ಯ ಅಕಾಡೆಮಿ ಬರಹಗಾರರ ಪರ ದನಿ ಎತ್ತಲಿಲ್ಲ ಎಂಬ ಟೀಕೆಗೂ ಗುರಿಯಾಗಿತ್ತು. ಇದೀಗ, ಕೇರಳ ಮತ್ತು ಗೋವಾದ ಲೇಖಕರಿಬ್ಬರು ಬೆದರಿಕೆ ಎದುರಿಸುತ್ತಿರುವ ಹೊತ್ತಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಮೌನ ಮತ್ತೆ ಚರ್ಚೆಯ ವಸ್ತುವಾಗಿದೆ.

ಗೋವಾದ ಕೊಂಕಣಿ ಕತೆಗಾರ, ಕಾದಂಬರಿಕಾರ ದಾಮೋದರ್‌ ಮೌಝೊ ಅವರು ಬರೆದ 'ಕಾರ್ಮೆಲಿನ್‌' ಕಾದಂಬರಿ ೧೯೮೩ರಲ್ಲಿ ಪ್ರಕಟಗೊಂಡಿತ್ತು. ಇದು ಇಂಗ್ಲಿಷ್‌ಗೂ ಅನುವಾದವಾಗಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದೆ. ಆದರೆ, ಗೋವಾ ಮೂಲದ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ದಾಮೋದರ್‌ ಅವರ ಕಾದಂಬರಿಯನ್ನು ವಿರೋಧಿಸಿದ್ದೂ ಅಲ್ಲದೆ, ಲೇಖಕರಿಗೆ ಜೀವಬೆದರಿಕೆ ಹಾಕಿತ್ತು.

ಇದೇ ಸನಾತನ ಸಂಸ್ಥೆಗೆ ಸೇರಿದವರು ಎನ್ನಲಾಗಿರುವ ಸದಸ್ಯರೇ ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆಯಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪಗಳು ಕೇಳಿಬಂದಿದ್ದು, ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪ್ರದಾಯವಾದಿ, ಬಲಪಂಥೀಯ ವಿಚಾರಗಳೊಂದಿಗೆ ಭಿನ್ನಾಭಿಪ್ರಾಯವಿರುವ ಲೇಖಕರನ್ನು ಈ ಸಂಸ್ಥೆಯು ಬೆದರಿಸುವ, ಹಲ್ಲೆ ನಡೆಸುವ ಮತ್ತು ಹತ್ಯೆ ನಡೆಸುವ ಮಟ್ಟಕ್ಕೂ ಇಳಿದಿರುವ ಉದಾಹರಣೆಗಳು ಇವೆ ಎಂದು ಗೋವಾದ ಲೇಖಕರು ದಾಮೋದರ್‌ ಪರ ದನಿ ಎತ್ತಿದ್ದಾರೆ.

ಇತ್ತ ಕೇರಳದಲ್ಲೂ ಇಂಥದ್ದೇ ಪ್ರಕರಣ ಇತ್ತೀಚೆಗೆ ನಡೆಯಿತು. ಲೇಖಕ ಎಸ್ ಹರೀಶ್‌ ಅವರ 'ಮೀಶಾ' ಕಾದಂಬರಿ ‘ಮಾತೃಭೂಮಿ’ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟಗೊಂಡಿತು. ಸಂಘಪರಿವಾರದ ಸಂಘಟನೆಗಳ ಬೆದರಿಕೆಯಿಂದಾಗಿ ಪತ್ರಿಕೆಯು ಧಾರಾವಾಹಿ ಪ್ರಕಟಣೆಯನ್ನು ದಿಢೀರನೆ ನಿಲ್ಲಿಸಿತು. ಇಲ್ಲೂ ಲೇಖಕರ ಹರೀಶ್‌ ಅವರಿಗೆ ಜೀವಬೆದರಿಕೆ ಒಡ್ಡಲಾಗಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆಯೂ, ದೇಶದ ಲೇಖಕರನ್ನು ಪ್ರತಿನಿಧಿಸುವ ಸಾಹಿತ್ಯ ಅಕಾಡೆಮಿ ತುಟಿಬಿಚ್ಚಲಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮತ್ತು ಅಕಾಡೆಮಿಯ ಮೌನವನ್ನು ಖಂಡಿಸಿರುವ ದೇಶದ ಪ್ರಮುಖ ಇಪ್ಪತ್ತು ಹಿರಿಯ ಲೇಖಕರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ದಾಮೋದರ್‌ ಮೌಝೊ ಪ್ರಕರಣವನ್ನು ಉಲ್ಲೇಖಿಸಿ, “ಬಹಳಷ್ಟು ಆತಂಕ ಮತ್ತು ನಿರಾಶೆಯ ಭಾವನೆ ಲೇಖಕರನ್ನು ಕಾಡುತ್ತಿದೆ. ಕೊಂಕಣಿ ಲೇಖಕ, ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ದಾಮೋದರ್‌ ಅವರಿಗೆ ಜೀವಬೆದರಿಕೆ ಬಂದಿದ್ದು, ಸ್ವತಃ ಗೋವಾ ಪೊಲೀಸರೇ ಸ್ವಯಂಪ್ರೇರಿತರಾಗಿ ಲೇಖಕರು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಿದ್ದಾರೆ. ಮೃದುಭಾಷಿಯಾದ, ಸೌಮ್ಯ ಸ್ವಭಾವದ ಮೌಝೊ ಅವರು ಯಾರಿಂದಲೇ ಆಗಲಿ ಇಂಥದ್ದೊಂದು ಆಕ್ರೋಶ ಎದುರಿಸುವಂತಾಗಿದ್ದು ಒಪ್ಪಿಕೊಳ್ಳಲಾಗದು,'' ಎಂದು ಲೇಖಕರ ಮೇಲಿನ ದಾಳಿಯ ಬಗ್ಗೆ ಬೇಸರ ವ್ಯಕ್ತಪಡಿಸಲಾಗಿದೆ.

ಮುಂದುವರಿದು, ಕೇರಳದಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕೃತ ಲೇಖಕ ಎಸ್‌ ಹರೀಶ್‌ ಅವರಿಗೂ ಜೀವಬೆದರಿಕೆ ಇದ್ದ ಸಂಗತಿಯನ್ನು ಉಲ್ಲೇಖಿಸಿದ್ದು, ಕಲಬುರ್ಗಿ ಹತ್ಯೆ ಸಂದರ್ಭದಲ್ಲಿ ದೇಶದ ಲೇಖಕರು, ಕಲಾವಿದರು, ವಿದ್ವಾಂಸರು ಪ್ರತಿಭಟಿಸಿದ್ದನ್ನು ನೆನಪಿಸಿದೆ.

ಇದನ್ನೂ ಓದಿ : ಲೇಖಕ ದಾಮೋದರ್ ಗೆ ಜೀವ ಬೆದರಿಕೆ; ಸನಾತನ ಸಂಸ್ಥೆ ನಿಷೇಧಕ್ಕೆ ಹೆಚ್ಚಿದ ಆಗ್ರಹ

"ಸಾಹಿತ್ಯ ಅಕಾಡೆಮಿಯೂ ಈ ಹಿನ್ನೆಲೆಯಲ್ಲಿ ಗೌರವಾನ್ವಿತ ವ್ಯಕ್ತಿ ಮತ್ತು ಲೇಖಕರು, ಚಿಂತಕರು, ಕಲಾವಿದರು ಮತ್ತು ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆಗಳನ್ನು ಖಂಡಿಸಬೇಕು,'' ಎಂದು ಪತ್ರದ ಮೂಲಕ ಆಗ್ರಹಿಸಲಾಗಿದ್ದು, "ದಾಮೋದರ್‌ ಮೌಝೊ, ಎಸ್‌ ಹರೀಶ್‌ ಮತ್ತು ಧರ್ಮ, ಸಿದ್ಧಾಂತಗಳ ಹೆಸರಿನಲ್ಲಿ ಹಲ್ಲೆಗೆ ಒಳಗಾಗುವ ಯಾವುದೇ ಲೇಖಕರಿಗೆ ಎಲ್ಲ ರೀತಿಯ ಬೆಂಬಲ ನೀಡಬೇಕು,'' ಎಂದೂ ಒತ್ತಾಯಿಸಿದೆ.

ಹಿರಿ-ಕಿರಿ ಪೀಳಿಗೆಯ ಲೇಖಕರಾದ ಕೇಕಿ ದಾರುವಾಲ ನಯನಾತಾರ ಸೆಹಗಲ್‌, ಗೀತಾ ಹರಿಹರನ್‌, ಕೆ ಸಚ್ಚಿದಾನಂದನ್‌, ಶಶಿ ದೇಶಪಾಂಡೆ, ಸಾರಾ ಜೋಸೆಫ್‌, ಮನೋಹರ್‌ ಶೆಟ್ಟಿ, ರಿತು ಮೆನನ್‌, ಕೆ ಶ್ರೀಲತಾ, ಹನ್ಸದಾ ಸೌವೇಂದ್ರ ಶೇಖರ್‌, ರೆಜಿನಾಲ್ಡ್‌ ಮ್ಯಾಸೆ, ಮೀನಾ ಅಲೆಕ್ಸಾಂಡರ್‌, ಅರುಂಧತಿ ಘೋಷ್‌, ಚಂದನ್‌ ಗೌಡ, ಡೋನಾ ಮಯೂರಾ, ಅನನ್ಯ ವಾಜ್‌ಪೇಯಿ, ಸುಸಿ ಥಾರು, ಶಮಿಕ್‌ ಬಂದೋಪಾಧ್ಯಾಯ, ಜೆರ್ರಿ ಪಿಂಟೊ, ಕವಿತಾ ಮುರುಳೀಧರನ್‌, ಶಾಂತಾ ಗೋಖಲೆ, ಅಮರ್‌ಜಿತ್‌ ಚಂದನ್‌, ಆತ್ಮಜಿತ್‌ ಸಿಂಗ್‌, ಶೋಮಾ ಚಟರ್ಜಿ, ಸುನೀಲ್‌ ಪಿ ಎಲಾಯಿಡೋಮ್‌, ಎನ್‌ ಎಸ್‌ ಮಾಧವನ್‌ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಹೇಳಿಕೆ ನೀಡಿ ಕೈತೊಳೆದುಕೊಂಡ ಅಕಾಡೆಮಿ!

ಕಳೆದ ಕೆಲವು ವರ್ಷಗಳಲ್ಲಿ ಲೇಖಕರು, ಪತ್ರಕರ್ತರ ಮೇಲೆ ಹಲ್ಲೆ, ಬೆದರಿಕೆ ಪ್ರಕರಣಗಳು ಹೆಚ್ಚಿವೆ. ಸಾಹಿತಿಗಳು ಬರವಣಿಗೆಯನ್ನು ನಿಲ್ಲಿಸುವಷ್ಟು, ಸಾಹಿತ್ಯ ಕೃತಿಗಳನ್ನು ಹಿಂದೆ ಪಡೆಯುವಷ್ಟು ವಾತಾವರಣ ಬಿಗು ಮತ್ತು ಕಲುಷಿತವಾಗುತ್ತಿದೆ. ಇಂಥ ಹೊತ್ತಲ್ಲಿ ದಾಮೋದರ್‌ ಮತ್ತು ಹರೀಶ್‌ ಅವರಿಗೆ ಜೀವಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಾಹಿತಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ, ದೇಶದ ಸಾಹಿತಿಗಳ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ಸ್ಪಂದಿಸಬೇಕು, ಸೂಕ್ತ ಕ್ರಮಕ್ಕೆ ಆಗ್ರಹಿಸುವ ಅಥವಾ ಒತ್ತಡ ರೂಪಿಸುವ ನಿಟ್ಟಿನಲ್ಲಿ ಹೊಣೆ ಹೊರಬೇಕು ಎಂಬ ನಿರೀಕ್ಷೆಯನ್ನು ಬರಹಗಾರರು ಹೊಂದಿದ್ದರು. ಆದರೆ, ಸಾಹಿತ್ಯ ಅಕಾಡೆಮಿ ಏಳು ಸಾಲಿನ ಹೇಳಿಕೆ ನೀಡಿ ಕೈತೊಳೆದುಕೊಂಡಿದೆ!

"ಸಾಹಿತ್ಯ ಅಕಾಡೆಮಿಯು ಬರಹಗಾರರು, ಚಿಂತಕರು ಮತ್ತು ಕವಿಗಳ ಮೇಲೆ, ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನಲ್ಲಿ ಎಲ್ಲೇ ಆಗಲಿ, ಅವರ ಮೇಲೆ ನಡೆಯುವ ಹಲ್ಲೆಯನ್ನು ಖಂಡಿಸುತ್ತದೆ. ಸಾಹಿತ್ಯ ಅಕಾಡೆಮಿ ಬರಹಗಾರರಿಗೆ ಇರುವ ಬರಹಗಾರರ ಸಂಸ್ಥೆಯಾಗಿದ್ದು, ಬರಹಗಾರರಿಂದಲೇ ಮಾರ್ಗದರ್ಶನ ಪಡೆಯುತ್ತದೆ. ಸಾಹಿತ್ಯ ಅಕಾಡೆಮಿ ಪುರಸ್ಕೃತ ಹಾಗೂ ಮಹತ್ವದ ಕೊಂಕಣಿ ಬರಹಗಾರ ಮತ್ತು ವಿದ್ವಾಂಸ ದಾಮೋದರ್‌ ಮೌಜೊ ಹಾಗೂ ದೇಶದ ವಿವಿಧ ಭಾಗಗಳ ಲೇಖಕರಿಗೆ ಬೆದರಿಕೆ ಹಾಕಲಾಗಿದೆ ಎಂಬ ಸುದ್ದಿ ತೀವ್ರ ನೋವುಂಟು ಮಾಡಿದೆ. ಸಾಹಿತ್ಯ ಅಕಾಡೆಮಿ ಇಂಥ ದಾಳಿಗಳನ್ನು ಬಲವಾಗಿ ಖಂಡಿಸುತ್ತದೆ ಮತ್ತು ಭಾರತದ ಬರಹಗಾರರ ಸಮುದಾಯದ ಬೆನ್ನಿಗೆ ನಿಲ್ಲುತ್ತದೆ,'' ಎಂದು ಅಕಾಡೆಮಿ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ಹೇಳಿಕೆ ನೀಡಿದ್ದಾರೆ.

ಯಾವುದೇ ಬೆಳವಣಿಗೆಗೆ ತಮ್ಮದೊಂದು ಪ್ರತಿಕ್ರಿಯೆ ದಾಖಲಿಸುವ ರಾಜಕೀಯ ನಡೆಯಂತೆ ಈ ತಥಾಕಥಿತ ಹೇಳಿಕೆ ಕಾಣಿಸುತ್ತದೆಯೇ ಹೊರತು, ಬರಹಗಾರರಿಗೆ ಇರುವ ಬರಹಗಾರರ ಸಂಸ್ಥೆ ಸ್ಪಂದಿಸಿದಂತೆ ಕಾಣಿಸುವುದಿಲ್ಲ. ಬರಹಗಾರರನ್ನು ಪ್ರತಿನಿಧಿಸುವ ಸಂಸ್ಥೆ ಎಂದು ಹೇಳಿಕೊಂಡಿರುವುದಕ್ಕಾದರೂ, ಜೀವಬೆದರಿಕೆ ಒಡ್ಡುವ, ಹಲ್ಲೆ ನಡೆಸುವಂತಹ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸುವ ಪ್ರಯತ್ನವನ್ನೂ ಅಕಾಡೆಮಿ ಮಾಡಿಲ್ಲ. ಬದಲಿಗೆ, ಲೇಖಕರ ದನಿಯಾದ ಅಕಾಡೆಮಿ ಇಂಥ ಬೆಳವಣಿಗೆಗೆ ಸ್ಪಂದಿಸಲಿಲ್ಲ ಎಂಬ ಆರೋಪದಿಂದ ಮುಕ್ತವಾಗಿ ಉಳಿಯಲಷ್ಟೇ ಹೇಳಿಕೆ ನೀಡಿದಂತೆ ಕಾಣಿಸುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More