ಮೂರು ತಿಂಗಳ ವಿಶ್ರಾಂತಿ ನಂತರ ನಾರ್ತ್ ಬ್ಲಾಕ್‌ಗೆ ವಾಪಸಾಗಲಿದ್ದಾರೆ ಜೇಟ್ಲಿ

ಮೂತ್ರಪಿಂಡ ಶಸ್ತ್ರಚಿಕಿತ್ಸೆಯಿಂದಾಗಿ ಮೂರು ತಿಂಗಳಿಂದ ವಿಶ್ರಾಂತಿಯಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಆಗಸ್ಟ್ ತಿಂಗಳ ಉತ್ತರಾರ್ಧದಲ್ಲಿ ನಾರ್ತ್ ಬ್ಲಾಕ್‌ಗೆ ವಾಪಸಾಗಲಿದ್ದಾರೆ. ಸದ್ಯ ರೈಲ್ವೆ ಸಚಿವ ಪಿಯುಶ್ ಗೋಯಲ್ ಹಂಗಾಮಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಮೂರು ತಿಂಗಳಿಂದ ವಿಶ್ರಾಂತಿಯಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಆಗಸ್ಟ್ ತಿಂಗಳ ಉತ್ತರಾರ್ಧದಲ್ಲಿ ವಾಪಸಾಗಲಿದ್ದಾರೆ ಎಂದು ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ. ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ, ಮೇ 12ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮೇ 14ರಂದು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಸೋಂಕು ತಗಲುವುದನ್ನು ತಡೆಯಲು ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇಡಲಾಗಿತ್ತು. ಮೇ 25ರಂದು ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಹಿಸಲಾಗಿತ್ತು.

ಶಸ್ತ್ರಚಿಕಿತ್ಸೆ ನಂತರ ನಿತ್ಯ ಶ್ವಾಸಕೋಶ ಶಾಸ್ತ್ರಜ್ಞ, ಹೃದಯತಜ್ಞ, ಮೂತ್ರಪಿಂಡ ಶಾಸ್ತ್ರಜ್ಞ, ಅಂತಃಸ್ರಾವಶಾಸ್ತ್ರಜ್ಞರು (Endocrinologist) ಸೇರಿದಂತೆ ತಜ್ಞವೈದ್ಯರ ತಂಡವು ಅವರ ಮೇಲೆ ನಿಗಾ ಇಟ್ಟಿತ್ತು. ತ್ವರಿತಗತಿಯಲ್ಲಿ ಜೇಟ್ಲಿ ಅವರು ಚೇತರಿಸಿಕೊಂಡರು.

ಜೇಟ್ಲಿ ಅವರ ದೂರದ ಸಂಬಂಧಿ ಮಧ್ಯವಯಸ್ಕ ಮಹಿಳೆಯೊಬ್ಬರು ಮೂತ್ರಪಿಂಡ ದಾನ ಮಾಡಿದ್ದರು. ‘ಲಿವ್ ಅನ್ ರಿಲೇಟೆಡ್ ಡೊನೆಶನ್’ ವರ್ಗದಲ್ಲಿ ಮೂತ್ರಪಿಂಡ ದಾನ ಮಾಡಿದ್ದರು. ಬದುಕಿರುವ, ರಕ್ತ ಸಂಬಂಧವಿಲ್ಲದ, ಆದರೆ ಅಂಗ ಸ್ವೀಕರಿಸುವವರೊಂದಿಗೆ ಭಾವನಾತ್ಮಕವಾಗಿ ಅವಲಂಬಿತರಾದ ಅಂದರೆ, ಗೆಳಯರು, ಸಂಬಂಧಿಗಳು, ನೆರೆಹೊರೆಯವರು, ಅಥವಾ ಅಳಿಯ- ಸೊಸೆ- ಅತ್ತೆ- ಮಾವ ಅಂಗ ದಾನ ಮಾಡಬಹುದು. ಅಂಗ ಕಸಿ ಮಾಡುವ ಮುನ್ನ ಅಧಿಕೃತ ಸಮಿತಿಯು ಪರಿಶೀಲನೆ ಮಾಡಿ ಅನುಮತಿ ನೀಡುತ್ತದೆ.

ಅಂಗ ಕಸಿ ವೇಳೆ ಸ್ವೀಕರಿಸುವ ವ್ಯಕ್ತಿಯನ್ನು ಇಮ್ಯುನೋಸಪ್ರಸೆಂಟ್ಸ್ ಸ್ಥಿತಿಯಲ್ಲಿ ಇಡಲಾಗುತ್ತದೆ. ಇದರಿಂದ ಕಸಿ ಮಾಡಿದ ಅಂಗವನ್ನು ಪರಿತ್ಯಕ್ತಗೊಳಿಸುವ ದೇಹದ ಸಾಮರ್ಥ್ಯವು ತಗ್ಗುತ್ತದೆ. ಈ ಹಂತದಲ್ಲಿ ಸೋಂಕು ತಗಲುವುದನ್ನು ತಪ್ಪಿಸಲು ಪ್ರತ್ಯೇಕವಾಗಿಡಲಾಗುತ್ತದೆ. ಜೇಟ್ಲಿ ಅವರಿಗೆ ಕಾರ್ಡಿಯೋ ಥೊರಾಸಿಕ್ ಸೆಂಟರ್‌ನಲ್ಲಿ ಅಂಗಕಸಿ ಶಸ್ತ್ರಜ್ಞರು, ಕಸಿ ಅರವಳಿಕೆ ತಜ್ಞರು ಸೇರಿದಂತೆ 20 ತಜ್ಞರ ತಂಡವು ಅಂಗಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿತ್ತು. ಎಐಐಎಂಎಸ್ ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಸಂದೀಪ್ ಗುಲೇರಿಯಾ, ಶಸ್ತ್ರಜ್ಞ ವಿ ಕೆ ಬನ್ಸಲ್, ಮೂತ್ರಪಿಂಡ ಶಾಸ್ತ್ರಜ್ಞ ಸಂದೀಪ್ ಮಹಾಜನ್, ಎಐಐಎಂಎಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ತಜ್ಞವೈದ್ಯರ ತಂಡದಲ್ಲಿದ್ದರು.

ಏಪ್ರಿಲ್ 6ರಂದು ಖುದ್ದು ಸಚಿವ ಜೇಟ್ಲಿ ಅವರೇ ತಮ್ಮ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. "ನನಗೆ ಮೂತ್ರಪಿಂಡ ಸಂಬಂಧಿಸಿದ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ,” ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು. 2014ರಲ್ಲಿ ಜೇಟ್ಲಿ ಅವರು ಬ್ಯಾರಿಯಾಟ್ರಿಕ್ (ಕರುಳಿಗೆ ಸಂಬಂಧಿಸಿದ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಲವು ವರ್ಷಗಳ ಹಿಂದೆ ಜೇಟ್ಲಿ ಅವರಿಗೆ ಹೃದಯ ಶಸ್ತ್ರಚಿಕಿತ್ಸೆಯೂ ಆಗಿದೆ.

ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆದ ನಂತರ ಜುಲೈ 1ರಂದು ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ವರ್ಷ ತುಂಬಿದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಜೇಟ್ಲಿ, ತಮ್ಮ ಅಸಾಮರ್ಥ್ಯ ಮರೆತು ಕುಮಾರಸ್ವಾಮಿಯವರನ್ನು ಅಪಹಾಸ್ಯ ಮಾಡಿದ್ದು ಸರಿಯೇ?

ಅವರು ಫೇಸ್ಬುಕ್‌ನಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಅವಧಿಗೆ ಮುನ್ನವೇ ಹುದ್ದೆ ತೊರೆಯುತ್ತಿರುವ ಮಾಹಿತಿಯನ್ನು ಖುದ್ಧ ಅರುಣ್ ಜೇಟ್ಲಿ ಫೇಸ್ಬುಕ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದರು. ಅಲ್ಲದೆ, ಜಿಎಸ್ಟಿ, ಪೆಟ್ರೋಲ್ ಬೆಲೆ ಏರಿಕೆ ಕುರಿತಾಗಿ ಕಾಂಗ್ರೆಸ್ ಮಾಡಿದ ಟೀಕೆಗಳಿಗೂ ಅವರು ಫೇಸ್ಬುಕ್ ಪೋಸ್ಟ್ ಮೂಲಕವೇ ಪ್ರತಿಕ್ರಿಯಿಸಿದ್ದರು.

ಅರುಣ್ ಜೇಟ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಾಗ ವಿತ್ತ ಸಚಿವಾಲಯವು ಸಚಿವರೇ ಇಲ್ಲದೆ ಅನಾಥವಾಗಿದೆ, ಜೇಟ್ಲಿ ಅವರು ತಮ್ಮ ಜವಾಬ್ದಾರಿಯನ್ನು ಬೇರಾರಿಗೂ ವಹಿಸಿಲ್ಲ. ಹೀಗಾಗಿ, ಅಧಿಕಾರಿಗಳೇ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗಿದ್ದವು. ಅದಾದ ನಂತರ ಪಿಯುಶ್ ಗೋಯಲ್ ಅವರನ್ನು ಹಂಗಾಮಿ ವಿತ್ತ ಸಚಿವರನ್ನಾಗಿ ನೇಮಕ ಮಾಡಲಾಯಿತು. ಈ ನಡುವೆ, ಅರವಿಂದ್ ಸುಬ್ರಮಣಿಯನ್ ಅವರು ಜೇಟ್ಲಿ ಅವರನ್ನು ಭೇಟಿ ಮಾಡಿ ರಾಜಿನಾಮೆ ನೀಡುವ ವಿಷಯ ತಿಳಿಸಿದ್ದನ್ನು ಜೇಟ್ಲಿ ಅವರು ಪ್ರಕಟಿಸಿದಾಗ ವಿತ್ತ ಸಚಿವರು ಅರುಣ್ ಜೇಟ್ಲಿ ಅವರೋ ಅಥವಾ ಪಿಯುಶ್ ಗೋಯಲ್ ಅವರೋ ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More