ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಸೋನಿಯಾ ಹೆಸರು ಹೇಳಿಸಲು ಅಧಿಕಾರಿಗಳಿಂದ ಜಾಮೀನಿನ ಆಮಿಷ!

“ಗಾಂಧಿ ಕುಟುಂಬದವರ ಹೆಸರನ್ನು ಪ್ರಕರಣದಲ್ಲಿ ಎಳೆದುತರಬೇಕೆಂಬುದು ತನಿಖಾಧಿಕಾರಿಗಳ ಉದ್ದೇಶವಾಗಿತ್ತು,” ಎಂಬ, ಬ್ರಿಟಿಷ್ ಶಸ್ತ್ರಾಸ್ತ್ರ ದಲ್ಲಾಳಿ ಕ್ರಿಶ್ಚಿಯನ್ ಮೈಕೆಲ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಕುರಿತು ‘ಇಂಡಿಯಾ ಟುಡೇ’ ನಿಯತಕಾಲಿಕಕ್ಕೆ ಅವರು ನೀಡಿರುವ ಸಂದರ್ಶನ ಚರ್ಚೆಗೀಡಾಗಿದೆ

3600 ಕೋಟಿ ರು. ಮೊತ್ತದ ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಹೇಳಿದರೆ ತನಗೆ ಜಾಮೀನು ಸಿಗಲಿದೆ ಎಂದು ಭಾರತೀಯ ತನಿಖಾಧಿಕಾರಿಗಳು ಆಮಿಷ ಒಡ್ಡಿದ್ದಾಗಿ ಬ್ರಿಟಿಷ್ ಶಸ್ತ್ರಾಸ್ತ್ರ ದಲ್ಲಾಳಿ ಕ್ರಿಶ್ಚಿಯನ್ ಮೈಕೆಲ್ ಗಂಭೀರ ಆರೋಪ ಮಾಡಿದ್ದಾರೆ.

ದುಬೈನಲ್ಲಿ ಜಾಮೀನು ಪಡೆದ ಒಂದು ದಿನದ ಬಳಿಕ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಸಂಬಂಧ 60 ದಶಲಕ್ಷ ಯೂರೋಗಳನ್ನು ಕಿಕ್‌ಬ್ಯಾಕ್ ರೂಪದಲ್ಲಿ ನೀಡಿರುವ ಶಂಕೆ ಈ ದಲ್ಲಾಳಿ ಮೇಲಿದೆ. 1997ರಿಂದ 2013ರವರೆಗೆ 300 ಬಾರಿ ಅವರು ಭಾರತಕ್ಕೆ ಪ್ರಯಾಣಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

“ಗಾಂಧಿ ಕುಟುಂಬ ಮತ್ತು ಸಂಸದ ಅಹಮದ್ ಪಟೇಲ್ ಅವರ ಹೆಸರನ್ನು ಪ್ರಕರಣದಲ್ಲಿ ಎಳೆದುತರಬೇಕೆಂಬುದು ತನಿಖಾಧಿಕಾರಿಗಳ ಉದ್ದೇಶವಾಗಿತ್ತು. ದಾಖಲೆಯಲ್ಲಿ ಅವರ ಹೆಸರನ್ನು ಸೂಚಿಸುವಂತೆ ಹೇಳಿದರು,” ಎಂಬ ಗುರುತರ ಆರೋಪವನ್ನು ಮೈಕೆಲ್ ಮಾಡಿದ್ದಾರೆ. ಘಟನೆಯ ಕುರಿತು ‘ಇಂಡಿಯಾ ಟುಡೇ’ ನಿಯತಕಾಲಿಕಕ್ಕೆ ಅವರು ನೀಡಿರುವ ಸಂದರ್ಶನ ಸಂಚಲನ ಸೃಷ್ಟಿಸಿದೆ.

ಜಾರಿ ನಿರ್ದೇಶನಾಲಯದ ಪ್ರಕಾರ, ಮೈಕೆಲ್ ದುಬೈ ಮೂಲದ ಗ್ಲೋಬಲ್ ಸರ್ವೀಸಸ್ ಎಫ್‌ಝಡ್‌ಇ ಸಂಸ್ಥೆಯನ್ನು ಬಳಸಿ ಲಂಚ ನೀಡಿದ್ದರು. ಆದರೆ, ತಾವು ಯಾವುದೇ ತಪ್ಪು ಎಸಗಿಲ್ಲ ಎನ್ನುತ್ತಿದ್ದಾರೆ ಮೈಕೆಲ್. ಈಚೆಗೆ ಮೈಕೆಲ್ ಗಡಿಪಾರು ಪ್ರಕರಣದ ವಿಚಾರಣೆ ನಡೆಸಿದ ದುಬೈ ನ್ಯಾಯಾಲಯ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. 49 ದಿನದ ಹಿಂದೆ ಅವರನ್ನು ಬಂಧಿಸಲಾಗಿತ್ತು.

‘ಇಂಡಿಯಾ ಟುಡೆ’ಗೆ ದೂರವಾಣಿ ವಿಶೇಷ ಸಂದರ್ಶನ ನೀಡಿದ ಮೈಕೆಲ್, “ಸೋನಿಯಾ ವಿರುದ್ಧ ಸಾಕ್ಷ್ಯ ನುಡಿಯುವಂತೆ ಒತ್ತಾಯಿಸಲಾಗಿದ್ದು, ಈ ಬಗ್ಗೆ ಹೋಟೆಲ್ ಭದ್ರತಾ ವೀಡಿಯೊ ಸೇರಿದಂತೆ ಕನಿಷ್ಠ 6 ಸಾಕ್ಷ್ಯಗಳನ್ನು ಒದಗಿಸಬಲ್ಲೆ,” ಎಂದು ಹೇಳಿದ್ದಾರೆ.

ಜುಲೈ 19ರಂದು ವಕೀಲ ರೊಸ್ಮೆರಿ ಪಾಟ್ರಿಝಿ ಅವರು ಭಾರತೀಯ ತನಿಖಾ ಸಂಸ್ಥೆಗಳ ವಿರುದ್ಧ ಇಂತಹುದೇ ಆರೋಪಗಳನ್ನು ಮಾಡಿದ್ದರು. ಸಿಬಿಐ ಈಗಾಗಲೇ ಆರೋಪಗಳನ್ನು ನಿರಾಕರಿಸಿದೆ. “ಹಗರಣದ ಗಮನವನ್ನು ಬೇರೆಡೆ ಸೆಳೆಯಲು ಮತ್ತು ತನಿಖೆಯಿಂದ ನುಣುಚಿಕೊಳ್ಳಲು ಕೆಲವು ಯತ್ನಗಳು ನಡೆದಿವೆ. ನಮಗೆ ದೊರೆತಿರುವ ಸಾಕ್ಷ್ಯಗಳ ಆಧಾರದ ಮೇಲೆ ಕಾನೂನುಬದ್ಧವಾಗಿ ನಡೆದುಕೊಳ್ಳುತ್ತಿರುವುದರಿಂದ ಅಂತಹ ಯತ್ನಗಳು ಫಲಿಸುವುದಿಲ್ಲ,” ಎಂದು ಪಾಟ್ರಿಝಿ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐನ ಅಭಿಷೇಕ್ ದಯಾಳ್ ಪ್ರತಿಕ್ರಿಯಿಸಿದ್ದರು.

ಈಗ ಸ್ವತಃ ಮೈಕೆಲ್ ಅವರೇ ಆರೋಪ ಮಾಡಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. “ಮೇ ತಿಂಗಳಲ್ಲಿ ನನ್ನನ್ನು ಭೇಟಿಯಾಗಲು ಭಾರತದಿಂದ ನಿಯೋಗವೊಂದು ಬಂದಿದ್ದು, ಅವರೊಂದಿಗೆ ಮಾತುಕತೆ ನಡೆಸಲು ನಾನು ಒಪ್ಪಿಗೆ ನೀಡಿದೆ," ಎಂದು ಮೈಕೆಲ್ ‘ಇಂಡಿಯಾ ಟುಡೆ’ ನಿಯತಕಾಲಿಕಕ್ಕೆ ಹೇಳಿದ್ದಾರೆ. “ಗ್ರಾಂಡ್ ಹಯತ್ ಹೋಟೆಲಿನಲ್ಲಿ ಒಂದು ಮತ್ತು ದುಬೈನ ಪ್ಯಾಲೆಸ್ ಹೋಟೆಲಿನಲ್ಲಿ ಎರಡು ಸಭೆ ನಡೆದಿವೆ. 20 ಪುಟಗಳ ದಾಖಲೆಯನ್ನು ನೀಡಿದ ಅವರು ಅದಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದರು,” ಎಂದೂ ತಿಳಿಸಿದ್ದಾರೆ.

ಆದರೆ ಪತ್ರಕ್ಕೆ ಮೈಕೆಲ್ ಸಹಿ ಮಾಡಿಲ್ಲ. “ಎರಡು-ಮೂರು ಪುಟಗಳನ್ನು ಓದಿದ ಬಳಿಕ ಸಹಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಡೆಯದೆ ಇರುವ ಘಟನೆಗಳನ್ನೆಲ್ಲ ಇದರಲ್ಲಿ ಸೇರಿಸಿರುವುದರಿಂದ ಸಹಿ ಮಾಡಲು ಆಗುವುದಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದೆ,” ಎಂದು ಅವರು ಮಾಹಿತಿ ನೀಡಿದ್ದಾರೆ.

“ಗಾಂಧಿ ಕುಟುಂಬ ಮತ್ತು ಸಂಸದ ಅಹಮದ್ ಪಟೇಲ್ ಅವರ ಹೆಸರನ್ನು ಪ್ರಕರಣದಲ್ಲಿ ಎಳೆದುತರಬೇಕೆಂಬುದು ತನಿಖಾಧಿಕಾರಿಗಳ ಉದ್ದೇಶವಾಗಿತ್ತು. ದಾಖಲೆಯಲ್ಲಿ ಅವರ ಹೆಸರನ್ನು ಸೂಚಿಸುವಂತೆ ಹೇಳಿದರು. ಇದೆಲ್ಲವೂ ರಾತ್ರಿ 11 ಗಂಟೆಯವರೆಗೆ ನಡೆಯಿತು. ಕಡತಗಳನ್ನು ಪರಿಶೀಲಿಸಲಾಯಿತು. ಅವುಗಳಲ್ಲಿ ಏನೂ ಸಿಗಲಿಲ್ಲ. ಕಡೆಗೆ ನಾನು ಬರೆಯದೆ ಇದ್ದ, ಬರೆಯಲು ಸೂಚಿಸದೆ ಇದ್ದ ಬಜೆಟ್ ಪ್ರತಿಯೊಂದನ್ನು ತೆಗೆಯಲಾಯಿತು. ಅದನ್ನು ಬರೆದಾಗ ನಾನು ಅಲ್ಲಿ ಇರಲೇ ಇಲ್ಲ. ಪ್ರತಿಯ ಕೊನೆಯಲ್ಲಿ ಶ್ರೀಮತಿ ಗಾಂಧಿ ಮತ್ತು ಎಪಿ ಎಂಬ ಹೆಸರನ್ನು ನಮೂದಿಸಲಾಗಿತ್ತು. ಅವರು ಸೋನಿಯಾ ಹಾಗೂ ಅಹಮದ್ ಪಟೇಲ್ ಅವರನ್ನು ಸಂಕೇತಿಸುವ ಪದಗಳಾಗಿದ್ದವು. ಇದಕ್ಕೆ ಸಹಿ ಹಾಕಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಅವರು ಹೇಳಿದರು,” ಎಂಬುದಾಗಿ ಮೈಕೆಲ್ ಆರೋಪಿಸಿದ್ದಾರೆ.

ಮೈಕೆಲ್ ಪ್ರಕಾರ, ಆ ಬಜೆಟ್ ಪ್ರತಿ ಅವರು ಬರೆದದ್ದಾಗಿರಲಿಲ್ಲ, ಬದಲಿಗೆ ಹಗರಣದ ಮತ್ತೊಬ್ಬ ದಲ್ಲಾಳಿ ಗ್ಯುಡೊ ಹಷ್ಕೆ ಅವರಿಗೆ ಸೇರಿದ್ದಾಗಿತ್ತು. ಅವರ ಆಮಿಷವನ್ನು ಏಕೆ ಒಪ್ಪಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಮೈಕೆಲ್, “ನಮಗೆ ಗೊತ್ತೇ ಇಲ್ಲದ ವ್ಯಕ್ತಿಗಳು, ನಮಗೆ ಕೇಡು ಬಯಸದ ವ್ಯಕ್ತಿಗಳಿಗೆ ಕೇಡುಂಟು ಮಾಡುವುದು ಸಾಧ್ಯವಿಲ್ಲ. ಹಾಗಾಗಿ ನನಗೆ ನಾನೇ ಒಂದು ಗೆರೆ ಎಳೆದುಕೊಂಡೆ. ನನ್ನ ಜೀವನದಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಆದರೆ ಗಂಡ, ಅತ್ತೆಯನ್ನು ಕಳೆದುಕೊಂಡಿರುವ ಒಬ್ಬ ಹೆಣ್ಣುಮಗಳಿಗೆ ಕೇಡು ಬಯಸುವುದು ನನ್ನಿಂದ ಸಾಧ್ಯವಿಲ್ಲ,” ಎಂಬ ಉತ್ತರ ನೀಡಿದ್ದಾರೆ.

ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಸೋನಿಯಾರನ್ನು ರಕ್ಷಿಸುತ್ತಿದ್ದೀರಾ ಎಂದು ಕೇಳಿದಾಗ, “ವಾಸ್ತವ ಸಂಗತಿಗಳು ನನ್ನನ್ನು ಕಾಪಾಡುತ್ತವೆಯೇ ವಿನಾ ಯಾರೋ ವ್ಯಕ್ತಿಯಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ಯಾರಿಗಾದರೂ ಲಾಭವಾಗುತ್ತಿದ್ದರೆ ಅದಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ. ನಾನಿದನ್ನು ಯಾವುದೇ ರಾಜಕೀಯ ಪಕ್ಷಕ್ಕಾಗಿ ಮಾಡುತ್ತಿಲ್ಲ,” ಎಂದಿದ್ದಾರೆ.

‘ವ್ಯವಹಾರ’ ಕುದುರಿಸಲು ಬಂದ ಅಧಿಕಾರಿಗಳ ಗುರುತು ಹಿಡಿಯಬಲ್ಲಿರಾ ಎಂಬ ಪ್ರಶ್ನೆಗೆ “ಅವರು ತಮ್ಮ ಹೆಸರು ಹೇಳಿಕೊಳ್ಳಲಿಲ್ಲ. ಆದರೆ ಅವರು ಬಂದುಹೋದದ್ದಕ್ಕೆ ಕನಿಷ್ಠ 6 ಸಾಕ್ಷ್ಯಗಳಿವೆ. ಸಿಐಡಿ, ಇಂಟರ್‌ಪೋಲ್‌ನ ತಲಾ ಒಬ್ಬೊಬ್ಬ ಅಧಿಕಾರಿ, ಸಂಪುಟ ದರ್ಜೆ ಸ್ಥಾನಮಾನ ಹೊಂದಿದ ವ್ಯಕ್ತಿ ಬಂದಿದ್ದರು. ಹೋಟೆಲ್‌ನ ಭದ್ರತಾ ಕೊಠಡಿಯ ದೃಶ್ಯಾವಳಿಗಳು ಕೂಡ ಇವೆ. ಇದನ್ನು ಯಾರಾದರೂ ನಿರಾಕರಿಸಲು ಯತ್ನಿಸಿದರೆ ಅವರು ಬಹಳಷ್ಟು ಸಂಕಷ್ಟಗಳಿಗೆ ಸಿಲುಕಬೇಕಾಗುತ್ತದೆ,” ಎಂದು ಎಚ್ಚರಿಸಿದ್ದಾರೆ.

ದುಬೈನಲ್ಲಿ ನಿಮ್ಮ ವಿಚಾರಣೆ ನಡೆಯುತ್ತಿದ್ದರೂ ಭಾರತದ ತನಿಖಾಧಿಕಾರಿಗಳು ಯಾರೂ ಹಾಜರಿರಲಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೈಕೆಲ್, “ವಿಚಾರಣೆಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಿಲ್ಲ. ಏಕೆಂದರೆ ನಾನು ಕೇಳುವ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿಲ್ಲ. ಅದು ಅವರ ಗೈರುಹಾಜರಿಯಲ್ಲಿ ವ್ಯಕ್ತವಾಯಿತು,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸೋನಿಯಾ ಗಾಂಧಿ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಫೋಟೊ ಯಾರದ್ದು?

ಅರಬ್ ಸಂಸ್ಥಾನದಲ್ಲಿಯೇ ವಿಚಾರಣೆ ಎದುರಿಸುವೆ ಎಂದಿರುವ ಅವರು, “ಇದು ಕಾನೂನುಗಳ ದೇಶ. ಇಲ್ಲೇ ಇದ್ದು ಹೋರಾಟ ನಡೆಸುತ್ತೇನೆ, ನ್ಯಾಯ ಪಡೆಯುತ್ತೇನೆ, ಓಡಿಹೋಗುವುದಿಲ್ಲ,” ಎಂದಿದ್ದಾರೆ.

ಆಗಸ್ಟಾ ವೆಸ್ಟ್‌ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದು ಅವರ ವಾದ. “ಕಳೆದ ವರ್ಷ ನನ್ನನ್ನು ಬಂಧಿಸಿದಾಗ ಅವರು ಸಾಕ್ಷ್ಯ ಒದಗಿಸಿದ್ದರೆ ಸಾಕಿತ್ತು. ಕಳೆದ ವರ್ಷ ನಾನು ಭಾರತದಲ್ಲೇ ಇದ್ದಾಗ ವಿಚಾರಣೆ ನಡೆಸಿದ ಮಹನೀಯರೊಬ್ಬರು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎನ್ನುತ್ತಿದ್ದರು. ನಿಮ್ಮ ಬಳಿ ಅವು ಇದ್ದರೆ ಯಾಕೆ ತೋರಿಸುತ್ತಿಲ್ಲ ಎಂದು ಕೇಳಿದೆ. ಅವರು ಗಮನಿಸಬೇಕಾದ ವಿಷಯ ಯಾವುದೆಂದು ನಾನು ಆಗಲೇ ತಿಳಿಸಿದ್ದೆ. ಲಂಚ ಹಗರಣದಲ್ಲಿ ಗಮನ ಹರಿಸಬೇಕಾಗಿರುವುದು ಇಟಲಿಯತ್ತ ವಿನಾ ಭಾರತದತ್ತ ಅಲ್ಲ. ಅವರ ಪ್ರಧಾನ ಸಾಕ್ಷಿ ಹಷ್ಕೆಗೆ ನಡೆದ್ದದ್ದೇನು ಎಂಬುದು ತಿಳಿದಿದೆ. ಆದರೆ ಈಗ ಒಡ್ಡಿರುವ ಆಮಿಷ ಸಮಂಜಸವಲ್ಲ, ನಾನು ಅವರನ್ನು ನಂಬುವುದಿಲ್ಲ,” ಎಂದಿದ್ದಾರೆ.

ಈ ಮಧ್ಯೆ, ಮೈಕಲ್ ಹೇಳಿಕೆ ಆಧರಿಸಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. “ಸರ್ಕಾರಿ ಅಂಗಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧಪಕ್ಷದ ನಾಯಕರನ್ನು ಹಣಿಯಲಾಗುತ್ತಿದೆ,” ಎಂದು ಕಾಂಗ್ರೆಸ್ ನಾಯಕ ಆರ್‌ಪಿಎನ್ ಸಿಂಗ್ ಆರೋಪಿಸಿದ್ದಾರೆ. “ಇದೇ ಮಾತುಗಳನ್ನು ವಕೀಲರು ಮತ್ತು ಸಹೋದರಿ ಈ ಹಿಂದೆ ಹೇಳಿದ್ದರು. ಈಗ ಮೈಕೆಲ್ ಪುನರುಚ್ಛರಿಸಿದ್ದಾರೆ. ಇಂತಹ ಘಟನೆಗಳು ವಿಶ್ವಮಟ್ಟದಲ್ಲಿ ಭಾರತದ ತನಿಖಾ ಏಜೆನ್ಸಿಗಳ ವರ್ಚಸ್ಸಿಗೆ ಧಕ್ಕೆ ತರುತ್ತವೆ,” ಎಂದು ಅವರು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More