ಸುಖಾಂತ್ಯವಾದ ಕೋಲ್ಕತ್ತಾದ ನೆರೆಹೊರೆ ವಿವಾದ ಬಿಂಬಿಸಿದ ಆಶಯವೇನು? 

ಕೊಲ್ಕತ್ತಾದ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಕಲಿತು, ವಿವಿಧ ಆಸ್ಪತ್ರೆಗಳಲ್ಲಿ ‘ಹೌಸ್ ಸ್ಟಾಫ್‌ ಶಿಪ್‌’ ಮಾಡುತ್ತಿರುವ ನಾಲ್ವರು ವೈದ್ಯರಿಗೆ ಮುಸ್ಲಿಮರೆನ್ನುವ ಕಾರಣಕ್ಕೆ ನೆರೆಹೊರೆಯವರು ಮನೆ ಖಾಲಿ ಮಾಡಲು ಹೇಳಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಸ್ಥಳೀಯ ಸಂಘಟನೆಗಳ ಮಧ್ಯಪ್ರವೇಶ ಫಲ ನೀಡಿದೆ

ಇದೊಂದು ದೊಡ್ಡ ವಿವಾದವಾಗಿ ಬೆಳೆಯಬಹುದಾಗಿದ್ದ ಸಣ್ಣ ಘಟನೆ. ಸಂತ್ರಸ್ತರಾದವರ ವಿವೇಚನೆಯುತ ನಡೆ, ಸ್ಥಳೀಯರ ಸಕಾಲಿಕ ಮಧ್ಯಪ್ರವೇಶದಿಂದ ಸುಖಾಂತ್ಯ ಕಂಡಿದೆ. ಪೂರ್ವಾಗ್ರಹ, ಧಾರ್ಮಿಕ ದ್ವೇಷ ಮುಂತಾದ ಕಾರಣಗಳಿಗೆ ಮನಸ್ಸುಗಳನ್ನು ಬಲಿ ಕೊಟ್ಟು ಕಡ್ಡಿಯಲ್ಲಿ ಹೋಗಬಹುದಾದ್ದನ್ನು ಗುಡ್ಡ ಮಾಡುವ ವರ್ತಮಾನದ ಅನೇಕ ಸಮಸ್ಯೆಗಳಿಗೆ ಈ ಪ್ರಕರಣ ಸಣ್ಣದೊಂದು ಸಂದೇಶವನ್ನೂ ನೀಡಿದೆ.ಅಂದ ಹಾಗೆ, ಈ ಘಟನೆ ನಡೆದದ್ದು ಕೋಲ್ಕತ್ತಾದಲ್ಲಿ. ಮುಸ್ಲಿಂ ಧರ್ಮೀಯರೆನ್ನುವ ಕಾರಣಕ್ಕೆ ಬಾಡಿಗೆ ಮನೆ ತೆರವು ಮಾಡುವಂತೆ ನೆರೆಹೊರೆಯ ಜನರಿಂದ ನಿರ್ದೇಶಿಸಲ್ಪಟ್ಟಿದ್ದ ನಾಲ್ವರು ಯುವ ವೈದ್ಯರು ಸ್ವಯಂ ಸೇವಾ ಸಂಘಟನೆ ಮತ್ತು ಸ್ಥಳೀಯ ದುರ್ಗಾ ಪೂಜಾ ಸಮಿತಿ ಸದಸ್ಯರ ಮಧ್ಯಪ್ರವೇಶದಿಂದ ಅದೇ ಮನೆಯಲ್ಲಿ ಮುಂದುವರಿಯವ ‘ಅವಕಾಶ’ ಪಡೆದಿದ್ದಾರೆ.

ಮನೆ ಬಾಡಿಗೆಗಿದೆ ಎನ್ನುವ ಫಲಕದ ಕೆಳಗೆ ‘ಸಸ್ಯಹಾರಿಗಳಿಗೆ ಮಾತ್ರ’ ಎನ್ನುವ ಸೂಚನೆ ಪ್ರಕಟಿಸುವುದು ಈಗ ಎಲ್ಲೆಡೆ ಸರ್ವೇ ಸಾಮಾನ್ಯ. ಬಾಡಿಗೆ ಮನೆಗೆ ಬರುವ ಕುಟುಂಬದ ಜಾತಿ/ ಧರ್ಮ ಯಾವುದೆಂದು ನೇರ ಕೇಳಿ ತಿಳಿಯುವ, ನಿರ್ದಿಷ್ಟ ಜಾತಿ/ ಧರ್ಮದವರಿಗೆ ಬಾಡಿಗೆ ನೀಡುವುದನ್ನು ನಿರಾಕರಿಸುವ ನಯವಾದ ತಂತ್ರವಿದು. ಕೋಲ್ಕತ್ತಾದ ವಸತಿ ಸಮುಚ್ಚಯದ ನೆರೆಹೊರೆಯ ನಿವಾಸಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮನೆ ಮಾಲೀಕ ಬಾಡಿಗೆಗೆ ನೀಡಿದ ಫ್ಲಾಟ್‌ ಅನ್ನು ಖಾಲಿ ಮಾಡುವಂತೆ ನಾಲ್ವರು ವೈದ್ಯರಿಗೆ ತಾಕೀತು ಮಾಡಿದ್ದರು.

ಕೋಲ್ಕತ್ತಾದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್‌ ಮುಗಿಸಿ ಕೋರ್ಸ್‌ನ ಮುಂದುವರಿಕೆಯ ಭಾಗವಾಗಿ ಹಲವು ಆಸ್ಪತ್ರೆಗಳಲ್ಲೀಗ ‘ಹೌಸ್ ಸ್ಟಾಫ್‌ ಶಿಪ್‌’ ಮಾಡುತ್ತಿದ್ದ ಅಫ್ತಾಬ್ ಅಲಮ್,ಮೊಜ್ತಾಬಾ ಹಸ್ಸನ್, ನಾಸಿರ್ ಶೇಖ್ ಮತ್ತು ಸೌಕತ್ ಶೇಖ್ ಕೋಲ್ಕತ್ತಾದ ಕುದ್ಘಾಟ್‌ ಪ್ರದೇಶದ ಫ್ಲ್ಯಾಟ್‌ ಅನ್ನು ೨ ತಿಂಗಳ ಹಿಂದೆ ಬಾಡಿಗೆಗೆ ಪಡೆದಿದ್ದರು. ಇದು ಕೂಡ ಸುಲಭಕ್ಕೆ ಸಿಕ್ಕಿರಲಿಲ್ಲ.“ ಹಲವು ಮನೆ ಮಾಲೀಕರು ನಮಗೆ ಮನೆ ನೀಡಲು ನಿರಾಕರಿಸಿದರು. ಮುಸ್ಲಿಮರೆನ್ನುವುದು ಅದಕ್ಕೆ ಕಾರಣವಾಗಿತ್ತು. ಹಲವು ವಾರಗಳ ಹುಡುಕಾಟದ ನಂತರ ಈ ಫ್ಲಾಟ್‌ ಸಿಕ್ಕಿತು,’’ಎನ್ನುವುದು ಹೌರಾ ಜಿಲ್ಲೆಯಿಂದ ಮೆಡಿಕಲ್‌ ವ್ಯಾಸಂಗಕ್ಕೆ ಬಂದಿರುವ ಅಫ್ತಾಬ್‌ ವಿವರಣೆ.

ಆದರೆ, ಈ ಫ್ಲಾಟ್‌ ನಲ್ಲಿ ಕೂಡ ಅವರಿಗೆ ಎಲ್ಲವೂ ಪೂರಕವಾಗಿರಲಿಲ್ಲ. ಬಾಡಿಗೆ ಮನೆ ನೀಡಿದ ಮಾಲೀಕನಿಗೆ ಈ ಹುಡುಗರ ವಿಷಯದಲ್ಲಿ ಯಾವುದೇ ತಕರಾರಿರಲಿಲ್ಲ. ಆದರೆ, “ಕೆಲವು ನೆರೆಹೊರೆಯವರು ನಾವಿಲ್ಲಿಗೆ ಬಂದ ಶುರುವಿನಿಂದಲೂ ಪ್ರತಿಕೂಲ ವಾತಾವರಣ ಸೃಷ್ಟಿಸುತ್ತಿದ್ದರು. ಮೊನ್ನೆ ಸ್ನೇಹಿತನೊಬ್ಬ ನಮ್ಮ ಮನೆಗೆ ಬಂದಾಗ ಅತ್ಯಂತ ಕೆಟ್ಟದಾಗಿ ವರ್ತಿಸಿದರು. ಗುರುತು ಚೀಟಿ ತೋರಿಸುವಂತೆ ಸೂಚಿಸಿದರು.ಲೇವಡಿಯನ್ನು ಮಾಡಿದರು. ನಾವು ಮನೆ ಮಾಲೀಕರಿಗೆ ಎಲ್ಲ ದಾಖಲೆ ನೀಡಲು ಸಿದ್ದರಿದ್ದೆವು.ಆದರೆ, ನಮಗೆ ಮನೆ ಮುಂದುವರಿಸದಂತೆ ಅವರು ಮಾಲೀಕರಿಗೆ ಎಚ್ಚರಿಸಿದರು. ಮಧ್ಯವಯಸ್ಕ ವ್ಯಕ್ತಿಯೊಬ್ಬ, ಬೇರೆ ಕಡೆ ಮನೆ ಹುಡುಕಿಕೊಳ್ಳುವಂತೆ ನಮಗೆ ತಾಕೀತು ಮಾಡಿದ. ಈ ಎಲ್ಲದಕ್ಕೂ ನಾವು ಮುಸ್ಲಿಮರೆನ್ನುವುದೇ ಕಾರಣವಾಗಿತ್ತು,’’ ಎಂದು ಅಲಮ್‌ ಹೇಳಿಕೊಂಡಿದ್ದಾರೆ.

ಮುಸ್ಲಿಮರು ಎನ್ನುವುದಕ್ಕಿಂತ “ಮುಸ್ಲಿಮರು ಭಯೋತ್ಪಾದಕರು. ಅವರು ನೆರೆಹೊರೆಯಲ್ಲಿದ್ದರೆ ಉಗ್ರಗಾಮಿ ಚಟುವಟಿಕೆಯನ್ನು ಪೋಷಿಸಿದಂತಾಗುತ್ತದೆ,’’ಎಂಬಿತ್ಯಾದಿ ಪೂರ್ವಾಗ್ರಹ, ಆತಂಕ ಮತ್ತು ಇದೆಲ್ಲದರ ಆಳದಲ್ಲಿರುವ “ಧರ್ಮ ದ್ವೇಷ’’ವೇ ಅವರ ಈ ನಿರ್ಧಾರಕ್ಕೆ ಕಾರಣವಾಗಿತ್ತೆನ್ನುವುದನ್ನು ಬೇರೆ ಹೇಳಬೇಕಿಲ್ಲ. ಆದಾಗ್ಯೂ, ಈ ನ್ವಾಲ್ವರು ಘಟನೆಯನ್ನು ತಾವೇ ತಾವಾಗಿ ಬೀದಿ ರಂಪ ಮಾಡಲು ಬಯಸಲಿಲ್ಲ. ತಮ್ಮ ಎಂಬಿಬಿಎಸ್ ಕೋರ್ಸ್ ಪೂರ್ಣಗೊಳ್ಳಬೇಕೆಂದರೆ ಇವರು ವಿವಿಧ ಆಸ್ಪತ್ರೆಗಳಲ್ಲಿ ‘ಹೌಸ್ ಸ್ಟಾಫ್ ಶಿಪ್‌’ ಮಾಡುವುದು ಮತ್ತು ಅದಕ್ಕಾಗಿ ಬಾಡಿಗೆ ಮನೆಯಲ್ಲಿರುವುದು ಅನಿವಾರ್ಯವಾಗಿತ್ತು. “ಇಂಥ ವಾತಾವರಣದಲ್ಲಿ ಯಾರೂ ನೆಮ್ಮದಿಯಿಂದ ವಾಸಿಸಲಾಗದು,’’ಎನ್ನುವ ಕಟು ಅಭಿಪ್ರಾಯ ಹೊಂದಿದ್ದರಾದರೂ, ಹಲವೆಡೆ ಮನೆ ಹುಡುಕಿ ಬಸವಳಿದಿದ್ದರಾದ್ದರಿಂದ ಸಿಕ್ಕಿರುವ ಫ್ಲಾಟ್ ಖಾಲಿ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಬೇರೆ ದಾರಿ ತೋಚದೆ, ಸಂಗಾತಿ ಅಭಿಯಾನ್‌ ಸ್ವಯಂ ಸೇವಾ ಸಂಘಟನೆ ಮತ್ತು ಸ್ಥಳೀಯ ದುರ್ಗಾ ಪೂಜಾ ಸಮಿತಿ ಸದಸ್ಯರ ಮೊರೆ ಹೋದರು. ಅವರ ಮೂಲಕ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಅದನ್ನಾಧರಿಸಿ ಕೆಲವು ಮಾಧ್ಯಮಗಳು ವರದಿ ಬಿತ್ತರಿಸಿದವು. “ನಾವು ಅನಾರೋಗ್ಯಕ್ಕೆ ತುತ್ತಾದಾಗ ಅವರು ನಮಗೆ ಚಿಕಿತ್ಸೆ ನೀಡಬಹುದು. ಆದರೆ ಅವರು ನಮ್ಮ ನೆರೆ ಹೊರೆಯವರಾಗಿರಲು ಸಾಧ್ಯವಿಲ್ಲ,’’ಎನ್ನುವ ‘ಸಂದೇಶ’ ವನ್ನು ನಾಲ್ವರು ವಿದ್ವಾರ್ಥಿಗಳಿಗೆ ಅವರಿದ್ದ ವಸತಿ ಸಮುಚ್ಚಯದ ಅಕ್ಕಪಕ್ಕದ ನಿವಾಸಿಗಳು ನೀಡಿದ್ದಾರೆ,’’ ಎಂದು ಮಾಧ್ಯಮವೊಂದು ಛೇಡಿಸಿತು. “ಅಲಹಬಾದ್ ನ‌ ಪ್ರಸಿದ್ಧ ಸಂಗಮ ಘಾಟ್‌ ನಲ್ಲಿ ಕಲಾವಿದರೊಬ್ಬರು ಹಿಂದೂ-ಮುಸ್ಲಿಂ ಏಕತೆ ಬಿಂಬಿಸುವ ಮರಳು ಶಿಲ್ಪ ರಚಿಸಿ ಸುದ್ದಿಯಾದ ಸಂದರ್ಭದಲ್ಲೇ, ಕೊಲ್ಕತ್ತಾದ ಕುದ್ಘಾಟ್‌ ಪ್ರದೇಶದ ನಿವಾಸಿಗಳು ಈ ನಾಲ್ವರು ವೈದ್ಯರನ್ನು ಅವರು ಮುಸ್ಲಿಮರೆನ್ನುವ ಕಾರಣಕ್ಕೆ ಮನೆಯಿಂದ ಹೊರ ಹಾಕುವ ನಿರ್ಧಾರ ಮಾಡಿದ್ದಾರೆ,’’ಎನ್ನುವ ವಿಶ್ಲೇಷಣೆಯೂ ನಡೆಯಿತು.

ಈ ಬೆಳವಣಿಗೆಗಳಿಂದ ಬೇಸರಗೊಂಡಿದ್ದ ಮನೆ ಮಾಲೀಕ, “ ಕೆಲವು ನೆರೆಹೊರೆಯವರು ನನ್ನ ತೀರ್ಮಾನಕ್ಕೆ ವಿರುದ್ಧ ಮಾತನಾಡಿದರು.ಅವರೆಲ್ಲರ ಒಂದೇ ಆಕ್ಷೇಪ ಬಾಡಿಗೆದಾರರ ಧರ್ಮವಾಗಿತ್ತು. ನಾಲ್ವರು ಹುಡುಗರನ್ನು ಅವರು ಮುಸ್ಲಿಮರೆನ್ನುವ ಕಾರಣಕ್ಕೆ ಮನೆ ಖಾಲಿ ಮಾಡಿಸಿದರೆ ಅದು ಕೆಟ್ಟ ಉದಾಹರಣೆಯಾಗುತ್ತದೆ ,’’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಾರ್ವಜನಿಕವಾಗಿಯೂ ಅನೇಕ ಟೀಕೆ ಟಿಪ್ಪಣಿಗಳು ವ್ಯಕ್ತವಾದವು. “ಈ ಹುಡುಗರು ಫ್ಲಾಟ್‌ ಖಾಲಿ ಮಾಡಬೇಕಾದ ಸ್ಥಿತಿ ಬಂದದ್ದು ಅವಮಾನಕರ,’’ ಎಂದು ಶಿಕ್ಷಕ ಭಾಸ್ಕರ್‌ ಮಜುಂದಾರ್‌ ಎನ್ನುವವರು ಮಾಧ್ಯಮಗಳೆದುರು ಆಕ್ಷೇಪಿಸಿದರು.

ಇದನ್ನೂ ಓದಿ : ಮುಸ್ಲಿಂ ಯುವಕನನ್ನು ರಕ್ಷಿಸಿದ ಅಧಿಕಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ

ವಿವಾದ ಬೆಳೆದು, ರಾಜಕೀಯ ರಾಡಿಗೆ ಕಾರಣವಾಗಬಹುದು; ಸಾಮಾಜಿಕ ಸ್ವಾಸ್ಥ್ಯದ ಮೇಲೆ ಅದು ಮಾರಕ ಪರಿಣಾಮ ಬೀರಬಹುದೆನ್ನುವ ಆತಂಕ ಮೂಡುತ್ತಿದ್ದಾಗಲೇ ,ಸ್ಥಳೀಯ ಸಂಘಟನೆಗಳ ಸಕಾಲಿಕ ಮಧ್ಯಪ್ರವೇಶ ಎಲ್ಲವನ್ನು ಸುಖಾಂತ್ಯಗೊಳಿಸಿದೆ. “ನಾವು ಇಂಥ ಪರಿಸ್ಥಿತಿ ನೋಡುತ್ತಿರುವುದು ಇದೇ ಮೊದಲಲ್ಲ. ಮುಸ್ಲಿಮರಿಗೆ ಮನೆ ಬಾಡಿಗೆಗೆ ನೀಡಲು ಎಲ್ಲೆಡೆಯ ಜನ ನಿರಾಕರಿಸುತ್ತಾರೆ. ಕೋಲ್ಕತ್ತಾದಲ್ಲಿ ಕೂಡ ಅದೇ ಆಗುತ್ತಿದೆ. ಆದರೆ, ಈ ಬಾರಿ ನಾವು ಸ್ಥಳೀಯರ ಜೊತೆ ಮಾತನಾಡಿದೆವು. ಸಾರ್ವಜನಿಕವಾಗಿ ಇಂಥ ಪ್ರತಿಕ್ರಿಯೆಯನ್ನವರು ನಿರೀಕ್ಷಿಸಿರಲಿಲ್ಲ. ಪ್ರಕರಣ ರಾಜಕೀಯಗೊಂಡರೆ ಆಗುವ ಅಪಾಯವನ್ನೂ ಅವರು ಅರಿತಿದ್ದರು. ಆದ್ದರಿಂದ, ಈ ಹುಡುಗರು ಇಲ್ಲಿರಲು ನಮ್ಮ ತಕರಾರಿಲ್ಲ. ಧರ್ಮದ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡುವುದಿಲ್ಲ ಎಂದು ಅವರು ವಾಗ್ದಾನ ಮಾಡಿದ್ದಾರೆ,’’ಎಂದು ಸಂಗಾತಿ ಅಭಿಯಾನ್‌ ಸ್ಥಾಪಕ ಸದಸ್ಯ ದ್ವೈಪಾಯನ್‌ ಬ್ಯಾನರ್ಜಿ ಹೇಳಿದರು.

ಫ್ಲಾಟ್‌ನಲ್ಲೇ ಉಳಿಯುವುದು ಸಾಧ್ಯವಾಗಿದ್ದಕ್ಕೆ ನಾಲ್ವರು ವೈದ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ. “ನಾವು ದ್ವೈಪಾಯನ್ ಮತ್ತು ಸ್ಥಳೀಯ ದುರ್ಗಾ ಪೂಜಾ ಸಮಿತಿಯವರ ಸಕಾಲಿಕ ಮಧ್ಯಪ್ರವೇಶಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಕೋಲ್ಕತ್ತಾದ ಚೈತನ್ಯದ ಬಗ್ಗೆ ನಮ್ಮ ಭರವಸೆ ಬಲಗೊಳ್ಳಲು ಇದು ಕಾರಣವಾಗಿದೆ,’’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. “ಭಾರತದ ಸಂದರ್ಭದಲ್ಲಿರುವ ಇಂಥ ಎಲ್ಲ ಭಿನ್ನಾಭಿಪ್ರಾಯ ಮತ್ತು ಧಾರ್ಮಿಕ ಪೂರ್ವಾಗ್ರಹಗಳ ವಿಷಯದಲ್ಲಿ ಜಾಗೃತ ಜನ ಇದೇ ರೀತಿ ಮಧ್ಯಪ್ರವೇಶ ಮಾಡಿದರೆ ದೇಶದಲ್ಲಿನ ದ್ವೇಷ ಭಾವದ ಗ್ರಾಫ್‌ ಖಂಡಿತಾ ಇಳಿಯುತ್ತದೆ,’’ ಎಂದೂ ಕೆಲವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿಜ, ಈ ಒಂದು ಘಟನೆಯಲ್ಲಿ ಸದ್ಯಕ್ಕೆ ಎಲ್ಲವೂ ಸುಖಾಂತ್ಯವಾಯಿತೆಂದ ಮಾತ್ರಕ್ಕೆ ದೇಶವನ್ನು ಆವರಿಸಿರುವ “ಪೂರ್ವಾಗ್ರಹ-ರೋಗ ಪೀಡಿತ’’ ಮನಸ್ಸುಗಳೆಲ್ಲ ಗುಣವಾಗಿ ಬಿಟ್ಟವು ಎಂದರ್ಥವಲ್ಲ. ಕ್ಷುಲ್ಲಕ ಕಾರಣಕ್ಕೆ ಘಟನೆಯೊಂದು ಜರುಗಿದಾಗ ಅದರ ಎಲ್ಲಾ ಕೋನಗಳಲ್ಲಿರುವವರು ವಿವೇಚನೆಯಿಂದ ಮತ್ತು ಆರೋಗ್ಯಕರವಾಗಿ ವರ್ತಿಸಿದರೆ ಮನಸ್ಸುಗಳು ಮುರಿಯುವುದು ತಪ್ಪುತ್ತದೆ; ಗುಡ್ಡವಾಗಬಹುದಾದ್ದನ್ನು ಕಡ್ಡಿಯಲ್ಲೆ ಹೋಗಿಸುವುದೂ ಸಾಧ್ಯ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More