ನ್ಯಾ.ಜೋಸೆಫ್ ಪದೋನ್ನತಿ ವಿಚಾರ: ಕೇಂದ್ರ ಮತ್ತು ಕೊಲಿಜಿಯಂ ಸಂಘರ್ಷ ಅಂತ್ಯ

ನ್ಯಾ.ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಕೊಲಿಜಿಯಂ ನಡುವಿನ ಸಂಘರ್ಷ ಅಂತ್ಯವಾಗಿದೆ. ನ್ಯಾ.ಜೋಸೆಫ್ ಸೇರಿದಂತೆ ಮೂವರಿಗೆ ಪದೋನ್ನತಿ ನೀಡಲು ಕೇಂದ್ರ ಒಪ್ಪಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ

ಉತ್ತರಾಖಂಡದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ಪದೋನ್ನತಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಕೊಲಿಜಿಯಂ ನಡುವೆ ಉಂಟಾಗಿದ್ದ ದೀರ್ಘ ಸಂಘರ್ಷ ಕೊನೆಗೂ ಅಂತ್ಯದತ್ತ ಹೊರಳಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನ್ಯಾ.ಜೋಸೆಫ್ ಸೇರಿದಂತೆ ಉಳಿದ ಇಬ್ಬರಿಗೂ ಪದೋನ್ನತಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಕೇಂದ್ರ ಸರ್ಕಾರವು ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳ ಪದೋನ್ನತಿ ಕಡತ ಪರಿಶೀಲಿಸಿದ್ದು, ಈ ಪೈಕಿ ನ್ಯಾ.ಜೋಸೆಫ್ ಅವರ ಕಡತ ಕಾನೂನು ಸಚಿವಾಲಯದಲ್ಲೇ ಉಳಿದುಕೊಂಡಿದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ನ್ಯಾ.ಜೋಸೆಪ್ ಅವರಿಗೂ ಪದೋನ್ನತಿ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಜೊತೆಗೆ, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿನೀತ್ ಶರಣ್ ಅವರೂ ಪದೋನ್ನತಿ ಹೊಂದಲಿದ್ದಾರೆ.

೨೦೧೮ರ ಜನವರಿಯಲ್ಲಿ ನ್ಯಾ.ಕೆ ಎಂ ಜೋಸೆಫ್ ಹಾಗೂ ಬೆಂಗಳೂರು ಮೂಲದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಪದೋನ್ನತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಏಪ್ರಿಲ್ ೯ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹಾಗೂ ಕೊಲಿಜಿಯಂ ಸದಸ್ಯ ಕುರಿಯನ್ ಜೋಸೆಪ್ ಅವರು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದು, ಕೊಲಿಜಿಯಂ ಶಿಫಾರಸು ಕುರಿತು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸಿರುವ ಕುರಿತು ಚರ್ಚಿಸಲು ಏಳು ಹಿರಿಯ ನ್ಯಾಯಮೂರ್ತಿಗಳ ಪೀಠ ರಚಿಸುವಂತೆ ಕೋರಿದ್ದರು.

ಇದನ್ನೂ ಓದಿ : ನ್ಯಾ.ಜೋಸೆಫ್ ಪದೋನ್ನತಿಗೆ ಕೊಲಿಜಿಯಂ ಮರು ಶಿಫಾರಸು; ಕೇಂದ್ರದ ಮುಂದಿನ ನಡೆ?

ನ್ಯಾ.ಕುರಿಯನ್ ಜೋಸೆಪ್ ಅವರು ತಮ್ಮ ಪತ್ರದಲ್ಲಿ ಕೇಂದ್ರದ ವಿಳಂಬ ಧೋರಣೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತ, “ಕೊಲಿಜಿಯಂ ಶಿಫಾರಸಿನ ಸಂಬಂಧ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಸಹ ಕರ್ತವ್ಯಲೋಪ. ಇದು ಆಡಳಿತಾತ್ಮ ಕಾನೂನಿನಡಿ ಅಧಿಕಾರದ ದುರುಪಯೋಗವಾಗುತ್ತದೆ. ಕೇಂದ್ರದ ಮೌನ ನಡೆ ನ್ಯಾಯಾಂಗಕ್ಕೆ ಅಗೌರವ ಸೂಚಿಸಿದಂತಿದ್ದು, ಒಂದು ರೀತಿಯಲ್ಲಿ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡಿದೆ,” ಎಂದಿದ್ದನ್ನು ಇಲ್ಲಿ ನೆನೆಯಬಹುದು.

ನ್ಯಾ.ಜೋಸೆಫ್ ಅವರ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸಬಹುದು, ಆ ಮೂಲಕ ಪ್ರಸಕ್ತ ಕೇಂದ್ರದ ಅವಧಿಯಲ್ಲಿ ಅವರಿಗೆ ಪದೋನ್ನತಿ ನೀಡದೆ ಇರುವ ಸಾಧ್ಯತೆ ಹೆಚ್ಚು ಎನ್ನುವ ಅಭಿಪ್ರಾಯಗಳು ಮಾಧ್ಯಮಗಳಲ್ಲಿ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ, ನ್ಯಾ.ಕುರಿಯನ್ ಅವರು ಈ ಹಿಂದೆ ತಮ್ಮ ಪತ್ರದಲ್ಲಿ ಸರ್ಕಾರದ ವಿಳಂಬ ಧೋರಣೆ ಬಗ್ಗೆ ಉಲ್ಲೇಖಿಸಿದ್ದು, ಈ ಅಂಶಕ್ಕೆ ಮಹತ್ವ ಬಂದಿತ್ತು. ಇದೀಗ ಕೇಂದ್ರದ ನಿಲುವು ಬದಲಾದಂತೆ ಕಂಡುಬಂದಿದ್ದು, ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ.ವಿನೀತ್ ಶರಣ್ ಸೇರಿದಂತೆ ನ್ಯಾ.ಜೋಸೆಪ್ ಅವರು ಕೂಡ ಪದೋನ್ನತಿ ಹೊಂದಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More