ಮೀಸಲಾತಿ ಹೋರಾಟದ ಹೆಮ್ಮರವಾಗಿ ಬೆಳೆದ ರಥಯಾತ್ರೆ ರಾಜಕಾರಣದ ಬೀಜ

ಧರ್ಮಕೇಂದ್ರಿತ ರಾಜಕಾರಣದ ಸಂಘಪರಿವಾರದ ವರಸೆ ಧರ್ಮಕ್ಕೆ ಮಾತ್ರ ಸೀಮಿತವಾಗದೆ, ಕೋಮು ಭಾವನೆಗಳ ಪುನರುತ್ಥಾನಕ್ಕೆ ಕಾರಣವಾಯಿತು. ಇದೇ ದಾರಿಯಲ್ಲೀಗ ಪಟೇಲ್, ಕಾಪು, ಜಾಟ್‌, ಮರಾಠ, ಲಿಂಗಾಯತ ಮುಂತಾದ ಸಮುದಾಯಗಳ ಮೀಸಲಾತಿ ಹೋರಾಟವಾಗಿ ಬೆಳೆದುನಿಂತಿದೆ

ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮರಾಠ ಮೀಸಲಾತಿ ಹೋರಾಟಕ್ಕಾಗಿ ಈಗಾಗಲೇ ಕೆಲವರು ಬಲಿದಾನ ಮಾಡಿದ್ದಾರೆ. ಬಲಿದಾನಕ್ಕೆ ಯತ್ನಿಸಿದ ಹಲವರು ಗಾಯಗೊಂಡು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ನಡುವೆ, ಅಲ್ಲಿನ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ, ತಾನು ಮರಾಠ ಸಮುದಾಯದ ಮೀಸಲಾತಿ ಬೇಡಿಕೆಯ ಪರವಿದ್ದು, ಮೀಸಲಾತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿರುವುದಾಗಿ ಗುರುವಾರ ಹೇಳಿದೆ.

ಕಾನೂನು ಮತ್ತು ಸಾಂವಿಧಾನಿಕ ಮಿತಿಗಳಿಗೆ ಒಳಪಟ್ಟು ರಾಜ್ಯದ ಬಹುದೊಡ್ಡ ಸಮುದಾಯದ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಬಿಜೆಪಿ ಸರ್ಕಾರ ಈ ಘೋಷಣೆ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂತಹದ್ದೇ ಮೀಸಲಾತಿ ಸೌಲಭ್ಯವನ್ನು ನ್ಯಾಯಾಲಯ ರದ್ದುಪಡಿಸಿದೆ ಎಂಬ ಹಿನ್ನೆಲೆಯಲ್ಲಿ ಹೇಳುವುದೇ ಆದರೆ, ಫಡ್ನವೀಸ್‌ ಅವರ ಈಗಿನ ಈ ಘೋಷಣೆ ಕೂಡ ಬೀಸೋ ದೊಣ್ಣೆಯಿಂದ ಪಾರಾಗುವ ಯತ್ನವಷ್ಟೇ ಎಂದರೆ ಅತಿಶಯೋಕ್ತಿಯೇನಲ್ಲ.

ಆದರೆ, ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ.೩೦ರಷ್ಟು ಸಂಖ್ಯೆಯಲ್ಲಿರುವ, ಶತಮಾನಗಳಿಂದ ರಾಜ್ಯದ ರಾಜಕೀಯ ಮತ್ತು ಭೂಮಿಯ ಒಡೆತನದ ಮೇಲೆ ಏಕಸ್ವಾಮ್ಯ ಹೊಂದಿದ್ದ ಪ್ರಭಾವಿ ಸಮುದಾಯ ಹೀಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ದುರ್ಬಲ ಸಮುದಾಯಗಳ ಸಾಲಿನಲ್ಲಿ ನಿಂತು, ಮೀಸಲಾತಿಗಾಗಿ ಅಂಗಾಲಾಚುತ್ತಿರುವುದು ಏಕೆ? ದಶಕಗಳ ಹಿಂದೆ ರಾಜ್ಯದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಲಯಗಳಲ್ಲಿ ಪಾರಮ್ಯ ಮೆರೆಯುತ್ತಿದ್ದ ಸಮುದಾಯ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಮಟ್ಟಿಗೆ ಕುಸಿದುಬಿಟ್ಟಿತೆ? ಅಥವಾ ಮೀಸಲಾತಿಯ ಹಕ್ಕು ಮಂಡನೆಯ ಮೂಲಕ ಕಾಲಕ್ರಮೇಣ ಕಳೆದುಕೊಂಡ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸುವ ಉದ್ದೇಶದಿಂದ ಬೀದಿಗಿಳಿದಿದೆಯೇ?

ಇದನ್ನೂ ಓದಿ : ಬಿಜೆಪಿಗೆ ಮಾರಕ ಆಗಲಿದೆಯಾ ಮರಾಠ ಸಮುದಾಯದ ಮೀಸಲಾತಿ ಹೋರಾಟ?

ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಇಡೀ ಮರಾಠ ಮೀಸಲಾತಿ ಹೋರಾಟವನ್ನು ನೋಡಿದರೆ; ಹಲವು ಸೂಕ್ಷ್ಮ ಸಂಗತಿಗಳು ಕಣ್ಣಿಗೆ ರಾಚುತ್ತವೆ.

ಅವುಗಳಲ್ಲಿ ಪ್ರಮುಖವಾದದ್ದು ಮೀಸಲಾತಿ ರಾಜಕಾರಣ ಮತ್ತು ಜಾತಿ ಪ್ರಜ್ಞೆಗೆ ಹೊಸ ತಿರುವು ನೀಡಿದ ದೇಶದ ಚಾರಿತ್ರಿಕ ಘಟನೆಗಳು ಮತ್ತು ಆ ಬಳಿಕದ ಬೆಳವಣಿಗೆಗಳು. ವಿ ಪಿ ಸಿಂಗ್ ನೇತೃತ್ವದ ಜನತಾ ಪರಿವಾರ ಸರ್ಕಾರ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳದ ಮಂಡಲ್‌ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಮುಂದಾಗುತ್ತಲೇ ದೇಶವ್ಯಾಪಿ ದೊಡ್ಡ ಮಟ್ಟದ ಪರ-ವಿರೋಧದ ಹೋರಾಟಗಳ ಅಲೆ ಎದ್ದಿತು. ಪ್ರಮುಖವಾಗಿ ಮೀಸಲಾತಿ ವ್ಯಾಪ್ತಿಗೊಳಪಡದ ಮುಂದುವರಿದ ಸಮುದಾಯಗಳೇ ವಿ ಪಿ ಸಿಂಗ್ ಅವರ ವಿರುದ್ಧ ತಿರುಗಿಬಿದ್ದಿದ್ದವು. ಆ ಹೊತ್ತಿಗೆ, ಮೀಸಲಾತಿ ವಿರೋಧಿ ಹೋರಾಟಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದ ಸಂಘಪರಿವಾರ, ತನ್ನ ರಾಜಕೀಯ ಅಂಗಪಕ್ಷ ಬಿಜೆಪಿಯ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನೇರವಾಗಿ ಹೋರಾಟದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬುದು ಈಗ ಇತಿಹಾಸ.

ಆದರೆ, ಇಡೀ ಮಂಡಲ್‌ ಚಳವಳಿ ಎತ್ತಿದ್ದ ಪ್ರಶ್ನೆಗಳನ್ನು ಅಪ್ರಸ್ತುತಗೊಳಿಸುವ ಮತ್ತು ಆ ಮೂಲಕ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಸಂಘಪರಿವಾರ ಅದೇ ಹೊತ್ತಿಗೆ ಅಯೋಧ್ಯೆ ರಾಮಮಂದಿರದ ವಿಷಯವನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿತು ಮತ್ತು ಆ ಪ್ರಯತ್ನದ ಭಾಗವಾಗಿ ರಥಯಾಥ್ರೆಯ ರಾಜಕಾರಣವನ್ನು ಆರಂಭಿಸಿತು. ಧರ್ಮಕೇಂದ್ರಿತ ರಾಜಕಾರಣದ ಆ ವರಸೆ, ಕೇವಲ ಧರ್ಮಕ್ಕೆ ಮಾತ್ರ ಸೀಮಿತವಾಗದೆ ದೇಶದ ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಪ್ರತಿಯಾಗಿ ಜಾತಿ ಮತ್ತು ಕೋಮು ಭಾವನೆಗಳ ಪುನರುತ್ಥಾನಕ್ಕೆ ಕಾರಣವಾಯಿತು. ಹಾಗೇ ಆರಂಭವಾದ ಜಾತಿಕೇಂದ್ರಿತ ಸಂಘಟನೆ ಮತ್ತು ಜಾತಿಕೇಂದ್ರಿತ ರಾಜಕಾರಣ ಇದೀಗ ಪಟೇಲ ಅಥವಾ ಪಟಿದಾರ್, ಕಾಪು, ಜಾಟ್‌, ಮರಾಠ, ಲಿಂಗಾಯಿತ ಮುಂತಾದ ಪ್ರಭಾವಿ ಸಮುದಾಯಗಳ ಮೀಸಲಾತಿ ಹೋರಾಟದವರೆಗೆ ಬಂದುನಿಂತಿದೆ.

ಸ್ವಾತಂತ್ರ್ಯ ನಂತರ ಸಾಂವಿಧಾನಿಕ ಕಾನೂನು ಮತ್ತು ಆಡಳಿತ ನೀತಿಗಳ ಪರಿಣಾಮವಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಉಂಟಾದ ಚಲನೆ ಮತ್ತು ಅದರ ಪರಿಣಾಮವಾಗಿ ಶೋಷಿತ ವರ್ಗಗಳಲ್ಲಿ ಆದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳು ಮೇಲ್ಜಾತಿಗಳ ಕಪಿಮುಷ್ಟಿಯಿಂದ ಅವರನ್ನು ಕೆಲಮಟ್ಟಿಗಾದರೂ ಪಾರುಮಾಡಿದ್ದವು. ಭೂ ಸುಧಾರಣೆಯಂತಹ ಕಾನೂನುಗಳು ಭೂಮಿಯ ಒಡೆತನದೊಂದಿಗೆ ಆರ್ಥಿಕ ಸ್ವಾವಲಂಬನೆಯನ್ನೂ, ಶಿಕ್ಷಣದ ಅವಕಾಶ ಸಾಮಾಜಿಕ ಬಿಡುಗಡೆಯನ್ನೂ ತಂದುಕೊಟ್ಟವು. ಆದರೆ, ಇಂತಹ ಬದಲಾವಣೆಗಳು ಮೇಲ್ಜಾತಿಗಳಲ್ಲಿ ಸಮಾಜದ ಮೇಲಿನ ತಮ್ಮ ಹಿಡಿತ ತಪ್ಪುತ್ತಿರುವ ಅಭದ್ರತೆಯ, ರಾಜಕೀಯವಾಗಿ ತಮ್ಮ ಏಕಸ್ವಾಮ್ಯ ಮುರಿಯುತ್ತಿರುವ ಭೀತಿಯ, ಆರ್ಥಿಕವಾಗಿ ತಮ್ಮ ಯಜಮಾನಿಕೆ ಕಳಚುವ ಆತಂಕದ ಭಾವನೆ ಮೂಡಿಸಿದ್ದವು.

ಜೊತೆಗೆ, ಜಾಗತೀಕರಣದ ಪರಿಣಾಮವಾಗಿ ಭಾರತದ ಆರ್ಥಿಕತೆ ಗ್ರಾಮೀಣ ಪ್ರದೇಶದಿಂದ ನಗರದೆಡೆಗೆ ವೇಗಗತಿಯ ಸ್ಥಿತ್ಯಂತರ ಕಂಡಿತು. ಅದು ಸಹಜವಾಗೇ ಹಸಿರುಕ್ರಾಂತಿಯ ಫಲಾನುಭವಿ ಸಮುದಾಯಗಳ ಆರ್ಥಿಕ ಶಕ್ತಿ ಮತ್ತು ಆ ಮೂಲಕ ರಾಜಕೀಯ ಬಲಕ್ಕೂ ಪೆಟ್ಟು ಕೊಟ್ಟಿತು. ಜಮೀನ್ದಾರರ ಬದಲಿಗೆ ಉದ್ಯಮಿಗಳು ಮತ್ತು ನವಶಿಕ್ಷಿತ ಅಧಿಕಾರ ವರ್ಗ ಸಮಾಜದ ಪ್ರತಿಷ್ಠಿತ ಸ್ಥಾನಮಾನಗಳಿಗೆ ಭಾಜನವಾಗತೊಡಗಿತು. ಇದು ಸಹಜವಾಗೇ ಸಾಂಪ್ರದಾಯಿಕವಾಗಿ ಎಲ್ಲಾ ಅಧಿಕಾರ, ಸ್ಥಾನಮಾನಗಳನ್ನು ಅನುಭವಿಸಿಕೊಂಡಿದ್ದ ಜಮೀನ್ದಾರಿ ಸಮುದಾಯಗಳಲ್ಲಿ ಅಸ್ಥಿರತೆ ಹುಟ್ಟುಹಾಕಿತು.

ಇಂತಹ ಆತಂಕ ಮತ್ತು ಅಸ್ಥಿರತೆಗಳು, ಒಂದು ಕಾಲದಲ್ಲಿ ಎಲ್ಲವನ್ನೂ ಅನುಭವಿಸಿದ್ದ ಆ ಸಮುದಾಯಗಳಲ್ಲಿ ಎಲ್ಲವೂ ತಮ್ಮ ಕೈತಪ್ಪಿಹೋಗುತ್ತಿರುವ ಭೀತಿಗೆ ಕಾರಣವಾಯಿತು. ಅಷ್ಟು ಸಾಲದು ಎಂಬಂತೆ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯ ಬಳಿಕ ಮೀಸಲಾತಿಯ ಕಾರಣದಿಂದಾಗಿ ಮತ್ತೆ ಗ್ರಾಮಮಟ್ಟದಲ್ಲೂ ಅಧಿಕಾರದ ವಿಕೇಂದ್ರೀಕರಣವಾಯಿತು. ಪ್ರಭಾವಿ ಸಮುದಾಯಗಳು ಊಹಿಸಲೂ ಆಗದ ಮಟ್ಟಿಗೆ ತಳಸಮುದಾಯಗಳ ಶೋಷಿತ ಜನ ಅಧಿಕಾರದ ಕುರ್ಚಿಗೆ ಏರಿದರು. ಅಷ್ಟರಲ್ಲಾಗಲೇ ಅಸ್ಥಿರತೆಯ ಆತಂಕದಲ್ಲಿದ್ದ ಮೇಲ್ಜಾತಿ ಮತ್ತು ಪ್ರಭಾವಿ ಸಮುದಾಯಗಳಲ್ಲಿ ಈ ಬೆಳವಣಿಗೆ ಇನ್ನಷ್ಟು ಭೀತಿ ಹುಟ್ಟಿಸಿತು.

ಸುಮಾರು ಎರಡು ದಶಕಗಳ ಕಾಲ ಸಾಮುದಾಯಿಕ ಆಸಹನೆಯಾಗಿ, ಆಕ್ರೋಶವಾಗಿ ಸಿಡಿಯಲು ಕಾಯುತ್ತಿದ್ದ ಆ ವರ್ಗಗಳ ಅಸ್ಥಿರತೆಯ ಭಾವನೆಗೆ ತಿದಿಯೊತ್ತಿದ್ದು ಇತ್ತೀಚಿನ ವರ್ಷಗಳ ಕೃಷಿ ಬಿಕ್ಕಟ್ಟು ಮತ್ತು ಉದ್ಯೋಗಾವಕಾಶ ನಷ್ಟ. ಕೃಷಿಯನ್ನೇ ಪ್ರಮುಖವಾಗಿ ಅವಲಂಬಿಸಿದ್ದ ಮತ್ತು ಆ ಕಾರಣಕ್ಕಾಗಿ ಶಿಕ್ಷಣ ಮತ್ತು ಉದ್ಯಮ ರಂಗದಲ್ಲಿ ಬೆಳೆಯುವ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದೇ ಇದ್ದ ಪಟೇಲ್, ಕಾಪು, ಜಾಟ, ಮರಾಠ ಸಮುದಾಯಗಳ ಪಾಲಿಗೆ ಕೃಷಿ ವಲಯದ ಇತ್ತೀಚಿನ ವರ್ಷಗಳ ಬಿಕ್ಕಟ್ಟು ಮತ್ತು ಅವರಿಗೆ ಎಟಕುವ ಮಟ್ಟದ ಉದ್ಯೋಗಾವಕಾಶಗಳ ಕೊರತೆ ಆ ಸಮುದಾಯಗಳನ್ನು ಇನ್ನಷ್ಟು ವಿಕ್ಷಿಪ್ತಗೊಳಿಸಿತು.

ಬಹುತೇಕ ಗ್ರಾಮೀಣ ರೈತಾಪಿ ಮಧ್ಯಮ ವರ್ಗಕ್ಕೆ ಸೇರಿದ ಈ ಸಮುದಾಯಗಳ ಮೀಸಲಾತಿ ಹೋರಾಟದ ಹಿಂದಿನ ಸಾಮಾಜಿಕ ಮತ್ತು ರಾಜಕೀಯ ಕಾರಣಗಳನ್ನು ವಿಶ್ಲೇಷಿಸಿರುವ ಸುಹಾಸ್ ಪಾಲ್ಶೀಕರ್ ಅವರಂತಹ ಸಮಾಜಶಾಸ್ತ್ರಜ್ಞರು ಈಗಾಗಲೇ ಇಂತಹ ಕಾರಣಗಳನ್ನು ಗುರುತಿಸಿದ್ದಾರೆ. ಹಾಗೇ, ಇಂದರ್ ಮಲ್ಹೋತ್ರ ಅವರಂತಹ ರಾಜಕೀಯ ವಿಶ್ಲೇಷಕರು ಕೆಲವು ವರ್ಷಗಳ ಹಿಂದೆಯೇ ಮಂಡಲ್ ಆಯೋಗ, ಕೋಮುವಾದಿ ರಾಜಕಾರಣ ಹಾಗೂ ಹೊಸ ಮೀಸಲಾತಿಯ ಈ ಹೋರಾಟದ ನಡುವಿನ ಸಂಬಂಧಗಳನ್ನು ವಿಶ್ಲೇಷಿಸಿದ್ದರು. ಕನ್ನಡದ ಚಿಂತಕ ಡಿ ಆರ್ ನಾಗರಾಜ್ ಕೂಡ ಬಹಳ ಹಿಂದೆಯೇ ಜಾಗತೀಕರಣ ಮತ್ತು ಜಾತಿ ಹಾಗೂ ಕೋಮು ರಾಜಕಾರಣದ ನಡುವಿನ ನಂಟನ್ನು ವಿಶ್ಲೇಷಿಸಿದ್ದರು.

ಅಂತಹ ವಿಶ್ಲೇಷಣೆ ಮತ್ತು ಅವರು ನುಡಿದ ಭವಿಷ್ಯ ಇದೀಗ ವರ್ತಮಾನದ ಭಾರತದ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಬಿಜೆಪಿ ಮತ್ತು ಸಂಘಪರಿವಾರ ಯಾವೆಲ್ಲಾ ರಾಜ್ಯಗಳಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ ಮೂಲಕ ದಶಕಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿವೆಯೇ ಅದೇ ರಾಜ್ಯಗಳಲ್ಲಿ ಇದೀಗ ಈ ಪ್ರಭಾವಿ ಸಮುದಾಯಗಳ ಮೀಸಲಾತಿ ಹೋರಾಟಗಳು ಕಾವೇರಿವೆ ಎಂಬುದು ಕೇವಲ ಕಾಕತಾಳೀಯ ಅಲ್ಲ. ಆ ಪಕ್ಷ ಮತ್ತು ಮತೀಯ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ನಡೆಸಿದ ಕೋಮು ರಾಜಕಾರಣದ ಬೈಪ್ರಾಡಕ್ಟ್‌ ಆಗಿ ಈಗ ಈ ಮೀಸಲಾತಿ ಹೋರಾಟ ಕಂಡುಬಂದರೆ ಅದರಲ್ಲಿ ಅಚ್ಚರಿಯೇನಿಲ್ಲ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More