ಪ್ರಧಾನಿ ಮೋದಿಯವರಿಗೆ ಆಕಾಶವಾಣಿ ಸಿಬ್ಬಂದಿಯ ಮನದ ಮಾತು ಕೇಳಿಸುವುದೇ?

ಸರಿಸುಮಾರು ಮೂರು ದಶಕಗಳ ಕಾಲ ಬಡ್ತಿ ಇಲ್ಲದೆ, ಅವಶ್ಯದಷ್ಟು ಸಿಬ್ಬಂದಿಯೂ ಇಲ್ಲದೆ ಆಕಾಶವಾಣಿ ಮತ್ತು ದೂರದರ್ಶನ ನಲುಗುತ್ತಿವೆ. ಬೇಸತ್ತ ಸಿಬ್ಬಂದಿ ಈಗ ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ಆರಂಭಿಸಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ

ಪ್ರಸಾರ ಭಾರತಿಯಡಿ ಕಾರ್ಯನಿರ್ವಹಿಸುತ್ತಿರುವ ಆಕಾಶವಾಣಿ ಮತ್ತು ದೂರದರ್ಶನ ಈಗ ಸಂಕಷ್ಟದಲ್ಲಿದೆ. ಎರಡೂ ಸಂಸ್ಥೆಗಳ ಕಾರ್ಯಕ್ರಮ ಸಿಬ್ಬಂದಿ ಈಗ ಪದೋನ್ನತಿ, ವೇತನ ಬಡ್ತಿ ಹಾಗೂ ನೇಮಕಾತಿ ವಿಷಯದಲ್ಲಿ ಬೇಸತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.

ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಮೂರು ದಶಕಗಳಿಂದ ಕಾರ್ಯಕ್ರಮ ನಿರ್ವಾಹಕ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಯಾವುದೇ ರೀತಿಯ ಬಡ್ತಿ ಪಡೆದಿಲ್ಲ. ವರ್ಷದಿಂದ ವರ್ಷಕ್ಕೆ ನಿವೃತ್ತಿ ಹೊಂದಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ೧,೦೦೦ ಹುದ್ದೆಗಳು ಖಾಲಿ ಇವೆ.

ಈ ನಡುವೆ, ಪ್ರಸಾರ ಭಾರತಿ ಇಂಡಿಯನ್‌ ಬ್ರಾಡ್‌ಕಾಸ್ಟಿಂಗ್‌ ಪ್ರೋಗ್ರಾಮ್‌ ಸರ್ವಿಸ್‌ (ಐಬಿಪಿಎಸ್‌) ಅಡಿ ಮೀಸಲಿರುವ ಎರಡೂ ಸಂಸ್ಥೆಗಳ ಮುಖ್ಯ ಹುದ್ದೆಗಳಿಗೆ ಅನನುಭವಿಗಳನ್ನು ವಿವಿಧ ಇಲಾಖೆಗಳಿಂದ ನಿಯೋಜನೆ ಮಾಡಲಾಗುತ್ತಿದ್ದು, ಕಾರ್ಯನಿರ್ವಹಣೆಯೂ ಸಮಸ್ಯೆಯಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ದೇಶದ ಯಾವುದೇ ಇಲಾಖೆಯಲ್ಲಿ ಇಷ್ಟು ದೀರ್ಘ ಅವಧಿ ಪದೋನ್ನತಿ ಅಥವಾ ಬಡ್ತಿ ಇಲ್ಲದೆ ಸೇವೆ ಸಲ್ಲಿಸಿದ ಉದಾಹರಣೆಗಳಿಲ್ಲ. ಸರಕಾರದ ನೇರ ಸುಪರ್ದಿಯಲ್ಲಿರುವ ಆಕಾಶವಾಣಿ ಹಾಗೂ ದೂರದರ್ಶನ ಸಿಬ್ಬಂದಿಯ ಬದುಕು ಹೀನಾಯ ಸ್ಥಿತಿ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಈ ಹಿನ್ನೆಲೆಯಲ್ಲಿ ದೂರದರ್ಶನ ಹಾಗೂ ಆಕಾಶವಾಣಿ ಕಾರ್ಯಕ್ರಮ ಸಿಬ್ಬಂದಿ ಜಂಟಿಯಾಗಿ ವೇದಿಕೆ ನಿರ್ಮಿಸಿದ್ದು, ಇದರಡಿ ಜುಲೈ ೩೧ರಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿದಿನ ಊಟದ ವಿರಾಮದಲ್ಲಿ ಕಚೇರಿ ಎದುರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಯಲಿದೆ. ಸರ್ಕಾರಕ್ಕೆ ಸಮಯಾವಕಾಶ ನೀಡಿದ್ದು, ಒಂದು ವೇಳೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಸಂಸತ್‌ ಎದುರು ಸಿಬ್ಬಂದಿ ಪ್ರತಿಭಟನೆ ನಡೆಸುತ್ತೇವೆ. ಇದಕ್ಕೂ ಜಗ್ಗದಿದ್ದಲ್ಲಿ, ಅಕ್ಟೋಬರ್‌ ತಿಂಗಳಿನಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು,'' ಎನ್ನುತ್ತಾರೆ, ವೇದಿಕೆಯ ದಕ್ಷಿಣ ವಲಯದ ಕಾರ್ಯದರ್ಶಿ ವಿನೋದ್‌ ಕುಮಾರ್‌.

ಪರಿಣತಿ ಇಲ್ಲದ ಹಿರಿಯ ಸಿಬ್ಬಂದಿ

ಹೊಸ ನೇಮಕಾತಿಗಳನ್ನು ಮಾಡದ ಪ್ರಸಾರ ಭಾರತಿಯು, ಭಾರತೀಯ ವಾಯುಸೇನೆ, ಭಾರತೀಯ ಸೈನಿಕ ಆರ್ಥಿಕ ಸೇವೆ, ದೂರಸಂಪರ್ಕ ಸೇವೆ, ಕೇಂದ್ರ ಸಚಿವಾಲಯ ಮುಂತಾದ ಇಲಾಖೆಗಳ ನಿವೃತ್ತರನ್ನು ಉಪನಿರ್ದೇಶಕರು, ಪ್ರಧಾನ ನಿರ್ದೇಶಕರು ಮುಂತಾದ ಪ್ರಮುಖ ಹುದ್ದೆಗಳಿಗೆ ೨೦೧೨ರಿಂದ ನೇಮಿಸುತ್ತ ಬಂದಿದೆ. ಇವರೆಲ್ಲರೂ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದ ಹುದ್ದೆಗಳು ವೃತ್ತಿಪರ ಹುದ್ದೆಗಳಾಗಿದ್ದು, ಸೂಕ್ತ ತರಬೇತಿ ಹಾಗೂ ಪ್ರಸಾರದ ಜ್ಞಾನವನ್ನು ನಿರೀಕ್ಷಿಸುತ್ತವೆ. ಆದರೆ, ಪ್ರಭಾರಿಯಾಗಿ ನೇಮಕಗೊಂಡವರು ಸೇವಾ ಹಿರಿತನ ಹೊಂದಿದ್ದರೂ ವೃತ್ತಿ ಅನುಭವದ ಕೊರತೆಯಿಂದಾಗಿ ನಿತ್ಯದ ಕಾರ್ಯನಿರ್ವಹಣೆ ಸಂಕೀರ್ಣವಾಗಿದೆ ಎಂದು ಆಕಾಶವಾಣಿ ಕಾಯಂ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಐಬಿಪಿಎಸ್‌ ಪ್ರಕಾರ, ಕಾರ್ಯಕ್ರಮ ನಿರ್ವಾಹಕರು ಅತವಾ ಐಬಿಪಿಎಸ್‌ ಅಧಿಕಾರಿಗಳು ಕಡ್ಡಾಯವಾಗಿ ಕಲೆ, ಸಂಸ್ಕೃತಿ, ಶಿಕ್ಷಣ, ಮಾಧ್ಯಮ ಹಾಗೂ ಪ್ರಚಾರ ಅಥವಾ ಕಾರ್ಯಕ್ರಮ ನಿರ್ಮಾಣದಲ್ಲಿ ಅರ್ಹತೆಯನ್ನು ಹೊಂದಿರಬೇಕು. ಸಹಾಯಕ ಪ್ರಧಾನ ನಿರ್ದೇಶಕ ಸ್ಥಾನದಲ್ಲಿ ಕೂರುವವರೆಗೆ ಹದಿನೇಳು ವರ್ಷಗಳ ಕಾರ್ಯಕ್ರಮ ನಿರ್ವಹಿಸಿದ ಅನುಭವವಿರಬೇಕು. ಆದರೆ, ನಿಯೋಜನೆಗೊಳ್ಳುತ್ತಿರುವ ಅಧಿಕಾರಿಗಳಿಗೆ ಕಾರ್ಯಕ್ರಮ ಯೋಜನೆ, ನಿರ್ವಹಣೆ, ಪ್ರಸಾರದ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲದಿರುವುದು, ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿರುವುದು ದುರದೃಷ್ಟ ಎನ್ನುತ್ತಾರೆ.

ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಸುಧೀಂದ್ರ ಕುಮಾರ್‌, "ನನ್ನ 33 ವರ್ಷಗಳ ಸೇವಾವಧಿಯಲ್ಲಿ ಒಂದು ಬಡ್ತಿಯನ್ನು ಕಂಡೆ. ನನ್ನ ಅನುಭವಕ್ಕೆ ಇನ್ನೂ ಒಂದು ಬಡ್ತಿಗೆ ಅರ್ಹನಾಗಿದ್ದೆ. ಆದರೆ ಸಿಗಲಿಲ್ಲ. ಪ್ರಸಾರ ಭಾರತಿಗೆ ಸೂಕ್ತ ಅನುದಾನ ನೀಡಿದರೆ ಅದನ್ನು ಸಮರ್ಥವಾಗಿ ಬಳಸಿಕೊಂಡು ಸಂಸ್ಥೆಯನ್ನು ಬೆಳೆಸುವ ಪ್ರತಿಭಾವಂತ ಸಿಬ್ಬಂದಿ ಇದ್ದಾರೆ. ಸರ್ಕಾರ ಬಲ ತುಂಬಬೇಕು. ಪ್ರಸಾರ ಭಾರತಿಯಲ್ಲಿ ಮುಖ್ಯ ಸ್ಥಾನಗಳಲ್ಲಿ ಕಾರ್ಯಕ್ರಮ ಸಿಬ್ಬಂದಿಯೇ ಇರಬೇಕು ಮತ್ತು ಐಬಿಪಿಎಸ್‌ ಮೂಲಕ ನೇಮಕಗೊಂಡ ಸಿಬ್ಬಂದಿಯೇ ಈ ಸಂಸ್ಥೆಗಳನ್ನು ನಡೆಸುವಂತಾಗಬೇಕು ಕೂಡ,'' ಎಂದು ಅಭಿಪ್ರಾಯಪಡುತ್ತಾರೆ.

ಪ್ರಸಾರ ಭಾರತಿ ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂತು. ೧೯೯೪ರ ನಂತರ ಆಕಾಶವಾಣಿ ಮತ್ತು ದೂರದರ್ಶನಕ್ಕೆ ಯಾವುದೇ ನೇಮಕಾತಿಯಾಗಿಲ್ಲ. ೧೯೯೦ರ ಬಳಿಕ ಬಡ್ತಿಗಳೇ ಆಗಿಲ್ಲ. ಅಲ್ಲಲ್ಲಿ ಆಡ್‌ಹಾಕ್‌ ಪದ್ಧತಿಯಲ್ಲಿ ಪ್ರಭಾರಿಯಾಗಿ ನಿಯೋಜಿಸಲಾಗಿದೆ. ಬಹುತೇಕ ಹೊರಗಿನವರಾಗಿದ್ದು, ಹಾಲಿ ಸಿಬ್ಬಂದಿಯನ್ನೂ ಪ್ರಭಾವರಿಯಾಗಿ ನೇಮಿಸಿದ್ದು, ಇವರಿಗೆ ವೇತನ ಬಡ್ತಿ ಅಥವಾ ಇತರ ಯಾವುದೇ ಸೌಲಭ್ಯಗಳು ಲಭಿಸುವುದಿಲ್ಲ.

ಇದನ್ನೂ ಓದಿ : ಪ್ರಸಾರ ಭಾರತಿ ಅಧಿಕಾರಿಗಳಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆಯೇ ಸಚಿವೆ ಇರಾನಿ?

ಪ್ರಸಾರ ಭಾರತಿಯಲ್ಲಿ ಒಟ್ಟು ೨೪,೦೦೦ ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ, ಶೇ.೧೫ರಷ್ಟು ಮಂದಿ ಕಾರ್ಯಕ್ರಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಾರ ಭಾರತಿಗೆ ನೀಡಲಾಗುವ ಬಜೆಟ್‌ನಲ್ಲಿ ಶೇ.೧೫ರಷ್ಟು ಹಣವನ್ನು ಕಾರ್ಯಕ್ರಮ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತದೆ. ಕಳೆದ ೨೦ ವರ್ಷಗಳಲ್ಲಿ ೩,೦೦೦ ಕೋಟಿ ರು.ಗಳನ್ನು ಸಚಿವಾಲಯದ ಕಾರ್ಯಾಚರಣೆಗೆ ಪ್ರಸಾರ ಭಾರತಿ ವೆಚ್ಚ ಮಾಡಿದೆ. ಆದರೆ, ಆರ್ಥಿಕ ಸ್ವಾಯತ್ತತೆ, ಕಾರ್ಯಕ್ರಮ ನಿರ್ಮಾಣ, ಆಡಳಿತ ಉದ್ದೇಶಗಳಿಗೆ ಹಣ ವಿನಿಯೋಗಿಸಿಲ್ಲ ಎಂದು ಆಕಾಶವಾಣಿ ಸಿಬ್ಬಂದಿ ಆರೋಪಿಸುತ್ತಾರೆ.

ಪ್ರಸಾರ ಭಾರತಿ ಕಾರ್ಯಕ್ರಮ ವಿಭಾಗದ ಸಿಬ್ಬಂದಿ ಬೇಡಿಕೆಗಳು

  1. ೨೫ ಮತ್ತು ೩೦ ವರ್ಷಗಳಿಂದ ಒಂದೂ ಪದೋನ್ನತಿ ಪಡೆಯದಿರುವ ಸಿಬ್ಬಂದಿಗೆ ಸಿಗಬೇಕಾದ ಪದೋನ್ನತಿಯನ್ನು ಪೂರ್ವಾನ್ವಯವಾಗುವಂತೆ ಶೀಘ್ರವಾಗಿ ನೀಡುವುದು.
  2. ಬೇರೆ-ಬೇರೆ ಇಲಾಖೆಗಳಿಂದ ವೇತನದ ಆಧಾರದ ಮೇಲೆ ಅನರ್ಹ ಉನ್ನತ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ನಿಯೋಜಿಸುತ್ತಿರುವುದನ್ನು ತಕ್ಷಣ ಹಿಂದಕ್ಕೆ ತೆಗೆದುಕೊಳ್ಳಬೇಕು.
  3. ಪ್ರಸಾರ ಭಾರತಿಯ ಕಾರ್ಯಕ್ರಮ ವಿಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅರ್ಹ ಕಾರ್ಯಕ್ರಮ ಸಿಬ್ಬಂದಿಗೆ ಒಂದು ಬಾರಿ ನಿಯಮ ಸಡಿಲಿಕೆ ಮಾಡಿ ಪದೋನ್ನತಿಯೊಂದಿಗೆ ಭರ್ತಿ ಮಾಡಬೇಕು.

ದೇಶದಲ್ಲಿರುವ ೬೮ ದೂರದರ್ಶನ ಕೇಂದ್ರ ಮತ್ತು ೨೧೫ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮ ಸಿಬ್ಬಂದಿ ಈ ಬೇಡಿಕೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶವನ್ನುದ್ದೇಶಿಸಿ ತಮ್ಮ ‘ಮನದ ಮಾತು’ಗಳನ್ನು ಆಕಾಶವಾಣಿ ಮೂಲಕ ಹಂಚಿಕೊಳ್ಳುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಅದೇ ಆಕಾಶವಾಣಿ ಸಿಬ್ಬಂದಿಯ ಮನದಾಳದ ಮಾತುಗಳನ್ನು ಕೇಳಿಸಿಕೊಳ್ಳಬಹುದೇ? ಸಿಬ್ಬಂದಿ ನಿರೀಕ್ಷೆಯಲ್ಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More