ಮುಕ್ತ ಮಾಧ್ಯಮದ ಕತ್ತು ಹಿಸುಕುವ ದಿಲ್ಲಿ ದರ್ಬಾರಿಗೆ ಮತ್ತಿಬ್ಬರು ಪತ್ರಕರ್ತರ ವೃತ್ತಿಬಲಿ!

ಪ್ರಧಾನಿ ನಡೆ-ನುಡಿಗಳನ್ನು ಕುರಿತು ವಾಸ್ತವಾಂಶಗಳನ್ನು ಜನರ ಮುಂದಿಡುವ ಮಾಧ್ಯಮಗಳ ವಿರುದ್ಧ ಸಮರ ಸಾರಿ, ಅಂತಹ ಮಾಧ್ಯಮಗಳ ಬಾಯಿ ಮುಚ್ಚಿಸಿ ಪಳಗಿಸುವ ಮೋದಿಯವರ ಸರ್ಕಾರದ ವರಸೆಗೆ ಇದೀಗ ‘ಎಬಿಪಿ ನ್ಯೂಸ್’ನ ಹಿರಿಯ ಪತ್ರಕರ್ತರಿಬ್ಬರ ರಾಜಿನಾಮೆ ಪ್ರಕರಣ ಹೊಸ ಸೇರ್ಪಡೆ

ಈಗಾಗಲೇ ದೇಶದ ಬಹುತೇಕ ಮಾಧ್ಯಮಗಳನ್ನು ಪಳಗಿಸಿಟ್ಟುಕೊಂಡಿರುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ, ಹಾಗೇ ಪಳಗಿಸಲಾಗದ ಮಾಧ್ಯಮಗಳ ವಿರುದ್ಧ ಹತ್ತುಹಲವು ಬಗೆಯ ಗೆರಿಲ್ಲಾ ಸಮರ ಸಾರಿದೆ ಎಂಬುದು ದೇಶವ್ಯಾಪಿ ಈಗ ಮಾಧ್ಯಮ ಮತ್ತು ಆಡಳಿತ ವಲಯದಲ್ಲಿ ಚಾಲ್ತಿಯಲ್ಲಿರುವ ಸಂಗತಿ.

ಮಾಧ್ಯಮದ ವಿರುದ್ಧದ ಸರ್ಕಾರದ ಅಂತಹ ಗೆರಿಲ್ಲಾ ಸಮರದ ತಾಜಾ ಉದಾಹರಣೆ ಎಂದರೆ, ‘ಎಬಿಪಿ ನ್ಯೂಸ್’ ಎಂಬ ಹಿಂದಿ ಸುದ್ದಿವಾಹಿನಿಗೆ ಸಂಬಂಧಿಸಿದ್ದು. ಆ ವಾಹಿನಿಯ ವ್ಯವಸ್ಥಾಪಕ ಸಂಪಾದಕ ಮಿಲಿಂದ್ ಖಾಂಡೇಕರ್ ಮತ್ತು ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ವಾಜಪೇಯಿ ಎರಡು ದಿನಗಳ ಹಿಂದೆ ದಿಢೀರ್ ರಾಜಿನಾಮೆ ನೀಡಿದ್ದಾರೆ. ಅವರ ಈ ರಾಜಿನಾಮೆಗೆ ವಾಹಿನಿ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲವಾದರೂ, ಆ ಇಬ್ಬರು ಹಿರಿಯ ಪತ್ರಕರ್ತರು ಹಾಗೂ ಅವರ ಆಪ್ತರ ಟ್ವೀಟ್‌ ಹೇಳಿಕೆಗಳ ಪ್ರಕಾರ, ಪ್ರಧಾನಿ ಮೋದಿ ಅವರಿಗೆ ಸಂಬಂಧಿಸಿದ ವರದಿಯೊಂದರ ಹಿನ್ನೆಲೆಯಲ್ಲಿ ಸರ್ಕಾರದ ಕಡೆಯಿಂದ ಆ ಪತ್ರಕರ್ತರು ಮತ್ತು ಅವರ ಸಂಸ್ಥೆಯ ಮೇಲೆ ಒತ್ತಡವಿತ್ತು. ಆ ಒತ್ತಡದ ಹಿನ್ನೆಲೆಯಲ್ಲೇ ಆ ಇಬ್ಬರು ಇದೀಗ ಕೆಲಸ ಕಳೆದುಕೊಂಡಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಪ್ರಧಾನಿ ಮೋದಿಯವರ ನಡೆ-ನುಡಿಗಳನ್ನು ಕುರಿತು ಸತ್ಯಾಸತ್ಯತೆಯನ್ನು ಜನರ ಮುಂದಿಡುವ ಪ್ರಯತ್ನ ಮಾಡುವ ಮಾಧ್ಯಮಗಳ ವಿರುದ್ಧ ಸರ್ಕಾರ ಕೆಲವೊಮ್ಮೆ ನೇರವಾಗಿ, ಮತ್ತೆ ಕೆಲವೊಮ್ಮೆ ಪರೋಕ್ಷವಾಗಿ ಸಮರ ಸಾರುವ, ಅಂತಹ ಮಾಧ್ಯಮಗಳ ಬಾಯಿಮುಚ್ಚಿಸುವ ದಬ್ಬಾಳಿಕೆಯ ಕ್ರಮಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಈ ಸರ್ಕಾರದ ಅವಧಿಯಲ್ಲಿ ಅಂತಹ ಹಲವು ಪ್ರಕರಣಗಳು ವರದಿಯಾಗಿವೆ. ಅಂತಹ ಸಾಲಿಗೆ ‘ಎಬಿಪಿ ನ್ಯೂಸ್’ ಸಂಸ್ಥೆ ತನ್ನ ಹಿರಿಯ ಪತ್ರಕರ್ತರಿಬ್ಬರನ್ನು ಬೀದಿಪಾಲು ಮಾಡಿರುವುದು ಹೊಸ ಸೇರ್ಪಡೆ.

ಅಷ್ಟಕ್ಕೂ ಆ ಇಬ್ಬರು ಪತ್ರಕರ್ತರು ಕೆಲಸ ಕಳೆದುಕೊಳ್ಳಲು ಕಾರಣವಾದ ಸಂಗತಿ ಕೂಡ ಕುತೂಹಲಕಾರಿ. ಕಳೆದ ಜೂನ್ ೨೦ರಂದು ಪ್ರಧಾನಿ ಮೋದಿಯವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ (ಟೆಲಿಕಾನ್ಫರೆನ್ಸ್) ಭಾಗವಹಿಸಿದ್ದ ಚತ್ತೀಸಗಢದ ಚಂದ್ರಮಣಿ ಕೌಶಿಕ್ ಎಂಬ ಮಹಿಳೆಯ ಕುರಿತು ‘ಎಬಿಪಿ ನ್ಯೂಸ್’ ವಿಶೇಷ ವರದಿ ಮಾಡಿತ್ತು. ಸಂವಾದದ ವೇಳೆ ಆ ಮಹಿಳೆ, ತಾನು ಸರ್ಕಾರದ ಯೋಜನೆಯಿಂದ ಉತ್ತೇಜಿತಗೊಂಡು ಭತ್ತ ಬೆಳೆಯುವ ಬದಲು, ಸೀತಾಫಲ ಬೆಳೆದಿದ್ದರಿಂದ ಈಗ ತನ್ನ ಆದಾಯ ದುಪ್ಪಟ್ಟಾಗಿದೆ ಎಂದಿದ್ದರು. ಆದರೆ, ‘ಎಬಿಪಿ ನ್ಯೂಸ್’ ಆ ಕುರಿತು ನಡೆಸಿದ ತನಿಖಾ ವರದಿಯ ಪ್ರಕಾರ, ಹಾಗೆ ಸುಳ್ಳು ಹೇಳುವಂತೆ ಆಕೆಗೆ ಒತ್ತಡ ಹೇರಲಾಗಿತ್ತು. ವಾಸ್ತವದಲ್ಲಿ ಆದಾಯದಲ್ಲಿ ಅಂತಹ ಯಾವ ಏರಿಕೆಯನ್ನೂ ಆಕೆ ಕಂಡಿರಲಿಲ್ಲ. ಮೋದಿಯವರ ಪೂರ್ವನಿರ್ದೇಶಿತ ಸಂವಾದ ಹೇಳಿದ ಸಂಗತಿಗೂ, ವಾಸ್ತವತೆಗೂ ಇರುವ ವ್ಯತ್ಯಾಸವನ್ನು ವಿಡೀಯೋ ಸಂದರ್ಶನದ ಸಹಿತ ಎಬಿಪಿಯ ಜನಪ್ರಿಯ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದಲ್ಲಿ ಬಿಂಬಿಸಲಾಗಿತ್ತು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಈ ಕಾರ್ಯಕ್ರಮದ ವೀಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ಮೋದಿಯವರ ಸಂವಾದದ ಸಾಚಾತನವನ್ನು ಪ್ರಶ್ನಿಸಿದ್ದರು. ಆದರೆ, ಸಚಿವರಾದ ನಿರ್ಮಲಾ ಸೀತಾರಾಮನ್, ರಾಜವರ್ಧನ್ ರಾಥೋಡ್ ಸೇರಿದಂತೆ ಹಲವು ಬಿಜೆಪಿ ನಾಯಕರು ಎಬಿಪಿಯ ಆ ವರದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಅದು ಮೋದಿ ವಿರೋಧಿಗಳ ಕೃತ್ಯವೆಂದೂ, ಸತ್ಯಕ್ಕೆ ದೂರವಾದ ವರದಿ ಎಂದು ಅವರು ಪತ್ರಕರ್ತರು ಮತ್ತು ವಾಹಿನಿ ವಿರುದ್ಧ ಕಿಡಿಕಾರಿದ್ದರು. ಹಾಗಾಗಿ ಸಹಜವಾಗೇ ಆ ವರದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಬಿಜೆಪಿ ನಾಯಕರ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯೆಯಾಗಿ ಚಂದ್ರಮಣಿ ಕೌ‍ಶಿಕ್ ಅವರ ಕುರಿತು ಇನ್ನಷ್ಟು ಮಾಹಿತಿ ಶೋಧಿಸಿದ ಎಬಿಪಿ ಪತ್ರಕರ್ತರು, ಆ ಕುರಿತ ಸಂಪೂರ್ಣ ಸಾಕ್ಷ್ಯಸಹಿತ ತನಿಖಾ ವಿವರಗಳೊಂದಿಗೆ ಮತ್ತೊಂದು ವರದಿ ಪ್ರಸಾರ ಮಾಡುವ ಮೂಲಕ ತಿರುಗೇಟು ನೀಡಿದರು.

ಆದರೆ, ಆ ವರದಿಗೆ ಬಿಜೆಪಿ ನಾಯಕರು ನೀಡಿದ ಪ್ರತಿಕ್ರಿಯೆ ಅಚ್ಚರಿಯದ್ದಾಗೇನೂ ಇರಲಿಲ್ಲ. ಎಂದಿನಂತೆ ಸತ್ಯವನ್ನು ಅಧಿಕಾರದ ಮುಖಕ್ಕೆ ಹಿಡಿದ ಮಾಧ್ಯಮವನ್ನು ಆ ನಾಯಕರು ಬಹಿಷ್ಕರಿಸಿದರು. ಅಷ್ಟಕ್ಕೇ ನಿಲ್ಲದ ಈ ಪ್ರಕರಣ, ಮಂದುವರಿದು, ಆ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಪತ್ರಕರ್ತ ವಾಜಪೇಯಿ ನಡೆಸಿಕೊಡುತ್ತಿದ್ದ ಮಾಸ್ಟರ್ ಸ್ಟ್ರೋಕ್ ಪ್ರಸಾರದ ಹೊತ್ತಿಗೆ ವಾಹಿನಿಯ ಪ್ರಸಾರವೇ ಸ್ಥಗಿತವಾಗತೊಡಗಿತು. ಕಳೆದ ಹತ್ತು ದಿನಗಳಿಂದ ಆ ಕಾರ್ಯಕ್ರಮ ಪ್ರಸಾರವಾಗುವ ರಾತ್ರಿ ೯-೧೦ ಗಂಟೆ ಅವಧಿಯಲ್ಲಿ ಎಬಿಪಿ ನ್ಯೂಸ್ ವಾಹಿನಿ ಸಂಪೂರ್ಣ ಟಿವಿ ಪರದೆಯ ಮೇಲೆ ಖಾಲಿ ಬರುತ್ತಿದೆ ಎಂಬುದು ಹಲವು ವೀಕ್ಷಕರ ದೂರಾಗಿತ್ತು. ಕೆಲವರು ತಮ್ಮ ಡಿಟಿಎಚ್ ಸೇವಾ ಸಂಸ್ಥೆಗಳನ್ನು ಟ್ಯಾಗ್‌ ಮಾಡಿ, ಟ್ವೀಟ್ ಮಾಡುವ ಮೂಲಕ ಯಾಕೆ ಈ ಕಾರ್ಯಕ್ರಮದ ಅವಧಿಯಲ್ಲೇ ವಾಹಿನಿಯನ್ನು ಬ್ಲಾಕ್ ಮಾಡಲಾಗಿದೆ ಎಂದು ನೇರ ಪ್ರಶ್ನಿಸಿದರು. ಅಂತಹ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಏರ್‌ಟೆಲ್, ಟಾಟಾ ಸ್ಕೈನಂತಹ ಡಿಟಿಎಚ್ ಸೇವಾದಾತ ಕಂಪನಿಗಳು ಆ ಅಡಚಣೆಗೆ ತಾವು ಕಾರಣವಲ್ಲ; ವಾಹಿನಿಯ ಕಡೆಯಿಂದಲೇ ಈ ಬಗ್ಗೆ ಸಮಸ್ಯೆ ಇರಬಹುದು ಎಂದು ಪ್ರತಿಕ್ರಿಯಿಸಿ, ಆ ಕುರಿತ ಖಚಿತ ಮಾಹಿತಿ ನೀಡಲು ಸಮಯಾವಕಾಶ ಅಗತ್ಯ ಎಂದು ಹೇಳಿದ್ದವು.

ಈ ನಡುವೆ, ಪತ್ರಕರ್ತ ವಾಜಪೇಯಿ ಅವರು, ತಮ್ಮ ಕಾರ್ಯಕ್ರಮದ ವೀಡಿಯೋಗಳನ್ನು ಟ್ಯಾಗ್ ಮಾಡಿ, “ವಾಹಿನಿಯ ಕಾರ್ಯಕ್ರಮವನ್ನು ಬ್ಲಾಕ್ ಮಾಡಿದರೂ, ಸತ್ಯವನ್ನು ಮರೆಮಾಚಲಾಗದು. ನಾವು ಸತ್ಯವನ್ನು ಹೇಳುವುದನ್ನು ತಡೆಯಲೂ ಆಗದು,” ಎಂದು ಟ್ವೀಟ್ ಮಾಡಿದ್ದರು. ಈ ಕುರಿತ ಟ್ವಿಟರ್‌ ವಾದ- ವಿವಾದಗಳು ನಡೆಯುತ್ತಿರುವ ಹೊತ್ತಿಗೇ, ಆಗಸ್ಟ್ ಒಂದರಂದು ವಾಹಿನಿಯ ವ್ಯವಸ್ಥಾಪಕ ಸಂಪಾದಕ ಮಿಲಿಂದ್ ಖಾಂಡೆಕರ್ ಮತ್ತು ಅದರ ಮಾರನೇ ದಿನ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ವಾಜಪೇಯಿ ಸಂಸ್ಥೆಯಿಂದ ಹೊರಬಿದ್ದಿದ್ದಾರೆ.

ಇದೀಗ ಈ ಪ್ರಕರಣ, ರಾಷ್ಟ್ರದ ನೈಜ ಮಾಧ್ಯಮಗಳು ಮತ್ತು ಪತ್ರಕರ್ತರ ಅಸ್ತಿತ್ವದ ಕುರಿತ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ದೇಶದ ಪ್ರಮುಖ ಪತ್ರಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಿರಿಯ ಪತ್ರಕರ್ತರಾದ ರಾಜ್‌ದೀಪ್ ಸರ್‌ದೇಸಾಯಿ, ರವೀಶ್ ಕುಮಾರ್ ಸೇರಿದಂತೆ ಹಲವರು ಈ ಇಬ್ಬರು ಪತ್ರಕರ್ತರ ರಾಜಿನಾಮೆ ಮತ್ತು ಆ ಮೂಲಕ ಸರ್ಕಾರ ಮಾಧ್ಯಮಗಳನ್ನು ಪಳಗಿಸುತ್ತಿರುವ ಪರಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಭುತ್ವದ ಅಧಿಕಾರ ಬಳಸಿ, ಸ್ವತಂತ್ರ ಮತ್ತು ಜನಪರ ಮಾಧ್ಯಮಗಳ ಕತ್ತು ಹಿಸುಕಲಾಗುತ್ತಿದೆ. ಪ್ರಭುತ್ವದ ಕಪಿಮುಷ್ಟಿಯಲ್ಲಿ ದೇಶದ ಮಾಧ್ಯಮ ಸ್ವಾತಂತ್ರ್ಯವೇ ಉಸಿರುಗಟ್ಟುತ್ತಿದೆ ಎಂಬ ವ್ಯಾಪಕ ಆತಂಕಕ್ಕೆ ಈ ಪ್ರಕರಣ ಮತ್ತಷ್ಟು ಪುಷ್ಟಿ ನೀಡಿದೆ.

ಈ ನಡುವೆ, ತನ್ನ ಹಿರಿಯ ಸಂಪಾದಕ ಮತ್ತು ಪತ್ರಕರ್ತರ ರಾಜಿನಾಮೆಯ ಕುರಿತು ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ, ಆ ಬಗ್ಗೆ ಎಬಿಪಿ ಮಾಧ್ಯಮ ಸಂಸ್ಥೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನಾಗಲೀ, ಸ್ಪಷ್ಟನೆಯನ್ನಾಗಲೀ ನೀಡಿಲ್ಲ. ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದ ವೇಳೆಯಲ್ಲೇ ವಾಹಿನಿಯ ಪ್ರಸಾರ ಸ್ಥಗಿತವಾಗುತ್ತಿದ್ದ ಬಗ್ಗೆಯಾಗಲೀ, ಟಿವಿಗಳಲ್ಲಿ ಆ ಅವಧಿಯಲ್ಲಿ ಚಾನೆಲ್ ಖಾಲಿ ಕಾಣುತ್ತಿದ್ದ ಬಗ್ಗೆಯಾಗಲೀ ತನ್ನ ಅಭಿಪ್ರಾಯವೇನು? ಆ ಬಗ್ಗೆ ತಾನು ಯಾವ ಕ್ರಮಕೈಗೊಂಡಿರುವೆ ಎಂಬ ಬಗ್ಗೆಗೂ ಆ ಸಂಸ್ಥೆ ಚಕಾರವೆತ್ತಿಲ್ಲ. ಹಾಗಾಗಿ ಸಹಜವಾಗೇ ಇದೀಗ ಸರ್ಕಾರದ ಜೊತೆಗೆ ನೈಜ ಮತ್ತು ಸತ್ಯದ ಪರವಾದ ಮಾಧ್ಯಮ ಧರ್ಮದ ಪರ ಗಟ್ಟಿಯಾಗಿ ನಿಲ್ಲದೇ, ಅಧಿಕಾರಸ್ಥರ ಮುಖಕ್ಕೆ ರಾಚುವಂತೆ ಸತ್ಯವನ್ನು ಎತ್ತಿಹಿಡಿದ ಪತ್ರಕರ್ತರನ್ನು ಬೀದಿಗೆ ತಳ್ಳಿದ ಸಂಸ್ಥೆಯ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ರಾಜದೀಪ್ ಸರ್ದೇಸಾಯಿ ಕೂಡ ನೈಜ ಪತ್ರಿಕೋದ್ಯಮವನ್ನು ಪಾಲಿಸುವ ಪತ್ರಕರ್ತರ ಪರ ನಿಲ್ಲದ ಮಾಧ್ಯಮ ಸಂಸ್ಥೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಎಬಿಪಿ ನ್ಯೂಸ್‌ನ ಇಬ್ಬರು ಪತ್ರಕರ್ತರು ದಿಢೀರ್‌ ರಾಜಿನಾಮೆ ಪ್ರಕರಣ ಶುಕ್ರವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, “ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸಿರುವ ಹಲವು ಉದಾಹರಣೆಗಳಿವೆ. ಸರ್ಕಾರದ ಹೇಳಿಕೆಗೂ ವಾಸ್ತವಕ್ಕೂ ಅಂತರವಿರುವ ವಿಚಾರವನ್ನು ಸಾಬೀತುಪಡಿಸಲು ಮುಂದಾಗುವ ಮಾಧ್ಯಮಗಳಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವೇ ಇಲ್ಲವಾದಾಗ, ಮಾತನಾಡುವುದು ಹೇಗೆ? ಎಂದು ಕಿಡಿಕಾರಿದ್ದಾರೆ. ಇದನ್ನು ಪ್ರಬಲವಾಗಿ ವಿರೋಧಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು, “ಎಬಿಪಿ ನ್ಯೂಸ್‌ ದೋಷಪೂರಿತ ವರದಿ ಪ್ರಸಾರ ಮಾಡಿದರೂ ಷೋಕಾಸ್‌ ನೋಟಿಸ್‌ ಜಾರಿಗೊಳಿಸಿಲ್ಲ. ವೀಕ್ಷಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರಿಂದ ಪತ್ರಕರ್ತರನ್ನು ಕೆಲಸದಿಂದ ವಜಾ ಮಾಡಿರಬಹುದು. ಇದಕ್ಕಾಗಿ ಸರ್ಕಾರವನ್ನು ದೂರಲಾಗುತ್ತಿದೆ,” ಎಂದಿದ್ದಾರೆ. ಕೇಂದ್ರ ಸರ್ಕಾರದ ನಡೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೇಂದ್ರದ ಆನ್‌ಲೈನ್ ಮಾಧ್ಯಮ ನಿಯಂತ್ರಣ ಯತ್ನ ಪ್ರಜಾಪ್ರಭುತ್ವ ವಿರೋಧಿ ನಡೆ

ಅಷ್ಟಕ್ಕೇ ಸೀಮಿತವಾಗದೆ, ಇದೀಗ ಈ ಇಡೀ ಪ್ರಕರಣ, ಮೋದಿಯವರ ಆಡಳಿತದಲ್ಲಿ ದೇಶದ ಮುಕ್ತ ಮಾಧ್ಯಮಕ್ಕೆ ಬಂದೊದಗಿರುವ ಅಪಾಯ ಮತ್ತು ಅಸ್ತಿತ್ವದ ಆತಂಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನೂ ಹುಟ್ಟುಹಾಕಿದೆ. ಹಾಗೇ, ತನ್ನ ಸಮರ್ಥನೆಗೆ, ಬಹುಪರಾಕಿಗೆ ನಿಲ್ಲದ ಮಾಧ್ಯಮಗಳನ್ನು, ತನಗೆ ಹಿತವಲ್ಲದ ಸತ್ಯಗಳನ್ನು ಎತ್ತಿತೋರಿಸುವ ಪತ್ರಕರ್ತರನ್ನು ತಂತ್ರಗಾರಿಕೆ, ಬೆದರಿಕೆಗಳ ಮೂಲಕ ಬಾಯಿ ಮುಚ್ಚಿಸುವ ಸರ್ಕಾರದ ವರಸೆಯ ಬಗ್ಗೆಗೂ ಟೀಕೆ ವ್ಯಕ್ತವಾಗುತ್ತಿವೆ. ಹಾಗೇ ಇಂತಹ ಪರಿಸ್ಥಿತಿಯಲ್ಲಿ ದೇಶದ ಪ್ರಜಾಪ್ರಭುತ್ವದ ನೈಜ ಆಶಯವನ್ನು ಕಾಯಬೇಕಾದ ವಸ್ತುನಿಷ್ಠ ಪತ್ರಿಕೋದ್ಯಮವನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆಯೂ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More