ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ವಿದೇಶಿ ಸುದ್ದಿಗಳ ಸಂಕ್ಷಿಪ್ತ ನೋಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ರಮಾನಾಥ್‌ ರೈ ಸ್ಪರ್ಧೆ?

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಮಾನಾಥ್‌ ರೈ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಸಾಧ್ಯವಾದರೆ, ದಕ್ಷಿಣ ಕನ್ನಡ ಸಂಸದ ಬಿಜೆಪಿಯ ನಳೀನ್‌ ಕುಮಾರ್‌ ಕಟೀಲು ಅವರಿಗೆ ಪ್ರಬಲ ಸ್ಪರ್ಧೆ ಎದುರಾಗಲಿದೆ. ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಲೋಕಸಭಾ ಪೂರ್ವತಯಾರಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ರಮಾನಾಥ್‌ ರೈ ಸೋಲುಂಡಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ರೈ ಕೆಲಸ ಮಾಡಿದ್ದರು.

ವಸತಿ ನಿಲಯಗಳಲ್ಲಿ ನಡೆದ ಲೈಂಗಿಕ ಪ್ರಕರಣ ನಾಚಿಕೆಗೇಡು: ನಿತೀಶ್ ಕುಮಾರ್

ಬಿಹಾರದ ಮುಜಾಫರ್‌ಪುರ್ ಸರ್ಕಾರಿ ವಸತಿ ನಿಲಯಗಳಲ್ಲಿ ನಡೆದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಿಂದ ಸರ್ಕಾರ ತಲೆತಗ್ಗಿಸುವಂತಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಈ ಪ್ರಕರಣ ಕುರಿತು ಇದೇ ಮೊದಲ ಬಾರಿಗೆ ನಿತೀಶ್ ಅವರು ಮೌನ ಮುರಿದಿದ್ದು, “ಈ ಘಟನೆಯಿಂದಾಗಿ ನಾವೆಲ್ಲ ನಾಚಿಕೆ ಪಡಬೇಕಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಶೀಘ್ರವಾಗಿ ಆರೋಪಿಗಳನ್ನು ಪತ್ತೆಮಾಡಿ ಶಿಕ್ಷೆಗೆ ಗುರಿಪಡಿಸಲಾಗುವುದು,” ಎಂದಿದ್ದಾರೆ.

ಅಮೆರಿಕ ಮತ್ತೆ ಸುಂಕ ಹೇರಿದರೆ ಪ್ರತಿಯಾಗಿ ಸುಂಕ ಹೆಚ್ಚಿಸುವ ಎಚ್ಚರಿಕೆ ನೀಡಿದ ಚೀನಾ

ಅಮೆರಿಕ ಮತ್ತೆ ಸುಂಕ ಹೇರುವ ಸಾಹಸ ಮಾಡಿದರೆ ಅಮೆರಿಕದ 60 ಬಿಲಿಯನ್ ಡಾಲರ್ ಸರಕುಗಳ ಮೇಲೆ ಮತ್ತಷ್ಟು ಸುಂಕ ಹೇರುವುದಾಗಿ ಚೀನಾ ಎಚ್ಚರಿಕೆ ನೀಡಿದೆ. ಇದರೊಂದಿಗೆ ಚೀನಾ-ಅಮೆರಿಕ ನಡುವೆ ನಡೆಯುತ್ತಿರುವ ಜಾಗತಿಕ ವ್ಯಾಪಾರ ಸಮರವು ಮತ್ತೊಂದು ಮಜಲು ಮುಟ್ಟಿದೆ. 200 ಬಿಲಿಯನ್ ಡಾಲರ್ ಮೌಲ್ಯದ ಚೀನಾ ಸರಕುಗಳ ಮೇಲೆ ಸುಂಕ ಹೇರುವ ಅಧ್ಯಕ್ಷ ಟ್ರಂಪ್ ಆದೇಶವನ್ನು ಜಾರಿ ಮಾಡಿದರೆ ಪ್ರತಿಯಾಗಿ ಸುಂಕ ಹೇರಲು ನಾವು ಸಿದ್ಧರಾಗಿದ್ದೇವೆ ಎಂದು ಚೀನಾ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಎಚ್ಚರಿಸಿದೆ. ಪರಸ್ಪರ ಗೌರವದ ಆಧಾರದ ಮೇಲೆ ಸಮಾಲೋಚನೆ ನಡೆಸುವುದನ್ನು ಚೀನಾ ಯಾವಾಗಲೂ ನಂಬುತ್ತದೆ ಮತ್ತು ಪಾಲಿಸುತ್ತದೆ. ಸಮಾನತೆ ಮತ್ತು ಪರಸ್ಪರ ಲಾಭವು ವ್ಯಾಪಾರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ಪರಿಣಾಮಕಾರಿ ಮಾರ್ಗ ಎಂದು ಚೀನಾ ವಾಣಿಜ್ಯ ಸಚಿವಾಲಯ ಹೇಳಿದೆ.

ಎಲ್ಲ ರಾಜ್ಯದಲ್ಲೂ ಪೌರತ್ವ ನೋಂದಣಿ ಪ್ರಕ್ರಿಯೆ ನಡೆಯಲಿ: ಅಸ್ಸಾಂ ರಾಜ್ಯಪಾಲ

ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಆರಂಭಿಸಿ ಎನ್‌ಆರ್‌ಸಿ ಕರಡನ್ನು ಸಿದ್ಧಪಡಿಸಬೇಕೆಂದು ಅಸ್ಸಾಂ ರಾಜ್ಯಪಾಲ ಜಗದೀಶ್‌ ಮುಖಿ ಹೇಳಿದ್ದಾರೆ. ಅಸ್ಸಾಂನಲ್ಲಿ ಪೌರತ್ವ ನೋಂದಣಿ ವಿಚಾರವಾಗಿ ಪ್ರತಿಭಟನೆಗಳು ಭುಗಿಲೆದ್ದಿರುವ ಸಮಯದಲ್ಲೇ ರಾಜ್ಯಪಾಲರು ಕೊಟ್ಟಿರುವ ಈ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. “ಭಾರತದಲ್ಲಿ ನೆಲೆಸಿರುವ ಪ್ರತಿ ವಿದೇಶಿಯನ ಬಗ್ಗೆ ಮಾಹಿತಿ ಹೊಂದುವ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿದೆ,” ಎಂದು ಜಗದೀಶ್‌ ಮುಖಿ ಹೇಳಿರುವುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಏಷ್ಯಾಡ್ ಅಥ್ಲೀಟ್‌ಗಳ ತರಬೇತಿಗೆ ₹೩೦ ಲಕ್ಷ ಬಿಡುಗಡೆ

ಇದೇ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯಾ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಎಂಟು ವಿವಿಧ ಕ್ರೀಡಾ ವಿಭಾಗದ ಅಥ್ಲೀಟ್‌ಗಳಿಗೆ ಕ್ರೀಡಾ ಸಚಿವಾಲಯ ₹ ೩೦ ಲಕ್ಷ ಬಿಡುಗಡೆ ಮಾಡಿದೆ. ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ₹ ೪.೯೫ ಲಕ್ಷ ಪಡೆದಿದ್ದು, ಜಾರ್ಜಿಯಾದಲ್ಲಿ ಅವರು ತರಬೇತಿ ಪಡೆಯಲಿದ್ದಾರೆ. ದಿ ಮಿಷನ್ ಒಲಿಂಪಿಕ್ ಸೆಲ್ ಇಂದು ಸಭೆ ನಡೆಸಿ ಅಥ್ಲೀಟ್‌ಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡಲು ನಿರ್ಧರಿಸಿತು. ಶೂಟರ್ ತೇಜಸ್ವಿನಿ ಸಾವಂತ್ (೧.೨೪ ಲಕ್ಷ), ಜಿಮ್ನಾಸ್ಟ್ ರಾಕೇಶ್ ಪಾತ್ರ (₹ ೫.೦೨ ಲಕ್ಷ) ಸೇರಿದಂತೆ ಇನ್ನೂ ಹಲವಾರು ಅಥ್ಲೀಟ್‌ಗಳಿಗೆ ಕ್ರೀಡಾ ಸಚಿವಾಲಯ ಸಹಾಯ ಧನವನ್ನು ಬಿಡುಗಡೆಗೊಳಿಸಿದೆ.

ಭಾರತ-ಕಜಕಿಸ್ತಾನ ಪರಸ್ಪರ ಸಹಕಾರಕ್ಕೆ ಸುಷ್ಮಾ ಚಿಂತನೆ

ಕಜಕಿಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ, ಕಜಕಿಸ್ತಾನದ ವಿದೇಶಾಂಗ ಸಚಿವ ಕೈರಾತ್ ಅಬ್ದುರಖ್ಮನೋವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವ್ಯಾಪಾರ, ಹೂಡಿಕೆ, ರಕ್ಷಣಾ ಹಾಗೂ ಇಂಧನ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ನೀಡುವಂತೆ ಮಾತುಕತೆ ನಡೆಸಿದ್ದಾರೆ. ಸಂಪನ್ಮೂಲಭರಿತ ದೇಶಗಳೊಂದಿಗೆ ಸಹಕಾರ ಕೋರುವ ಎರಡೂ ದೇಶಗಳು ೨೦೦೯ರಿಂದ ಉತ್ತಮ ಸಂಬಂಧವನ್ನು ಕಾಯ್ದುಕೊಂಡು ಬಂದಿವೆ.

ಕಮಲಹಾಸನ್‌ ‘ವಿಶ್ವರೂಪಂ 2’ ಬಿಡುಗಡೆಗೆ ಕಂಟಕ

ಕಮಲಹಾಸನ್‌ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ವಿಶ್ವರೂಪಂ 2’ ತಮಿಳು ಸಿನಿಮಾ ಬಿಡುಗಡೆಗೆ ಕಂಟಕ ಎದುರಾಗಿದೆ. ಪಿರಮಿಡ್‌ ಸಾಯಿಮೀರಾ ಪ್ರೊಡಕ್ಷನ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆ ಕಮಲ್‌ ವಿರುದ್ಧ ಮೊಕದ್ದಮೆ ದಾಖಲಿಸಿದೆ. ಕಮಲ್‌ರಿಂದ ತಮಗೆ ಬರಬೇಕಿರುವ 5.44 ಕೋಟಿ ರೂಪಾಯಿ ಹಣಕ್ಕೆ ಗ್ಯಾರಂಟಿ ಬೇಕು ಎನ್ನುವುದು ಅವರ ಅಹವಾಲು. “ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ‘ಮರ್ಮಯೋಗಿ’ ಸಿನಿಮಾ ಮಾಡಿಕೊಡುವುದಾಗಿ ಕಮಲ್‌ ಹೇಳಿದ್ದರು. ಈ ಒಪ್ಪಂದದ ಮೇರೆಗೆ 2008, ಏಪ್ರಿಲ್‌ 2ರಂದು ಕಮಲ್‌ರ ರಾಜ್‌ಕಮಲ್‌ ಇಂಟರ್‌ನ್ಯಾಷನಲ್‌ ಫಿಲ್ಮ್ಸ್‌ ಬ್ಯಾನರ್‌ಗೆ 10.90 ಕೋಟಿ ನೀಡಿದ್ದೆ. ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನನಗಿಂತ ಹಣ ಮರುಪಾವತಿಯಾಗಬೇಕು. ಅಲ್ಲಿಯವರೆಗೆ ಅವರ ಸಿನಿಮಾ ಬಿಡುಗಡೆ ತಡೆಹಿಡಿಯಬೇಕು,” ಎಂದು ಪಿರಮಿಡ್‌ ಸಾಯಿಮೀರಾ ಪ್ರೊಡಕ್ಷನ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಹೇಳಿದೆ. ಸೋಮವಾರದೊಳಗೆ (ಆ.6) ಇದಕ್ಕೆ ಸೂಕ್ತ ಉತ್ತರ ನೀಡುವಂತೆ ಮದ್ರಾಸ್‌ ಹೈಕೋರ್ಟ್‌ ಕಮಲ ಹಾಸನ್ ಮತ್ತು ಅವರ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಗೆ ಆದೇಶಿಸಿದೆ.

ಅಶ್ವಿನ್, ಇಶಾಂತ್ ದಾಳಿಗೆ ಕಂಗೆಟ್ಟ ಇಂಗ್ಲೆಂಡ್

ಬರ್ಮಿಂಗ್‌ಹ್ಯಾಮ್‌ನ ಎಜ್‌ಬ್ಯಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಸ್ಪಷ್ಟ ಮೇಲುಗೈ ಸಾಧಿಸಿದೆ. ಆರ್ ಅಶ್ವಿನ್ (೪೬ಕ್ಕೆ ೩) ಸ್ಪಿನ್ ಜತೆಗೆ ಇಶಾಂತ್ ಶರ್ಮಾ (೫೧ಕ್ಕೆ ೫) ವೇಗದ ದಾಳಿಗೆ ಸಿಲುಕಿದ ಜೋ ರೂಟ್ ಪಡೆ ಎರಡನೇ ಇನ್ನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ, ಭಾರತದ ಗೆಲುವಿಗೆ ೧೯೪ ರನ್ ಗೆಲುವಿನ ಗುರಿ ನೀಡಿದೆ. ಆಕರ್ಷಕ ಅರ್ಧಶತಕ ಬಾರಿಸಿದ ಸ್ಯಾಮ್ ಕರನ್ (೬೩) ಕೊನೆಯ ಆಟಗಾರನಾಗಿ ಪೆವಿಲಿಯನ್ ಸೇರಿದರು. ಸಹಸ್ರ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರೂ ಬೌಲಿಂಗ್‌ನಲ್ಲಿ ತಿರುಗಿಬೀಳುವ ಸಂಕಲ್ಪ ತೊಟ್ಟಿದೆ.

ನೀರವ್ ಮೋದಿ ಗಡಿಪಾರು ಮಾಡುವಂತೆ ಬ್ರಿಟನ್‌ಗೆ ಅರ್ಜಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂಪಾಯಿ ವಂಚನೆ ಮಾಡಿ, ಬ್ರಿಟನ್ ಗೆ ಪರಾರಿಯಾಗಿರುವ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಕೋರಿ, ಬ್ರಿಟನ್ ಸರ್ಕಾರಕ್ಕೆ, ಭಾರತ ಅಧಿಕೃತವಾಗಿ ಮನವಿ ಸಲ್ಲಿಸಿದೆ. ರಾಜ್ಯಸಭೆಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ ಕೆ ಸಿಂಗ್, ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಕೋರಿರುವ ಅರ್ಜಿಯನ್ನು ಗೃಹ ಇಲಾಖೆಯಿಂದ ವಿದೇಶಾಂಗ ಇಲಾಖೆಗೆ ಕಳುಹಿಸಿಕೊಡಲಾಗಿದೆ. ನೀರವ್ ನ ಪಾಸ್‌ಪೋರ್ಟ್‌ ಅನ್ನು ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10(3)(ಸಿ) ಅಡಿಯಲ್ಲಿ ವಿದೇಶಾಂಗ ಇಲಾಖೆ ವಜಾಗೊಳಿಸಿದೆ ಎಂದು ಇದೇ ವೇಳೆ ಸಿಂಗ್ ಸ್ಪಷ್ಟನೆ ನೀಡಿದರು.

ಅಪಹರಣಗೊಂಡಿದ್ದ ಕೆ ಆರ್ ಪೇಟೆ ತಹಶೀಲ್ದಾರ್ ಪತ್ತೆ

ಗುರುವಾರ ದುಷ್ಕರ್ಮಿಗಳಿಂದ ಅಪಹರಣಗೊಂಡಿದ್ದ ಕೆ ಆರ್ ಪೇಟೆ ತಹಶೀಲ್ದಾರ್ ಮಹೇಶ್ಚಂದ್ರ ಶುಕ್ರವಾರ ಕೆ ಆರ್ ಪೇಟೆಯ ತೆಂಡೇಕೆರೆಯಲ್ಲಿ ಪತ್ತೆಯಾಗಿದ್ದಾರೆ. ಸ್ವತಃ ತಾವೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದು ಪೊಲೀಸರ ಮುಂದೆ ಹಾಜರಾಗಿದ್ದಾರೆ. ಪೊಲೀಸರಿಗೆ ಹೇಳಿಕೆ ನಿಡಿರುವ ತಹಶೀಲ್ದಾರ್, ಅಪಹರಣಕಾರರು ಎರಡು ಮೋಟಾರ್ ಬೈಕ್‌ನಲ್ಲಿ ಬಂದು ನನ್ನನ್ನು ಅಪಹರಿಸಿ ತಾವೇ ತಂದು ಬಿಟ್ಟರು ಎಂದು ಹೇಳಿಕೆ ನೀಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More