ರುಪೇ, ಭೀಮ್ ಆ್ಯಪ್ ಮೂಲಕ ಪಾವತಿ ಮಾಡಿದವರಿವರಿಗೆ ಕ್ಯಾಶ್‌ಬ್ಯಾಕ್ ಯೋಜನೆ

ಡಿಜಿಟಲ್ ಪಾವತಿ ಪ್ರೋತ್ಸಾಹಿಸಲು ಮುಂದಾಗಿರುವ ಕೇಂದ್ರ ಸರ್ಕಾರ ರುಪೇ ಕಾರ್ಡ್, ಭೀಮ್ ಆ್ಯಪ್ ಮೂಲಕ ಪಾವತಿ ಮಾಡಿದವರಿಗೆ ಪ್ರೋತ್ಸಾಹಧನ ನೀಡಲಿದೆ. ಅದು ಕ್ಯಾಶ್‌ಬ್ಯಾಕ್ ರೂಪದಲ್ಲಿ ಇರಲಿದೆ. ಪಾವತಿಸಿದ ಜಿಎಸ್ಟಿಯ ಶೇ.20ರಷ್ಟು ಅಥವಾ ಗರಿಷ್ಠ 100 ರುಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ

ರುಪೇ ಕಾರ್ಡ್ ಮತ್ತು ಭೀಮ್ ಆ್ಯಪ್ ಬಳಸಿ ಪಾವತಿ ಮಾಡುವವರಿಗೆ ಪ್ರೋತ್ಸಾಹಧನ ನೀಡಲು ಜಿಎಸ್ಟಿ ಮಂಡಳಿ ನಿರ್ಧರಿಸಿದೆ. ಸುಶೀಲ್ ಮೋದಿ ನೇತೃತ್ವದ ಸಚಿವರುಗಳ ಸಮಿತಿಯು ಡಿಜಿಟಲ್ ಪಾವತಿ ಮಾಡುವವರಿಗೆ ಪ್ರೋತ್ಸಾಹಧನ ನೀಡುವ ಪ್ರಸ್ತಾವಕ್ಕೆ ಶುಕ್ರವಾರ ಅನುಮೋದನೆ ನೀಡಿತ್ತು. ಶನಿವಾರ ನಡೆದ ಜಿಎಸ್ಟಿ ಮಂಡಳಿಯು ಪ್ರೋತ್ಸಾಹಧನ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರಲು ಮುಂದಾಗಿದೆ.

ರುಪೇ ಮತ್ತು ಭೀಮ್ ಆ್ಯಪ್ ಮೂಲಕ ಪಾವತಿಗೆ ಮಾತ್ರ ಪ್ರೋತ್ಸಾಹಧನ ನೀಡುವ ಕ್ರಮದಿಂದಾಗಿ ದೇಶೀಯ ಕಾರ್ಡ್ ರುಪೇ ಮತ್ತು ದೇಶೀಯ ಆ್ಯಪ್ ಭೀಮ್‌ಗೆ ಹೆಚ್ಚಿನ ಬೇಡಿಕೆ ಬರಲಿದೆ. ಈ ಕ್ರಮವು ದೇಶೀಯ ಕಾರ್ಡ್ ಮತ್ತು ಆ್ಯಪ್‌ಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈಗಿರುವ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಈ ಎರಡೂ ಪಾವತಿ ಪ್ರಮಾಣವು ಅತ್ಯಲ್ಪ ಇದೆ.

ಜಿಎಸ್ಟಿಯ ಶೇ.20ರಷ್ಟು ಅಥವಾ ಗರಿಷ್ಠ 100 ರುಪಾಯಿ- ಯಾವುದು ಕಡಿಮೆಯೋ ಅದನ್ನು ಪ್ರೋತ್ಸಾಹಧನವಾಗಿ ಕ್ಯಾಶ್‌ಬ್ಯಾಕ್ ಮೂಲಕ ನೀಡಲಾಗುತ್ತದೆ. ಜಿಎಸ್ಟಿ ಮಂಡಳಿ ಸಭೆ ನಂತರ ಹಂಗಾಮಿ ವಿತ್ತ ಸಚಿವ ಪಿಯುಶ್ ಗೋಯಲ್ ಈ ಮಾಹಿತಿ ನೀಡಿದ್ದಾರೆ.

ಜು.21ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಡಿಜಿಟಲ್ ಪಾವತಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅಂದಿನ ಸಭೆಯಲ್ಲಿ ತಾಂತ್ರಿಕ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಲಾಗಿತ್ತು. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ), ಜನ-ಧನ ಯೋಜನೆ ಖಾತೆದಾರರೆಲ್ಲರಿಗೂ ರುಪೇ ಕಾರ್ಡ್ ಒದಗಿಸುತ್ತಿದೆ. ಇದರಿಂದ, ಅರೆನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ.

ಜನ-ಧನ ಯೋಜನೆಯಡಿ 60 ಲಕ್ಷಕ್ಕೂ ಹೆಚ್ಚು ಖಾತೆ ತೆರೆಯಲಾಗಿದೆ. ಈ ಖಾತೆಗಳಿಗೆ ವಿವಿಧ ಜನಕಲ್ಯಾಣ ಯೋಜನೆಗಳ ಪ್ರೋತ್ಸಾಹಧನ, ಸಹಾಯಧನಗಳನ್ನು ನೇರವಾಗಿ ಪಾವತಿ ಮಾಡಲಾಗುತ್ತದೆ. ಈ ಖಾತೆದಾರರು ಡಿಜಿಟಲ್ ಪಾವತಿಗೆ ಮುಂದಾದರೆ, ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳೂ ಕ್ಯಾಶ್‌ಲೆಸ್ ವಹಿವಾಟಿಗೆ ತೆರೆದುಕೊಳ್ಳಲಿವೆ.

ಇದನ್ನೂ ಓದಿ : ಜಿಎಸ್ಟಿ ವ್ಯವಸ್ಥೆ ತೆರಿಗೆ ಸ್ನೇಹಿ ವ್ಯವಸ್ಥೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದೇಕೆ?

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಜಿಎಸ್ಟಿ ವ್ಯವಸ್ಥೆಯಡಿ ಪ್ರಸ್ತಾಪಿಸಿರುವ ಸಮಸ್ಯೆಗಳ ನಿವಾರಣೆಗಾಗಿ ಸಚಿವರ ಸಮಿತಿ ನೇಮಕ ಮಾಡಲು ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ದೆಹಲಿ ರಾಜ್ಯ ಹಣಕಾಸು ಸಚಿವ ಮನಿಶ್ ಸಿಸೋಡಿಯಾ, ಪಂಜಾಬ್ ಮತ್ತು ಕೇರಳ ರಾಜ್ಯದ ವಿತ್ತ ಸಚಿವರೂ ಸಮಿತಿ ಸದಸ್ಯರಾಗಿರುತ್ತಾರೆ. ಜಿಎಸ್ಟಿ ಮಂಡಳಿ ಸಭೆಯಲ್ಲಿ ಸಣ್ಣ ವ್ಯಾಪಾರಿಗಳು ಪ್ರಸ್ತಾಪಿಸಿರುವ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More