ರಾಜ್ಯಾದ್ಯಂತ ಒಣಗಿವೆ ಸಾವಿರ ಕೆರೆ; ಹೆಚ್ಚಲಿದೆಯೇ ನೀರಿನ ಅಭಾವ?

ಈ ಬಾರಿ ರಾಜ್ಯದಲ್ಲಿ ದಾಖಲೆಯ ಮಳೆಯಾಗಿದೆ ಎಂದು ಹೇಳಲಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಕೊರತೆ ಕಂಡುಬಂದಿಲ್ಲ. ಆದರೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿರುವ ಕಾರಣ ಈ ಭಾಗದ ಬಹುತೇಕ ಕೆರೆಗಳಲ್ಲಿ ನೀರಿಲ್ಲದಂಥ ಸ್ಥಿತಿ ಇದೆ. ನೀರಿನ ಅಭಾವದ ಆತಂಕ ಕಾಡಿದೆ

ರಾಜ್ಯದಲ್ಲಿ ಭೋರ್ಗರೆಯುತ್ತಿರುವ ಮಳೆಯಿಂದಾಗಿ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿವೆ. ಜಲಾಶಯಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ನೀರನ್ನು ಹೊರಬಿಡಲಾಗುತ್ತಿದೆ. ವಿಪರ್ಯಾಸ ಸಂಗತಿ ಎಂದರೆ ರೈತರ ಜೀವನಾಡಿ ಎಂದೇ ಕರೆಯಲಾಗಿರುವ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ.!

ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ನಿರ್ವಹಿಸುತ್ತಿರುವ ಸಾವಿರಕ್ಕೂ ಹೆಚ್ಚು ಕೆರೆಗಳಲ್ಲಿ ಒಂದೇ ಒಂದು ಹನಿ ನೀರಿಲ್ಲದೆ ಸಂಪೂರ್ಣವಾಗಿ ಕೆರೆ ಅಂಗಳ ಒಣಗಿ ಹೋಗಿದೆ. ಹೀಗಾಗಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ.

ರಾಜ್ಯದ ಉತ್ತರ, ಮಧ್ಯ ಮತ್ತು ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಉತ್ತರ ಕರ್ನಾಟಕದ ೧೨ ಜಿಲ್ಲೆಗಳಲ್ಲಿ ಆಗಸ್ಟ್ ೩,೨೦೧೮ರ ಅಂತ್ಯಕ್ಕೆ ಶೇ.೧೬ರಷ್ಟು(೨೮೧ ಮಿಲಿ ಮೀಟರ್) ಮಳೆ ಕಡಿಮೆಯಾಗಿದೆ. ಈ ಭಾಗದ ಕೆರೆಗಳಲ್ಲಿ ನೀರಿನ ಕೊರತೆಗೆ ಇದು ಮೂಲ ಕಾರಣ.

ರಾಯಚೂರು ಜಿಲ್ಲೆಯಲ್ಲಿ ಶೇ.೫೦ರಷ್ಟು ಕಡಿಮೆ ಮಳೆಯಾಗಿದೆ. (೧೩೨ ಮಿಲಿ ಮೀಟರ್‌), ಯಾದಗಿರಿಯಲ್ಲಿ ಶೇ.೩೪ (೨೨೫ ಮಿ ಮೀ), ಬೆಳಗಾವಿಯಲ್ಲಿ ಶೇ.೧೨ (೪೨೫), ಬೀದರ್‌ನಲ್ಲಿ ಶೇ.೨೪ (೩೧೧ ಮಿ ಮೀ), ಬಾಗಲಕೋಟೆಯಲ್ಲಿ ಶೇ.೧೬ (೨೦೪ ಮಿ ಮೀ), ಕಲ್ಬುರ್ಗಿಯಲ್ಲಿ ಶೇ.೨೨ (೨೭೪ ಮಿ ಮೀ), ಹಾವೇರಿಯಲ್ಲಿ ಶೇ.೭ (೩೯೦ ಮಿ ಮೀ) ಮಳೆಯಾಗಿದೆ.

ಇದನ್ನೂ ಓದಿ : ರಾಜ್ಯದ ಎಲ್ಲ ಕಡೆಯೂ ಮಳೆ ಆಗಿಲ್ಲ; ಎದುರಾಗಿದೆ ಕುಡಿಯುವ ನೀರಿಗೆ ತತ್ವಾರ

ರಾಜ್ಯದಲ್ಲಿ ಜಿಲ್ಲಾ ಪಂಚಾಯತಿಗಳು ನಿರ್ವಹಿಸುತ್ತಿರುವ ಒಟ್ಟು ಕೆರೆಗಳ ಪೈಕಿ ೧,೨೭೧ ಮತ್ತು ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿರುವ ಒಟ್ಟು ಕೆರೆಗಳ ಪೈಕಿ ಶೇ.೩೩ರಷ್ಟು ಕೆರೆಗಳು ಒಣಗಿಹೋಗಿವೆ. ೨೩ ವಿಭಾಗಗಳು ಕೆರೆಗಳಲ್ಲಿರುವ ನೀರಿದೆಯೇ ಇಲ್ಲವೇ ಎಂಬ ಬಗ್ಗೆ ಈವರೆವಿಗೂ ಯಾವುದೇ ವರದಿಯನ್ನು ಇಲಾಖೆಗೆ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.

ಹಾವೇರಿ ಜಿಲ್ಲೆಯಲ್ಲಿ ಜೂನ್ ೨೦೧೮ರ ಅಂತ್ಯಕ್ಕೆ ೧,೧೫೩ ಕೆರೆಗಳ ಪೈಕಿ ೫೬೬ ಕೆರೆಗಳು ಒಣಗಿಹೋಗಿವೆ. ಕೆ ಆರ್‌ ನಗರದ ಒಟ್ಟು ೩೯೬ ಪೈಕಿ ೨೩೫ ಕೆರೆಗಳಲ್ಲಿ ಒಂದೇ ಒಂದು ಹನಿ ನೀರಿಲ್ಲ ಎಂದು ಇಲಾಖೆ ನೀಡಿರುವ ಅಂಕಿ-ಅಂಶಗಳಿಂದ ಗೊತ್ತಾಗಿದೆ.

ಮಾರ್ಚ್‌ ೨೦೧೮ರ ಅಂತ್ಯಕ್ಕೆ ಯಾದಗಿರಿ ಜಿಲ್ಲೆಯ ೨೮೦ ಕೆರೆಗಳ ಪೈಕಿ ೧೬೭ ಕೆರೆಗಳು, ರಾಯಚೂರು ಜಿಲ್ಲೆಯ ೨೧೬ ಕೆರೆಗಳ ಪೈಕಿ ೧೦೨ ಕೆರೆಗಳು ಒಣಗಿದ್ದವು. ಜುಲೈ ಅಂತ್ಯಕ್ಕೆ ಎಷ್ಟು ಕೆರೆಗಳಲ್ಲಿ ನೀರಿದೆ ಎಂಬ ಬಗ್ಗೆ ಮಾಹಿತಿಯನ್ನು ಇಲಾಖೆಗೆ ಒದಗಿಸಿಲ್ಲ. ಸದ್ಯ ೭,೯೪೯ ಕೆರೆಗಳಲ್ಲಿ ೧೯,೧೫೮ ದಶಲಕ್ಷ ಘನ ಅಡಿ ನೀರಿದೆ. ಮಾರ್ಚ್‌ ೨೦೧೮ ಅಂತ್ಯಕ್ಕೆ ೧೪,೧೭೮ ಕೆರೆಗಳಲ್ಲಿ ೪೭,೧೭೦ ದಶಲಕ್ಷ ಘನ ಅಡಿ ನೀರಿತ್ತು ಎಂದು ಇಲಾಖೆ ತಿಳಿಸಿದೆ.

ಅದೇ ರೀತಿ, ೧,೧೨೧ ಕೆರೆಗಳಲ್ಲಿ ಶೇ.೭೫ರಿಂದ ೯೦ರವರೆಗೆ ನೀರು ಸಂಗ್ರಹವಾಗಿದೆ. ೧,೫೮೫ ಕೆರೆಗಳಲ್ಲಿ ಶೇ.೨೦ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ನೀರಿದೆಯಷ್ಟೇ. ಔರಾದ್, ಭಾಲ್ಕಿ, ಇಂಡಿ, ಸಿಂಧಗಿ, ಬೀಳಗಿ, ಮುದ್ದೆಬಿಹಾಳ, ಜಮಖಂಡಿ, ಬದಾಮಿ, ಬೈಲಹೊಂಗಲ, ಸವದತ್ತಿ, ಖಾನಾಪುರ, ಮೊಳಕಾಲ್ಮೂರು, ಕೂಡ್ಲಿಗಿ ಸೇರಿದಂತೆಲ ಒಟ್ಟು ೫೬ ತಾಲೂಕುಗಳಲ್ಲಿ ಗಣನೀಯವಾಗಿ ಅಂತರ್ಜಲ ಕುಸಿಯುತ್ತಿರುವುದು ಜಲ ಗಂಡಾಂತರದ ಮುನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಏತ ನೀರಾವರಿ ಮೂಲಕ ನೀರು ಪಂಪ್‌ ಮಾಡಿ ಕೆರೆ ತುಂಬಿಸುವ ಯೋಜನೆ ಕೂಡ ಪೂರ್ಣ ಪ್ರಮಾಣದ ಕೆಲಸಗಳಾಗದೇ ಇರುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಬಹುತೇಕ ಎಲ್ಲ ಕೆರೆಗಳು ಮಳೆಯಾಶ್ರಿತವಾಗಿರುವ ಕಾರಣ, ಸೆಪ್ಟೆಂಬರ್‌ ಅಂತ್ಯದವರೆಗೆ ಈ ಭಾಗದ ಜಿಲ್ಲೆಗಳಲ್ಲಿ ಮಳೆ ಆಗದಿದ್ದರೆ ರೈತರಲ್ಲಿ ಆತಂಕ ಹೆಚ್ಚುವುದಲ್ಲದೆ ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. ಇದೇ ಸ್ಥಿತಿ ಮುಂದುವರಿದರೆ ಅಂತರ್ಜಲ ಮಟ್ಟ ತೀವ್ರ ಕುಸಿಯುವ ಆತಂಕವೂ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More