ನಿಮ್ಮ ಫೋನ್‌ನಲ್ಲಿ 1800-300-1947 ಸಂಖ್ಯೆ ದಿಢೀರ್ ಪ್ರತ್ಯಕ್ಷವಾಗಿದೆಯೇ?

ಖಾಸಗಿತನದ ಕುರಿತು ಭಾರಿ ಚರ್ಚೆ ನಡೆಯುತ್ತಿರುವಾಗಲೇ, ಬಳಕೆಯಲ್ಲಿರುವ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿರುವ ಆಧಾರ್‌ ಸಹಾಯವಾಣಿ ಸಂಖ್ಯೆಯನ್ನು ಕಾಂಟ್ಯಾಕ್ಟ್‌ ಲಿಸ್ಟ್‌ಗೆ ಸೇರಿಸಿದೆ ಗೂಗಲ್‌. ಇದು ಈಗ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದು, ಚರ್ಚೆ ಬಿರುಸಾಗಿದೆ

ಶುಕ್ರವಾರ ಮಧ್ಯಾಹ್ನದ ನಂತರ ನಿಮ್ಮ ಫೋನ್‌ಗೆ ಅನಿರೀಕ್ಷಿತ ಸಂಖ್ಯೆಯೊಂದು ನಿಮಗೇ ಗೊತ್ತಿಲ್ಲದೇ ಸೇರ್ಪಡೆಯಾಗಿದೆ. ವಿಶಿಷ್ಟ ಗುರುತಿನ ಪ್ರಾಧಿಕಾರದ ಹಳೆಯ, ಅಂದರೆ ಈಗ ಬಳಕೆಯಲ್ಲಿರದ ಸಹಾಯವಾಣಿ ಸಂಖ್ಯೆ 1800-300-1947 ಅನ್ನು UIADI ಹೆಸರಿನೊಂದಿಗೆ ಸೇರಿಸಲಾಗಿದೆ. ಇದು ಬಳಕೆದಾರನ ಅನುಮತಿ ಪಡೆಯದೇ, ಗಮನಕ್ಕೆ ಬರದೆ ಆಗಿರುವ ಸೇರ್ಪಡೆಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಭಾರತೀಯ ಆಧಾರ್‌ ವ್ಯವಸ್ಥೆಯನ್ನು ಟೀಕಿಸುವ ಮೂಲಕ ಪರಿಚತವಾಗಿರುವ ಏಲಿಯಟ್‌ ಆಲ್ಡರ್ಸನ್‌ ತಮ್ಮ ಟ್ವೀಟ್‌ನಲ್ಲಿ ಗುರುವಾರವೇ, " ಬಹಳಷ್ಟು ಜನ, ವಿವಿಧ ಸೇವೆದಾರರನ್ನು ಹೊಂದಿರುವವರು, ಆಧಾರ್‌ ಕಾರ್ಡ್‌ ಇರುವವರು, ಇಲ್ಲದವರು, ಮೊಬೈಲ್‌ ಆಧಾರ್‌ ಆಪ್‌ ಇರುವವರು ಮತ್ತು ಇಲ್ಲದವರು, ತಮ್ಮ ಫೋನ್‌ನಲ್ಲಿ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಅವರಿಗೇ ತಿಳಿಯದೆ ಡೀಫಾಲ್ಟ್‌ ಸಂಖ್ಯೆಯಾಗಿ ಒಂದು ನಂಬರ್‌ ಸೇರ್ಪಡೆಯಾಗಿರುವುದನ್ನು ಗುರುತಿಸಿದ್ದಾರೆ. ಯಾಕೆಂದು ನೀವು ವಿವರಿಸಬಹುದೇ?'' ಎಂದು ಪ್ರಾಧಿಕಾರವನ್ನು ಪ್ರಶ್ನಿಸಿದ್ದರು.

ಇದಾಗಿ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸಾವಿರಾರು ಸಂಖ್ಯೆಯ ಜನ ತಮ್ಮ ಫೋನ್‌ನಲ್ಲಿ ಈ ನಂಬರ್‌ ಕಾಣಿಸಿಕೊಂಡಿರುವುದನ್ನು ಸ್ಕ್ರೀನ್‌ ಶಾಟ್‌ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಯುಐಡಿಎಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೂ ಅಲ್ಲದೆ, ಕಾರಣ ಕೇಳಿದರು.

೨೦೦೯ರಲ್ಲಿ ಭಾರತೀಯ ಸರ್ಕಾರ ೧೨ ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯೊಂದನ್ನು ನೀಡುವುದಕ್ಕಾಗಿ ಜಾರಿಗೆ ಬಂದ ಯೋಜನೆ ಈ ಯುಐಡಿಎಐ. ಸಾಮಾಜಿಕ ಸುರಕ್ಷತೆಯ ಕಾರಣಕ್ಕಾಗಿ, ಸರ್ಕಾರಿ ಸೇವೆಗಳನ್ನು ಪಡೆಯಲು ನೆರವಾಗಲೆಂದು ರೂಪಿಸಲಾದ ಈ ವ್ಯವಸ್ಥೆ, ಮೊಬೈಲ್‌ ಬಳಕೆದಾರರ ಮಾಹಿತಿಯ ಸುರಕ್ಷತೆಯನ್ನೇ ಹೊಣೆಗೇಡಿತನದಿಂದ ನಿರ್ವಹಿಸುತ್ತಿದೆ ಎಂಬ ಆರೋಪಕ್ಕೂ ಗುರಿಯಾಯಿತು. ಈ ಅಸಮಾಧಾನ ಮತ್ತು ಶಂಕೆಗೆ ತುಪ್ಪ ಸುರಿದಂತೆ ಶುಕ್ರವಾರದ ಸಹಾಯವಾಣಿ ಸಂಖ್ಯೆಯ ವಿಷಯ ಬೆಳಕಿಗೆ ಬಂದಿತು.

ಆದರೆ, ಯುಐಡಿಎಐ ಈ ಬೆಳವಣಿಗೆಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಾಧಿಕಾರದ ಪ್ರಕಾರ, "ಪ್ರಾಧಿಕಾರವು ಯಾವುದೇ ರೀತಿಯಲ್ಲೂ ಯಾವುದೇ ತಯಾರಿಕರಿಗೆ ಅಥವಾ ಸೇವೆ ಪೂರೈಕೆ ಮಾಡುವವರಿಗೆ ಸಂಖ್ಯೆಯನ್ನು ಸೇರಿಸಲು ತಿಳಿಸಿಲ್ಲ. ಯಾವುದೋ ಪಟ್ಟಭದ್ರ ಹಿತಾಸಕ್ತಿಯು ಸಾರ್ವಜನಿಕರಲ್ಲಿ ಗೊಂದಲ ಹುಟ್ಟಿಸಲು ಯತ್ನಿಸುತ್ತಿದೆ,'' ಎಂದು ಸರಣಿ ಟ್ವೀಟ್‌ ಮೂಲಕ ಸ್ಪಷ್ಟಪಡಿಸಲು, ಜನರ ಆಕ್ರೋಶವನ್ನು ತಣಿಸಲು ಯತ್ನಿಸಿದೆ.

ಬೆನ್ನಲ್ಲೇ, ಗೂಗಲ್‌ ಸಂಸ್ಥೆ ಕ್ಷಮೆ ಕೇಳಿದ್ದು, ತಮ್ಮಿಂದ ಆದ ತಪ್ಪೆಂದು ಹೇಳಿದೆ. 'ದಿ ಎಕನಾಮಿಕ್‌ ಟೈಮ್ಸ್‌' ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಗೂಗಲ್‌, ಬಳಕೆಯಲ್ಲಿರುವ ಆಂಡ್ರಾಯ್ಡ್‌ ಫೋನ್‌ಗಳ ಕಾಂಟ್ಯಾಕ್ಟ್‌ ಲಿಸ್ಟ್‌ಗೆ ಹಳೆಯ ಯುಐಡಿಎಐ ಸಹಾಯವಾಣಿ ಸಂಖ್ಯೆಯನ್ನು ಸೇರಿಸಿದ್ದು ಹೌದೆಂದು ಒಪ್ಪಿಕೊಂಡಿದೆ. "ನಮ್ಮ ಆಂತರಿಕ ಪರಿಶೀಲಿನೆಯಿಂದ ೨೦೧೪ರಲ್ಲಿದ್ದ ಆಧಾರ್‌ ಸಹಾಯವಾಣಿ ಮತ್ತು ತುರ್ತುಪರಿಸ್ಥಿತಿ ಸಂಖ್ಯೆ 112, ಅಜಾಗರೂಕತೆಯಿಂದ ಕೋಡ್‌ ಆಗಿದ್ದು, ಸೆಟ್‌ಅಪ್‌ ವಿಝಾರ್ಡ್‌ಗೆ ಸೇರಿದೆ. ಹಾಗಾಗಿ ಈ ಸಂಖ್ಯೆಗಳು ಆಂಡ್ರಾಯ್ಡ್‌ ಫೋನ್‌ಗಳಿಗೆ ಡೀಫಾಲ್ಟ್‌ ಆಗಿ ಸೇರ್ಪಡೆಯಾಗಿವೆ,'' ಎಂದು ಕಾರಣವನ್ನು ವಿವರಿಸಿದೆ.

ಇದು ನಿಜಕ್ಕೂ ಆಜಾಗೂಕತೆಯಿಂದ ಆಗಿದ್ದೇ? ಭಾರತದಲ್ಲಿ ತಯಾರಾದ ಫೋನ್‌ಗಳಲ್ಲಿ, ವಿಶೇಷವಾಗಿ ಗೂಗಲ್‌ನೊಂದಿಗೆ ಪಾಲುದಾರಿಕೆ ಇರುವ -ಉದಾಹರಣೆಗೆ ಮೋಟೊರೋಲಾ, ಲೆನೊವೊ- ಫೋನ್‌ಗಳಲ್ಲಿ ಕಂಡುಬಂದಿವೆ. ಸ್ಯಾಮ್‌ಸಂಗ್‌, ರೆಡ್‌ಮಿ ಫೋನ್‌ಗಳಲ್ಲಿ ಈ ಸಂಖ್ಯೆ ಸೇರ್ಪಡೆಯಾಗಿದ್ದು ಕಂಡುಬಂದಿಲ್ಲ.

ಇಲ್ಲಿ ಸ್ಪಷ್ಟವಾಗಬೇಕಾದ ಅಂಶಗಳು ಕೆಲವು ಇವೆ. ಯಾವುದೇ ಸೇವಾದಾರರಿಗೆ ಮೊಬೈಲ್‌ನಲ್ಲಿ ಡೀಫಾಲ್ಟ್‌ ಸಂಖ್ಯೆ ಸೇರಿಸಲು ಅವಕಾಶವಿರುತ್ತದೆ. ಅದು ಫೋನ್‌ ಆಪರೇಟಿಂಗ್‌ ಒದಗಿಸುವವರೊಂದಿಗೆ ಒಪ್ಪಂದದ ಮೇರೆಗೆ ನಡೆಯುತ್ತದೆ. ಅದರಂತೆ ನಿರ್ದಿಷ್ಟ ಫೋನ್‌ ಸಂಖ್ಯೆಗಳು ಫೋನ್‌ನಲ್ಲಿ ಮೊದಲೇ ಇರುತ್ತವೆ.

ಇದನ್ನೂ ಓದಿ : ಆಧಾರ್ ಭದ್ರತಾ ಲೋಪದ ವಿರುದ್ಧ ಭಾರಿ ಸಮರ ಸಾರಿರುವ ಹ್ಯಾಕರ್ ಆಲ್ಡರ್ಸನ್ ಯಾರು?

ಒಂದು ವೇಳೆ ಯುಐಡಿಎಐ ತಮ್ಮ ಸಹಾಯವಾಣಿ ಸಂಖ್ಯೆಯನ್ನು ಕೇಳದೆ ಇದ್ದರೆ ಗೂಗಲ್‌ ಯಾಕೆ ಈ ಸಂಖ್ಯೆಯನ್ನು ಸೇರಿಸಿತು? ನಾಲ್ಕು ವರ್ಷದ ಹಿಂದೆ ಈ ಸಂಖ್ಯೆಯ ಸೇರಿಸಲು ಯುಐಡಿಎಐ ಕೇಳಿಕೊಂಡಿತ್ತೇ? ಯಾಕೆ ಇದುವರೆಗೂ ಈ ಸಂಖ್ಯೆ ಫೋನ್‌ಗಳಲ್ಲಿ ಕಾಣಿಸಿಕೊಂಡಿರಲಿಲ್ಲ? ಈಗೇಕೆ ದಿಢೀರನೆ ಪ್ರತ್ಯಕ್ಷವಾಗಿದೆ? ಬಳಕೆಯಲ್ಲಿರದ ಸಂಖ್ಯೆ ಯಾಕೆ ಫೋನ್‌ಗಳಿಗೆ ಬಂತು? ಬಳಕೆಯಲ್ಲಿರದ ಸಂಖ್ಯೆ ಎಂದು ಆಧಾರ್‌ ಪ್ರಾಧಿಕಾರ ಹೇಳಿಕೊಳ್ಳುತ್ತಿದ್ದರೂ ಹಲವು ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಇದೇ ಸಹಾಯವಾಣಿ ಸಂಖ್ಯೆ ಇದೆ ಯಾಕೆ?

ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಕಾರಣಕ್ಕೆ ಗೂಗಲ್‌ ಯಾವುದೇ ರೀತಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಲು ಹೋಗಬಾರದೆಂಬ ಎಚ್ಚರದಲ್ಲಿ ತಪ್ಪೊಪ್ಪಿಕೊಂಡಿತೇ? ಈ ಬೆಳವಣಿಗೆಯಲ್ಲಿ ಗೂಗಲ್‌ ಒಂದೇ ತಪ್ಪಿನ ಹೊಣೆ ಹೊರಬೇಕೇ? ಒಂದು ವರ್ಷದ ಅವಧಿಯಲ್ಲಿ ಆಧಾರ್‌ ಮಾಹಿತಿ ಸೋರಿಕೆ, ಹ್ಯಾಕಿಂಗ್‌, ಯಾರೂ ಗೂಗಲ್‌ ಮಾಡಿ ಆಧಾರ್ ಪಡೆಯಬಹುದು ಇತ್ಯಾದಿ ಆರೋಪಗಳನ್ನು ಎದುರಿಸಿ, ಆಧಾರ್‌ ವ್ಯವಸ್ಥೆಯ ಬಗ್ಗೆ ಅನುಮಾನ ಹುಟ್ಟಿರುವ ಹೊತ್ತಲ್ಲಿ, ಈ ಬೆಳವಣಿಗೆಯನ್ನು 'ಮಹತ್ವದಲ್ಲ' ಎಂದು ಉಪೇಕ್ಷಿಸಲು ಸಾಧ್ಯವೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More