ಬೌರಿಂಗ್‌ ಕ್ಲಬ್ ಲಾಕರ್‌ ಪ್ರಕರಣ; ಅವಿನಾಶ್‌ ಜೊತೆ ಪ್ರಸಾದ್‌ ರೆಡ್ಡಿ ಪುತ್ರನ‌ ನಂಟು!

ರಿಯಲ್‌ ಎಸ್ಟೇಟ್‌ ಉದ್ಯಮಿ ಅವಿನಾಶ್‌ ಕುಕ್ರೇಜ ಮತ್ತು ಬಿಜೆಪಿ ಮುಖಂಡ ಜಿ ಪ್ರಸಾದ್‌ ರೆಡ್ಡಿ ನಡುವಿನ ವ್ಯಾವಹಾರಿಕ ಸಂಬಂಧ ಕುರಿತಾದ ವಿವರವನ್ನು ‘ದಿ ಸ್ಟೇಟ್‌’ ಒಂದು ದಿನದ ಹಿಂದೆಯೇ ಬಹಿರಂಗಪಡಿಸಿತ್ತು. ಇದೀಗ ಪ್ರಸಾದ್‌ ರೆಡ್ಡಿ ಅವರ ಪುತ್ರನ ಹೆಸರು ಪ್ರಕರಣದಲ್ಲಿ ಕೇಳಿಬಂದಿದೆ

ಬೌರಿಂಗ್‌ ಇನ್ಸಿಟಿಟ್ಯೂಟ್‌ನ ೩ ಲಾಕರ್‌ಗಳಲ್ಲಿ ದಾಖಲೆಗಳನ್ನು ಬಚ್ಚಿಟ್ಟಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಅವಿನಾಶ್ ಅಮರ್‌ ಲಾಲ್‌ ಕುಕ್ರೇಜ್ ಮತ್ತು ಬಿಜೆಪಿ ಮುಖಂಡ ಜಿ ಪ್ರಸಾದ್‌ ರೆಡ್ಡಿ ನಡುವೆ ‘ವ್ಯಾವಹಾರಿಕ ಸಂಬಂಧ’ ಇದೆ ಎಂಬುದಕ್ಕೆ ಪೂರಕವಾಗಿ ಇನ್ನಷ್ಟು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಲೆಹಾಕಿದ್ದಾರೆ. ವಿಶೇಷ ಎಂದರೆ, ಇದೇ ಪ್ರಕರಣದಲ್ಲಿ ಪ್ರಸಾದ್‌ ರೆಡ್ಡಿ ಅವರ ಪುತ್ರ ಪಿ ವಿಶ್ವಾಸ್ ಅವರ ಹೆಸರು ಕೂಡ ಮೊದಲ ಬಾರಿಗೆ ಕೇಳಿಬಂದಿದೆ.

ವಿಶ್ವಾಸ್ ಕೂಡ ಕೆಲ ನಿವೇಶನಗಳನ್ನು ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜ್‌ ಅವರಿಗೆ ಮಾರಾಟ ಮಾಡಿರುವ ಸಂಬಂಧ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ. ಹಾಗೆಯೇ, ಅನುಷ್ಕಾ ಎಸ್ಟೇಟ್ಸ್‌ ಮಾತ್ರವಲ್ಲದೆ, ಇನ್ನೂ ಕೆಲ ರಿಯಲ್ ಎಸ್ಟೇಟ್‌ ಕಂಪನಿಗಳೊಂದಿಗೆ ವ್ಯಾವಹಾರಿಕ ಪಾಲುದಾರನಾಗಿರುವ ಅವಿನಾಶ್‌ಗೆ ವಸತಿ ನಿವೇಶನಗಳು ಮಾರಾಟವಾಗಿದೆ ಎಂದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ಸೇಲ್ ಡೀಡ್‌ಗಳು ‘ದಿ ಸ್ಟೇಟ್ಸ್‌’ಗೆ ಲಭ್ಯವಾಗಿವೆ.

ಎರಡು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅನುಷ್ಕಾ ಎಸ್ಟೇಟ್ಸ್‌ಗೆ ಸಂಬಂಧಿಸಿದ ದಾಖಲೆಗಳಷ್ಟೇ ಅಧಿಕಾರಿಗಳಿಗೆ ದೊರೆತಿದ್ದವು. ಆದರೀಗ ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜ್‌ ವ್ಯಾವಹಾರಿಕ ಪಾಲುದಾರನಾಗಿರುವ ಆಕರ್ಷ್ ಡೆವಲೆಪ್‌ಮೆಂಟ್ಸ್‌ಗೆ ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕಿದ್ದಾರೆ.

ಜಿ ಪ್ರಸಾದ್‌ ರೆಡ್ಡಿ ಅವರು ಆಕರ್ಷ್ ಡೆವಲೆಪ್‌ಮೆಂಟ್ಸ್‌ಗೆ ೪ ನಿವೇಶನಗಳನ್ನು ೨೦೧೪-೧೫ರಲ್ಲಿ ಮಾರಾಟ ಮಾಡಿದ್ದಾರೆ. ಇದು ತನಿಖೆಯನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆಯಲ್ಲದೆ, ಗೃಹ ನಿರ್ಮಾಣ ಸಹಕಾರ ಸಂಘಗಳೊಂದಿಗೆ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ವ್ಯವಹಾರ ಅನಾವರಣಗೊಂಡತಾಗಿದೆ.

ಅನುಷ್ಕಾ ಎಸ್ಟೇಟ್ಸ್‌ ಮತ್ತು ಆಕರ್ಷ್ ಡೆವಲೆಪ್‌ಮೆಂಟ್ಸ್‌ಗೆ ಪ್ರಸಾದ್‌ ರೆಡ್ಡಿ ಮತ್ತು ಕುಟುಂಬ ಸದಸ್ಯರು ಮಾರಾಟ ಮಾಡಿರುವ ಬಹುತೇಕ ನಿವೇಶನಗಳು ವಿವಾದಿತ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಗೆ ಸೇರಿರುವುದು ವಿಶೇಷ. ಅಂದಾಜು ೪೬ ನಿವೇಶನಗಳು ಮೂಲತಃ ಯಾರಿಗೆ ಹಂಚಿಕೆಯಾಗಿವೆ? ಹಂಚಿಕೆ ಆಗಿರುವ ಸದಸ್ಯ ಸಂಘದ ಅರ್ಹ ಸದಸ್ಯರೇ? ಅಥವಾ ಬೇನಾಮಿ ಸದಸ್ಯರೇ? ಈ ಪೈಕಿ, ಪ್ರಸಾದ್‌ ರೆಡ್ಡಿ ಅವರು ಅನುಷ್ಕಾ ಎಸ್ಟೇಟ್ಸ್‌ಗೆ ಮಾರಾಟ ಮಾಡಿರುವ ನಿವೇಶನಗಳು ಮೂಲತಃ ಯಾರಿಗೆ ಹಂಚಿಕೆಯಾಗಿದ್ದವು ಎಂಬುದರ ಸುತ್ತ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಬೌರಿಂಗ್‌ ಲಾಕರ್ ಪ್ರಕರಣ: ಹೌಸಿಂಗ್ ಸೊಸೈಟಿಯತ್ತ ತನಿಖೆ ಹೊರಳುವುದೇ?

ವಸತಿ ನಿವೇಶನಗಳಿಗೆ ಸಂಬಂಧಿಸಿದ ಕರಾರು ಪತ್ರಗಳ ಪೈಕಿ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಶಿನಿವಾಗಿಲು ಮತ್ತು ಜಕ್ಕಸಂದ್ರದ ಸರ್ವೆ ನಂಬರ್‌ ೧೦ ಮತ್ತು ೧೧ರಲ್ಲಿ ಒಟ್ಟು ೬೮ರಿಂದ ೮೩ರವರೆಗೆ ವಿವಿಧ ವಿಸ್ತೀರ್ಣ ಹೊಂದಿರುವ ೧೬ ನಿವೇಶನಗಳನ್ನು (ಒಟ್ಟು ೧,೧೧,೭೪೪ ಚದರ ಅಡಿ) ಅನುಷ್ಕಾ ಎಸ್ಟೇಟ್ಸ್‌ಗೆ ಪ್ರಸಾದ್‌ ರೆಡ್ಡಿ ಅವರು ಮಾರಾಟ ಮಾಡಿದ್ದಾರೆ. ಈ ನಿವೇಶನಗಳನ್ನು ಪ್ರಸಾದ್ ರೆಡ್ಡಿ ಅವರು ಅನುಷ್ಕಾ ಎಸ್ಟೇಟ್ಸ್‌ಗೆ ೨೦೧೧-೧೨ರಲ್ಲೇ ನೋಂದಣಿ ಕರಾರು ಪತ್ರಗಳನ್ನು (ಸೇಲ್‌ ಡೀಡ್‌) ಬೊಮ್ಮನಹಳ್ಳಿ ವಲಯದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಾಡಿಕೊಟ್ಟಿರುವುದು ಗೊತ್ತಾಗಿದೆ. ಹಾಗೆಯೇ, ಇವೇ ನಿವೇಶನಗಳಿಗೆ ಸಂಬಂಧಿಸಿದಂತೆ ೨೦೧೪ರಲ್ಲಿ ತಿದ್ದುಪಡಿ ನೋಂದಣಿ ಪತ್ರಗಳನ್ನು ಮಾಡಿಕೊಡಲಾಗಿದೆ.

ಜಿ ಪ್ರಸಾದ್‌ ರೆಡ್ಡಿ ಮತ್ತು ಅವರ ಪುತ್ರ ಪಿ ವಿಶ್ವಾಸ್‌ ಅವರು ಅನುಷ್ಕಾ ಎಸ್ಟೇಟ್ಸ್‌ಗೆ ನಿವೇಶನ ನೋಂದಣಿ ಮಾಡಿಕೊಟ್ಟಿರುವ ಪ್ರತಿ 

ಇದಲ್ಲದೆ, ಇನ್ನಿತರ ಸರ್ವೆ ನಂಬರ್‌ಗಳಲ್ಲಿ ೩೧ ನಿವೇಶನಗಳನ್ನು ಅನುಷ್ಕಾ ಎಸ್ಟೇಟ್ಸ್‌, ಪ್ರಸಾದ್‌ ರೆಡ್ಡಿ ಅವರಿಂದ ೨೦೧೪-೧೫ರಲ್ಲಿ ಖರೀದಿಸಿದೆ. ನಿವೇಶನವೊಂದಕ್ಕೆ ೩,೫೩,೪೩,೦೦೦ ರು. ಅನುಷ್ಕಾ ಎಸ್ಟೇಟ್ಸ್ ಖರೀದಿಸಿದೆ. ಒಟ್ಟು ೪೬ ನಿವೇಶನಗಳು ಅಂದಾಜು ೪೦ ಕೋಟಿ ರು.ಗೆ ಮಾರಾಟವಾಗಿದೆ ಎಂದು ಗೊತ್ತಾಗಿದೆ.

ಈ ಪೈಕಿ, ಪ್ರಸಾದ್‌ ರೆಡ್ಡಿ ಮತ್ತು ವಿಶ್ವಾಸ್‌ ಅವರು ಜಂಟಿಯಾಗಿ ಕೆಲ ನಿವೇಶನಗಳಿಗೆ ಕ್ರಯಪತ್ರಗಳನ್ನು ಅನುಷ್ಕಾ ಎಸ್ಟೇಟ್ಸ್‌ಗೆ ಮಾಡಿಕೊಟ್ಟಿದ್ದಾರಲ್ಲದೆ, ಪ್ರಸಾದ್ ರೆಡ್ಡಿ ಅವರ ಪುತ್ರ ವಿಶ್ವಾಸ್ ಮತ್ತು ರಮಣ ಪ್ರಸಾದ್ ರೆಡ್ಡಿ ಅವರು ವೈಯಕ್ತಿಕವಾಗಿ ಕ್ರಯಪತ್ರ ಮಾಡಿಕೊಟ್ಟಿದ್ದಾರೆ. ಇದರಲ್ಲಿ, ವಿಶ್ವಾಸ್‌ ಒಬ್ಬರೇ ನೇರವಾಗಿ ೪ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More