ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಿಎಂ ಎಚ್‌ಡಿಕೆ ಭೇಟಿ

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿದ್ದಾರೆ. ಮೆಟ್ರೊ ಕೆಲವು ಕಡೆ ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿ ಹಾಯ್ದುಹೋಗಲಿದೆ. ಈ ಸ್ಥಳಗಳನ್ನು ಮೆಟ್ರೊಗೆ ಸ್ಥಳಾಂತರಿಸುವ ಸಂಬಂಧ ದಾಖಲೆಗಳಿಗೆ ಸಚಿವರು ಸಹಿ ಹಾಕಲಿದ್ದಾರೆ. ಈಚೆಗೆ ದೆಹಲಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು ಈ ಸಂಬಂಧ ನಿರ್ಮಲಾ ಸೀತಾರಾಮನ್ ಗಮನ ಸೆಳೆದಿದ್ದರು.

ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ

ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಪಕ್ಷದ ಉಸ್ತುವಾರಿ ವಹಿಸಿದ ಬಳಿಕ ರಾಹುಲ್ ನಡೆಸುತ್ತಿರುವ ಎರಡನೇ ಸಭೆ ಇದಾಗಿದ್ದು, ಲೋಕಸಭೆ ಚುನಾವಣೆ ಕುರಿತಂತೆ ಮಹತ್ವದ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ. ಪ್ರಮುಖವಾಗಿ ಅಸ್ಸಾಂ ಪೌರತ್ವ ನೋಂದಣಿಗೆ ವಿಷಯವನ್ನು ಬಿಜೆಪಿಯು ರಾಜಕೀಯ ದಾಳವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬುದಾಗಿ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.

ಸಿಂಧು-ಯಮಗುಚಿ ನಡುವೆ ಫೈನಲ್‌ಗಾಗಿ ಸೆಣಸಾಟ

ಪ್ರತಿಷ್ಠಿತ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ಇಂದು ಭಾರತದ ಪಿ ವಿ ಸಿಂಧು ಮತ್ತು ಜಪಾನ್‌ನ ಅಕಾನಿ ಯಮಗುಚಿ ಸೆಣಸಲಿದ್ದಾರೆ. ಸತತ ನಾಲ್ಕನೇ ಬಾರಿಗೆ ಪದಕ ಸುತ್ತಿಗೆ ಧಾವಿಸಿರುವ ಸಿಂಧು, ಭಾನುವಾರ (ಆ.೫) ನಡೆಯಲಿರುವ ಫೈನಲ್‌ಗಾಗಿ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ವಿಶ್ವದ ಎರಡನೇ ಶ್ರೇಯಾಂಕಿತೆ ಯಮಗುಚಿ, ಮೂರನೇ ಶ್ರೇಯಾಂಕಿತೆ ಸಿಂಧುಗೆ ಪ್ರಬಲ ಸವಾಲೊಡ್ಡುವ ನಿರೀಕ್ಷೆ ಇದೆ. ಪಂದ್ಯ ಸಂಜೆ ೭.೩೦ರ ಹೊತ್ತಿಗೆ ಶುರುವಾಗುವ ಸಂಭವವಿದ್ದು, ಸ್ಟಾರ್ ನೆಟ್ವರ್ಕ್‌ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು.

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಷರತ್ತುಬದ್ಧ ವಿದೇಶ ಪ್ರವಾಸ ತೀರ್ಪು ಇಂದು

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ಸಲ್ಮಾನ್ ಖಾನ್ ಅವರ ವಿದೇಶ ಪ್ರವಾಸ ಕುರಿತಂತೆ ಇರುವ ಷರತ್ತಿನ ಬಗ್ಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ಜೋಧಪುರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. 1998ರಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಒಳಗಾದ ಸಲ್ಮಾನ್‌ ಖಾನ್‌ಗೆ ಎಪ್ರಿಲ್‌ 7ರಂದು ಜೋಧಪುರ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು . ಜಾಮೀನಿನ ಷರತ್ತಿನ ಪ್ರಕಾರ, ಸಲ್ಮಾನ್‌ ವಿದೇಶ ಪ್ರವಾಸ ಕೈಗೊಳ್ಳುವುದಕ್ಕೆ ಕೋರ್ಟಿನ ಅನುಮತಿ ಕೋರಬೇಕಿದೆ.

ಎಜ್‌ಬ್ಯಾಸ್ಟನ್‌ ಟೆಸ್ಟ್‌: ಎಲ್ಲರ ಕಣ್ಣೂ ಕೊಹ್ಲಿ ಮೇಲೆ

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯ ಮೊದಲ ಪಂದ್ಯ ಅತೀವ ಕೌತುಕ ಕೆರಳಿಸಿದೆ. ಆತಿಥೇಯ ಆಂಗ್ಲರು ನೀಡಿರುವ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿರುವ ಭಾರತ ತಂಡ, ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ೧೧೦ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡಿದೆ. ಗೆಲುವು ಸಾಧಿಸಲು ಭಾರತ ಇನ್ನೂ ೮೪ ರನ್ ಪೇರಿಸಬೇಕಿದೆ. ಇತ್ತ, ಸಹಸ್ರ ಟೆಸ್ಟ್ ಪಂದ್ಯದ ಚಾರಿತ್ರಿಕ ಗೆಲುವಿಗೆ ಇಂಗ್ಲೆಂಡ್ ಐದು ವಿಕೆಟ್‌ಗಳನ್ನು ಹೆಕ್ಕಬೇಕಿದೆ. ಕತ್ತಿಯ ಅಲಗಿನ ಮೇಲೆ ಸೆಣಸುವಂತಾಗಿದೆ ಇಬ್ಬರ ಸ್ಥಿತಿ. ಮೂರನೇ ದಿನಾಂತ್ಯಕ್ಕೆ ಕೊಹ್ಲಿ (೪೩) ಮತ್ತು ದಿನೇಶ್ ಕಾರ್ತಿಕ್ ೧೮ ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಈ ಜೋಡಿಯ ಜತೆಯಾಟ ಅತ್ಯಂತ ನಿರ್ಣಾಯಕವಾಗಿರಲಿದೆ. ಇನ್ನೊಂದೆಡೆ, ದಿನದ ಮೊದಲ ಅವಧಿಯಲ್ಲೇ ದಾಳಿ ಎಸಗಲು ಆಂಗ್ಲರು ಹವಣಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More