ಅಧಿಕಾರಸ್ಥರ ಪುಂಗಿನಾದಕ್ಕೆ ಮರುಳಾಗುವ ಮಾಧ್ಯಮ ಸೋಂಕು ಮತ್ತೆ ಪ್ರತ್ಯಕ್ಷ!

ಆಡಳಿತದಲ್ಲಿರುವವರಿಗೆ ಅಪ್ರಿಯವಾಗುವ ಸುದ್ದಿ ಪ್ರಸಾರ ಮಾಡುವ ಮೂಲಕ ಎಬಿಪಿ ನ್ಯೂಸ್ ಸುದ್ದಿವಾಹಿನಿಯು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಇಂಥ ಸಂದರ್ಭಗಳಲ್ಲಿ ಹಿರಿಯ ಸಂಪಾದಕರ ಬೆಂಬಲಕ್ಕೆ ನಿಲ್ಲಬೇಕಿದ್ದ ಸುದ್ದಿಸಂಸ್ಥೆಯ ಆಡಳಿತ ಮಂಡಳಿ ಅವರ ವಿರುದ್ಧ ನಿಂತಿದೆ!

ನರೇಂದ್ರ ಮೋದಿ ಸರ್ಕಾರವನ್ನು ಮಾಧ್ಯಮಗಳು ಲಘುವಾಗಿ ಟೀಕಿಸಿದರೆ ಅಷ್ಟೊಂದು ಸಮಸ್ಯೆಯೇನಲ್ಲ; ಆದರೆ, ಆಳಕ್ಕಿಳಿದು ಅತಿ ವಿಮರ್ಶೆ ಮಾಡಿದರೆ ಅವುಗಳಿಗೆ ಉಳಿಗಾಲವಿಲ್ಲ ಎಂಬುದು ಈಗಾಗಲೇ ಮಾಧ್ಯಮ ವಲಯದಲ್ಲಿ ಎಲ್ಲರಿಗೂ ಗೊತ್ತಿರುವ ವಿಷಯ. ನಿಜ ಹೇಳಬೇಕೆಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಈ ಕಟು ವಾಸ್ತವವನ್ನು ಹಲವು ಮಾಧ್ಯಮ ಸಂಸ್ಥೆಗಳು ಮೌನವಾಗಿ ಒಪ್ಪಿಕೊಂಡು ತಾವೇ ಸ್ವಯಂಪ್ರೇರಿತವಾಗಿ ಎಚ್ಚರಿಕೆಯ ಲಕ್ಷ್ಮಣರೇಖೆ ಹಾಕಿಕೊಂಡುಬಿಟ್ಟಿವೆ. ಯಾವ ಪತ್ರಕರ್ತರು ಈ ಸಂಪಾದಕೀಯ ನಿಲುವಿಗೆ ಅನುಗುಣವಾಗಿ ವರ್ತಿಸುವುದಿಲ್ಲವೋ ಅವರಿಗೆ ಮೊದಲು ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗುತ್ತದೆ. ಆಗಲೂ ಸರಿಹೋಗದಿದ್ದರೆ ಅಂಥವರನ್ನು ಕೆಲಸದಿಂದಲೇ ತೆಗೆದುಹಾಕಲಾಗುತ್ತದೆ ಇಲ್ಲವೇ, ಮೂಲೆಗುಂಪು ಮಾಡಲಾಗುತ್ತದೆ. ಹಿಂದಿ ಸುದ್ದಿವಾಹಿನಿಗಳಲ್ಲೇ ಅತ್ಯಂತ ದೊಡ್ಡ ಸಂಸ್ಥೆಯೆಂದು ಹೆಸರು ಮಾಡಿರುವ ಎಬಿಪಿ ನ್ಯೂಸ್ ಈಗ ಸರ್ಕಾರದ ಇಂತಹ ಒಂದು ಅಲಿಖಿತ ನಿಯಮಗಳಿಗೆ ಬಲಿಪಶುವಾಗಿದೆ.

ದೆಹಲಿಯ ಹಲವು ಪತ್ರಕರ್ತರು ದೃಢಪಡಿಸಿರುವಂತೆ ಯಾವುದೇ ಪತ್ರಕರ್ತ ಸತ್ಯಾಂಶಗಳನ್ನು ಹೊರಗೆಳೆಯುವುದನ್ನು, ಅದರಲ್ಲೂ ಆಡಳಿತಾರೂಢ ಬಿಜೆಪಿ ನೀಡಿದ ದೊಡ್ಡ-ದೊಡ್ಡ ಆಶ್ವಾಸನೆಗಳಿಗೆ ಸಂಬಂಧಿಸಿದಂತೆ ವಾಸ್ತವಾಂಶಗಳನ್ನು ಬಯಲಿಗೆಳೆಯುವುದನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಈಗ ಎಬಿಪಿ ನ್ಯೂಸ್ ಸುದ್ದಿವಾಹಿನಿಯು ಇಂತಹ ಒಂದು ಅಸಹನೆಗೆ ಬಲಿಯಾಗಿದೆ. ಈ ಸುದ್ದಿವಾಹಿನಿಯ ಮುಖ್ಯ ಸಂಪಾದಕ ಮಿಲಿಂದ್ ಖಾಂಡೇಕರ್ ಮತ್ತು ಆ ವಾಹಿನಿಯ ಪ್ರಮುಖ ಕಾರ್ಯಕ್ರಮ ‘ಮಾಸ್ಟರ್ ಸ್ಟ್ರೋಕ್’ ನಿರೂಪಕ ಪುಣ್ಯ ಪ್ರಸೂನ್ ವಾಜಪೇಯಿ ಇಬ್ಬರೂ ಈಗ ಹಠಾತ್ತನೆ ರಾಜಿನಾಮೆ ನೀಡಿದ್ದಾರೆ. ಇದರ ಬೆನ್ನ ಹಿಂದೆಯೇ, ಹಿರಿಯ ವಾರ್ತಾ ನಿರೂಪಕ ಅಭಿಸಾರ್ ಶರ್ಮ ಅವರಿಗೂ ಅರ್ಧ ತಿಂಗಳು ರಜೆಯ ಮೇಲೆ ಹೋಗುವಂತೆ ಹೇಳಲಾಗಿದೆ.

ಎಬಿಪಿ ನ್ಯೂಸ್ ಸುದ್ದಿವಾಹಿನಿಯ ಒಡೆತನ ಹೊಂದಿದ ‘ಆನಂದ್ ಬಜಾರ್’ ಪತ್ರಿಕಾ ಗುಂಪಿನ ಆಡಳಿತ ಮಂಡಳಿಗೆ ತನ್ನ ಹಿರಿಯ ಸಂಪಾದಕ ಸಿಬ್ಬಂದಿಗೆ ವಿರುದ್ಧವಾಗಿ ನಡೆಯುವಂತಹ ಅನಿವಾರ್ಯತೆಯಾದರೂ ಏನಿತ್ತು? ಸರ್ಕಾರವನ್ನು ವಿಮರ್ಶಿಸುವ ಮೂಲಕ ಅದರ ಕೆಂಗಣ್ಣಿಗೆ ಗುರಿಯಾಗಿದ್ದೇ ಅವರ ಮೇಲಿನ ಈ ಕ್ರಮಕ್ಕೆ ಪ್ರಧಾನ ಕಾರಣ ಎಂದು ಈ ಸುದ್ದಿಸಂಸ್ಥೆಯ ಒಳಗಿನವರೇ ಖಚಿತಪಡಿಸಿದ್ದಾರೆ. “ನಮಗೆ ತಿಳಿದಿರುವುದರ ಮಟ್ಟಿಗೆ ಹೇಳುವುದಾದರೆ, ನಮ್ಮ ಸುದ್ದಿಸಂಸ್ಥೆಯು ಬಿಜೆಪಿ-ವಿರೋಧಿ ನಿಲುವನ್ನು ತಳೆದಿರುವುದು, ಅದರಲ್ಲೂ ವಿಶೇಷವಾಗಿ ಪ್ರಧಾನಮಂತ್ರಿಗಳನ್ನು ವಿಮರ್ಶಿಸುತ್ತಿರುವುದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ. ಸುದ್ಧಿಸಂಸ್ಥೆಯಲ್ಲಿನ ಕೆಲವು ಮುಖ್ಯಸ್ಥರನ್ನು ತೆಗೆದುಹಾಕಬೇಕು ಎಂದು ಆಡಳಿತ ಮಂಡಳಿಗೆ ಸೂಚನೆ ಕೂಡ ನೀಡಲಾಗಿತ್ತು. ಹಲವು ವಾರಗಳ ನಿರಂತರ ಒತ್ತಡದ ನಂತರ ಸುದ್ದಿಸಂಸ್ಥೆಯ ಮಾಲೀಕರು ಈ ಕ್ರಮ ಕೈಗೊಂಡಿದ್ದಾರೆ,” ಎಂದು ಎಬಿಪಿ ಸುದ್ದಿವಾಹಿನಿಯ ಉದ್ಯೋಗಿಯೊಬ್ಬರು ಹೇಳಿದರು.

ಖಾಂಡೇಕರ್ ಮತ್ತು ಬಾಜಪಾಯ್ ಅವರು ರಾಜಿನಾಮೆ ಕೊಟ್ಟು ಹೊರಹೋಗುವುದಕ್ಕೆ ಕಾರಣವಾಗಿದ್ದು ಆ ಸುದ್ದಿವಾಹಿನಿಯಲ್ಲಿ ಜುಲೈ 6 ಮತ್ತು ಜುಲೈ 10ರಂದು 'ಮಾಸ್ಟರ್ ಸ್ಟ್ರೋಕ್' ಕಾರ್ಯಕ್ರಮದಲ್ಲಿ ಪ್ರಸಾರವಾದ ಎರಡು ಸುದ್ದಿ ಅವತರಣಿಕೆಗಳು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂನ್ 20ನೇ ತಾರೀಖಿನಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ವಿವಿಧ ಭಾಗಗಳ ರೈತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಚತ್ತೀಸ್‌ಗಢ ರಾಜ್ಯದ ಕಾಂಕೇರ್ ಜಿಲ್ಲೆಯ ಖಾನ್ಹಾಪುರಿ ಹಳ್ಳಿಯ ಚಂದ್ರಮಣಿ ಕೌಶಿಕ್ ಎಂಬ ಮಹಿಳೆ ವ್ಯಕ್ತಪಡಿಸಿದ ಅಭಿಪ್ರಾಯದ ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನವನ್ನು ಈ ಸುದ್ದಿವಾಹಿನಿ ಮಾಡಿತು. ಪ್ರಧಾನಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಚಂದ್ರಮಣಿಯವರು ತಾವು ಭತ್ತ ಬೆಳೆಯುವುದನ್ನು ಬಿಟ್ಟು ಕೃಷಿ ಇಲಾಖೆಯ ಸಹಕಾರದೊಂದಿಗೆ ಸೀತಾಫಲ ಬೆಳೆಯುವುದಕ್ಕೆ ಪ್ರಾರಂಭಿಸಿದ ಮೇಲೆ ತಮ್ಮ ಆದಾಯ ದುಪ್ಪಟ್ಟಾಗಿದೆ ಎಂದು ಹೇಳಿದ್ದರು. ಚಂದ್ರಮಣಿಯವರ ಈ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರವು ಹೇಗೆ ತನ್ನ ರೈತಸ್ನೇಹಿ ಗ್ರಾಮೀಣ ಯೋಜನೆಗಳು ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಿವೆ ಎಂದು ಪ್ರಚಾರ ಮಾಡಿತು.

ಚಂದ್ರಮಣಿಯವರನ್ನು ಅವರ ಊರಿನಲ್ಲೇ ಭೇಟಿಯಾಗಿ ಅವರು ನೀಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕಾಗಿ ಎಬಿಪಿ ನ್ಯೂಸ್ ಸುದ್ದಿಸಂಸ್ಥೆಯು ತನ್ನ ವರದಿಗಾರರನ್ನು ಕಳಿಸಿಕೊಟ್ಟಿತು. ಈ ವರದಿಗಾರರು ಚಂದ್ರಮಣಿಯವರನ್ನು ಭೇಟಿಯಾಗಿ ಮಾತಾಡಿದಾಗ, ತಮ್ಮ ಎರಡು ಎಕರೆ ಜಮೀನಿನಲ್ಲಿ ತಮ್ಮ ಅದಾಯ ದುಪ್ಪಟ್ಟು ಆಗಿಲ್ಲ ಎಂಬುದನ್ನು ಚಂದ್ರಮಣಿಯವರು ಕ್ಯಾಮೆರಾದ ಎದುರೇ ಒಪ್ಪಿಕೊಂಡರು. ಅದಕ್ಕಿಂತ ಆಶ್ಚರ್ಯಕರ ಸಂಗತಿ ಏನೆಂದರೆ, ತನ್ನ ಆದಾಯ ದುಪ್ಟಟ್ಟು ಆಗಿದೆ ಎಂದು ಸುಳ್ಳು ಹೇಳುವಂತೆ ದೆಹಲಿಯಿಂದ ಬಂದ ಅಧಿಕಾರಿಗಳು ಚಂದ್ರಮಣಿಯವರ ಮನವೊಲಿಸಿದ್ದರು ಎಂಬುದನ್ನು ಹಾಗೂ ಯಾರ್ಯಾರ ಆದಾಯ ದುಪ್ಪಟ್ಟಾಗಿದೆ ಎಂದು ಚಂದ್ರಮಣಿ ಹೇಳಿದ್ದರೋ ಅವರಲ್ಲಿ ಯಾರ ಆದಾಯವೂ ದುಪ್ಪಟ್ಟಾಗಿಲ್ಲ ಎಂಬುದನ್ನು ಖಾನ್ಹಾಪುರಿ ಗ್ರಾಮದ ಸರಪಂಚ್ ಪರಶುರಾಮ್ ಬೋಯಾರ್ ಕೂಡ ಕ್ಯಾಮೆರಾದೆದುರೇ ಒಪ್ಪಿಕೊಂಡರು.

ಎಲ್ಲ ಕಡೆಯಿಂದ ಟೀಕೆಗಳು ಬರಲಾರಂಭಿಸಿದ ಮೇಲೆ ಎಬಿಪಿ ನ್ಯೂಸ್ ಮತ್ತೆ ತನ್ನ ವರದಿಗಾರರನನ್ನು ಖಾನ್ಹಾಪುರಿ ಹಳ್ಳಿಗೆ ಕಳಿಸಿತು. ವರದಿಯು (ಜು.10ರಂದು ಪ್ರಸಾರವಾದ ವರದಿ) ಹಿಂದಿನ ಅಂಶಗಳನ್ನು ಮತ್ತೊಮ್ಮೆ ದೃಢೀಕರಿಸಿತು ಎಂದು ವಾದಿಸಿತು. ಹೀಗಿದ್ದಾಗ್ಯೂ ಕೇಂದ್ರ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯವರ್ಧನ್ ರಾಥೋರ್ ಅವರು ಎಬಿಪಿ ನ್ಯೂಸ್ ಸುದ್ದಿಯನ್ನು ಅಸಂಬದ್ಧ ಎಂದು ಹೀಗಳೆಯುವ ಮೂಲಕ ಅದು ಸಂಶಯಾಸ್ಪದ ಸುದ್ದಿ ಎಂಬಂತೆ ಬಿಂಬಿಸಿದರು. ಟೈಮ್ಸ್ ಆಫ್ ಇಂಡಿಯಾ, ಡಿಎನ್‍ಎ ಮತ್ತು ಇತರ ಬಿಜೆಪಿ-ಸ್ನೇಹಿ ಜಾಲತಾಣಗಳೂ ಎಬಿಪಿ ನ್ಯೂಸ್‍ನ ವರದಿಗೆ ಕಳಂಕ ತರುವ ರೀತಿಯಲ್ಲಿ ಸುದ್ದಿಗಳನ್ನು ಪ್ರಕಟಿಸಿದವು.

ಎಲ್ಲ ಕಡೆಯಿಂದ ಟೀಕೆಗಳು ಬರಲಾರಂಭಿಸಿದ ಮೇಲೆ ಎಬಿಪಿ ನ್ಯೂಸ್ ಮತ್ತೆ ತನ್ನ ವರದಿಗಾರರನನ್ನು ಖಾನ್ಹಾಪುರಿ ಹಳ್ಳಿಗೆ ಕಳಿಸಿತು. ಪರಿಷ್ಕೃತ ವರದಿಯು (ಜು.10ರಂದು ಪ್ರಸಾರವಾದ ವರದಿ) ಈ ಕೆಳಗಿನ ಅಂಶಗಳನ್ನು ಮತ್ತೊಮ್ಮೆ ದೃಢೀಕರಿಸಿತು: ಸೀತಾಫಲ ಬೆಳೆಯುವ ಮೂಲಕ ಚಂದ್ರಮಣಿಯ ಆದಾಯ ದುಪ್ಪಟ್ಟಾಗಿಲ್ಲ. ಪ್ರಧಾನಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ತಮ್ಮ ದಿನದ ಆದಾಯ 700 ರೂಪಾಯಿ ಆಗಿದೆ ಎಂದು ಹೇಳಿದ್ದು ನಿಜ; ಆದರೆ, ಅದು ಆ ಮಹಿಳೆಯೊಬ್ಬರ ಆದಾಯವಲ್ಲ, ಬದಲಿಗೆ ಅವರ ಗುಂಪಿನಲ್ಲಿದ್ದ 12 ಮಹಿಳೆಯರ ಒಟ್ಟು ಆದಾಯವದು. ಅಂದರೆ, ಗುಂಪಿನಲ್ಲಿದ್ದ ಪ್ರತಿ ಮಹಿಳೆಯ ದಿನದ ತಲಾ ಆದಾಯ 58 ರು. ಆಗುತ್ತದೆ. ಅಂದರೆ, ಅದು ಭತ್ತ ಬೆಳೆಯಿಂದ ಮಹಿಳೆಯೊಬ್ಬಳಿಗೆ ದಿನವೊಂದಕ್ಕೆ ಸಿಗುತ್ತಿದ್ದ 50-60 ರೂಪಾಯಿಗಿಂತ ಅದು ಹೆಚ್ಚಲ್ಲ.

ಎಬಿಪಿ ನ್ಯೂಸ್ ಸುದ್ದಿವಾಹಿನಿಯ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತುಂಬಾ ಕೋಪಗೊಂಡಿದ್ದು, ಅದಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದು ಹವಣಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಸುದ್ದಿವಾಹಿನಿಯ ಮೇಲಿನ ದಾಳಿಯ ಹಿಂದೆ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯ ಕೈವಾಡ ಇದೆ ಎಂದು ಆ.2ರಂದು ಟ್ವೀಟ್ ಮಾಡಿ ಆರೋಪಿಸಿದ್ದಾರೆ.

ಇದನ್ನೂ ಓದಿ : ಸಂಕಲನ | ‘ಕೋಬ್ರಾ ಪೋಸ್ಟ್‌’ ಕುಟುಕು ಕಾರ್ಯಾಚರಣೆ ಕುರಿತ ಸುದ್ದಿ, ವಿಶ್ಲೇಷಣೆ

ಎಬಿಪಿ ನ್ಯೂಸ್ ಸುದ್ದಿವಾಹಿನಿ ಒಳಗಿನವರ ಪ್ರಕಾರ, ಉತ್ತರ ಪ್ರದೇಶದಲ್ಲಿ ನಡೆದ ಎರಡು ಬರ್ಬರ ಕೊಲೆಗಳಿಗೆ ಸಂಬಂಧಿಸಿದಂತೆ ಜುಲೈ 30ರಂದು ಈ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ವರದಿಯು ಗಾಯಕ್ಕೆ ಉಪ್ಪು ಸುರಿಯಿತು. ಈ ಘಟನೆಯ ಹಿಂದಿನ ದಿನವಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯಸ್ಥೆ ಸುಧಾರಿಸಿದೆ ಎಂದು ಹೇಳಿದ್ದನ್ನು ಸುದ್ದಿ ನಿರೂಪಕ ಅಭಿಸಾರ್ ಶರ್ಮ ಈ ಕೊಲೆಗಳ ಹಿನ್ನೆಲೆಯಲ್ಲಿ ಬೆಟ್ಟು ಮಾಡಿ ತೋರಿದ್ದು ಬಿಜೆಪಿಗೆ ಇನ್ನಷ್ಟು ಕೋಪ ತರಿಸಿತ್ತು. ‘ದೈನಂದಿನ ಅಪರಾಧ ಸುದ್ದಿ’ ನಿರೂಪಣೆಯಲ್ಲಿ ಪ್ರಧಾನಮಂತ್ರಿಗಳನ್ನು 'ಕೃತ್ರಿಮವಾಗಿ' ಎಳೆದುತಂದಿದ್ದಕ್ಕೆ ಸುದ್ದಿಸಂಸ್ಥೆಯ ಆಡಳಿತ ಮಂಡಳಿ ಕೂಡ ಆಕ್ಷೇಪ ವ್ಯಕ್ತಪಡಿಸಿತಲ್ಲದೆ, ಮುಂದಿನ 15 ದಿನ ಪರದೆಯ ಮೇಲೆ ಕಾಣಿಸಿಕೊಳ್ಳಕೂಡದು ಎಂದು ತಾಕಿತು ಮಾಡಿತು.

ಇದು ಅಷ್ಟಕ್ಕೇ ನಿಲ್ಲಲಿಲ್ಲ. ಪ್ರಧಾನಮಂತ್ರಿಗಳ ಬಗ್ಗೆ ವರದಿ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದೂ ಆಡಳಿತ ಮಂಡಳಿಯು ಎಲ್ಲ ವರದಿಗಾರರಿಗೆ ಮತ್ತು ಸಿಬ್ಬಂದಿಗೆ ಸೂಚಿಸಿದೆ ಎಂದು ಎಬಿಪಿ ಸುದ್ದಿ ಸಂಸ್ಥೆಯ ಒಳಗಿನವರೇ ಹೇಳಿದ್ದಾರೆ. “ಸಂಪಾದಕೀಯ ಪಥ ತಟಸ್ಥವಾಗಿದ್ದು, ನಾವು ಅತಿ ವಿಮರ್ಶಾತ್ಮಕವಾಗಿರುವುದಕ್ಕೆ ಆಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ತಟಸ್ಥವಾಗಿರುವುದು ಎಂದು ಸರ್ಕಾರದೆಡೆಗೆ ಮೃದು ಧೋರಣೆ ತಾಳುವುದು ಎಂದೇ ಅರ್ಥ,” ಎಂದು ಸುದ್ದಿಸಂಸ್ಥೆಯ ಒಳಗಿನ ವ್ಯಕ್ತಿಯೊಬ್ಬರು ಹೇಳಿದರು.

ಇಲ್ಲಿಯತನಕ ಸರ್ಕಾರದ ಪರವಾಗಿ ಪ್ರಚಾರಕ್ಕಿಳಿಯದೆ ದಿಟ್ಟವಾಗಿ ಕೆಲಸ ಮಾಡುತ್ತಿದ್ದ ಕೆಲವೇ ಹಿಂದಿ ಸುದ್ದಿವಾಹಿನಿಗಳಲ್ಲಿ ಎಬಿಪಿ ನ್ಯೂಸ್ ಕೂಡ ಒಂದಾಗಿತ್ತು. ತನ್ನ ವರದಿಗಳಲ್ಲಿ ಬಹಳಷ್ಟು ಸಲ ಆಡಳಿತದಲ್ಲಿರುವವರನ್ನು ಕಟುವಾಗಿ ವಿಮರ್ಶಿಸುವ ಮೂಲಕವೇ ಅದು ವಿಶಿಷ್ಟ ಜನಮನ್ನಣೆ ಗಳಿಸಿತ್ತು. ಆದರೆ, ದುರದೃಷ್ಟವಶಾತ್ ಆ ಹೆಸರು ಮತ್ತು ಮನ್ನಣೆಗಳಿಗೀಗ ಕಳಂಕ ಬರುವ ಅಪಾಯ ಎದುರಾಗಿದೆ. ಪ್ರೆಸ್ ಕೌನ್ಸಿಲ್, ಎಡಿಟರ್ಸ್ ಗಿಲ್ಡ್ ಮತ್ತು ಪ್ರಜಾಸತ್ತೆಯ ಇತರ ಕಾವಲುಗಾರರಿಗೆ ಇದು ಕೇಳಿಸುತ್ತದೆಯೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More