ಅಮೆರಿಕ ಆಯಿತು, ಇನ್ನು ಭಾರತದ ೨೦೧೯ರ ಲೋಕಸಭಾ ಚುನಾವಣೆ ರಷ್ಯಾದ ಗುರಿ!

ಎರಡು ವರ್ಷಗಳ ಹಿಂದೆ ನಡೆದ ಅಮೆರಿಕ ಚುನಾವಣೆಯಲ್ಲಿ ರಷ್ಯಾ ಸಾಮಾಜಿಕ ಮಾಧ್ಯಮ, ತಂತ್ರಜ್ಞಾನ ಬಳಸಿಕೊಂಡು ಪ್ರಭಾವ ಬೀರಿದ್ದು ಹಳೆಯ ಸುದ್ದಿ. ಈಗ ರಷ್ಯಾ ಬೇರೆ ದೇಶಗಳತ್ತ ಕಣ್ಣು ಹಾಯಿಸಿದೆಯಂತೆ. ಅದರಲ್ಲಿ ಭಾರತವೂ ಇದೆ ಎಂಬ ಸಂಗತಿ ಹೊರಬಿದ್ದಿದ್ದು, ಚರ್ಚೆಗೆ ಗ್ರಾಸವಾಗಿದೆ

ಡೊನಾಲ್ಡ್ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಲು ದುಡಿದಿದ್ದು ಅವರ ರಿಪಬ್ಲಿಕನ್‌ ಪಕ್ಷದವರಷ್ಟೇ ಅಲ್ಲ, ರಷ್ಯಾ ಎಂಬುದು ಈಗ ಅಮೆರಿಕದಲ್ಲಿ ಜನಜನಿತ ಮಾತು. ಟ್ವಿಟರ್‌, ಕೇಂಬ್ರಿಡ್ಜ್‌ ಅನಾಲಿಟಿಕಾ ಇವೆಲ್ಲ ಪ್ರಕರಣಗಳು ಈ ಮಾತನ್ನು ಪುಷ್ಟೀಕರಿಸುತ್ತವೆ. ಚುನಾವಣೆಗಳ ಮೇಲೆ ಪ್ರಭಾವ ಬೀರುವ ಈ ಕೆಲಸವನ್ನು ರಷ್ಯಾ ಮುಂದುವರೆರಿಸಿದ್ದು, ಈಗ ಅದರ ಚಿತ್ತ ಬ್ರೆಜಿಲ್‌ ಮತ್ತು ಭಾರತದತ್ತ ಹೊರಳಿದೆ ಎಂಬ ಅಂಶ ಬಳಕಿಗೆ ಬಂದಿದೆ.

ಆಕ್ಸ್‌ಫರ್ಡ್‌ ಇಂಟರ್ನೆಟ್‌ ಸೊಸೈಟಿಯ ಫಿಲಿಪ್‌ ಎನ್‌ ಹೋವಾರ್ಡ್‌ ಈ ವಿಷಯವನ್ನು ಬಯಲು ಮಾಡಿದವರು. ಶುಕ್ರವಾರ ಅಮೆರಿಕದ ಸೆನೆಟ್‌ ಇಂಟೆಲಿಜೆನ್ಸ್‌ ಕಮಿಟಿಯ ಕಲಾಪದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ವಿದೇಶಿ ಪ್ರಭಾವ ಕುರಿತು ಮಾತನಾಡುತ್ತ, ರಷ್ಯಾ ಪ್ರಮುಖ ದೇಶಗಳ ಮುಂಬರುವ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವುದಾಗಿ ಹೇಳಿದ್ದಾರೆ.

ಪ್ರಭಾವ ಬೀರುವ ಕ್ರಮ ಹೇಗಿರಬಹುದು ಎಂದು ವಿವರಿಸಿರುವ ಹೋವರ್ಡ್‌, “ಭಾರತ ಮತ್ತು ಬ್ರೆಜಿಲ್‌ ದೇಶಗಳ ಮಾಧ್ಯಮಗಳು ಹೇಗೆ ನಡೆದುಕೊಳ್ಳುತ್ತವೆ ಎಂಬುದನ್ನು ಅರಿತು, ಅವುಗಳ ಚುನಾವಣಾ ಪ್ರಕ್ರಿಯೆಗಳ ಸಂದರ್ಭದಲ್ಲಿ ಹಸ್ತಕ್ಷೇಪ ಮಾಡುವಂತೆ ರಷ್ಯಾ ಪ್ರಭಾವಿಸುತ್ತದೆ,” ಎಂದಿದ್ದಾರೆ. “ಸದ್ಯದಲ್ಲೇ ಚುನಾವಣೆಗೆ ಸಿದ್ಧವಾಗುತ್ತಿರುವ ಜಗತ್ತಿನ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ರಷ್ಯಾ ಈಗ ಗುರಿಯಾಗಿಸಿಕೊಂಡಿದೆ,” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ರಷ್ಯಾ ಮಾಧ್ಯಮವು ಮಾಹಿತಿ ಮೂಲವನ್ನು ಪರಿಶೀಲಿಸಿ, ವರದಿ ಮಾಡುತ್ತದೆ. ಅಂಥ ವೃತ್ತಿಪರತೆ ಅಲ್ಲಿನ ಮಾಧ್ಯಮಗಳಿಗೆ ಇದೆ. ಆದರೆ, ಭಾರತ ಮತ್ತು ಬ್ರೆಜಿಲ್‌ ಮಾಧ್ಯಮ ಸಂಸ್ಥೆಗಳು ಕಲಿಯುವುದು ಬಹಳಷ್ಟಿದೆ,” ಎಂದೂ ಫಿಲಿಫ್‌ ಹೋವರ್ಡ್‌ ಎಚ್ಚರಿಸಿದ್ದಾರೆ.

ಇದು ಭಾರತದ ರಾಜಕೀಯ ಪಕ್ಷಗಳಲ್ಲಿ ಆತಂಕ ಹುಟ್ಟಿಸಿದೆ. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್ ಈ ಕುರಿತು ಟ್ವೀಟ್‌ ಮಾಡಿ, "ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿ ಬಂದಿದ್ದು, ವಿದೇಶಿ ಶಕ್ತಿಗಳು ಭಾರತದ ಮುಂಬರುವ ಚುನಾವಣೆಗಳಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಫಲಿತಾಂಶದ ಮೇಲೆ ಮನದಿಚ್ಛೆಯಂತೆ ಪ್ರಭಾವಿಸಬಹುದಾಗಿದೆ ಎಂದಿದೆ. ಇದು ಗಂಭೀರವಾದ ವಿಷಯವಾಗಿದ್ದು, ಹಣದ ಶಕ್ತಿ ಅಧಿಕಾರವನ್ನು ಪಡೆದುಕೊಳ್ಳುವಂಥ ಭಯಂಕರ ಸಂಚಾಗಿದೆ ಇದು. ಸರಕಾರ ಈ ವಿಷಯದಲ್ಲಿ ಏನು ಮಾಡುತ್ತಿದೆ ಎಂದು ಹೇಳಬೇಕು,'' ಎಂದು ಪ್ರಶ್ನೆ ಎತ್ತಿದ್ದಾರೆ.

ಕೆಲವೇ ತಿಂಗಳ ಹಿಂದೆ ರಷ್ಯಾ ಭಾರತೀಯ ಮಾಧ್ಯಮಗಳ ಬಗ್ಗೆ ಹೇಳಿಕೆ ನೀಡಿದ್ದು, ೨೦೧೯ರ ಲೋಕಸಭಾ ಚುನಾವಣೆ ನಡೆಸುವ ಸಾಮರ್ಥ್ಯವಿಲ್ಲ ಎಂದಿತ್ತು. ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆ ಆಗಿರುವುದರಿಂದ ಸ್ಪರ್ಧೆಯ ತೀವ್ರತೆ ಊಹಿಸಲಾಗದು ಎಂದು ರಾಜಕೀಯ ಪಂಡಿತರು ಹೇಳುತ್ತಿರುವ ವೇಳೆಯಲ್ಲೇ, ಚುನಾವಣಾ ಕಣದಲ್ಲಿ ರಷ್ಯಾ ಪರೋಕ್ಷವಾಗಿ ಕಾಣಿಸಿಕೊಳ್ಳಲಿದೆ ಎಂಬ ಸುದ್ದಿ ಹಲವು ಚರ್ಚೆಗಳಿಗೆ ನಾಂದಿ ಹಾಡಿದೆ.

ಅಮೆರಿಕದ ಚುನಾವಣೆಯಲ್ಲೇ ರಷ್ಯಾ ವಿವಿಧ ರೀತಿಯಲ್ಲಿ ತಂತ್ರ ಹೂಡಿ, ಟ್ರಂಪ್ ಗೆಲುವಿಗೆ ಸಹಕರಿಸಿದ್ದನ್ನು ಸ್ವತಃ ಅದೇ ದೇಶದ ತನಿಖಾ ಸಂಸ್ಥೆ ಸಿಐಎ ಖಚಿಪಡಿಸಿದ್ದು, ಭಾರತ ಇಂಥ ಸಂದರ್ಭವನ್ನು ಹೇಗೆ ಎದುರಿಸಬಲ್ಲದು ಎಂಬುದು ದೊಡ್ಡ ಪ್ರಶ್ನೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More