ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

2019ರ ಏರ್ ಶೋ ಸ್ಥಳ ಇನ್ನೂ ನಿಗದಿ ಆಗಿಲ್ಲ: ರಕ್ಷಣಾ ಸಚಿವೆ

ವೈಮಾನಿಕ ಪ್ರದರ್ಶನ-2019 ಅನ್ನು ತಮ್ಮ ನಗರದಲ್ಲಿ ಆಯೋಜಿಸಬೇಕು ಎಂದು ಹಲವು ಮನವಿಗಳು ಬಂದಿದ್ದು, ಬೆಂಗಳೂರಿನಲ್ಲಿ ನಡೆಸಬೇಕೇ ಅಥವಾ ಬೇರೆ ನಗರಗಳಿಗೆ ವರ್ಗಾಯಿಸಬೇಕೆ ಎಂಬುದರ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಏರ್ ಶೋ ಪ್ರದರ್ಶನ ಸ್ಥಳ ಇನ್ನೂ ನಿಗದಿಯಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಘೋಷಣೆ ಮಾಡಿಲ್ಲ. ಸದ್ಯದಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು,” ಎಂದರು.

ಹಲವು ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ನೀಡಿದ ರಕ್ಷಣಾ ಇಲಾಖೆ

ರಾಜಧಾನಿಯ ಮೂಲಸೌಕರ್ಯಗಳ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಭೂಮಿ ನೀಡಲು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜಧಾನಿಯ ಮೂಲಸೌಕರ್ಯಗಳ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಭೂಮಿ ವರ್ಗಾಯಿಸುವ ಕುರಿತು ಸಚಿವರೊಂದಿಗೆ ವಿಧಾನಸೌಧದಲ್ಲಿ ಮಾತುಕತೆ ನಡೆಸಿದರು. ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಹೆಬ್ಬಾಳ ಸರೋವರ ಲೇಔಟ್ ರಸ್ತೆ ನಿರ್ಮಾಣ, ಇಜೀಪುರ ಒಳ ವರ್ತುಲ ರಸ್ತೆ ನಿರ್ಮಾಣ, ಬ್ಯಾಟರಾಯನಪುರದ ರಸ್ತೆ ನಿರ್ಮಾಣ, ಹೊಸೂರು ಲಷ್ಕರ್ ರಸ್ತೆಯ ವಿಸ್ತರಣೆ, ಅಗ್ರಾಮ ರಸ್ತೆ ಅಗಲೀಕರಣ ಹಾಗೂ ಕೆಲವಡೆ ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡಲು ಸಚಿವರು ಒಪ್ಪಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ರಕ್ಷಣಾ ಇಲಾಖೆಗೆ ರಾಜ್ಯ ಸಕಾರ ಬಿಬಿಎಂಪಿ ವ್ಯಾಪ್ತಿಯ ೮೫೩೧೩೭.೯೫ ಚದರ ಮೀಟರ್ ( ೪೮೮.೪೨ ಕೋಟಿ ರೂ) ಭೂಮಿ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದೆ.

ಪೊಲೀಸ್ ಕಾನ್ಸ್‌ಟೆಬಲ್‌ಗಳ ಕ್ಯಾಪ್ ಬದಲಾವಣೆಗೆ ಚಿಂತನೆ

ಕೇಂದ್ರ ಆರೋಗ್ಯ ಇಲಾಖೆ ಶಿಫಾರಸಿನ ಮೇರೆಗೆ ಪೊಲೀಸ್ ಕಾನ್ಸ್‌ಟೆಬಲ್‌ಗಳ ಕ್ಯಾಪ್ ಬದಲಾವಣೆಗೆ ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಕುರಿತು ಶನಿವಾರ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಯೋಗಿಕವಾಗಿ ಕಾನ್ಸ್‌ಟೆಬಲ್‌ಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್ ಧರಿಸಲು ಅವಕಾಶ ನೀಡಲಾಗಿತ್ತು. ಹಿಂದಿನ ಸ್ಲೊಚಾಟ್ ಕ್ಯಾಪ್ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ತಮಿಳುನಾಡು ಪೊಲೀಸರ ಮಾದರಿಯಲ್ಲಿ ಪಿ- ಕ್ಯಾಪ್ ಜಾರಿಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ಸುಪ್ರೀಂ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ, ಹೊಸ ದಾಖಲೆ ಸೃಷ್ಟಿ

ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದ್ದು, ಈ ಮೂಲಕ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಈಗಾಗಲೇ ಆರ್‌ ಭಾನುಮತಿ ಹಾಗೂ ಇಂದು ಮಲ್ಹೋತ್ರಾ ಅವರು  ಕರ್ತವ್ಯದಲ್ಲಿದ್ದು, ಸುಪ್ರೀಂನಲ್ಲಿ ಏಕಕಾಲದಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು. ಜೊತೆಗೆ ಫಾತಿಮಾ ಬೀವಿ, ಸುಜಾತಾ ವಿ ಮನೋಹರ್‌, ರುಮಾ ಪಾಲ್‌, ಗ್ಯಾನ್‌ ಸುಧಾ ಮಿಶ್ರಾ, ರಂಜಾನಾ ಪ್ರಕಾಶ್‌ ದೇಸಾಯಿ, ಭಾನುಮತಿ ಮತ್ತು ಮಲ್ಹೋತ್ರಾ ಅವರ ನಂತರ ಸುಪ್ರೀಂ ಕೋರ್ಟಿಗೆ ನೇಮಕವಾದ ಎಂಟನೇ ಮಹಿಳಾ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ಇಂದಿರಾ ಬ್ಯಾನರ್ಜಿ ಪಾತ್ರರಾಗಿದ್ದಾರೆ.

‘ಪಿಕೆ’ ದಾಖಲೆ ಮುರಿದ ‘ಸಂಜು’

ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಮತ್ತೊಂದು ಮೈಲುಗಲ್ಲು ದಾಟಿದೆ. ಭಾರತದಲ್ಲಿ ಅತಿ ಹೆಚ್ಚು ವಹಿವಾಟು ನಡೆಸಿದ ಮೂರನೇ ಚಿತ್ರವಾಗಿ ‘ಪಿಕೆ’ ಇತ್ತು. ಈ ಸಿನಿಮಾದ ವಹಿವಾಟು 340.8 ಕೋಟಿ ರೂಪಾಯಿ. ಇದೀಗ ‘ಸಂಜು’ 341.22 ಕೋಟಿ ರೂಪಾಯಿ ವಹಿವಾಟು ನಡೆಸಿ ‘ಪಿಕೆ’ ಚಿತ್ರದ ದಾಖಲೆ ಮುರಿದಿದೆ. ‘ಪಿಕೆ’ ಕೂಡ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾ ಎನ್ನುವುದು ವಿಶೇಷ. ಭಾರತದಲ್ಲಿ ಅತಿ ಹೆಚ್ಚು ವಹಿವಾಟು ನಡೆಸಿದ ಮೊದಲ ಮತ್ತು ಎರಡನೇ ಸ್ಥಾನದಲ್ಲಿ ‘ಬಾಹುಬಲಿ’ (510.99) ಮತ್ತು ‘ದಂಗಲ್‌’ (387.38) ಸಿನಿಮಾಗಳಿವೆ.

ಅಮೆರಿಕದಿಂದ ಭಾರತಕ್ಕೆ ಎಸ್‌ಟಿಎ-1 ದರ್ಜೆ ಸ್ಥಾನಮಾನ; ಚೀನಾಗೆ ಮೂಗುದಾರ

ಅಮೆರಿಕ ಭಾರತಕ್ಕೆ ಎಸ್‌ಟಿಎ-೧ ದರ್ಜೆಯ ಸ್ಥಾನ ನೀಡುವ ಮೂಲಕ ಚೀನಾಗೆ ಪ್ರಬಲ ಸಂದೇಶ ರವಾನಿಸಿದೆ. ಜಪಾನ್ ಹಾಗೂ ದಕ್ಷಿಣಾ ಕೊರಿಯಾ ರಾ‍ಷ್ಟ್ರಗಳ ಬಳಿಕ ವ್ಯೂಹಾತ್ಮಕ ವ್ಯಾಪಾರ ಒಪ್ಪಂದ ಸಲುವಾಗಿ ನೀಡಲಾಗುವ ಎಸ್‌ಟಿಎ-೧ (Strategic Trade Authorization-1) ಪಟ್ಟಿಗೆ 37ನೇ ರಾಷ್ಟ್ರವಾಗಿ ಭಾರತ ಸೇರ್ಪಡೆಗೊಳ್ಳುತ್ತಿದೆ. ಈ ಸಂಬಂಧ ಶುಕ್ರವಾರ ಅಮೆರಿಕ ಅಧಿಕೃತ ಸೂಚನೆ ಹೊರಡಿಸಿದೆ. ಈ ಪಟ್ಟಿಗೆ ಸೇರುವುದರಿಂದ ನಾಗರಿಕ ಹಾಗೂ ರಕ್ಷಣಾ ಭದ್ರತೆಗೆ ಸಂಬಂಧಿಸಿದಂತೆ ಉತ್ಕೃಷ್ಟ ತಂತ್ರಜ್ಞಾನದ ಉತ್ಪನ್ನಗಳನ್ನು ಭಾರತ ಖರೀದಿಸಲು ಸಹಕಾರಿಯಾಗುತ್ತದೆ.

ನಾಸಾ ಬ್ಯಾಹಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

ಅಮೆರಿಕ ಬ್ಯಾಹಾಕಾಶ ಸಂಸ್ಥೆ (ನಾಸಾ) ಮುಂದಿನ ವರ್ಷ ಕೈಗೊಳ್ಳುವ ಖಾಸಗಿ ಯಾನಕ್ಕೆ ಆಯ್ಕೆಯಾದ ಒಂಬತ್ತು ಮಂದಿ ಗಗನಯಾನಿಗಳ ಪೈಕಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸೇರಿದ್ದಾರೆ. ಬೋಯಿಂಗ್ ಮತ್ತು ಸ್ಪೇಸ್ ಎಕ್ಸ್ ಜಂಟಿಯಾಗಿ ಅಭಿವೃದ್ದಿಪಡಿಸಿದ ಹೊಸ ನೌಕೆಯಲ್ಲಿ ಆ ತಂಡ ಅಧಿಕೃತ ಪ್ರವಾಸ ನಡೆಸಲಿದೆ ಎಂದು ನಾಸಾ ತಿಳಿಸಿದೆ.

ದೀರ್ಘಾವಧಿಯಲ್ಲಿ ಜಿಎಸ್ಟಿ ತೆರಿಗೆ 3 ಹಂತಕ್ಕೆ ಇಳಿಕೆ ಸಾಧ್ಯತೆ: ಸಂಜೀವ್ ಸನ್ಯಾಲ್

ದೀರ್ಘಾವಧಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ದರವನ್ನು ಮೂರು ಹಂತಗಳಿಗೆ ತಗ್ಗಿಸುವ ಸಾಧ್ಯತೆ ಇದೆ ಎಂದು ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹೇಳಿದ್ದಾರೆ. ಪ್ರಸ್ತುತ ಶೂನ್ಯ ತೆರಿಗೆ, ಶೇ.5, 12, 18 ಮತ್ತು 28 ರಂತೆ ಐದು ಹಂತದ ತೆರಿಗೆ ಇದೆ. ಬರುವ ದಿನಗಳಲ್ಲಿ ಶೇ.12 ಮತ್ತು 18ರಷ್ಟು ತೆರಿಗೆಯನ್ನು ಮಿಲಿತಗೊಳಿಸಿ ಶೇ.15ರಷ್ಟು ತೆರಿಗೆ ಮಾಡುವ ಸಾಧ್ಯತೆ ಇದೆ. ಈಗಿರುವ ಶೇ.5 ಮತ್ತು ಶೇ.28ರ ತೆರಿಗೆಯು ಮುಂದುವರೆಯಲಿದೆ. ಆದರೆ, ಶೇ.28ರ ತೆರಿಗೆಯನ್ನು ಶೇ.25ಕ್ಕೆ ತಗ್ಗಿಸಬಹುದು ಎಂದು ಹೇಳಿದ್ದಾರೆ. ಭಾರತ್ ಚೆಂಬರ್ ಆಫ್ ಕಾಮರ್ಸ್ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಸಂಜೀವ್ ಸನ್ಯಾಲ್, ತೆರಿಗೆ ಸರಳೀಕರಣಗೊಳಿಸುವ ಪ್ರಕ್ರಿಯೆಯ ಭಾಗವಾಗಿ ತೆರಿಗೆ ಹಂತವನ್ನು ತಗ್ಗಿಸಲಾಗುತ್ತದೆ. ಬಹುತೇಕ ಸರಕುಗಳು ಶೇ.15ರ ಹಂತಕ್ಕೆ ಬರಲಿವೆ ಎಂದೂ ಹೇಳಿದ್ದಾರೆ.

ಅನುಚಿತ ವರ್ತನೆ ತೋರಿದ ಇಶಾಂತ್ ಶರ್ಮಾಗೆ ದಂಡ

ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ದಂಡ ವಿಧಿಸಿದೆ. ಇಂದು ಮುಕ್ತಾಯ ಕಂಡ ಎಜ್‌ಬ್ಯಾಸ್ಟನ್ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶುಕ್ರವಾರ (ಆ.೩) ಇಂಗ್ಲೆಂಡ್‌ನ ದಾವಿದ್ ಮ್ಯಾಲನ್ ಅವರನ್ನು ಔಟ್ ಮಾಡುತ್ತಲೇ ಇಶಾಂತ್ ಅನಿಮೇಟೆಡ್ ರೀತಿಯ ಸಂಭ್ರಮವನ್ನಾಚರಿಸಿಕೊಂಡಿದ್ದರು. ಪಂದ್ಯ ಮುಗಿದ ಬಳಿಕ ನಡೆದ ವಿಚಾರಣೆಯಲ್ಲಿ ಇಶಾಂತ್ ತಪ್ಪೊಪ್ಪಿಕೊಂಡರಲ್ಲದೆ, ಐಸಿಸಿಯ ದಂಡನೆಯನ್ನೂ ಸ್ವೀಕರಿಸುವುದಾಗಿ ಹೇಳಿದರು. ಪಂದ್ಯದ ಶೇ. ೧೫ರಷ್ಟು ಸಂಭಾವನೆಯನ್ನು ಇಶಾಂತ್ ಸುಖಾಸುಮ್ಮನೆ ಕಳೆದುಕೊಂಡಿದ್ದಾರೆ.

ಸ್ಪ್ರಿಂಟರ್ ಹಿಮಾ ದಾಸ್‌ಗೆ ಆಯಿಲ್ ಇಂಡಿಯಾ ₹೨೦ ಲಕ್ಷ ಬಹುಮಾನ

ಭಾರತದ ಮಹಿಳಾ ಸ್ಟಾರ್ ಓಟಗಾರ್ತಿ ಹಿಮಾ ದಾಸ್‌ಗೆ ಆಯಿಲ್ ಇಂಡಿಯಾ ₹೨೦ ಲಕ್ಷ ಬಹುಮಾನ ಘೋಷಿಸಿದೆ. ಕಳೆದ ತಿಂಗಳು ನಡೆದ ಐಎಎಎಫ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ ವಿಭಾಗದ ವನಿತೆಯರ ೪೦೦ ಮೀಟರ್ ವಿಭಾಗದ ರನ್ನಿಂಗ್‌ನಲ್ಲಿ ಹಿಮಾ ಚಿನ್ನ ಗೆದ್ದಿದ್ದರು. ಇದರೊಂದಿಗೆ ಭಾರತದ ಪರ ಈ ಸಾಧನೆ ಮಾಡಿದ ಮೊದಲ ಮಹಿಳಾ ಸ್ಪ್ರಿಂಟರ್ ಎನಿಸಿದ್ದರು. ಮುಂಬರುವ ಒಲಿಂಪಿಕ್ಸ್ ಕೂಟವನ್ನೂ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ನೆರವಾಗುವಂತೆ ₹ ೧೭,೦೦೦ ವಿದ್ಯಾರ್ಥಿ ವೇತನವನ್ನೂ ನೀಡಲಾಗುವುದು ಎಂದು ಆಯಿಲ್ ಇಂಡಿಯಾ ಲಿಮಿಟೆಡ್‌ನ ಸಿಎಂಡಿ ಉತ್ಪಲ್ ಬೋರಾ ತಿಳಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More