ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ವಿಶ್ವ ಬ್ಯಾಡ್ಮಿಂಟನ್ ಫೈನಲ್‌ನಲ್ಲಿಂದು ಸಿಂಧು-ಮರಿನ್ ಕಾದಾಟ

ಪ್ರತಿಷ್ಠಿತ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಗಳು ಇಂದು ಜರುಗಲಿವೆ. ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿ ಅಂತಿಮ ಘಟ್ಟದಲ್ಲಿದ್ದು, ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧು, ಸ್ಪೇನ್‌ನ ಕೆರೊಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ. ರಿಯೊ ಒಲಿಂಪಿಕ್ಸ್‌ ಫೈನಲಿಸ್ಟ್‌ಗಳಾದ ಇವರೀರ್ವರ ಮಧ್ಯೆ ತುರುಸಿನ ಹೋರಾಟ ನಡೆಯುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ ನೆಹ್ವಾಲ್ ವಿರುದ್ಧ ಅಬ್ಬರದ ಆಟವಾಡಿ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ್ದ ಮರಿನ್, ಸಿಂಧು ವಿರುದ್ಧವೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಸತತ ಎರಡನೇ ಬಾರಿಗೆ ಫೈನಲ್ ಆಡುತ್ತಿರುವ ಸಿಂಧುವಿನ ಮೇಲೆ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೧೨.೩೦ಕ್ಕೆ ಆರಂಭವಾಗುವ ಸಾಧ್ಯತೆ ಇದ್ದು, ಪಂದ್ಯದ ನೇರ ವೀಕ್ಷಣೆ ಬಯಸುವವರು ಸ್ಟಾರ್ ನೆಟ್ವರ್ಕ್‌ನಲ್ಲಿ ವೀಕ್ಷಿಸಬಹುದು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ, ಜೆಡಿಎಸ್‌ ಮಹತ್ವದ ಸಭೆ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಭಾನುವಾರ ಜೆಡಿಎಸ್ ಮಹತ್ವದ ಸಭೆ ನಡೆಸಲಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸೇರಿದಂತೆ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದು, ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಬೇಕೇ, ಏಕಾಂಗಿಯಾಗಿ ಚುನಾವಣೆ ಎದುರಿಸಬೇಕೇ ಎಂಬ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಲಂಕಾ ವಿರುದ್ಧ ಸರಣಿ ವಶಕ್ಕೆ ಸಜ್ಜಾದ ದಕ್ಷಿಣ ಆಫ್ರಿಕಾ

ಎರಡು ಟೆಸ್ಟ್ ಪಂದ್ಯ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮುಖಭಂಗ ಅನುಭವಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಏಕದಿನ ಸರಣಿಯಲ್ಲಿ ಪುಟಿದೆದ್ದಿದ್ದು, ಇಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಸರಣಿ ಕೈವಶಕ್ಕೆ ಸಜ್ಜಾಗಿದೆ. ಪಲ್ಲೇಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ, ಫೀಲ್ಡಿಂಗ್ ಆಯ್ದುಕೊಂಡಿದೆ. ಸರಣಿಯ ಮೊದಲ ಪಂದ್ಯವನ್ನು ೫ ವಿಕೆಟ್‌ಗಳಿಂದ ಜಯಿಸಿದ ಹರಿಣಗಳು, ಎರಡನೇ ಪಂದ್ಯದಲ್ಲಿ ೪ ವಿಕೆಟ್ ಜಯ ಸಾಧಿಸಿದ್ದವು. ಐದು ಪಂದ್ಯ ಸರಣಿಯನ್ನು ಜೀವಂತವಾಗಿಡಲು ಸಿಂಹಳೀಯರು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇತ್ತ, ಸತತ ಎರಡು ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ, ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿಯನ್ನೂ ಕೈವಶ ಮಾಡಿಕೊಳ್ಳಲು ತುಡಿಯುತ್ತಿದೆ.

ಉ.ಪ್ರದೇಶದ ಮುಘಲ್‌ಸರಾಯ್‌ ರೈಲು ನಿಲ್ದಾಣ ಇಂದಿನಿಂದ  ದೀನ್‌ದಯಾಳ್‌ ಉಪಾಧ್ಯಾಯ ನಿಲ್ದಾಣ

ಉತ್ತರ ಪ್ರದೇಶದ ಮುಘಲ್‌ಸರಾಯ್‌ ರೈಲು ನಿಲ್ದಾಣ ಇಂದಿನಿಂದ  ದೀನ್‌ದಯಾಳ್‌ ಉಪಾಧ್ಯಾಯ ನಗರ ರೈಲು ನಿಲ್ದಾಣ ಆಗಲಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಈ ರೈಲು ನಿಲ್ದಾಣ ಇತಿಹಾಸದ ಪುಟ ಸೇರಿದ್ದು, ಹೊಸ ಹೆಸರಿನ ನಾಮಫಲಕಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇಂದು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಪೀಯುಷ್‌ ಗೋಯಲ್‌ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಭಾಗವಹಿಸಲಿದ್ದಾರೆ. 1968ರ ಫೆಬ್ರುವರಿ 11ರಂದು ದೀನ್‌ದಯಾಳ್‌ ಉಪಾಧ್ಯಾಯ ಇದೇ ರೈಲು ನಿಲ್ದಾಣ ಬಳಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶ ಸರಕಾರದ ಮನವಿಯ ಮೇರೆಗೆ ರೈಲ್ವೆ ಇಲಾಖೆಯು ಈ ನಿಲ್ದಾಣದ ಹೆಸರನ್ನು ಬದಲಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More