ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಜೆಡಿಎಸ್ ನೂತನ ಅಧ್ಯಕ್ಷರಾಗಿ ಎಚ್ ವಿಶ್ವನಾಥ್ ಆಯ್ಕೆ

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಹುಣಸೂರು ಶಾಸಕ‌ ಎ ಎಚ್ ವಿಶ್ವನಾಥ್ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾನುವಾರ ಪಕ್ಷದ ಕಚೇರಿಯಲ್ಲಿ ವಿಶ್ವ‌ನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುವುದು ಕಷ್ಟ ಎಂದು ಅಧ್ಯಕ್ಷ ಸ್ಥಾನ ತ್ಯಜಿಸುವುದಾಗಿ ಹೇಳಿದ್ದರು. ಹಲವರ ಹೆಸರುಗಳು ಪ್ರಸ್ತಾಪವಾದರೂ, ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರು ಹಿರಿಯ ಗೆಳೆಯ ಹಾಗೂ ಕುರುಬ ಸಮುದಾಯದ ವಿಶ್ವನಾಥ್ ಆಯ್ಕೆ ಮಾಡಿರುವುದರ ಹಿಂದೆ ಭಾರಿ ಲೆಕ್ಕಾಚಾರವಿದೆ ಎನ್ನಲಾಗಿದೆ.

ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ: ಎಚ್‌ಡಿಕೆ

ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು ವಿಳಂಬವಾಗಿದ್ದರಿಂದ ಸಶಸ್ತ್ರ ಮೀಸಲು ಪಡೆ ಪರೀಕ್ಷೆ ಬರೆಯಲು ವಿಫಲರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. “ಅಭ್ಯರ್ಥಿಗಳು ಗಾಬರಿಯಾಗುವ ಅವಶ್ಯಕತೆ ಇಲ್ಲ. ಮತ್ತೊಮ್ಮೆ ಪರೀಕ್ಷೆ ಬರೆಯಲು ಅಧಿಕಾರಿಗಳು ದಿನಾಂಕ ತಿಳಿಸಲಿದ್ದಾರೆ,” ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ನಕಾರಾತ್ಮಕ ವಿಚಾರಕ್ಕೆ ಹೆಚ್ಚಿನ ಆದ್ಯತೆ ಸಲ್ಲದು: ನಿತೀಶ್‌

ಬಿಹಾರದ ಮುಜಾಫ್ಫರ್‌ಪುರ ಬಾಲಕಿಯರ ಗೃಹದಲ್ಲಿ ೩೪ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಯಾರೊಬ್ಬರನ್ನೂ ಸುಮ್ಮನೆ ಬಿಡುವುದಿಲ್ಲ. ಆರೋಪಿಗಳ ರಕ್ಷಣೆಗೆ ನಿಂತಿರುವವರೂ ಜೈಲು ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಒಂದೇ ಒಂದು ನಕಾರಾತ್ಮಕ ಅತ್ಯಾಚಾರ ಪ್ರಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಮಾಧ್ಯಮ ಹಾಗೂ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದಿರುವ ನಿತೀಶ್‌, “ನಮ್ಮ ಸರ್ಕಾರ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ. ಅವುಗಳನ್ನೂ ಕಣ್ಣು ಬಿಟ್ಟು ನೋಡಿ,” ಎಂದಿದ್ದಾರೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಸಿದಂತೆ ಆರು ಸಿಬ್ಬಂದಿಯನ್ನು ಸರ್ಕಾರ ಅಮಾನತು ಮಾಡಿದೆ.

ಒಬಿಸಿ ಮಸೂದೆ ಸಂಬಂಧ ರಾಹುಲ್‌ಗೆ ಅಮಿತ್‌ ಶಾ ಸವಾಲು

ಹಿಂದುಳಿದ ವರ್ಗಗಳ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ನಿಲುವು ಪ್ರಕಟಿಸುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸವಾಲು ಎಸೆದಿದ್ದು, ಇದು ಕಾಂಗ್ರೆಸ್‌ ನಿಜಕ್ಕೂ ಹಿಂದುಳಿದ ವರ್ಗಗಳ ಪರವಾಗಿ ಇದೆಯೇ ಎಂಬುದನ್ನು ಸಾಬೀತುಪಡಿಸಲಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಮುಂದುಮಾಡಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬಿಸಿ ತಿದ್ದುಪಡಿ ಕಾಯ್ದೆಗೆ ಆಗಸ್ಟ್‌ ೨ರಂದು ಲೋಕಸಭೆಯಲ್ಲಿ ಅನುಮೋದನೆ ದೊರೆತಿದ್ದು, ರಾಜ್ಯಸಭೆಯಲ್ಲಿ ಅದಕ್ಕೆ ಒಪ್ಪಿಗೆ ದೊರೆಯಬೇಕಿದೆ.

೩೫ (ಎ) ವಿಧಿಗೆ ವಿರೋಧ, ಕಣಿವೆ ರಾಜ್ಯ ಸ್ತಬ್ಧ

ಜಮ್ಮು ಕಾಶ್ಮೀರದಲ್ಲಿ ಹೊರಗಿನವರು ಸ್ಥಿರ ಆಸ್ತಿ ಖರೀದಿಸುವುದಕ್ಕೆ ನಿರ್ಬಂಧ ವಿಧಿಸುವ ೩೫ (ಎ) ವಿಧಿಯ ಮಾನ್ಯತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿಗಳು ಭಾನುವಾರ ಕಣಿವೆ ರಾಜ್ಯದಲ್ಲಿ ಕರೆ ನೀಡಿದ್ದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಜೀವನ ಸ್ತಬ್ಧವಾಗಿತ್ತು. ಬಂದ್‌ ಸಂಪೂರ್ಣ ಶಾಂತಿಯುತವಾಗಿದ್ದು, ಯಾವುದೇ ಜೀವಹಾನಿ ವರದಿಯಾಗಿಲ್ಲ. ಬಂದ್‌ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಅಮರನಾಥ ಯಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಎಸ್‌ಪಿಗೆ ಸೀಟು ಹಂಚಿಕೆಗೆ ಪವಾರ್‌ ಸಮ್ಮತಿ

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧೆ ಮಾಡಲು ನಿರ್ಧರಿಸಿರುವ ವಿರೋಧ ಪಕ್ಷಗಳು ಸೀಟು ಹಂಚಿಕೆ ಮಾತುಗಳನ್ನಾಡುತ್ತಿವೆ. ಇದರ ಭಾಗವಾಗಿ ಮಹಾರಾಷ್ಟ್ರದಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಗೆ ಸ್ಥಾನ ಬಿಟ್ಟುಕೊಡಲು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಒಪ್ಪಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟಾಗಿ ಸ್ಪರ್ಧೆ ಮಾಡುವ ಸಂಬಂಧ ಮಾಯಾವತಿ ಅವರ ಜೊತೆ ಪವಾರ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಚಂದ್ರಯಾನ-2 ಉಡಾವಣೆ ಮುಂದೂಡಿಕೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ 'ಚಂದ್ರಯಾನ-2' ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸುಮಾರು 800 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ಉದ್ದೇಶವಿದ್ದು, ಮುಂದಿನ ವರ್ಷಕ್ಕೆ ಯೋಜನೆಯನ್ನು ಮುಂದೂಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ. 'ಚಂದ್ರಯಾನ-2' ಹೊರತುಪಡಿಸಿ ಡಿಸೆಂಬರ್ ತಿಂಗಳಲ್ಲಿ 28 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಲಿದೆ.

ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ

ಪ್ರವಾಸಿಗರ ಸ್ವರ್ಗ ಎಂದೇ ಬಿಂಬಿತವಾದ ಇಂಡೋನೇಷ್ಯಾದ ಲೋಂಬುಕ್‌ನಲ್ಲಿ ಪ್ರಬಲ ಭೂಕಂಪನವಾಗಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಸಮೀಕ್ಷೆ ಹೇಳಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ ೭ರಷ್ಟಿತ್ತು ಎನ್ನಲಾಗಿದೆ. ಕಳೆದ ವಾರ ಲೋಂಬುಕ್‌ನಲ್ಲಿ ಭೂಕಂಪ ಸಂಭವಿಸಿ ೧೭ ಮಂದಿ ಸಾವನ್ನಪ್ಪಿದ ಬೆನ್ನಿಗೇ ಮತ್ತೊಮ್ಮೆ ಭೂಮಿ ಕಂಪಿಸಿದೆ. ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಮೈಲುಗಲ್ಲು

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವೃತ್ತಿ ಬದುಕಿನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಎಜ್‌ಬ್ಯಾಸ್ಟನ್‌ನಲ್ಲಿ ದಿನದ ಹಿಂದಷ್ಟೇ ಮುಕ್ತಾಯ ಕಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ ೨೦೦ ರನ್ ಪೇರಿಸಿದ ಕೊಹ್ಲಿ ಆ ಮೂಲಕ ಐಸಿಸಿ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿಯಲ್ಲಿ ನಂ ೧ ಸ್ಥಾನಕ್ಕೆ ಜಿಗಿದಿದ್ದಾರೆ. ೯೩೪ ರೇಟಿಂಗ್ ಪಾಯಿಂಟ್ಸ್ ಕಲೆಹಾಕಿದ ಅವರು, ಇಲ್ಲೀವರೆಗೆ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (೯೨೯) ಅವರನ್ನು ಹಿಂದಿಕ್ಕಿದ್ದಾರೆ. ೨೦೧೧ರಲ್ಲಿ ಸಚಿನ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಹಾಗೂ ಮೊದಲ ಬ್ಯಾಟ್ಸ್‌ಮನ್ ಕೊಹ್ಲಿ ಎಂಬುದು ಗಮನಾರ್ಹ.

ಹೆನ್ರಿಕ್ಸ್ ಚೊಚ್ಚಲ ಶತಕದಲ್ಲಿ ಹರಿಣಗಳಿಗೆ ಸರಣಿ ಸಂಭ್ರಮ

ರೀಜಾ ಹೆನ್ರಿಕ್ಸ್ ಚೊಚ್ಚಲ ಏಕದಿನ ಶತಕದ ನೆರವಿನೊಂದಿಗೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ ೭೮ ರನ್ ಗೆಲುವು ಸಾಧಿಸಿದೆ. ಇಂದು ಪಲ್ಲೇಕೆಲೆಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹೆನ್ರಿಕ್ಸ್ ೮೯ ಎಸೆತಗಳಲ್ಲಿ ೧೦೨ ರನ್ ದಾಖಲಿಸಿದರು. ೫೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೩೬೩ ರನ್ ಗಳಿಸಿದ ದಕ್ಷಿಣ ಆಫ್ರಿಕಾ, ಲಂಕನ್ನರಿಗೆ ಸವಾಲಿನ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ೪೫.೨ ಓವರ್‌ಗಳಲ್ಲೇ ೨೮೫ ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಶ್ರೀಲಂಕಾ, ಸರಣಿಯಲ್ಲಿ ಸತತ ಮೂರನೇ ಸೋಲುಂಡಿತು. ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಹರಿಣಗಳು, ಐದು ಏಕದಿನ ಪಂದ್ಯ ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡವು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More