‘ಎಬಿಪಿ ನ್ಯೂಸ್‌’ ಮಾಜಿ ಸುದ್ದಿವಾಚಕ ಬಾಜ್‌ಪೈ ಬಿಚ್ಚಿಟ್ಟ ರಹಸ್ಯಗಳು | ಭಾಗ ೧

‘ಎಬಿಪಿ ನ್ಯೂಸ್‌’ ವರದಿಯೊಂದರ ಹಿನ್ನೆಲೆಯಲ್ಲಿ ಪುಣ್ಯ ಪ್ರಸೂನ್‌ ಬಾಜ್‌ಪೈ ಮತ್ತು ಅವರ ಕೆಲ ಸಹೋದ್ಯೋಗಿಗಳು ಕಳೆದ ವಾರ ರಾಜಿನಾಮೆ ನೀಡಬೇಕಾಯಿತು. ರಾಜಿನಾಮೆಗೂ ಮೊದಲು ನಡೆದಿದ್ದು ಏನೆಂದು ಸ್ವತಃ ಬಾಜ್‌ಪೈ ‘ದಿ ವೈರ್‌’ನಲ್ಲಿ ಬರೆದಿದ್ದಾರೆ. ಅದರ ಭಾವಾನುವಾದ ಇಲ್ಲಿದೆ

೨೦೧೮ರ ಜುಲೈ ೧೪ರಂದು ಆನಂದ ಬಜಾರ್‌ ಪತ್ರಿಕಾ ಸಮೂಹದ ‘ಎಬಿಪಿ ನ್ಯೂಸ್‌’ ಮಾಲೀಕರೂ ಆದ ಪ್ರಧಾನ ಸಂಪಾದಕರೊಂದಿಗೆ ಮಾತುಕತೆ ನಡೆಯಿತು. ಅದು ಹೀಗಿದೆ:

ಮಾಲೀಕರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರು ಹೇಳದೆ ಇರಲು ಸಾಧ್ಯವೇ? ನೀವು ಬೇಕಾದರೆ ಅವರ ಮಂತ್ರಿಗಳ ಹೆಸರನ್ನು ಹೇಳಿ. ಸರ್ಕಾರದ ನೀತಿಗಳಲ್ಲಿ ಆಗಿರುವ ಯಡವಟ್ಟುಗಳನ್ನು ತೋರಿಸಬೇಕೆಂದು ಬಯಸುತ್ತೀರೋ, ತೋರಿಸಿ. ಸಂಬಂಧಪಟ್ಟ ಸಚಿವಾಲಯದ ಮಂತ್ರಿಗಳನ್ನು ಹೆಸರನ್ನೂ ಹೇಳಿ. ಆದರೆ, ಎಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ತರಬೇಡಿ.

ನಾನು: ಸ್ವತಃ ಮೋದಿಯವರೇ ಸರ್ಕಾರದ ಎಲ್ಲ ಯೋಜನೆಗಳನ್ನು ಘೋಷಣೆ ಮಾಡುವಾಗ, ಎಲ್ಲ ಸಚಿವಾಲಯದ ಕೆಲಸ ಕಾರ್ಯಗಳಲ್ಲಿ ಅವರೂ ತೊಡಗಿಸಿಕೊಂಡಿರುವಾಗ, ಸ್ವತಃ ಅವರ ಸಂಪುಟದ ಮಂತ್ರಿಗಳು ಯಾವುದೇ ಸರ್ಕಾರದ ಯೋಜನೆ ಅಥವಾ ನೀತಿ ಕುರಿತು ಮಾತನಾಡುವಾಗ ಅವರದೇ ಹೆಸರನ್ನು ಉಲ್ಲೇಖಿಸುವಾಗ, ನಾವು ಅವರ ಹೆಸರನ್ನು ಪ್ರಸ್ತಾಪಿಸದೆ ಇರಲು ಹೇಗೆ ಸಾಧ್ಯ?

ಮಾಲೀಕರು: ಅಯ್ಯೋ ಬಿಟ್ಟುಬಿಡಿ, ಕೆಲವು ದಿನಗಳ ಕಾಲ, ಏನಾಗುತ್ತದೋ ನೋಡೋಣ. ಹಾಗೆ ನೋಡಿದರೆ, ನೀವು ಮಾಡುತ್ತಿರುವುದು ಸರಿಯೇ, ಆದರೆ ಸದ್ಯಕ್ಕೆ ಬಿಟ್ಟುಬಿಡಿ.

ಈ ಸೂಚನೆಗೂ ಮುನ್ನ, ಸುದ್ದಿಗಳನ್ನು ಹೇಗೆ ಬಿತ್ತರಿಸಬೇಕು, ಅದರ ಪ್ರಭಾವ, ಚಾನೆಲ್‌ ನಿಲುವುಗಳ ಬದಲಾವಣೆ ಮತ್ತು ಚಾನೆಲ್‌ನ ಲಾಭದ ಮೇಲೂ ಆದ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ನನ್ನ ಶೋ 'ಮಾಸ್ಟರ್‌ ಸ್ಟ್ರೋಕ್‌' ಚಾನೆಲ್‌ನ ವಿಶ್ವಾಸಾರ್ಹತೆ ಹೆಚ್ಚಿಸಿದೆ ಎಂಬುದನ್ನು ಒಪ್ಪಿಕೊಂಡರು. ಅವರದೇ ಮಾತಲ್ಲಿ ಹೇಳುವುದಾದರೆ, “ಮಾಸ್ಟರ್‌ ಸ್ಟ್ರೋಕ್‌ ನಡೆಸುವ ಅಧ್ಯಯನ, ನೇರ ಸ್ಥಳದಿಂದ ವರದಿ ಮಾಡುವ ರೀತಿ ಮತ್ತು ಸರ್ಕಾರಿ ನೀತಿಗಳನ್ನು ವರದಿಯಲ್ಲಿ ಹೆಣೆಯುವ ಬಗೆ, ಗುಣಮಟ್ಟದ ಗ್ರಾಫಿಕ್‌ಗಳು ಮತ್ತು ಸ್ಕ್ರಿಪ್ಟ್‌ ಎಲ್ಲವೂ ತಮ್ಮ ಚಾನೆಲ್‌ನಲ್ಲಿ ಮೊದಲ ಬಾರಿಗೆ ನೋಡುತ್ತಿರುವುದು ಇದೇ ಮೊದಲು.”

ಚಾನೆಲ್‌ನಲ್ಲಿ ಸುದ್ದಿಯನ್ನು ಪ್ರಸ್ತುತಪಡಿಸುವ ಕ್ರಮ ಬದಲಾದ ಮೇಲೆ ಮಾಲೀಕರೂ ಆದ ಪ್ರಧಾನ ಸಂಪಾದಕರನ್ನೂ ಉತ್ಸಾಹಿಗಳನ್ನಾಗಿ ಮಾಡಿತ್ತೇನೋ ಹೌದು. ಸುದ್ದಿ ಪ್ರಸ್ತುತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಮೋದಿ ಹೆಸರನ್ನು ಬಿಟ್ಟು, ಉಳಿದೆಲ್ಲವೂ ಹಾಗೇ ಉಳಿಸಿಕೊಂಡರೆ ಏನಾದರೂ ಬದಲಾವಣೆ ಆಗುವುದೇ ಎಂದು ಪದೇಪದೇ ಕೇಳುತ್ತಿದ್ದರು. ಕಡೆಗೂ, ಒಂದು ಸುದೀರ್ಘ ಚರ್ಚೆ ಆಗಿದ್ದಿಷ್ಟೇ, ಪ್ರಧಾನ ಮಂತ್ರಿ ಮೋದಿ ಅವರ ಹೆಸರನ್ನು ಪರದೆಯ ಮೇಲೆ ಹೇಳುವಂತಿಲ್ಲ ಎಂಬ ಆದೇಶ ಪಾಲನೆ ಮಾಡಬೇಕಾಗಿ ಬಂತು.

ಈ ರಾಜಕೀಯ ಸಂದರ್ಭದ ಹಿನ್ನೆಲೆಯಲ್ಲಿ, ಹೀಗೆ ಬಂದ ನಿರ್ದೇಶನ ಬಹಳಷ್ಟಾಗಿತ್ತು. ಉದಾಹರಣೆಗೆ, ಭಾರತದಲ್ಲಿ ನಿರುದ್ಯೋಗ ಕುರಿತು ವರದಿ ಸಿದ್ಧಪಡಿಸುತ್ತಿದ್ದು, ಇದರಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಬಗ್ಗೆ ಸರ್ಕಾರ ಹೇಳುತ್ತಿರುವ ವಿಷಯವನ್ನು ಮುಖ್ಯವಾಗಿ ಚರ್ಚಿಸಲಾಗುತ್ತಿತ್ತು. ಈ ಕುರಿತು ವಾಸ್ತವ ಚಿತ್ರಣದ ಬಗ್ಗೆ ವರದಿ ಮಾಡುವಾಗ, ಈ ಕಾರ್ಯಕ್ರಮಗಳ ಯಶಸ್ಸಿನ ಬಗ್ಗೆ ಹೇಳಿಕೆ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸದೆ ಇದ್ದರೆ ಹೇಗಿರುತ್ತದೆ?

ಒಂದೆಡೆ, ಪ್ರಧಾನಮಂತ್ರಿಗಳು ಹೇಳುತ್ತಾರೆ, “ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ ೨೦೨೨ರ ಹೊತ್ತಿಗೆ ೪೦ ಕೋಟಿ ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಆದರೆ, ವಾಸ್ತವಾಂಶ ಏನೆಂದರೆ ೨೦೧೮ರವರೆಗೆ ತರಬೇತಿ ಪಡೆದಿರುವ ಯುವಕರ ಸಂಖ್ಯೆ ೨ ಕೋಟಿಯನ್ನೂ ದಾಟಿಲ್ಲ. ಹೆಚ್ಚಾಗಿ, ಎಲ್ಲೆಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗಿದೆಯೋ ಆ ಪೈಕಿ ೧೦ರಲ್ಲಿ ೮ ಕಾರ್ಯನಿರ್ವಹಿಸುತ್ತಿರಲಿಲ್ಲ. ಅಂದಮೇಲೆ ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಬರಲೇಬಾರದು ಯಾಕೆ?

ಹಾಗಾಗಿ 'ಮಾಸ್ಟರ್ ಸ್ಟ್ರೋಕ್‌' ತಂಡಕ್ಕೆ ಈ ಮೇಲಿನಿಂದ ಬಂದ ಆದೇಶದಂತೆ ವಸ್ತುಸ್ಥಿತಿ ವರದಿಯ ಸ್ಕ್ರಿಪ್ಟ್‌ನಲ್ಲಿ ಎಲ್ಲ ವಿವರಗಳು ಇರುತ್ತಿದ್ದವು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರು ಮಾಯವಾಗಲಿದೆ ಎಂಬುದು ಸ್ಪಷ್ಟವಾಯಿತು.

ಆದೇಶದಲ್ಲಿ, ಇನ್ನೊಂದು ಸಮಸ್ಯೆ ಇತ್ತು. ನಾವು ಮಾತನಾಡುತ್ತಿರುವುದು ಪತ್ರಿಕೆಯದ್ದಲ್ಲ, ಸುದ್ದಿವಾಹಿನಿಯದ್ದು. ಸ್ಕ್ರಿಪ್ಟ್‌ನಲ್ಲಿ ಪ್ರಧಾನಿ ಮೋದಿಯವರ ಹೆಸರನ್ನೇನೋ ಕೈಬಿಡಬಹುದು. ಆದರೆ ಪರಿಸ್ಥಿತಿ ಹೇಗಿದೆ ಎಂದರೆ, ಇಡೀ ಸರ್ಕಾರ ಮೋದಿ ಹೆಸರಿಗೆ ಅಂಟಿಕೊಂಡಿದ್ದು, ಸರ್ಕಾರದ ಯಾವುದೇ ಪ್ರಸ್ತಾಪವಿದ್ದರೆ, ಲೈಬ್ರರಿಯ ಇಡೀ ವಿಡಿಯೋ ಸಂಗ್ರಹದಲ್ಲಿ, ಮೋದಿ ವಿಡಿಯೋ ದೃಶ್ಯಗಳ ಹೊರತು ಇನ್ನೇನೂ ಇರದು! ಮೇ ೨೬, ೨೦೧೪ರಿಂದ ಜುಲೈ ೨೬, ೨೦೧೮ರವರೆಗೆ ಮೋದಿ ಸರ್ಕಾರ ಅಥವಾ ಮೋದಿ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಯೋಜನೆ ಕುರಿತ ಯಾವುದೇ ವಿಡಿಯೋ ಎಡಿಟಿಂಗ್‌ಗೆ ಕೂತರೆ ಶೇ.೮೦ರಷ್ಟು ದೃಶ್ಯಗಳು ಮೋದಿಯವರದ್ದೇ ಆಗಿರುತ್ತವೆ. ಹಾಗಾಗಿ ಸಂಪಾದಕರು, ಸ್ಕ್ರಿಪ್ಟ್‌ನಲ್ಲಿ 'ಪ್ರಸ್ತುತ ಸರ್ಕಾರ' ಇರಲೆಂದು ಪದಗಳ ಸುಳಿವನ್ನು ನೀಡುತ್ತಿದ್ದಂತೆ ಕಣ್ಣ ಮುಂದೆ ಬರುವ ಏಕೈಕ ಚಿತ್ರ ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದು. ‘ಮಾಸ್ಟರ್ ಸ್ಟ್ರೋಕ್‌’ನಂತಹ ಕಾರ್ಯಕ್ರಮದಲ್ಲಿ 'ಪ್ರಧಾನಮಂತ್ರಿ ಮೋದಿ' ಎಂಬ ಪದಗಳನ್ನು ಹೇಳದೆ ಇದ್ದರೂ, ಇದೇ ಚಿತ್ರ ಪರದೆಯನ್ನು ಅಲಂಕರಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಇಷ್ಟೆಲ್ಲ ಆಗಿ ೧೦೦ ಗಂಟೆಗಳಲ್ಲಿ ಎರಡನೇ ಆದೇಶ ಬರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಮೋದಿಯ ಚಿತ್ರವೂ ‘ಮಾಸ್ಟರ್‌ ಸ್ಟ್ರೋಕ್‌’ನಲ್ಲಿ ಕಾಣಿಸಿಕೊಳ್ಳಬಾರದು ಎಂಬುದೇ ಎರಡನೇ ಆದೇಶ! ಈ ಬಾರಿ ಮಾಲೀಕರೊಂದಿಗೆ ನಡೆದ ಚರ್ಚೆ ಪ್ರಶ್ನೆಯೊಂದಿಗೇ ಆರಂಭವಾಯಿತು: "ಸರ್ಕಾರ ಎಂದರೆ ಮೋದಿ ಎಂದು ಅರ್ಥವೇ? ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಿತ್ರವನ್ನು ತೋರಿಸದೆ ಒಂದು ವರದಿಯಲ್ಲಿ ಸಿದ್ಧಪಡಿಸಲು ಸಾಧ್ಯವೇ?"

ನಾನು ನನ್ನದೇ ರೀತಿಯಲ್ಲಿ ಪ್ರಶ್ನೆಗೆ ಉತ್ತರಿಸಿದೆ: “ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ೧೦೬ ಯೋಜನೆಗಳನ್ನು ಘೋಷಿಸಿದೆ. ಕಾಕತಾಳೀಯವೆಂದರೆ ಪ್ರತಿಯೊಂದು ಯೋಜನೆಯನ್ನು ಘೋಷಣೆ ಮಾಡುವುದು ಸ್ವತಃ ಪ್ರಧಾನಿ ಮೋದಿಯವರೇ. ಪ್ರತಿ ಯೋಜನೆಯ ಪ್ರಚಾರ ಮಾಡುವ ಹೊಣೆ ಆಯಾ ಸಚಿವಾಲಯ ಮತ್ತು ಮಂತ್ರಿಗಳದ್ದಾಗಿರುತ್ತದೆ. ಆದರೆ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರೇ ಮೇಲುಗೈ ಸಾಧಿಸುತ್ತದೆ. ಪ್ರತ್ಯಕ್ಷ ವರದಿಯ ಸಂದರ್ಭದಲ್ಲಿ ಯೋಜನೆ ಯಶಸ್ಸು ಅಥವಾ ವೈಫಲ್ಯ ಏನೇ ಇರಲಿ, ಪ್ರಧಾನಿಗಳಿಗೆ ಸಂಬಂಧಪಡದೆ ಇದ್ದರೂ, ಯೋಜನೆಯಿಂದ ಫಲಾನುಭವಿಗಳು- ರೈತನಿರಲಿ ಅಥವಾ ಗರ್ಭಿಣಿ, ನಿರುದ್ಯೋಗಿ ಯುವಕ ಅಥವಾ ವ್ಯಾಪಾರಿ- ಪ್ರಧಾನಿಯ ಹೆಸರನ್ನೇ ಹೇಳುತ್ತಾರೆ.

ನೀವು ಅವರಲ್ಲಿ ಬೆಳೆವಿಮೆ ಯೋಜನೆಯ ಬಗ್ಗೆ ಕೇಳಿ, ಮಾತೃತ್ವ ವಂದನಾ ಯೋಜನೆಯ ಬಗ್ಗೆ ಮಾತನಾಡಿ, ಮುದ್ರಾ ಯೋಜನೆ ಅಥವಾ ಜಿಎಸ್‌ಟಿ, ಈ ಯೋಜನೆಗಳ ವ್ಯಾಪ್ತಿಗೆ ಬರುವ ಯಾರೇ ಆಗಲಿ, ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ತಪ್ಪದೆ ನೆನಪಿಸಿಕೊಳ್ಳುತ್ತಾರೆ. ಅದೇ ರೀತಿ, ಆ ಯೋಜನೆಗಳಿಂದ ತಮಗೇನು ಲಾಭವಾಗುತ್ತಿಲ್ಲ ಎಂದೂ ಹೇಳುತ್ತಾರೆ. ಹೀಗಿರುವ ಅವರ ಹೇಳಿಕೆಗಳನ್ನು ಹೇಗೆ ಎಡಿಟ್‌ ಮಾಡುವುದು?

ಸಿಕ್ಕ ಏಕೈಕ ಉತ್ತರ: “ಏನಾದರೂ ಇರಲಿ, ಪ್ರಧಾನಿ ಮೋದಿ ಅವರ ಚಿತ್ರ ‘ಮಾಸ್ಟರ್‌ ಸ್ಟ್ರೋಕ್‌’ನಲ್ಲಿ ಕಾಣಿಸಬಾರದು ಅಷ್ಟೆ.”

ಇದನ್ನೂ ಓದಿ : ಮುಕ್ತ ಮಾಧ್ಯಮದ ಕತ್ತು ಹಿಸುಕುವ ದಿಲ್ಲಿ ದರ್ಬಾರಿಗೆ ಮತ್ತಿಬ್ಬರು ಪತ್ರಕರ್ತರ ವೃತ್ತಿಬಲಿ!

ಪ್ರಾಸಂಗಿಕವಾಗಿ ನನ್ನ ಪ್ರಶ್ನೆ: “ಪ್ರಧಾನ ಮಂತ್ರಿ ಮೋದಿ ಅವರ ಚಿತ್ರ ತೋರಿಸದೆ ಅಥವಾ ಅವರ ಹೆಸರನ್ನು ‘ಮಾಸ್ಟರ್‌ ಸ್ಟ್ರೋಕ್‌’ನಲ್ಲಿ ಉಲ್ಲೇಖಿಸಿದೆ ಏನು ಸಾಧಿಸಬಹುದು?” ನನಗೆ ಇದಿನ್ನೂ ನಿಗೂಢವಾಗಿದೆ. ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನರೇಂದ್ರ ಮೋದಿಯವರಿಗೆ ಸಮಾನಾರ್ಥಕವಾಗಿ ಬಳಕೆಯಲ್ಲಿದೆ. ಬಿಜೆಪಿಗೆ, ನರೇಂದ್ರ ಮೋದಿಯವರು ಅಸಾಮಾನ್ಯ ಸ್ಟಾರ್‌ ಕ್ಯಾಂಪೇನರ್‌ ಕೂಡ. ಮಾಜಿ ಪ್ರಚಾರಕರೂ ಆಗಿರುವ ಮೋದಿಯವರು ಸಂಘದ ಮುಖವೂ ಹೌದು. ಇನ್ನು, ವಿದೇಶಾಂಗ ನೀತಿಗೆ ಭಾರತ ಹೊಂದಿರುವ ಏಕೈಕ ರಾಯಭಾರಿ ನರೇಂದ್ರ ಮೋದಿ. ಹೀಗಿರುವಾಗ, ಹಿಂದಿ ರಾಷ್ಟ್ರೀಯ ವಾಹಿನಿಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ‘ಎಬಿಪಿ’ಯಲ್ಲಿ ಪ್ರಸಾರವಾಗುವ ಒಂದು ಗಂಟೆಯ ಕಾರ್ಯಕ್ರಮ ‘ಮಾಸ್ಟರ್‌ ಸ್ಟ್ರೋಕ್‌’ ಸರ್ಕಾರದ ಎದೆಯುರಿಯುವಂತೆ ಮಾಡುತ್ತಿದೆಯೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More