ವರ್ಷ ಕಳೆದರೂ ತಾಲೂಕು ಆಸ್ಪತ್ರೆಗಳಲ್ಲಿ ಆರಂಭವಾಗದ ಡಯಾಲಿಸಿಸ್‌ ಕೇಂದ್ರಗಳು

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡರೋಗಿಗಳ ನೆರವಿಗೆ ರಾಜ್ಯ ಸರ್ಕಾರ ಧಾವಿಸಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ, ವರ್ಷ ಕಳೆದರೂ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಆರಂಭಗೊಂಡಿಲ್ಲ. ಈ ಬಗ್ಗೆ ‘ದಿ ಸ್ಟೇಟ್‌’ ತಿಂಗಳ ಹಿಂದೆಯೇ ಗಮನ ಸೆಳೆದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ

ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಒಂದು ವರ್ಷ ಕಳೆದರೂ ಉಚಿತ ಡಯಾಲಿಸಿಸ್ ಕೇಂದ್ರಗಳು ಆರಂಭಗೊಂಡಿಲ್ಲ. ೧೧೪ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳನ್ನು ತೆರೆಯುವುದಾಗಿ ೨೦೧೭-೧೮ನೇ ಸಾಲಿನ ಆಯವ್ಯಯದಲ್ಲಿ ಹಿಂದಿನ ಸರ್ಕಾರ ಘೋಷಿಸಿತ್ತು. ಆದರೀಗ ವರ್ಷ ಕಳೆದರೂ ಕೇಂದ್ರಗಳನ್ನು ಸ್ಥಾಪಿಸುವತ್ತ ಆರೋಗ್ಯ ಇಲಾಖೆ ಮುಂದಡಿಯಿಟ್ಟಿಲ್ಲ. ಇದಕ್ಕೆ ಆಯುಕ್ತರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯುವ ಸಂಬಂಧ ಜೂನ್‌ ೩೦, ೨೦೧೭ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರ್ಷ ಉರುಳಿದರೂ ಕ್ರಿಯಾಯೋಜನೆ ರೂಪಿಸಿಲ್ಲ. ಕ್ರಿಯಾಯೋಜನೆ ರೂಪಿಸದ ಹೊರತು ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳು ಆರಂಭಗೊಳ್ಳುವುದಿಲ್ಲ. ಕೇಂದ್ರಗಳು ಆರಂಭಗೊಳ್ಳದ ಕಾರಣ ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿ ನಿಲ್ಲಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

ಕ್ರಿಯಾಯೋಜನೆ ರೂಪಿಸುವ ಸಂಬಂಧ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರಿಗೆ ಆಗಸ್ಟ್‌ ೨, ೨೦೧೮ರಂದು ನಿರ್ದೇಶಿಸಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಿಯಾಯೋಜನೆ ಸಲ್ಲಿಕೆಯಾಗಿಲ್ಲ ಎಂದು ತಿಳಿದುಬಂದಿದೆ.

ಹಾಗೆಯೇ, ಮುಂದುವರಿದ ಯೋಜನೆ ಭಾಗವಾಗಿ ಉಚಿತ ಡಯಾಲಿಸಿಸ್ ಘಟಕಗಳನ್ನು ಮುಂದುವರಿಸಲು ೨೦೧೮-೧೯ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿಸಲಾಗಿದೆ. ಇದಕ್ಕೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹಿಂದಿನ ಪ್ರಧಾನ ಕಾರ್ಯದರ್ಶಿ ಅನುಮೋದನೆ ನೀಡಿರಲಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ವ್ಯವಸ್ಥಾಪಕ ನಿರ್ದೇಶಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ. ಯೋಜನೆಗೆ ಅನುಮೋದನೆ ಪಡೆಯದೆ ಸೇವೆ ಮುಂದುವರಿಸಲು ಅವಕಾಶ ಇಲ್ಲದಂತಾಗಿದೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಡಿಯಲ್ಲಿ ಈ ಯೋಜನೆ ವ್ಯಾಪ್ತಿಯನ್ನು ವಿಸ್ತರಿಸಬೇಕಿತ್ತಲ್ಲದೆ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿಯೂ ಇದು ಒಳಗೊಳ್ಳುವಂತಹ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಆಯುಕ್ತರು ಮತ್ತು ಎನ್‌ಎಚ್‌ಎಂನ ವ್ಯವಸ್ಥಾಪಕ ನಿರ್ದೇಶಕರು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸದಿರುವುದೇ ಅನುಮೋದನೆ ದೊರೆಯದಿರಲು ಕಾರಣ ಎನ್ನಲಾಗಿದೆ.

ಇದನ್ನೂ ಓದಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳೇ ಅಡ್ಡಿ!

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಅಡಿಯಲ್ಲಿ ಯೋಜನೆ ಒಳಗೊಂಡಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಘಟಕಗಳು ಆರಂಭವಾಗುತ್ತಿದ್ದವು. ಅಲ್ಲದೆ, ರೋಗಿಗಳನ್ನು ತಪಾಸಣೆಗೊಳಪಡಿಸಲು ಅನುಕೂಲವಾಗುತ್ತಿತ್ತಲ್ಲದೆ, ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುತ್ತಿತ್ತು. ಈ ನಿಟ್ಟಿನಲ್ಲಿ ಆಯುಕ್ತರು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸದ ಕಾರಣ, ಬಹಳಷ್ಟು ಸಂಖ್ಯೆ ರೋಗಿಗಳಿಗೆ ತೊಂದರೆಯಾಗಿದೆಯಲ್ಲದೆ, ಖಾಸಗಿ ಕೇಂದ್ರಗಳು ನಿಗದಿಪಡಿಸಿರುವ ದುಬಾರಿ ಮೊತ್ತವನ್ನು ಬಡ ರೋಗಿಗಳು ತೆರಬೇಕಾದ ಸ್ಥಿತಿ ಎದುರಾಗಿದೆ ಎಂದು ತಿಳಿದುಬಂದಿದೆ.

ಅದೇ ರೀತಿ, ಅತ್ಯಂತ ಹಿಂದುಳಿದ ೩೯ ತಾಲೂಕುಗಳಲ್ಲಿ ಉನ್ನತೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ೮೦೦.೦೦ ಲಕ್ಷ ರು. ವೆಚ್ಚದಲ್ಲಿ ಸೂಕ್ತ ಉಪಕರಣ ಖರೀದಿಸುವ ಯೋಜನೆಗೂ ಅನುಮೋದನೆ ದೊರೆತಿಲ್ಲ. ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವಂತಹ ಪ್ರಸ್ತಾವನೆಯನ್ನು ಪರಿಷ್ಕರಿಸಿಲ್ಲ ಎಂದು ಗೊತ್ತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More