ದೇಶ ರಕ್ಷಣೆ ಬಗ್ಗೆ ಮೋದಿ ಸರ್ಕಾರಕ್ಕಿಲ್ಲ ಕಾಳಜಿ: ಜೋಶಿ ನೇತೃತ್ವದ ಸಮಿತಿ ವರದಿ

16 ಬಿಜೆಪಿ ಸದಸ್ಯರಿರುವ ಮುರಳಿ ಮನೋಹರ್‌ ಜೋಶಿ ನೇತೃತ್ವದ ಸಂಸದೀಯ ಸಮಿತಿ, ದೇಶದ ಭದ್ರತೆ ವಿಷಯದಲ್ಲಿ ಮೋದಿ ಸರ್ಕಾರ ನಂಬಿಕೆ ಕಳೆದುಕೊಂಡಿದೆ ಎಂದು ಟೀಕಿಸಿದ್ದು, ಗೃಹ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸದೆ ಎಂದಿದೆ ನ್ಯೂಸ್‌ ಸೆಂಟ್ರಲ್‌ ೨೪/೭ ವರದಿ

ಕಳೆದೊಂದು ವಾರದಿಂದ ದೇಶದ ಭಾರಿ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಆಧಾರ್‌ ಮತ್ತು ಸುರಕ್ಷತೆಯ ವಿಷಯದಲ್ಲಿ ಬಹಳಷ್ಟು ಚರ್ಚೆಗಳಾಗುತ್ತಿವೆ. ಮಾಹಿತಿ ಸುರಕ್ಷತೆ ಮತ್ತು ಖಾಸಗಿತನದ ವಿಷಯಗಳಲ್ಲಿ ಸರ್ಕಾರ ಮುಜುಗರ ಎದುರಿಸುವ ಸಂದರ್ಭಗಳು ಪುನಾರಾವರ್ತನೆ ಆಗುತ್ತಿವೆ. ಟ್ರಾಯ್‌ ಮುಖ್ಯಸ್ಥ ಆರ್ ಎಸ್‌ ಶರ್ಮಾ, ಈಗ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಆಧಾರ್‌ ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಯಾವುದೇ ಲೋಪವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ನಡುವೆ ಬಿಜೆಪಿಯ ಹಿರಿಯ ನಾಯಕ, ಮಾರ್ಗದರ್ಶಕ ಮಂಡಲ್‌ನ ಸದಸ್ಯ, ಹಿರಿಯ ಸಂಸದ ಮುರುಳಿ ಮನೋಹರ್‌ ಜೋಶಿ ನೇತೃತ್ವದ ಸಂಸದೀಯ ಸಮಿತಿ ಮೋದಿ ಸರ್ಕಾರವನ್ನು ಕಟುವಾಗಿ ಟೀಕಿಸಿದೆ. ಹದಿನಾರು ಬಿಜೆಪಿ ಸದಸ್ಯರೂ ಇರುವ ಈ ಸಮಿತಿಯು, ಮೋದಿ ನೇತೃತ್ವದ ಸರ್ಕಾರ ಸೇನೆಯ ಯುದ್ಧ ಸಿದ್ಧತೆಯನ್ನು ೧೯೬೨ರಲ್ಲಿ ಚೀನಾ ವಿರುದ್ಧ ಭಾರತ ಸೋಲು ಕಂಡಾಗ ಇದ್ದ ಸ್ಥಿತಿಗಿಂತ ಕೆಳಹಂತಕ್ಕೆ ಒಯ್ದಿದೆ ಎಂದು ಟೀಕಿಸಿರುವುದಾಗಿ ‘ನ್ಯೂಸ್‌ ಸೆಂಟ್ರಲ್‌ ೨೪/೭’ ವರದಿ ಹೇಳುತ್ತಿದೆ.

‘ಸೇನಾಪಡೆಗಳ ಯುದ್ಧ ಸಿದ್ಧತೆ-ಸೇನಾ ಉತ್ಪನ್ನ ಮತ್ತು ಸಂಗ್ರಹ' ಕುರಿತು ೨೯ನೇ ವರದಿ ಸಲ್ಲಿಸಿರುವ ಮುರುಳಿ ಮನೋಹರ್‌ ಜೋಶಿ, ಮೋದಿ ಸರ್ಕಾರ ರಾಷ್ಟ್ರದ ಭದ್ರತೆಯನ್ನು ಉಪೇಕ್ಷೆ ಮಾಡುತ್ತಿದ್ದು ಇದು ಶುಭ ಸೂಚಕವಲ್ಲ ಎಂದು ಅಭಿಪ್ರಾಯಪಟ್ಟಿರುವುದಾಗಿ ವರದಿ ಹೇಳಿದೆ.

ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳು, ಮುಖ್ಯಸ್ಥರೊಂದಿಗೆ ಪರಿಶೀಲನೆ ನಡೆಸಿರುವ ಸಮಿತಿ ಈ ಕೆಳಗಿನ ಮುಖ್ಯ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ:

  • ಇಂದು ದೇಶದ ಜಿಡಿಪಿಯ ಶೇ.೧.೬ರಷ್ಟು ಹಣವನ್ನು ಸೇನಾ ಬಜೆಟ್‌ಗಾಗಿ ಮೀಸಲಿಡಲಾಗುತ್ತದೆ. ಇದು ೧೯೬೨ರಲ್ಲಿ ಇದ್ದಕ್ಕಿಂತ ಕಡಿಮೆ. ಇದು ಶುಭಸೂಚಕವಲ್ಲ.
  • ಸದ್ಯದ ರಾಜಕೀಯ ಸಂದರ್ಭದಲ್ಲಿ, ಭಾರತದಂತಹ ದೊಡ್ಡ ದೇಶ ನೆಮ್ಮದಿಯಿಂದ ಇರಬಾರದು. ಸೇನೆ ಯುದ್ಧಕ್ಕೆ ಸಜ್ಜಾಗಿರಬೇಕಾದ ವಿಷಯ ಬಂದಾಗ, ಹಿಂದೂ ಮಹಾಸಾಗರದಲ್ಲಿ ಭಾರತ ತನ್ನ ಮೇಲುಗೈ ಸಾಧಿಸುವ ಸಂದರ್ಭ ಬರುವಾಗ ನೆಮ್ಮದಿ ಇರಲು ಸಾಧ್ಯವಿಲ್ಲ. ಹಾಗಾಗಿ, ಸಮಿತಿಯು ಸೂಕ್ತ ಆರ್ಥಿಕ ಸಂಪನ್ಮೂಲವನ್ನು ಮಂಜೂರು ಮಾಡಬೇಕು. ಇದು ಯುದ್ಧಕ್ಕೆ ಸಿದ್ಧತೆ ನಡೆಸಿಕೊಳ್ಳಲು ಸೇನಾಪಡೆಗಳಿಗೆ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಮತ್ತು ಆಧುನಿಕ ಯೋಜನೆಗಳನ್ನು ರೂಪಿಸಿಕೊಳ್ಳುವುದಕ್ಕೆ ನೆರವಾಗುತ್ತದೆ. ಇದು ಆದ್ಯತೆ ಆಗಬೇಕು. ದೇಶದ ಸುರಕ್ಷತೆ ಮತ್ತು ಭದ್ರತೆಯ ಸವಾಲುಗಳನ್ನು ಎದುರಿಸುವುದಕ್ಕೆ ಇದು ಅತಿ ಮುಖ್ಯ.
  • ಮೂಲ ವೆಚ್ಚ ೨೦೧೨-೧೩ ಮತ್ತು ೨೦೧೩-೧೪ರಲ್ಲಿ ತಲಾ ಶೇ.೩೯ರಷ್ಟಿತ್ತು. ಇದೇ ೨೦೧೭-೧೮ ಮತ್ತು ೨೦೧೮-೧೯ರಲ್ಲಿ ಅನುಕ್ರಮವಾಗಿ ಶೇ.೩೩ ಮತ್ತು ಶೇ.೩೪ಕ್ಕೆ ಇಳಿದಿದೆ. ಇನ್ನಷ್ಟು ಚಿಂತೆಗೆ ದೂಡುವ ವಿಷಯವೆಂದರೆ, ಸರ್ಕಾರದ ಬಜೆಟ್‌ ಹಂಚಿಕೆಗೆ ತಕ್ಕಂತೆ ಸಂಪನ್ಮೂಲ ಸಂಗ್ರಹಣೆ ಆಗಬೇಕು. ದೀರ್ಘಕಾಲದ ಸಮಗ್ರ ದೃಷ್ಟಿಕೋನದ ಯೋಜನೆ ಬಿಂಬಿಸಲಾಗಿರುವ ಅಗತ್ಯಗಳಂತೆ ಹೊಂದಾಣಿಕೆ ಕಾಣುತ್ತಿಲ್ಲ.
  • ಸೇನೆಯನ್ನು ಆಧುನಿಕಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೂಲ ವೆಚ್ಚವನ್ನು ಇಳಿಸಿದರೆ, ಅದರ ಪರಿಣಾಮ ವ್ಯತಿರಿಕ್ತವಾಗಿರುತ್ತದೆ ಮತ್ತು ಇದು ದೇಶದ ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಮಾನವಾಗಿರುತ್ತದೆ.

ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸರ್ಕಾರ ದೇಶ ರಕ್ಷಣೆಯ ವಿಷಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದೆ ಎಂದು ನೇರವಾಗಿ ಜೋಶಿ ಸಮಿತಿ ವರದಿ ಹೇಳುತ್ತಿರುವುದು ನಿಜಕ್ಕೂ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇದೇ ಮುರಳಿ ಮನೋಹರ್‌ ಜೋಶಿ ಅವರೇ ೧೯೯೨ರ ತಿರಂಗಯಾತ್ರೆಯ ಮೂಲಕ ಮೋದಿಯನ್ನು ರಾಷ್ಟ್ರ ರಾಜಕಾರಣಕ್ಕೆ ಪರಿಚಯಿಸಿದ್ದರು. ಈಗ ಈ ವರದಿಯು ಮೋದಿ ಮತ್ತು ಅವರ ಸಂಪುಟಕ್ಕೆ ದೊಡ್ಡ ಆಘಾತವನ್ನೇ ನೀಡಿದೆ ಎಂಬ ಚರ್ಚೆ ನಡೆಯುತ್ತಿದೆ.

ಕಳೆದ ಕೆಲವು ತಿಂಗಳಲ್ಲಿ ಸೈನಿಕರು ತಮ್ಮ ಸಮವಸ್ತ್ರವನ್ನು ತಾವೇ ಹೊಲಿಸಿಕೊಳ್ಳಬೇಕು ಎಂದು ಸುದ್ದಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು. ಸೈನಿಕರೊಬ್ಬರು ತಮ್ಮ ಊಟ, ವಾಸ್ತವ್ಯ ಮತ್ತಿತರ ಸಂಕಷ್ಟಗಳನ್ನು ಹೇಳಿಕೊಂಡಿದ್ದ ವಿಡಿಯೋ ವೈರಲ್‌ ಆಗಿದ್ದನ್ನು ನೆನಪಿಸಿಕೊಳ್ಳಬಹುದು. ಸೈನ್ಯ ಮತ್ತು ಸೈನಿಕರ ಪರಿಸ್ಥಿತಿ ಹದಗೆಡುತ್ತಿರುವುದನ್ನು ದೇಶವೇ ಗಮನಿಸಿತ್ತು. ಜೋಶಿ ನೇತೃತ್ವದ ಸಮಿತಿ ವರದಿ ಕೂಡ, ಸೈನ್ಯ ಬಲ ತುಂಬುವ, ಸಾಮರ್ಥ್ಯ ಹೆಚ್ಚಿಸುವ ಬದಲು ಅದರ ಬಲ ಕಳೆದುಕೊಳ್ಳುತ್ತಿದೆ ಎಂಬ ಅಂಶವನ್ನು ಹೇಳಿದೆ ಎಂದು ನ್ಯೂಸ್‌ ಸೆಂಟ್ರಲ್‌ ೨೪/೭ ವರದಿ ಹೇಳಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More