ಟ್ವಿಟರ್ ಸ್ಟೇಟ್ | ನಿರುದ್ಯೋಗ; ಕೇಂದ್ರದ ವಿರುದ್ಧ ಹರಿಹಾಯಲು ದಾರಿಯಾದ ಗಡ್ಕರಿ ಹೇಳಿಕೆ

ಮಹಾರಾಷ್ಟ್ರದಲ್ಲಿ ಮೀಸಲಾತಿಗಾಗಿ ಹೋರಾಡುತ್ತಿರುವ ಮರಾಠ ಸಮುದಾಯದವರಿಗೆ ಉತ್ತರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಉದ್ಯೋಗಗಳೇ ಇಲ್ಲ,” ಎಂದು ಅಭಿಪ್ರಾಯಪಟ್ಟಿದ್ದರು. ಅವರ ಈ ಹೇಳಿಕೆ ಪತ್ರಕರ್ತರು ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಟೀಕೆಗೆ ಗುರಿಯಾಗಿದೆ

ಕೇಂದ್ರದ ಮೋದಿ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎನ್ನುವ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿಯೇ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರು ಮೀಸಲಾತಿಗಾಗಿ ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ನಿತಿನ್ ಗಡ್ಕರಿ, “ಮೀಸಲಾತಿ ಕೊಟ್ಟಿದ್ದೇವೆ ಎಂದುಕೊಳ್ಳೋಣ. ಆದರೆ, ಸರ್ಕಾರಿ ಉದ್ಯೋಗಗಳೇ ಇಲ್ಲ,” ಎಂದು ಅಭಿಪ್ರಾಯಪಟ್ಟಿದ್ದರು. ಅವರ ಈ ಹೇಳಿಕೆ ಪತ್ರಕರ್ತರು ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಟೀಕೆಗೆ ಗುರಿಯಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಟ್ವೀಟ್ ಮಾಡಿ, ನರೇಂದ್ರ ಮೋದಿ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿಸಿದ್ದಾರೆ. 'ಉದ್ಯೋಗ ಎಲ್ಲಿದೆ?’ ಎನ್ನುವ ನಿತಿನ್ ಗಡ್ಕರಿ ಅವರ ಹೇಳಿಕೆಯು ಮೋದಿ ಸರ್ಕಾರವನ್ನು ಟೀಕಿಸಲು ರಾಹುಲ್ ಗಾಂಧಿ ಅವರಿಗೆ ಉತ್ತಮ ಅವಕಾಶವನ್ನು ಕೊಟ್ಟಿದೆ. “ಬ್ಯಾಂಕ್‌ಗಳಲ್ಲಿ ಮತ್ತು ಐಟಿ ಸಂಸ್ಥೆಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ನೇಮಕಾತಿ ಕಡಿಮೆಯಾಗಿದೆ. ಉದ್ಯೋಗಗಳು ಎಲ್ಲಿದೆ?” ಎಂದು ನಿತಿನ್ ಗಡ್ಕರಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ, “ಗಡ್ಕರಿ ಅವರೇ ಅತ್ಯುತ್ತಮ ಪ್ರಶ್ನೆಯನ್ನೇ ಕೇಳಿದ್ದೀರಿ. ಪ್ರತಿ ಭಾರತೀಯನೂ ಇದೇ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ,” ಎಂದು ಹೇಳಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ರಾಹುಲ್ ಗಾಂಧಿ ಅವರು ನಿತಿನ್ ಗಡ್ಕರಿ ಅವರ ಹೇಳಿಕೆ ಇರುವ ಮಾಧ್ಯಮ ವರದಿಯ ಲಿಂಕ್‌ ಅನ್ನು ಜೋಡಿಸಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಇತರ ಮುಖಂಡರೂ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎನ್ನುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಎತ್ತಿಕೊಂಡಿದ್ದಾರೆ. #WhereAreTheJobs ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿದ ಕಾಂಗ್ರೆಸ್ ನಾಯಕರು ನಿತಿನ್ ಗಡ್ಕರಿ ಅವರ ಹೇಳಿಕೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಟ್ವಿಟರ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಮನಿಷ್ ತಿವಾರಿ ಟ್ವೀಟ್ ಮಾಡಿ, “ಗೌರವಾನ್ವಿತ ಸಾರಿಗೆ ಸಚಿವರೇ, ನಿಮ್ಮ ಮುಕ್ತ ಹೇಳಿಕೆಗೆ ಪ್ರಶಂಸಿಸಬೇಕು. ಭಾರತದಲ್ಲಿ ಇಂದು ಉದ್ಯೋಗಗಳಿಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಿ ನರೇಂದ್ರ ಮೋದಿಯವರ ಭರವಸೆ ಕೇವಲ ಪೊಳ್ಳು ಮಾತು. ಗೌರವಾನ್ವಿತ ಪ್ರಧಾನಿಯವರೇ, ನೀವು ನಿಮ್ಮ ಸಹೋದ್ಯೋಗಿ ಸಚಿವರ ಮಾತನ್ನು ಒಪ್ಪುವಿರಾ?” ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಮಾಧ್ಯಮ ವಕ್ತಾರೆಯಾಗಿರುವ ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿ, “ನಿತಿನ್ ಗಡ್ಕರಿ ಅವರು ‘ಉದ್ಯೋಗಗಳೆಲ್ಲಿ?’ ಎಂದು ಪ್ರಶ್ನಿಸಿದ್ದಾರೆ. ಅಂದರೆ, ಅಂತಿಮವಾಗಿ ಅವರು ಮೋದಿ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದಾಯಿತು. ಬಿಜೆಪಿ ವಿಚಾರದಲ್ಲಿ ಪ್ರಾಮಾಣಿಕತೆ ಅಪರೂಪವೇ. ಆದರೆ, ಪ್ರಾಮಾಣಿಕತೆ ಸಂಪೂರ್ಣ ಸತ್ತಿಲ್ಲ ಎನ್ನುವುದು ಸಾಬೀತಾಯಿತು,” ಎಂದು ಟೀಕಿಸಿದ್ದಾರೆ. ಸಾಮಾನ್ಯವಾಗಿ ಬಿಜೆಪಿ ವಿರೋಧಿ ಟ್ವೀಟ್ ಮಾಡುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಟ್ವೀಟ್ ಮಾಡಿ, “ಮೀಸಲಾತಿ ಉದ್ಯೋಗದ ಭರವಸೆ ಕೊಡದು, ಉದ್ಯೋಗಗಳು ಕಡಿಮೆಯಾಗಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಗಿದ್ದರೆ, ಪಕೋಡಾ ಅರ್ಥಶಾಸ್ತ್ರದ ಕತೆ ಏನಾಗಿದೆ?” ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ವಿವಿಧ ಕ್ಷೇತ್ರಗಳ ಚಿಂತಕರು ಮತ್ತು ಪತ್ರಕರ್ತರು ಸಹ ಕೇಂದ್ರ ಸರ್ಕಾರವನ್ನು ವಿಶ್ಲೇಷಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, “ಪ್ರಧಾನಿ ಮೋದಿಯವರು ಉದ್ಯೋಗ ಒದಗಿಸಿರುವುದಾಗಿ ಹೇಳಿರುವ ಮಾತುಗಳನ್ನು ನಿತಿನ್ ಗಡ್ಕರಿ ಅವರು ಸುಳ್ಳೆಂದು ಹೇಳಿದ್ದಾರೆ. 'ಮೀಸಲಾತಿ ಕೊಟ್ಟರೂ ಉದ್ಯೋಗಗಳಿಲ್ಲ. ಬ್ಯಾಂಕ್ ಮತ್ತು ಐಟಿ ಕ್ಷೇತ್ರಗಳಲ್ಲಿ ಉದ್ಯೋಗಗಳು ಕಡಿಮೆಯಾಗಿವೆ. ಹೀಗಾಗಿ ಸರ್ಕಾರದ ನೇಮಕಾತಿ ನಿಂತು ಹೋಗಿದೆ. ಉದ್ಯೋಗವೆಲ್ಲಿ?' ಎಂದು ಹೇಳಿದ್ದಾರೆ. ಮೋದಿಯವರೇ ಏನು ಹೇಳುವಿರಿ?” ಎಂದು ಕೇಳಿದ್ದಾರೆ. “ಕೇಂದ್ರ ಸಚಿವರು ಕೊನೆಗೂ ಪರಿಸ್ಥಿತಿ ಏನೆಂದು ತಿಳಿಸಿದ್ದಾರೆ. 'ಮೀಸಲಾತಿ ಮರೆತುಬಿಡಿ, ಉದ್ಯೋಗಗಳೇ ಇಲ್ಲ' ಎಂದಿದ್ದಾರೆ,” ಎಂದು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಭಾರತೀಯ ಸಿನಿಮಾಗಳ ನಾಯಕಿ ಕಸ್ತೂರಿ ಶಂಕರ್ ಟ್ವೀಟ್ ಮಾಡಿ, “ನಿತಿನ್ ಗಡ್ಕರಿ ಅವರು ಭಾರತದಲ್ಲಿ ಮೀಸಲಾತಿ ಒಂದು ತಮಾಷೆಯಾಗಿ ಬದಲಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಅತಿ ಪ್ರಭಾವಿ ಲಾಬಿಯೆಂದರೆ ಹಿಂದುಳಿದ ವರ್ಗಗಳ ಸಾಲಿಗೆ ಸೇರುವುದು. ಆ ಮೂಲಕ ಅಸಲಿ ಹಕ್ಕುಗಳನ್ನು ಹೊಂದಿರುವ ವರ್ಗಕ್ಕೆ ಅವಕಾಶಗಳನ್ನು ನಿರಾಕರಿಸುವುದು. ವ್ಯವಸ್ಥೆಯ ಜೊತೆಗೆ ಆಟವಾಡುವುದನ್ನು ಬಿಡಿ. ನಾವು ಅಭಿವೃದ್ಧಿಯತ್ತ ನಡೆಯಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ವಿಚಾರಗಳ ಬಗ್ಗೆ ಟ್ವೀಟ್ ಮಾಡುವ ದ್ರುವ್ ರಾಠಿ ಮತ್ತು ನೇಹಾ ಬಿಸ್ವಾಸ್ ಮೊದಲಾದವರು ಕೂಡ ನಿತಿನ್ ಗಡ್ಕರಿ ಅವರು ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿರುವುದನ್ನು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ : ದೇಶದ ನಿರುದ್ಯೋಗಿಗಳ ಸಂಖ್ಯೆ 3.1 ಕೋಟಿ, ಸೃಷ್ಟಿಯಾದ ಉದ್ಯೋಗ ಬರೀ ಆರು ಲಕ್ಷ!
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More