ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಎತ್ತಿನಹೊಳೆ ಯೋಜನೆ; ಬಯಲುಸೀಮೆ ಜಿಲ್ಲೆಗಳ ೫೨೭ ಕೆರೆ ಹೂಳೆತ್ತಲು ಸಿಎಂ ಸೂಚನೆ

ಎತ್ತಿನಹೊಳೆ ನದಿ ತಿರುವು ಯೋಜನೆಯಡಿ ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಕೆಲವು ಭಾಗದ ೫೨೭ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. “ಕೆರೆನೀರನ್ನು ಬಳಸಿಕೊಂಡು ಜನರಿಗೆ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊತ್ತಿಕೊಳ್ಳಬೇಕು. ಯೋಜನೆಗೆ ೨೧ ಗ್ರಾಮಗಳ ೫ ಸಾವಿರ ಎಕರೆ ಭೂಮಿಯ ಅಗತ್ಯವಿದೆ. ಈಗಾಗಲೇ ವಶಪಡಿಸಿಕೊಂಡಿರುವ ರೈತರ ಭೂಮಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ಯೋಜನೆಗಾಗಿ ಮೂರು ಭೂಸ್ವಾದೀನಾಧಿಕಾರಿಗಳ ಹುದ್ದೆ ಮಂಜೂರಾಗಿದ್ದು, ತಕ್ಷಣ ನೇಮಕ ಮಾಡಬೇಕು,” ಎಂದು ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ.

ಮಾದಕದ್ರವ್ಯ ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ಬಿಜೆಪಿ ಆಗ್ರಹ

“ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾದಕದ್ರವ್ಯದ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ; ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾದಾಗ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಸರ್ಕಾರ ಮೈಮರೆತಿದೆ,” ಎಂದು ಬಿಜೆಪಿ ಶಾಸಕ ಆರ್‌ ಅಶೋಕ್‌ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾದಕದ್ರವ್ಯ ಅಕ್ರಮ ಮಾರಾಟ ವ್ಯಾಪಕವಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರ್ ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನೀಲ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕೆ ಎಂ ಜೋಸೆಫ್ ಸೇವಾ ಹಿರಿತನ ಪರಿಗಣಿಸದ ಕೇಂದ್ರದ ವಿರುದ್ಧ ಸುಪ್ರೀಂ ಪ್ರತಿಭಟನೆ

ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಿದ ಕೇಂದ್ರ ಸರ್ಕಾರ, ಸೇವಾ ಹಿರಿತನದಲ್ಲಿ ಸ್ಥಾನವನ್ನು ಕೆಳಗಿಳಿಸಿದೆ. ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಇಂದು ಭೇಟಿ ಮಾಡಿ ಚರ್ಚಿಸಿದ್ದಾರೆ. ಪಟ್ಟಿಯಲ್ಲಿ ಜೋಸೆಫ್ ಅವರಿಗಿಂತ ವಯಸ್ಸಿನಲ್ಲಿ ಕಿರಿಯರಾದ ಇಂದಿರಾ ಬ್ಯಾನರ್ಜಿ ಹಾಗೂ ವಿನೀತ್ ಶರಣ್ ಅವರ ಹೆರಸನ್ನು ಮೊದಲು ಸೇರಿಸಲಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ, ಜೋಸೆಫ್ ಅವರು ಮೊದಲು ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

9/11 ಅಮೆರಿಕ ದಾಳಿಯ ಉಗ್ರನ ಮಗಳನ್ನು ಮದುವೆಯಾದ ಲಾಡೆನ್ ಪುತ್ರ

ಅಲ್‌ ಖೈದಾ ನಾಯಕನಾಗಿದ್ದ ಒಸಮಾ ಬಿನ್ ಲಾಡೆನ್ ಪುತ್ರ ಹಜ್ಮಾ ಬಿನ್ ಲಾಡೆನ್‌ ೨೦೦೧ರ ಅಮೆರಿಕ ದಾಳಿ ಹಿಂದೆ ಇದ್ದ ಭಯೋತ್ಪಾದಕ ಮೊಹಮ್ಮದ್ ಅತ್ತಾ ಅವರ ಮಗಳನ್ನು ಮದುವೆಯಾಗಿದ್ದಾರೆ. ಸೆಪ್ಟೆಂಬರ್ ೧೧, ೨೦೦೧ರಂದು ಅಲ್‌ ಖೈದಾ ಉಗ್ರರು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡಿದ್ದರು. ಈ ದಾಳಿಯ ಮುಂದಾಳತ್ವವನ್ನು ಮೊಹಮ್ಮದ್ ಅತ್ತಾ ವಹಿಸಿದ್ದರು. ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ಬಳಿಕ ಆತನ ಮೂರನೇ ಪತ್ನಿ ಖೈರಾಹಾ ಸಬಾರ್ ಕೂಡ ಮತ್ತೊಂದು ಮದುವೆ ಆಗಿದ್ದಾರೆ ಎಂದು ತಿಳಿದುಬಂದಿದೆ.

ಪೆಪ್ಸಿಕೊಗೆ ವಿದಾಯ ಹೇಳಲಿದ್ದಾರೆ ಸಿಇಒ ಇಂದಿರಾ ನೋಯಿ

12 ವರ್ಷಗಳ ಸುಧೀರ್ಘ ಕಾಲ ಬಹುರಾಷ್ಟ್ರೀಯ ಕಂಪನಿ ಪೆಪ್ಸಿಕೊ ಮುನ್ನಡೆಸಿದ ಸಿಇಒ ಇಂದಿರಾ ನೋಯಿ ತಮ್ಮ ಸ್ಥಾನಕ್ಕೆ ಅಕ್ಟೋಬರ್ ತಿಂಗಳಲ್ಲಿ ವಿದಾಯ ಹೇಳಲಿದ್ದಾರೆ. ಅಕ್ಟೋಬರ್ 3ರಂದು 62 ವರ್ಷದ ಇಂದಿರಾ ನೊಯಿ ತಮ್ಮ ಹುದ್ದೆ ತೊರೆಯುತ್ತಿದ್ದಾರೆ. 22 ವರ್ಷಗಳಿಂದ ಪೆಪ್ಸಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ, ಕಳೆದ ವರ್ಷವಷ್ಟೇ ಪೆಪ್ಸಿಕೊ ಅಧ್ಯಕ್ಷ ಹುದ್ದೆಗೆ ನಿಯೋಜಿತರಾಗಿರುವ ರಾಮೋನ್ ಲಗಾರ್ಟಾ ಸಿಇಒ ಹುದ್ದೆ ವಹಿಸಿಕೊಳ್ಳಲಿದ್ದಾರೆ. "12 ವರ್ಷ ಪೆಪ್ಸಿ ಕಂಪನಿ ಮುನ್ನಡೆಸಿದ್ದು ನನ್ನ ಬದುಕಿನ ಹೆಮ್ಮೆಯ ದಿನಗಳು. ಭಾರತದಲ್ಲಿ ಬೆಳೆದ ನನಗೆ ಅಷ್ಟು ದೊಡ್ಡ ಕಂಪನಿಯನ್ನು ಮುನ್ನಡೆಸುವ ಅವಕಾಶ ಸಿಗುತ್ತದೆಂದು ನಾನು ಊಹಿಸಿರಲಿಲ್ಲ,” ಎಂದು ಇಂದಿರಾ ನೋಯಿ ಹೇಳಿದ್ದಾರೆ

ಮೇಘನಾ ಗುಲ್ಜಾರ್‌ ನಿರ್ದೇಶನದಲ್ಲಿ ವೆಬ್‌ ಸರಣಿ

ಇತ್ತೀಚಿನ ಯಶಸ್ವಿ ಹಿಂದಿ ಸಿನಿಮಾ ‘ರಾಝಿ’ ನಿರ್ದೇಶಕಿ ಮೇಘನಾ ಗುಲ್ಜಾರ್‌ ವೆಬ್‌ ಸರಣಿ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ರಿಲಯನ್ಸ್‌ ಎಂಟರ್‌ಟೇನ್ಮೆಂಟ್‌ನ ಫ್ಯಾಂಟಮ್‌ ಫಿಲ್ಮ್ಸ್‌ ನಿರ್ಮಿಸಲಿರುವ ಸರಣಿಯನ್ನು ಮೇಘನಾ ನಿರ್ದೇಶಿಸಲಿದ್ದಾರೆ. ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಬದುಕು ಮತ್ತು ಅವರು ಕಾರ್ಯನಿರ್ವಹಿಸಿದ ಪ್ರಮುಖ ಕೇಸ್‌ಗಳು ವೆಬ್‌ ಸರಣಿಯ ಕಥಾವಸ್ತು. 1993ರ ಸರಣಿ ಬಾಂಬ್‌ ಸ್ಫೋಟ, 26/11 ಉಗ್ರಗಾಮಿ ಚಟುವಟಿಕೆ ಸೇರಿದಂತೆ ಪ್ರಮುಖ ಪ್ರಕರಣಗಳು ಸರಣಿಯಲ್ಲಿ ಕಾಣಿಸಲಿವೆ. ಈ ಹಿಂದೆ ಅನುರಾಗ್ ಕಶ್ಯಪ್ ನಿರ್ದೇಶನದ ‘ಬ್ಲ್ಯಾಕ್‌ ಫ್ರೈಡೇ’ (2007) ಚಿತ್ರದಲ್ಲಿ ಕೆ ಕೆ ಮೆನನ್‌ ಅವರು ಪೊಲೀಸ್ ಅಧಿಕಾರಿ ರಾಕೇಶ್ ಮಾರಿಯಾ ಪಾತ್ರ ನಿರ್ವಹಿಸಿದ್ದರು. ರಾಂಗೋಪಾಲ್ ವರ್ಮಾ ನಿರ್ದೇಶನದ ‘ದಿ ಅಟ್ಯಾಕ್ಸ್ ಆಫ್‌ 26/11’ನಲ್ಲಿ ರಾಕೇಶ್ ಮಾರಿಯಾ ಆಗಿ ನಟ ನಾನಾ ಪಾಟೇಕರ್‌ ಕಾಣಿಸಿಕೊಂಡಿದ್ದರು.

ಅಸ್ಸಾಂ ಪೌರತ್ವ ವಿವಾದ: ಗಲ್ಫ್ ರಾಷ್ಟ್ರಗಳಲ್ಲೂ ವಿರೋಧ

ಅಸ್ಸಾಂನಲ್ಲಿ 40 ಲಕ್ಷ ಜನರನ್ನು ಪೌರತ್ವ ಪಟ್ಟಿಯಿಂದ ಕೈಬಿಡಲಾದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ವಿದೇಶಿಗಳಲ್ಲೂ ಪ್ರತಿಭಟನೆ ಮಾಡಲಾಗಿದೆ. ಈ ಕುರಿತು ಅರಬ್ ಮಾಧ್ಯಮಗಳು ವರದಿ ಮಾಡಿದ್ದು, ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗಲ್ಫ್‌ನ ಭಾರತದ ರಾಜತಾಂತ್ರಿಕ ಕೇಂದ್ರಗಳು ಸ್ಪಷ್ಟೀಕರಣ ನೀಡಲು ಮುಂದೆ ಬಂದಿವೆ. ಅರಬ್ ಮಾಧ್ಯಮಗಳು ಈ ವಿಷಯಕ್ಕೆ ಹೆಚ್ಚು ಒತ್ತು ನೀಡಿ ವರದಿ ಮಾಡಿದ್ದು, ಮ್ಯಾನ್ಮಾರ್ ಸರಕಾರ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮಾಡಿದಂತೆ ಭಾರತ ಸರಕಾರ ಅಸ್ಸಾಂ ಜನರನ್ನು ಅತಂತ್ರರನ್ನಾಗಿ ಮಾಡುವ ಹಾಗೂ ವೋಟ್‌ಬ್ಯಾಂಕಿಗಾಗಿ ನಡೆಸುತ್ತಿರುವ ವ್ಯವಸ್ಥಿತ ತಂತ್ರವಿದು ಎಂದು ಟೀಕಿಸಿವೆ.

ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್‌ಗೆ ಅಮಾನತಿನ ಬರೆ?

ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಬ್ರಿಸ್ಟಲ್‌ನಲ್ಲಿ ನಡೆದ ನೈಟ್ ಕ್ಲಬ್ ಗಲಭೆ ಪ್ರಕರಣವು ಅವರ ಕ್ರಿಕೆಟ್ ಬದುಕಿಗೆ ಭಾರಿ ಬರೆ ಎಳೆಯುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ವಿಚಾರಣೆಯು ಬ್ರಿಸ್ಟಲ್‌ನ ನ್ಯಾಯಾಲಯದಲ್ಲಿ ಶುರುವಾಗಿದ್ದು, ಬೀದಿಜಗಳದಲ್ಲಿ ಸ್ಟೋಕ್ಸ್ ಸ್ಥಿಮಿತತೆ ಕಳೆದುಕೊಂಡು ಅನಿಯಂತ್ರಿತ ಸ್ಥಿತಿಯಲ್ಲಿದ್ದರು ಎಂಬ ಸಂಗತಿಯನ್ನು ನ್ಯಾಯಾಲಯಕ್ಕೆ ಅರುಹಲಾಗಿದೆ. "ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ನಡೆದ ಗಲಭೆಯಲ್ಲಿ ಸ್ಟೋಕ್ಸ್, ರಿಯಾನ್ ಅಲಿ ಮತ್ತು ರಿಯಾನ್ ಹೇಲ್ ಪಾನಮತ್ತರಾಗಿದ್ದರು. ಸ್ಟೋಕ್ಸ್ ಅಂತೂ ಪ್ರತೀಕಾರದಿಂದ ಕುದಿಯುತ್ತಿದ್ದರು,'' ಎಂದು ಪ್ರಾಸಿಕ್ಯೂಟರ್ ನಿಕೋಲಾಸ್ ಕಾರ್ಸೆಲಿಸ್, ಬ್ರಿಸ್ಟಲ್ ಕೋರ್ಟ್‌ಗೆ ತಿಳಿಸಿದರು.

ವಿಂಡೀಸ್ ವಿರುದ್ಧ ಟಿ೨೦ ಸರಣಿ ಗೆದ್ದ ಪ್ರವಾಸಿ ಬಾಂಗ್ಲಾದೇಶ

ಪ್ರವಾಸಿ ಬಾಂಗ್ಲಾದೇಶ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರ (ಆಗಸ್ಟ್ ೫) ತಡರಾತ್ರಿ ನಡೆದ ಕೊನೆಯ ಹಾಗೂ ಮೂರನೇ ಮಳೆ ಬಾಧಿತ ಟಿ೨೦ ಪಂದ್ಯದಲ್ಲಿ ಡರ್ಕ್‌ವರ್ತ್ ಲೂಯಿಸ್ ನಿಯಮಾನುಸಾರ ಬಾಂಗ್ಲಾದೇಶ ೧೯ ರನ್ ಗೆಲುವು ಸಾಧಿಸಿತು. ಸೆಂಟ್ರಲ್ ಬ್ರೊವಾರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ೨೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೮೪ ರನ್ ಗಳಿಸಿದರೆ, ಪರಿಷ್ಕೃತ ರನ್ ಚೇಸಿಂಗ್‌ನಲ್ಲಿ ವಿಂಡೀಸ್ ೧೭.೧ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೩೫ ರನ್ ಗಳಿಸಿತು. ೩೨ ಎಸೆತಗಳಲ್ಲಿ ೬ ಬೌಂಡರಿ, ೩ ಸಿಕ್ಸರ್ ಸಿಡಿಸಿದ ಆರಂಭಿಕ ಲಿಟನ್ ದಾಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಾದ್ಯಂತ ಆಕರ್ಷಕ ಪ್ರದರ್ಶನ ನೀಡಿದ ಶಕೀಬ್ ಅಲ್ ಹಸನ್ ಸರಣಿ ಶ್ರೇಷ್ಠರೆನಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More