ಆ್ಯಪಲ್ ಅತ್ಯಂತ ಚುರುಕಾಗಿ ಟ್ರಿಲಿಯನ್ ಡಾಲರ್ ಹಾದಿ ಕ್ರಮಿಸಿದ್ದು ಹೇಗೆ?

ಇತ್ತೀಚೆಗಷ್ಟೇ ನಾವು ಟಿಸಿಎಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ 100 ಬಿಲಿಯನ್ ಡಾಲರ್ ಕಂಪನಿಗಳಾಗಿ ಹೊರಹೊಮ್ಮಿದ್ದರ ಬಗ್ಗೆ ಹೆಮ್ಮೆಪಟ್ಟಿದ್ದೇವೆ. ಈಗ ಆ್ಯಪಲ್ ಟ್ರಿಲಿಯನ್ ಡಾಲರ್ ಕಂಪನಿಯಾಗಿ ಅಚ್ಚರಿ ಮೂಡಿಸಿದೆ. ಆದರೆ, ದಶಕದ ಹಿಂದೆಯೇ ಚೀನಾದ ಕಂಪನಿಯೊಂದು ಈ ಸಾಧನೆ ಮಾಡಿತ್ತು!

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚೆಗೆ 100 ಬಿಲಿಯನ್ ಡಾಲರ್ ಕಂಪನಿಗಳಾಗಿ ಹೊರಹೊಮ್ಮಿದಾಗ ಭಾರತದ ಕಾರ್ಪೊರೆಟ್ ವಲಯ ಹೆಮ್ಮಿಯಿಂದ ಬೀಗಿತ್ತು. ಈಗ ಆ್ಯಪಲ್ ಟ್ರಿಲಿಯನ್ ಡಾಲರ್ ಕಂಪನಿಯಾಗಿ ಹೊರಹೊಮ್ಮಿದೆ. ಜಾಗತಿಕ ಕಾರ್ಪೊರೆಟ್ ವಲಯಲ್ಲೀಗ ಸಂಭ್ರಮ. ಈ ಹೆಗ್ಗಳಿಕೆ ಸಾಧಿಸಿದ ಅಮೆರಿಕದ ಮೊದಲ ಕಂಪನಿ ಆದರೂ ಆ್ಯಪಲ್ ಕೇವಲ ಅಮೆರಿಕ ಕಂಪನಿಯಾಗಿ ಉಳಿದಿಲ್ಲ. 280 ದಶಲಕ್ಷ ಆ್ಯಪಲ್ ಐಫೋನ್ ಮಾರಾಟ ಮಾಡಿರುವ ಅ್ಯಪಲ್ ಜಗತ್ತಿನೆಲ್ಲೆಡೆ ಮನೆಮಾತು. ಅಮೆರಿಕ ಇರಲಿ, ಭಾರತ ಇರಲಿ, ಪಾಕಿಸ್ತಾನ ಇರಲಿ, ಸ್ಪೇನ್ ಇರಲಿ, ಜಗತ್ತಿನಲ್ಲಿ ಎಲ್ಲೇ ಹೋದರೂ ಆ್ಯಪಲ್ ಐಫೋನ್ ಹೊಂದುವುದೆಂದರೆ ಪ್ರತಿಷ್ಠೆಯ ಸಂಕೇತ.

ಜಗತ್ತಿನಲ್ಲಿ ಅತ್ಯಂತ ತ್ವರಿತವಾಗಿ ಮಾರಾಟವಾದ ಮತ್ತು ಮಾರಾಟವಾಗುತ್ತಿರುವ ಸಿದ್ದವಸ್ತು ಅ್ಯಪಲ್ ಐಫೋನ್. ಆ್ಯಪಲ್ ಐಫೋನ್ 4ಎಸ್ ಬಿಡುಗಡೆಯಾದ 24 ಗಂಟೆಗಳಲ್ಲಿ ಒಂದು ದಶಲಕ್ಷ ಮಾರಾಟವಾಗಿತ್ತು. ಅಂದರೆ, ಪ್ರತಿ ಸೆಕೆಂಡಿಗೆ 12 ಐಫೋನ್ ಮಾರಾಟವಾಗಿವೆ. ಆ್ಯಪಲ್ ಪ್ರತಿಬಾರಿ ಐಫೋನ್ ಬಿಡುಗಡೆ ಮಾಡಿದಾಗಲೆಲ್ಲ ಹೊಸ-ಹೊಸ ದಾಖಲೆಗಳಾಗುತ್ತಲೇ ಇವೆ.

ಆಗಸ್ಟ್ 2ರಂದು ಆ್ಯಪಲ್ ಕಂಪನಿ ಮಾಡಿದ ದಾಖಲೆ ಮಾತ್ರ ಅದ್ಭುತ. ಅಮೆರಿಕದ ಮೊದಲ ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ ಕಂಪನಿಯಾಗಿ ಉದಯಿಸಿತು. ಅಂದು ಅಮೆರಿಕದ ನ್ಯೂಯಾರ್ಕ್ ಷೇರುವಿನಿಮಯ ಕೇಂದ್ರ ನ್ಯಾಸ್ಡಾಕ್‌ನಲ್ಲಿ ಅ್ಯಪಲ್ ಕಂಪನಿ ಷೇರು ಬೆಲೆ 207 ಡಾಲರ್‌ಗೆ ಏರಿದಾಗ ಮಾರುಕಟ್ಟೆ ಬಂಡವಾಳ ಮೌಲ್ಯವು 1 ಟ್ರಿಲಿಯನ್ ಡಾಲರ್ ಮಟ್ಟಕ್ಕೇರಿತು. 48 ಗಂಟೆಗಳ ಹಿಂದೆ ಇಂತಹದ್ದೊಂದು ಸಾಧನೆ ಮಾಡುವ ಮುನ್ಸೂಚನೆಯೂ ಇರಲಿಲ್ಲ. ಏಕೆಂದರೆ ಆಗ ಆ್ಯಪಲ್ ಷೇರು 190ರ ಆಜುಬಾಜಿನಲ್ಲಿ ವಹಿವಾಟಾಗುತ್ತಿತ್ತು.

ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಅತ್ಯುತ್ತಮ ವಹಿವಾಟು ಮತ್ತು ಗರಿಷ್ಠ ಲಾಭ ಗಳಿಸಿದ ಪರಿಣಾಮ ಹೂಡಿಕೆದಾರರು ಉತ್ತೇಜಿತರಾಗಿ ಷೇರುಗಳನ್ನು ಖರೀದಿಸಲು ಮುಗಿಬಿದ್ದರು. ಎರಡೇ ವಹಿವಾಟು ದಿನಗಳಲ್ಲಿ ಆ್ಯಪಲ್ ಷೇರು ಬಹುತೇಕ ಶೇ.10ರಷ್ಟು ಏರಿಕೆ ಕಂಡಿತು. 880 ಬಿಲಿಯನ್ ಡಾಲರ್ ಇದ್ದ ಮಾರುಕಟ್ಟೆ ಬಂಡವಾಳವು 1000 ಬಿಲಿಯನ್ ಡಾಲರ್ ಗೆ ಏರಿತು. ಅಂದರೆ, ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ ಅಮೆರಿಕದ ಮೊದಲ ಕಂಪನಿಯಾಯಿತು.

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸ ಇರುವ ಅಮೆರಿಕ ಷೇರುಪೇಟೆಯಲ್ಲಿ ಅಂಕಿ-ಸಂಖ್ಯೆಗಳ ಮೈಲುಗಲ್ಲುಗಳಿಗೆ ಬರವಿಲ್ಲ. ಆದರೆ, ಶತಮಾನಗಳ ಇತಿಹಾಸ ಇರುವ ಯುಎಸ್ ಸ್ಟೀಲ್, ಎಕ್ಸಾನ್, ಜನರಲ್ ಎಲೆಕ್ಟ್ರಿಕ್, ವಾಲ್ ಮಾರ್ಟ್ ಅಂತಹ ಕಂಪನಿಗಳು ಸಾಧಿಸದ ದಾಖಲೆಯನ್ನು ಅ್ಯಪಲ್ ಕಂಪನಿ ಎರಡೇ ದಶಕದಲ್ಲಿ ಸಾಧಿಸಿದೆ.

ಯುಎಸ್ ಸ್ಟೀಲ್ ಕಂಪನಿ 1901ರಲ್ಲೇ 1 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿದ್ದ ಮೊದಲ ಅಮಿರಿಕದ ಲಿಸ್ಟೆಡ್ ಕಂಪನಿ ಎಂಬ ಹೆಗ್ಗಳಿಕೆ ಪಡೆದಿತ್ತು. 1987ರಲ್ಲಿ ಆಗಸ್ಟ್ ತಿಂಗಳಲ್ಲಿ ಐಬಿಎಂ ಕಂಪನಿಯು 100 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಮುಟ್ಟಿತ್ತು. ಆದರೆ, ದಿನದ ವಹಿವಾಟು ಅಂತ್ಯಗೊಂಡಾಗ ಆ ಹೆಗ್ಗಳಿಕೆ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 1995 ಆಗಸ್ಟ್ ತಿಂಗಳಲ್ಲಿ ಜನರಲ್ ಎಲೆಕ್ಟ್ರಿಕ್ ಕಂಪನಿಯು 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಅಮೆರಿಕದ ಕಂಪನಿಯಾಗಿ ಹೊರಹೊಮ್ಮಿತ್ತು. ಭಾರತದಲ್ಲಿ ಆ ಸಾಧನೆಯನ್ನು ಈಗ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ಮಾಡಿವೆ. ಆ ಲೆಕ್ಕದಲ್ಲಿ ನಾವು ಬಹಳ ಹಿಂದೆ ಇದ್ದೇವೆ. 1999ರಲ್ಲೇ ಮೈಕ್ರೋಸಾಫ್ಟ್ ಕಂಪನಿ 500 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿದ ಕಂಪನಿಯಾಗಿ ಉದಯಿಸಿತ್ತು. ಅದೇ ವರ್ಷ ಡಿಸೆಂಬರ್ ಅಂತ್ಯಕ್ಕೆ 600 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ದಕ್ಕಿಸಿಕೊಂಡಿತ್ತು.

ಅದಾದ 18 ವರ್ಷಗಳ ನಂತರ ಆ್ಯಪಲ್ ಕಂಪನಿ ಮೊದಲ 1 ಟ್ರಿಲಿಯನ್ ಡಾಲರ್ ಕಂಪನಿಯಾಗಿ ಹೊರಹೊಮ್ಮಿದೆ. 2018ರಲ್ಲೇ ಆ್ಯಪಲ್ ಕಂಪನಿ ಷೇರು ಶೇ.32ರಷ್ಟು ಏರಿದ್ದು ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿದೆ. ಅಮೆಜಾನ್ ಜೂನ್ ತಿಂಗಳಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದಾಗ ಮಾರುಕಟ್ಟೆ ಸಂಖ್ಯಾಶಾಸ್ತ್ರಜ್ಞರು ಅಮೆಜಾನ್ ಮೊದಲ ಟ್ರಿಲಿಯನ್ ಡಾಲರ್ ಕಂಪನಿ ಆಗಬಹುದೆಂಬ ಅಂದಾಜು ಮಾಡಿದ್ದರು. ಆದರೆ, ನಿರೀಕ್ಷಿಸಿದ ಮಟ್ಟದಲ್ಲಿ ಅಮೆಜಾನ್ ಷೇರು ದರ ಏರಲಿಲ್ಲ. ಬದಲಿಗೆ, ಆ್ಯಪಲ್ ಷೇರುದರ ತ್ವರಿತಗತಿಯಲ್ಲಿ ಜಿಗಿಯಿತು.

ಈಗ ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ ಕಂಪನಿಯಾಗಿ ಉದಯಿಸಲು ಅಮೆಜಾನ್, ಆಲ್ಫಾಬಿಟ್ ಮತ್ತು ಮೈಕ್ರೊಸಾಫ್ಟ್ ಸಾಲುಗಟ್ಟಿ ನಿಂತಿವೆ. ಅಮೆಜಾನ್ ಮಾರುಕಟ್ಟೆ ಬಂಡವಾಳ ಈಗ 880 ಬಿಲಿಯನ್ ಡಾಲರ್; 120 ಬಿಲಿಯನ್ ಡಾಲರ್ ಹಿಂದೆ ಬಿದ್ದಿದೆ. ಆಲ್ಫಾಬಿಟ್ ಮಾರುಕಟ್ಟೆ ಬಂಡವಾಳವು 849 ಬಿಲಿಯನ್ ಡಾಲರ್.

2007ರಲ್ಲೇ ಚೀನಾದ ಕಂಪನಿಯೊಂದು ಮೊದಲ ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯಹೊಂದಿದ ಕಂಪನಿಯಾಗಿ ಉದಯಿಸಿತ್ತು. ಷಾಂಗೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಪೆಟ್ರೋ ಚೀನಾ ಕಂಪನಿ ಆಗಲೇ 1100 ಬಿಲಿಯನ್ ಅಂದರೆ 1.10 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿತ್ತು. ಆದರೆ, 2008ರಲ್ಲಿ ನಡೆದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಪೆಟ್ರೋ ಚೀನಾ ಕಂಪನಿ ಷೇರು ಬಹಳ ತ್ವರಿತವಾಗಿ ಕುಸಿಯಿತು. 2007ರಲ್ಲಿ 1.10 ಟ್ರಿಲಿಯನ್ ಡಾಲರ್ ಇದ್ದ ಮಾರುಕಟ್ಟೆ ಬಂಡವಾಳ ಮೌಲ್ಯವು 2008ರ ಅಂತ್ಯದ ವೇಳೆಗೆ 300 ಬಿಲಿಯನ್ ಡಾಲರ್‌ಗೆ ಕುಸಿದಿತ್ತು. ಹೂಡಿಕೆದಾರರ 800 ಬಿಲಿಯನ್ ಡಾಲರ್ ಸಂಪತ್ತು ಕೆಲವೇ ತಿಂಗಳುಗಳಲ್ಲಿ ನಶಿಸಿಹೋಗಿತ್ತು. ಈಗಲೂ ಷಾಂಗೈ ಷೇರುವಿನಿಮಯ ಪೇಟೆಯಲ್ಲಿ ವಹಿವಾಟಾಗುತ್ತಿರುವ ಪೆಟ್ರೋ ಚೀನಾ ಮಾರುಕಟ್ಟೆ ಬಂಡವಾಳವು 195 ಬಿಲಿಯನ್ ಡಾಲರ್‌ಗೆ ಕುಸಿದಿದೆ.

ಕಂಪನಿಯ ಸಂಪತ್ತನ್ನು ಅಳೆಯಲು ಅದರ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಮಾನದಂಡವಾಗಿ ಬಳಸುತ್ತಾರೆ. ಮಾರುಕಟ್ಟೆ ಬಂಡವಾಳ ಮೌಲ್ಯವು ಆಯಾ ಕಂಪನಿಯ ಷೇರಿನ ದರಕ್ಕೆ ಅನುಗುಣವಾಗಿ ಏರಿಳಿಯುತ್ತದೆ. ಷೇರುದರ ಕುಸಿದಂತೆ ಅದರ ಮಾರುಕಟ್ಟೆ ಬಂಡವಾಳ ಮೌಲ್ಯವೂ ಕುಸಿಯುತ್ತದೆ.

ಇದನ್ನೂ ಓದಿ : ಭಾರತದ ಮೊದಲ 100 ಬಿಲಿಯನ್ ಡಾಲರ್ ಕಂಪನಿ ಎನಿಸಿ ಇತಿಹಾಸ ಸೃಷ್ಟಿಸಿದ ಟಿಸಿಎಸ್

ಅದು ಕಂಪನಿಯ ಆಸ್ತಿ ಅಲ್ಲ. ಕಂಪನಿಯ ಸಂಪತ್ತು. ಕಂಪನಿಯ ಸಂಪತ್ತು ಪರಿಕಲ್ಪನೆ ಅದು ಷೇರು ದರ ಕುಸಿದರೆ ಕುಸಿದುಹೋಗುತ್ತದೆ. ಕಂಪನಿಯ ಆಸ್ತಿಯ ಮೇಲೆ ಷೇರು ಏರಿಳಿತ ಪರಿಣಾಮ ಇರುವುದಿಲ್ಲ. ಕಂಪನಿ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕಿಂತ ಕಂಪನಿಯ ವಾಸ್ತವಿಕ ಮೌಲ್ಯ ಮುಖ್ಯ.

ಮುಂಬರುವ ದಿನಗಳಲ್ಲಿ ಆ್ಯಪಲ್ ಷೇರು ಕುಸಿದರೆ ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಇರುವ ಕಂಪನಿಯೆಂಬ ಹೆಗ್ಗಳಿಕೆ ತಪ್ಪಬಹುದು. ಅಮೆಜಾನ್ ಕಂಪನಿ ಷೇರು ತೀವ್ರಗತಿಯಲ್ಲಿ ಏರಿದರೆ ಅದು ಟ್ರಿಲಿಯನ್ ಡಾಲರ್ ಕಂಪನಿಯಾಗಿ ಹೊರಹೊಮ್ಮಬಹುದು. ಆದರೆ, ಪ್ರಸ್ತುತ ಅ್ಯಪಲ್ ತಯಾರಿಸುತ್ತಿರುವ ಉತ್ಪನ್ನ, ಬೇಡಿಕೆ ಮತ್ತು ಗಳಿಸುತ್ತಿರುವ ಲಾಭಾಂಶವನ್ನು ಗಮನಿಸಿದರೆ, ಅಮೆಜಾನ್ ಆ್ಯಪಲ್ ಸ್ಥಾನಕ್ಕೆ ಏರುವುದು ಕೆಲವು ತ್ರೈಮಾಸಿಕಗಳಲ್ಲಂತೂ ಸಾಧ್ಯವಿಲ್ಲ. ಈಗ ಆ್ಯಪಲ್ ಕಂಪನಿಗೆ ಬೇರಾರೂ ಸಾಟಿ ಇಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More