ಕೃಷಿಕರ ನೈಜ ಸಮಸ್ಯೆಗಳಿಗೆ ಅಂತ್ಯ ಹಾಡಲಿವೆಯೇ ಈ ಎರಡು ರೈತ ಮಸೂದೆ?

ದೇಶದ ರೈತರ ‘ಸಾಲಮುಕ್ತಿಯ ಹಕ್ಕು’ ಮತ್ತು ‘ಕನಿಷ್ಠ ಬೆಂಬಲ ಬೆಲೆ ಖಾತ್ರಿ ಹಕ್ಕು’ ಪ್ರತಿಪಾದನೆಯ ಈ ಎರಡು ಕರಡು ಮಸೂದೆಗಳಿಗೆ ಈಗಾಗಲೇ ಕಾಂಗ್ರೆಸ್, ಸಿಪಿಐಎಂ, ಶಿವಸೇನಾ, ಎನ್‌ಪಿ, ಟಿಎಂಸಿ, ಬಿಎಸ್‌ಪಿ ಮತ್ತು ಡಿಎಂಕೆ ಪಕ್ಷಗಳು ಸೇರಿದಂತೆ ಒಟ್ಟು ೨೧ ಪಕ್ಷಗಳು ಬೆಂಬಲ ಸೂಚಿಸಿವೆ

ದೇಶದ ಶೇ.೫೦ರಷ್ಟು ಮಂದಿಗೆ ಉದ್ಯೋಗ ನೀಡುತ್ತಿರುವ ಮತ್ತು ಒಟ್ಟು ಜಿಡಿಪಿಯ ಶೇ.೧೮ರಷ್ಟು ಪಾಲು ಹೊಂದಿರುವ ಕೃಷಿ ವಲಯ ಭಾರತದ ಚುನಾವಣಾ ಭರವಸೆಗಳ ಪ್ರಮುಖ ಹೂರಣವಾಗುತ್ತ ಇದೀಗ ಎಪ್ಪತ್ತು ವರ್ಷ ಕಳೆದಿವೆ. ಆದರೆ, ಭಾರತೀಯ ಕೃಷಿಯ ಮೂಲ ಸಮಸ್ಯೆಗಳಾವುವೂ ಈವರೆಗೆ ಸಂಪೂರ್ಣ ಬಗೆಹರಿದ ನಿದರ್ಶನಗಳೇ ಇಲ್ಲ ಎಂಬಷ್ಟರಮಟ್ಟಿಗೆ ಆ ವಲಯವು ನಮ್ಮ ಆಡಳಿತ ಮತ್ತು ಆಡಳಿತ ನೀತಿಗಳಲ್ಲಿ ಅಸೀಮ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಬಂದಿದೆ. ಅದರಲ್ಲೂ, ಪ್ರಕೃತಿ ವೈಪರೀತ್ಯ ಮತ್ತು ಮಾರುಕಟ್ಟೆ ಏರಿಳಿತಗಳ ವಿರುದ್ಧ ಕೃಷಿಕರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿರುವುದು ವಿರಳ.

ಕಳೆದ ಏಳು ದಶಕಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ತಾವು ರೈತಪರ, ತಾವೂ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರೇ ಎಂಬಂತಹ ಮಾತುಗಳನ್ನು ಆಡದ ರಾಜಕಾರಣಿಗಳೇ ಅಪರೂಪ ಎಂಬಷ್ಟರ ಮಟ್ಟಿಗೆ ನಮ್ಮ ನಾಯಕರು ಕೃಷಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಕೃಷಿಕರ ಏಳಿಗೆಗಾಗಿಯೇ ತಾವಿರುವುದು ಎಂದು ಒಂದಾದ ಮೇಲೊಂದು ಸರ್ಕಾರಗಳು ಘೋಷಿಸುತ್ತಲೇ ಇವೆ. ಮುಖ್ಯಮಂತ್ರಿಗಳು, ಸಚಿವರು, ಶಾಸಕರಗಳು ರೈತರ ಹೆಸರಿನಲ್ಲಿಯೇ ಅಧಿಕಾರ ಪ್ರಮಾಣ ಸ್ವೀಕರಿಸಿದ ನಿದರ್ಶನಗಳಿಗೂ ಕೊರತೆ ಇಲ್ಲ.

ಆದಾಗ್ಯೂ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯ ಹಾಗೂ ಸಾಲಮುಕ್ತ, ಸಂಕಷ್ಟಮುಕ್ತ ಕೃಷಿಕರ ಬದುಕು ಎಂಬುದು ಈಗಲೂ ಗಗನಕುಸುಮವಾಗೇ ಉಳಿದಿದೆ. ಸಂಕಷ್ಟದಲ್ಲಿರುವ ಭಾರತೀಯ ಕೃಷಿಯ ಎಲ್ಲಾ ಸಮಸ್ಯೆಗಳ ಮೂಲ ಇರುವುದೇ ಸದ್ಯಕ್ಕೆ ಈ ಆರ್ಥಿಕ ಸವಾಲುಗಳಲ್ಲಿ. ಬೆಳೆ ಬೆಳೆಯಲು ಸಕಾಲದಲ್ಲಿ ಅಗತ್ಯ ಆರ್ಥಿಕ ಸಂಪನ್ಮೂಲ ಕೊರತೆ ಮತ್ತು ಆ ಕೊರತೆ ನೀಗಲು ಖಾಸಗಿ ಲೇವಾದೇವಿಗಾರರಿಂದ ಅಧಿಕ ಬಡ್ಡಿಯ ಸಾಲ ಪಡೆದು ವಿಷವರ್ತುಲದಲ್ಲಿ ಸಿಲುಕುವುದು, ಸಾಲ ಮಾಡಿ ಬೆಳೆದ ಬೆಳೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಾಶವಾಗುವುದು ಅಥವಾ ಬೆಳೆ ಬಂದರೂ ಅದಕ್ಕೆ ಸರಿಯಾದ ಬೆಲೆ ಸಿಗದಿರುವುದು ಕೃಷಿಕರನ್ನು ಎಂದೆಂದೂ ಮಗಿಯದ ಸಂಕಷ್ಟಗಳ ಸರಣಿಗೆ ನೂಕಿದೆ.

ದಶಕಗಳ ಕಾಲದ ನಿರ್ಲಕ್ಷ್ಯ ಮತ್ತು ಸಂಕಷ್ಟಗಳ ಬಳಿಕ ಇದೀಗ, ರೈತರ ಮುಂದಿನ ಆ ಬಿಕ್ಕಟ್ಟುಗಳಿಗೆ ವಿರಾಮ ಹಾಕುವ ಪ್ರಯತ್ನವೊಂದು ಆರಂಭವಾಗಿದ್ದು, ಸುಮಾರು ೨೦೦ ರೈತ ಸಂಘಟನೆಗಳ ಒಕ್ಕೂಟವಾದ ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಸಿದ್ಧಪಡಿಸಿರುವ ಕರಡು ಮಸೂದೆಗಳು ಕಳೆದ ವಾರ ಲೋಕಸಭೆಯಲ್ಲಿ ಮಂಡನೆಯಾಗಿವೆ. ರೈತ ಚಳವಳಿಯ ಮೂಲಕವೇ ರಾಜಕೀಯ ರಂಗದಲ್ಲಿ ಬೆಳೆದಿರುವ ಮತ್ತು ಸದ್ಯದ ಲೋಕಸಭೆಯ ಸಂಸದರ ಪೈಕಿ ಏಕೈಕ ರೈತ ನಾಯಕರಾಗಿರುವ ಮಹಾರಾಷ್ಟ್ರದ ಸ್ವಾಭಿಮಾನಿ ಪಕ್ಷದ ರಾಜು ಶೆಟ್ಟಿ ಅವರು ಶುಕ್ರವಾರ ಈ ಖಾಸಗಿ ಮಸೂದೆಗಳನ್ನು ಮಂಡಿಸಿದ್ದಾರೆ.

ದೇಶದ ರೈತರ 'ಸಾಲಮುಕ್ತಿಯ ಹಕ್ಕು' ಮತ್ತು 'ಕನಿಷ್ಠ ಬೆಂಬಲ ಬೆಲೆ ಖಾತ್ರಿ ಹಕ್ಕು' ಪ್ರತಿಪಾದನೆಯ ಈ ಎರಡು ಕರಡು ಮಸೂದೆಗಳಿಗೆ ಈಗಾಗಲೇ ಕಾಂಗ್ರೆಸ್, ಸಿಪಿಐಎಂ, ಶಿವಸೇನಾ, ಎನ್‌ಪಿ, ಟಿಎಂಸಿ, ಬಿಎಸ್‌ಪಿ ಮತ್ತು ಡಿಎಂಕೆ ಪಕ್ಷಗಳು ಸೇರಿದಂತೆ ಒಟ್ಟು ೨೧ ಪಕ್ಷಗಳು ಬೆಂಬಲ ಸೂಚಿಸಿವೆ. ರೈತರ ಸಾಲಮುಕ್ತಿಯ ಹಕ್ಕು ಮಸೂದೆ ೨೦೧೮, ದೇಶದ ಎಲ್ಲ ರೈತರ ಕೃಷಿ ಸಂಬಂಧಿತ ಸಾಲವನ್ನು ಒಂದು ಬಾರಿಗೆ ಮನ್ನಾ ಮಾಡಬೇಕು ಮತ್ತು ಬ್ಯಾಂಕಿಂಗ್ ವಲಯದಿಂದ ಮರುಸಾಲ ನೀಡಬೇಕು, ನೈಸರ್ಗಿಕ ವಿಕೋಪಪೀಡಿತ ಪ್ರದೇಶಗಳ ರೈತರಿಗೆ ಸಾಲ ಪರಿಹಾರ ನೀಡಬೇಕು ಎಂಬುದೂ ಸೇರಿದಂತೆ ಕೃಷಿಕರ ವಿವಿಧ ಹಣಕಾಸು ಬಿಕ್ಕಟ್ಟು ಮತ್ತು ಅಗತ್ಯಗಳನ್ನು ಒಳಗೊಂಡಿದೆ.

ಇದನ್ನೂ ಓದಿ : ಬಿಸಿಲಿನ ಝಳಕ್ಕೆ ಬೆಚ್ಚಿ ನಾನು ವಾಪಸಾದೆ; ರೈತರು ಮಾತ್ರ ನಡೆಯುತ್ತಲೇ ಇದ್ದರು!

ಕನಿಷ್ಠ ಬೆಂಬಲ ಬೆಲೆ ಖಾತ್ರಿ ಹಕ್ಕು ಮಸೂದೆಯು, ಎಲ್ಲ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ.೫೦ರಷ್ಟು ಅಧಿಕ ಬೆಂಬಲ ಬೆಲೆ ನೀಡಬೇಕು, ಆ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಅಥವಾ ಹರಾಜನ್ನು ನಿಷೇಧಿಸಬೇಕು, ಸರ್ಕಾರದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವುದು ಕಡ್ಡಾಯ ಮಾಡಬೇಕು ಮುಂತಾದ ಬೆಲೆ ಸ್ಥಿರತೆಯ ಕ್ರಮಗಳನ್ನು ಒಳಗೊಂಡಿದೆ.

“ಒಂದು ವೇಳೆ ಕೇವಲ ಸಾಲ ಮನ್ನಾ ಮಾಡಿದರೆ, ರೈತರು ಒಂದು ಬಾರಿಯ ಸಾಲದಿಂದ ಮುಕ್ತರಾಗುತ್ತಾರೆ. ಆದರೆ. ಅದಾದ ಬಳಿಕ ಅವರ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಹಾಕಿದ ಬಂಡವಾಳ ವಾಪಸು ಬರದೆ, ರೈತ ಮತ್ತೆ ಸಾಲದ ಸುಳಿಗೆ, ಸಂಕಷ್ಟದ ಸುಳಿಗೆ ಸಿಲುಕುತ್ತಾನೆ. ಹಾಗೇ, ಕೇವಲ ನ್ಯಾಯಯುತ ಬೆಂಬಲ ಬೆಲೆ ನೀಡಿದರೆ, ಆತ ಈಗಾಗಲೇ ಮಾಡಿರುವ ಸಾಲದ ಸುಳಿಯಿಂದ ಹೊರಬರುವುದು ಕೂಡ ಸಾಧ್ಯವಿಲ್ಲ. ಬೆಂಬಲ ಬೆಲೆಯ ಮೂಲಕ ಪಡೆಯುವ ಹೆಚ್ಚುವರಿ ಆದಾಯ ಸಾಲಗಳ ಮೇಲಿನ ಚಕ್ರಬಡ್ಡಿಗೇ ಹೋಗುತ್ತದೆ. ಹಾಗಾಗಿ, ಸಾಲ ಮನ್ನಾ ಮತ್ತು ಬೆಂಬಲ ಬೆಲೆಯಂತಹ ರೈತನ ಬದುಕಿಗೆ ಭದ್ರತೆ ನೀಡುವ ಎರಡೂ ಕ್ರಮಗಳೂ ಒಟ್ಟೊಟ್ಟಿಗೇ ಆಗಬೇಕು ಎಂಬುದು ಈ ಮಸೂದೆಗಳ ಉದ್ದೇಶ,” ಎಂಬುದು ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿ ಅವರ ಅಭಿಪ್ರಾಯ.

ಈಗಾಗಲೇ ರಾಜ್ಯಸಭೆಯಲ್ಲೂ ಈ ಮಸೂದೆಗಳು ಮಂಡನೆಯಾಗಿದ್ದು, ಸಿಪಿಎಂ ಸಂಸದ ಕೆ ಕೆ ರಾಗೇಶ್ ಅವರು ಸಂಸತ್ತಿನ ಮೇಲ್ಮನೆಯಲ್ಲಿ ಈ ಮಸೂದೆಗಳನ್ನು ಮಂಡಿಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದ ಮಂದಸ್ಸೂರು ರೈತ ಚಳವಳಿ ಮತ್ತು ಆ ಚಳವಳಿಗೆ ಬಲಿಯಾದ ರೈತ ಹುತ್ಮಾತರ ಬಲಿದಾನದ ಬಳಿಕ ನಡೆದ ರೈತ ಸಂಸತ್ತಿನ ಪ್ರಯತ್ನದ ಫಲವಾಗಿ ಈ ಮಸೂದೆಗಳ ಕರಡು ಸಿದ್ಧವಾಗಿದೆ. ದೇಶಾದ್ಯಂತ ಸುಮಾರು ಎರಡು ಕೋಟಿ ರೈತರು ಈ ಮಸೂದೆಗಳನ್ನು ಬೆಂಬಲಿಸಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಆದರೆ, ಸಾಲ ಮನ್ನಾದಂತಹ ಕ್ರಮಗಳು ಎಷ್ಟರಮಟ್ಟಿಗೆ ರೈತ ಸಮುದಾಯಕ್ಕೆ ದೀರ್ಘಾವಧಿಯಲ್ಲಿ ಅನುಕೂಲಕರವಾಗಲಿವೆ? ತಕ್ಷಣದ ಇಂತಹ ಪರಿಹಾರ ಕ್ರಮಗಳು ನಿಜವಾಗಿಯೂ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು, ಆತಂಕಗಳನ್ನು ದೂರ ಮಾಡಲಿವೆಯೇ ಎಂಬ ಪ್ರಶ್ನೆಗಳು ಇದ್ದೇ ಇವೆ. ಹಾಗೆಯೇ, ಬೆಂಬಲ ಬೆಲೆಯಂತಹ ಕ್ರಮಗಳು ಕೂಡ ನಿಜವಾಗಿಯೂ ರೈತರಿಗೆ ಎಷ್ಟರಮಟ್ಟಿಗೆ ತಲುಪುತ್ತಿವೆ. ರೈತರ ಹೆಸರಿನಲ್ಲಿ ಮಧ್ಯವರ್ತಿಗಳು ಮತ್ತು ಮಂಡಿ ಮಾಲೀಕರು ಹೇಗೆ ಸರ್ಕಾರದ ಬೆಂಬಲ ಬೆಲೆಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬುದನ್ನು ಪ್ರಮುಖವಾಗಿ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳ ವಿಷಯದಲ್ಲಿ ಈಗಾಗಲೇ ನೋಡಿದ್ದೇವೆ. ಅಂತಹ ದುರುಪಯೋಗ ತಡೆಯುವ ಜೊತೆಗೆ, ದೇಶದಾದ್ಯಂತ ಅತ್ಯುತ್ತಮ ಮಾರುಕಟ್ಟೆ ವ್ಯವಸ್ಥೆ, ಗ್ರಾಮೀಣ ಪ್ರದೇಶದ ಸಂಪರ್ಕ ಮತ್ತು ಸಾರಿಗೆ, ಕೃಷಿ ತಂತ್ರಜ್ಞಾನ ಕೃಷಿಕರ ಕೈಗೆಟಕುವ ಮಾದರಿಯಲ್ಲಿರುವಂತೆ ನಿಗಾ ವಹಿಸುವುದು, ಕೃಷಿ ಸಬ್ಸಿಡಿಯಂತಹ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಮುಂತಾದ ಕ್ರಮಗಳನ್ನು ಕೈಗೊಳ್ಳದೆ ಹೋದರೆ, ಕೃಷಿಗೆ ಅಂಟಿರುವ ಶಾಪ ನಿವಾರಣೆ ಸಾಧ್ಯವಿಲ್ಲ.

ಇಂತಹ ನೈಜ ಸಮಸ್ಯೆಗಳ ಬಗ್ಗೆ ಈ ಮಸೂದೆಗಳು ಯಾವೆಲ್ಲ ಪರಿಹಾರೋಪಾಯಗಳನ್ನು ಒಳಗೊಂಡಿವೆ ಎಂಬುದು ಕುತೂಹಲಕಾರಿ. ಸದ್ಯ ಸಂಸತ್ತಿನಲ್ಲಿ ಸುಮಾರು ೮೦೦ ಖಾಸಗಿ ಮಸೂದೆಗಳು ಮಂಡನೆಗೆ ಬಾಕಿ ಇದ್ದು, ಆ ಪೈಕಿ ರಾಜು ಶೆಟ್ಟಿ ಅವರ ಈ ರೈತಪರ ಮಸೂದೆಗಳು ವ್ಯಾಪಕ ರೈತ ಬೆಂಬಲ ಮತ್ತು ಸಂಘಟನೆಗಳ ಒತ್ತಾಸೆಯ ಕಾರಣಕ್ಕಾಗಿ ಆದ್ಯತೆಯ ಮೇಲೆ ಮಂಡನೆಯಾಗಿವೆ. ಆದರೆ, ಸಂಸತ್ತಿನ ಉಭಯ ಸದನಗಳು ಈ ಮಸೂದೆಗಳ ಕುರಿತ ಚರ್ಚೆಯನ್ನು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More