ಪ್ರಮಾಣವಚನ ದಿನದಂದು ಗಣ್ಯರಿಗೆ ವಸತಿ ಕಾಯ್ದಿರಿಸಿದ್ದು ಜೆಡಿಎಸ್, ಪಾವತಿಸಿದ್ದು ಸರ್ಕಾರ

ಸಿಎಂ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೆಚ್ಚದ ಸಂಪೂರ್ಣ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರಿಗೆಲ್ಲ ಕೊಠಡಿ ಕಾಯ್ದಿರಿಸಿದ್ದು ಜೆಡಿಎಸ್‌, ಖರ್ಚು ಭರಿಸಿದ್ದು ಮಾತ್ರ ರಾಜ್ಯದ ಆತಿಥ್ಯ ಸಂಸ್ಥೆ!

ಎಚ್ ಡಿ ಕುಮಾರಸ್ವಾಮಿ ಮತ್ತು ಜಿ ಪರಮೇಶ್ವರ್‌ ಅವರು ವಿಧಾನಸೌಧದ ಮುಂಭಾಗದಲ್ಲಿ ಮೇ ತಿಂಗಳಿನಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿದ್ದ ೪೨ ಗಣ್ಯ ಅತಿಥಿಗಳ ವಸತಿ, ಊಟೋಪಚಾರ ಮತ್ತು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗಣ್ಯರಿಗೆ ಆಯೋಜಿಸಿದ್ದ ಹೈ-ಟೀ ವ್ಯವಸ್ಥೆಗೆ ಒಟ್ಟು ೪೧ ಲಕ್ಷ ರೂಪಾಯಿ ಖರ್ಚಾಗಿದೆ. ಇದರಲ್ಲಿ ಕೊಠಡಿಗಳಿಗೆಂದು ೩೭,೫೩,೫೩೬ ರೂ., ಹೈ ಟೀಗೆ ೪,೩೫,೦೦೧ ರೂ. ಖರ್ಚಾಗಿದೆ.

ವಿಶೇಷವೆಂದರೆ, ಬಹುತೇಕ ಗಣ್ಯ ಅತಿಥಿಗಳ ವಸತಿಗಾಗಿ ಹೋಟೆಲ್‌ನಲ್ಲಿ ಕೊಠಡಿಗಳನ್ನು ಜಾತ್ಯತೀತ ಜನತಾದಳ ಪಕ್ಷ ಕಾಯ್ದರಿಸಿದ್ದರೆ, ಇವರ ವಸತಿ ವೆಚ್ಚವನ್ನು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯಾಗಿರುವ ಕುಮಾರಕೃಪ ಅತಿಥಿ ಗೃಹದ ವಸತಿ ಶಾಖೆ ಪಾವತಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೇವಲ ೭ ನಿಮಿಷದಲ್ಲಿ ಪೂರ್ಣಗೊಂಡಿತ್ತು.

ಸಾಮಾಜಿಕ ಕಾರ್ಯಕರ್ತ ಬಿ ಎಸ್‌ ಗೌಡ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಗುಲಿರುವ ಖರ್ಚು ವೆಚ್ಚದ ಮಾಹಿತಿ ದೊರೆತಿದೆ. ಮೇ 17ರಂದು ಬಿ ಎಸ್ ಯಡಿಯೂರಪ್ಪ ರಾಜಭವನದಲ್ಲಿ ಸ್ವೀಕರಿಸಿದ  ಪ್ರಮಾಣ ವಚನ ಸಮಾರಂಭಕ್ಕೆ 16 ಲಕ್ಷದ 14 ಸಾವಿರದ 750 ರುಪಾಯಿ ವೆಚ್ಚವಾಗಿತ್ತು. ಆದರೆ, ಈ ವೆಚ್ಚ ಸೇರಿದಂತೆ, ೨೦೧೩ರಲ್ಲಿ ಸಿದ್ದರಾಮಯ್ಯ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯ ಸರ್ಕಾರದ ಕುಮಾರಕೃಪಾ ಅತಿಥಿ ಗೃಹದ ವಸತಿ ಶಾಖೆಯಿಂದ ಯಾವುದೇ ವೆಚ್ಚ ಮಾಡಿಲ್ಲ ಎಂದು ಇದೇ ಅರ್ಜಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕರು ಮಾಹಿತಿ ಒದಗಿಸಿದ್ದಾರೆ.

ಮೇ ತಿಂಗಳಿನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ೨ ಮತ್ತು ೩ನೇ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಸರ್ಕಾರ ರಚನೆ ಕಸರತ್ತು ನಡೆಸಿತ್ತು. ಅಂತಿಮವಾಗಿ ಉಭಯ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಒಂದೇ ವೇದಿಕೆಯಲ್ಲಿ ತೃತೀಯ ರಂಗದ ನಾಯಕರನ್ನು ಕರೆತರುವ ಮೂಲಕ ಜಾತ್ಯತೀತ ಪಕ್ಷಗಳ ಒಗ್ಗಟ್ಟನ್ನು ಬಿಂಬಿಸಲಾಗಿತ್ತು.

ಇದನ್ನೂ ಓದಿ : ಏಳು ದಿನದಲ್ಲಿ ಒಂಬತ್ತು ದೇವಸ್ಥಾನಕ್ಕೆ ಭೇಟಿ ಕೊಟ್ಟ ಎಚ್‌ ಡಿ ಕುಮಾರಸ್ವಾಮಿ

ದೆಹಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳು, ಜೆಡಿಯುನ ರಾಷ್ಟ್ರೀಯ ನಾಯಕರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್‌ಪಿಯ ಮಾಯಾವತಿ, ಓವೈಸಿ ಅಸಾದ್ದೀನ್, ನಟ ಕಮಲ್ ಹಾಸನ್ ಸೇರಿದಂತೆ ಇತರೆ ಗಣ್ಯರಿಗೆ ಬೆಂಗಳೂರಿನ ಶಾಂಗ್ರಿಲಾ ಮತ್ತು ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ವಸತಿ ಮತ್ತು ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೆಲ್ಲದಕ್ಕೆ ಒಟ್ಟು ೪೨,೬೨,೬೩೭ ರೂ.ಖರ್ಚಾಗಿದೆ ಎಂದು ಕುಮಾರಕೃಪ ಅತಿಥಿ ಗೃಹದ ವಸತಿ ಶಾಖೆ ಮಾಹಿತಿ ನೀಡಿದೆ. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಸತಿ ಮತ್ತು ಊಟೋಪಚಾರದ ಖರ್ಚಿನ ವಿವರಗಳ ಮಾಹಿತಿಯನ್ನು ವಸತಿ ಶಾಖೆ ಒದಗಿಸಿಲ್ಲ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಒದಗಿಸಿದ್ದ (ಮೇ ೨೩, ೨೦೧೮) ತಾಜ್‌ ವೆಸ್ಟೆಂಡ್‌ನಲ್ಲಿ ವಸತಿ ಮತ್ತು ಊಟೋಪಚಾರ ವ್ಯವಸ್ಥೆಗೆ ೭,೪೨,೮೦೮ ರೂ. ಖರ್ಚಾಗಿದೆ. ಕೊಠಡಿ ವೆಚ್ಚವೆಂದು ೨,೦೦,೦೦೦ ರೂ.ಪಾವತಿಸಿದೆ. ಒಟ್ಟು ವೆಚ್ಚದಲ್ಲಿ ಊಟೋಪಚಾರಕ್ಕೆ ೧,೮೧,೯೦೦ ರೂ. ಖರ್ಚಾಗಿದೆ. ಇದಲ್ಲದೆ, ಇವರ ಹೆಸರಿನಲ್ಲಿಯೇ ಮೇ ೨೩ ಮತ್ತು ೨೪ರಂದು ಇದೇ ಹೋಟೆಲ್‌ನಲ್ಲಿ ಬೇರೆ ಕೊಠಡಿಗಳನ್ನು ಒದಗಿಸಿದ್ದು, ಇದಕ್ಕೆ ೫೨,೮೮೫ ಮತ್ತು ೩೮,೪೦೦ ರೂ.ಖರ್ಚಾಗಿದೆ.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಸತಿ, ಊಟೋಪಚಾರಕ್ಕೆ ಆಗಿರುವ ಖರ್ಚಿನ ಪ್ರತಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ವಸತಿ ಮತ್ತು ಊಟೋಪಚಾರಕ್ಕೆ ಒಟ್ಟು ೧,೮೫,೨೮೭ ರೂ., ಜೆಡಿಯುನ ರಾಷ್ಟ್ರೀಯ ನಾಯಕ ಶರದ್‌ ಯಾದವ್‌ ಅವರ ವಸತಿ ಮತ್ತು ಊಟೋಪಚಾರಕ್ಕೆ ೧,೬೭,೪೫೭ ರೂ., ಮಾಯಾವತಿ ಅವರ ವಸತಿಗೆ ೧,೪೧,೪೪೩ ರೂ., ಕಮಲ್‌ ಹಾಸನ್‌ ಅವರ ವಸತಿಗೆ ೧,೦೨,೪೦, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ವಸತಿಗೆ ೧,೦೦,೨೦೦೦ ರೂ., ಪಿಣರಾಯ್‌ ವಿಜಯನ್‌ ಅವರ ವಸತಿಗೆ ೧,೦೨,೪೦೦ ರೂ., ಕಾಂಗ್ರೆಸ್‌ ನ ಅಶೋಕ್‌ ಗೆಹ್ಲೋಟ್‌ ವಸತಿಗೆ ೧,೦೨,೪೦೦ ರೂ., ಯಾದವ್‌ ತೇಜಸ್‌ ವಸತಿಗೆ ೧,೦೨,೪೦೦ ರೂ., ಸೀತರಾಂ ಯಚೂರಿ ಅವರ ವಸತಿಗೆ ೬೪,೦೦೦ ರೂ., ಸೊರೇನ್‌ ಹೇಮಂತ್‌ ವಸತಿಗೆ ೩೮,೪೦೦ ರೂ., ಶರದ್‌ ಪವಾರ್‌ ವಸತಿಗೆ ೬೪,೦೦೦ ರೂ., ಓವೈಸಿ ಅಸಾದ್ದೀನ್‌ ವಸತಿಗೆ ೩೮,೪೦೦ ರೂ., ಬಾಬುಲಾಲ್ ಮರಾಂಡಿ ಅವರ ವಸತಿಗೆ ೪೫,೯೫೨ ರೂ.,ಖರ್ಚು ಮಾಡಿರುವುದು ತಿಳಿದು ಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More