ಸುಮತೀಂದ್ರ ಸ್ಮರಣೆ | ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ

“ನಾಡಿಗರು ತುಂಬಾ ನಿಷ್ಠುರವಾದಿ, ಹೇಳಬೇಕು ಎನಿಸಿದ್ದನ್ನು ನೇರವಾಗಿ ಹೇಳೋರು. ವ್ಯಕ್ತಿ ರಾಜಕೀಯವಾಗಿ ಸರಿಯಾಗಿರಬೇಕು, ಲಾಭ ಗಳಿಸಬೇಕು ಎನ್ನುವ ವ್ಯಕ್ತಿತ್ವ ಅವರದಲ್ಲ,” ಎಂದಿರುವ ಕವಿ ಲಕ್ಷ್ಮಣ ರಾವ್‌, ಒಡನಾಡಿ ಸುಮಂತೀದ್ರ ನಾಡಿಗರೊಂದಿಗಿನ ಸ್ನೇಹವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ

ಯಾವಾಗಲೂ ಈ ಕಡೆಯಿಂದ ‘ಗುರುಭ್ಯೋ ನಮಃ’, ಆ ಕಡೆಯಿಂದ ‘ಅರ್ಭಕೆಭ್ಯೋನಮಃ’ ಎಂದೇ ನನ್ನ ಮತ್ತು ಸುಮತೀಂದ್ರ ನಾಡಿಗರ ಮಾತು ಆರಂಭವಾಗುತ್ತಿತ್ತು. ನಾಡಿಗರು ಶ್ರೇಷ್ಠ ಕವಿಗಳಲ್ಲೊಬ್ಬರು ಎಂಬುದು ನಿರ್ವಿವಾದ. ಅಡಿಗರು ನವ್ಯಕಾವ್ಯವನ್ನು ಆರಂಭಿಸಿದ ಹೊತ್ತಲ್ಲಿ ನವ್ಯ ಚಳುವಳಿಯ ಮುಖ್ಯ ಕವಿಗಳಲ್ಲಿ ಸುಮತೀಂದ್ರ ನಾಡಿಗರು ನೆನಪಾಗುತ್ತಾರೆ. ನಾಡಿಗರು, ಚಂದ್ರಶೇಖರ ಪಾಟೀಲರು, ಪಟ್ಟಣಶೆಟ್ಟರು ‘ಸಂಕ್ರಮಣ’ ಪತ್ರಿಕೆ ಆರಂಭವಾದ ಕಾಲದಿಂದ ಬರೆಯುತ್ತಿದ್ದರು.

ಪಿ ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಹಾಗೂ ಯಶವಂತ ಚಿತ್ತಾಲರು ಕತೆಗಾರರಾಗಿ ಬಂದರು. ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರರು ನಾಟಕಕಾರರಾಗಿ ಬಂದರು, ಆ ಕಾಲದಲ್ಲಿ ಇವರೆಲ್ಲರ ನಡುವೆ ಕವಿಯಾಗಿ ಮುಖ್ಯವಾಗಿ ಕಾಣುತ್ತಿದ್ದದು ನಾಡಿಗರು ಮಾತ್ರ.

ಸುಮತೀಂದ್ರರು ಕಾದಂಬರಿ, ನಾಟಕ, ಅನುವಾದ, ಕತೆ ಎಲ್ಲ ಬರೆದರೂ ನಮಗೆ ಮುಖ್ಯವಾಗಿ ಕಾಣೋದು ಕವಿಯಾಗಿ. ನನಗೆ ವೈಯಕ್ತಿಕವಾಗಿ ನನ್ನ ಕಾವ್ಯಗುರುಗಳು ಅವರು. ನಾನು ಲಂಕೇಶರ ಶಿಷ್ಯ, ಲಂಕೇಶರು-ನಾಡಿಗರು ಆಪ್ತ ಸ್ನೇಹಿತರು. ಹೀಗಾಗಿ ನಾಡಿಗರು ನನಗೆ ಹತ್ತಿರವಾದರು. ನನಗೆ ಓದಿನ ಕಾಲದಿಂದಲೂ ನಾಡಿಗರ ಜೊತೆ ಅವಿನಾಭಾವ ಸಂಬಂಧ. ನನ್ನ ಪುಸ್ತಕಗಳಿಗೂ ವಿಮರ್ಶೆ, ಮುನ್ನಡಿ ಬರೆದಿದ್ದಾರೆ.

ನಾಡಿಗರು ತುಂಬಾ ನಿಷ್ಠುರವಾದಿ, ಹೇಳಬೇಕು ಎನಿಸಿದ್ದನ್ನು ನೇರವಾಗಿ ಹೇಳೋರು. ವ್ಯಕ್ತಿ, ರಾಜಕೀಯವಾಗಿ ಸರಿಯಾಗಿರಬೇಕು, ಲಾಭ ಗಳಿಸಬೇಕು ಎನ್ನುವ ವ್ಯಕ್ತಿತ್ವ ಅವರದಲ್ಲ. ತಮಗೆ ಅನಿಸಿದ್ದನ್ನು ಖಡಾಖಂಡಿತವಾಗಿ ಹೇಳಿದರು, ಹಾಗೇ ಬದುಕಿದರು.  ನಾನು ಕಂಡ ಹಾಗೆ ಬಹಳ ಚಟುವಟಿಕೆಯ, ಲವಲವಿಕೆಯ ವ್ಯಕ್ತಿ ಅವರು. ಅವರ ಸುತ್ತಲಿನವರನ್ನು ಹಾಗೇ ಇಟ್ಟುಕೊಳ್ಳಲು ಬಯಸುತ್ತಿದ್ದರು.

ಇದನ್ನೂ ಓದಿ : ಸ್ಮರಣೆ | ನವ್ಯ-ರಮ್ಯಗಳ ಬೆರೆಸಿ ಕಾವ್ಯಕೃಷಿ ಮಾಡಿದ ಕವಿ ಸುಮತೀಂದ್ರ ನಾಡಿಗ

ನನ್ನ ಮತ್ತು ಅವರ ನಡುವಿನ ಗುರು-ಶಿಷ್ಯ ಸಂಬಂಧ ಇದ್ದರೂ ಅವರ ಮಾತಿನ ಧಾಟಿ ವಿಮರ್ಶೆಯಿಂದಲೇ ಕೂಡಿರುತ್ತಿತ್ತು. ಮತ್ತೊಬ್ಬರನ್ನು ಟೀಕಿಸಿ ಮಾತಾಡುತ್ತಿದ್ದರಿಂದ, ಕಟು ಟೀಕೆಯಿಂದ ಬರೆಯುತ್ತಿದ್ದರಿಂದ ಅನೇಕರ ಸ್ನೇಹ ಕಳೆದುಕೊಂಡಿದ್ದರು. ಹೀಗಾಗಿ, ಅವರಿಗೆ ಸಿಗಬೇಕಿದ್ದ ಪುರಸ್ಕಾರ, ಗೌರವಗಳು ಸಿಗಲೇ ಇಲ್ಲ. ಪ್ರಶಸ್ತಿಗಾಗಿ ತಲೆಕಡಿಸಿಕೊಳ್ಳುತ್ತಿರಲಿಲ್ಲ. ಮತ್ತೊಬ್ಬರ ತಪ್ಪನ್ನು ಹುಡುಕುತ್ತಿದ್ದರಿಂದಲೇ ಅವರನ್ನು 'ಪತ್ತೇದಾರ ಪುರುಷೋತ್ತಮ' ಎಂದು ಆಪ್ತ ವಲಯದಲ್ಲಿ ಕರೆಯುತ್ತಿದ್ದರು. ಅಂತಹ ಗುರುವನ್ನು ಕೆಳೆದುಕೊಂಡಿದ್ದಕ್ಕೆ ದುಃಖವಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More