ಸ್ವಚ್ಛ ಭಾರತದ ಆಶಯವನ್ನೇ ಪ್ರಶ್ನಿಸಿದ ಶಿವಮೊಗ್ಗದ ಮ್ಯಾನ್‌ಹೋಲ್ ಸಾವುಗಳು

ಎರಡು ಲಕ್ಷ ಕೋಟಿ ಅನುದಾನದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನ ಕೇವಲ ರಸ್ತೆ ಕಸ ಗುಡಿಸಲು, ಶೌಚಾಲಯ ನಿರ್ಮಾಣಕ್ಕೆ ನೆರವು ನೀಡಲು ಸೀಮಿತವಾದರೆ, ಮಲ ಹೊರುವ, ಮಲ ಬಾಚುವಂತಹ ಅನಾಗರಿಕ ಮತ್ತು ಅವಮಾನಕಾರಿ ಅಪಾಯದ ಕೆಲಸಗಳಿಗೆ ಇತಿಶ್ರೀ ಹಾಡುವುದು ಯಾವಾಗ?

ಒಂದೆಡೆ, ಸ್ವಚ್ಛ ಭಾರತ ಅಭಿಯಾನದ ಮೂಲಕ ಇಡೀ ದೇಶವನ್ನು ಶುಭ್ರಗೊಳಿಸಲು ಸರ್ಕಾರ ಕಳೆದ ಮೂರು ವರ್ಷಗಳಿಂದ ಬರೋಬ್ಬರಿ ೨ ಲಕ್ಷ ಕೋಟಿ ರು.ಗಳ ಬೃಹತ್ ಅಭಿಯಾನ ನಡೆಸುತ್ತಿದೆ. ಆ ಅಭಿಯಾನದ ಪ್ರಚಾರಕ್ಕಾಗಿ ಪ್ರತಿವರ್ಷ ೫೦೦-೬೦೦ ಕೋಟಿ ರು. ವ್ಯಯ ಮಾಡಲಾಗುತ್ತಿದೆ. ಆದರೆ, ಶೌಚಾಲಯ ಗುಂಡಿ ಮತ್ತು ಒಳಚರಂಡಿಗಳ ಸ್ವಚ್ಛತೆಗೆ ಮಾನವ ಬಳಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ಬಳಿ ಹಣವಿಲ್ಲ!

ಹೌದು, ಸರ್ಕಾರಗಳ ಇಂತಹ ಧೋರಣೆಯ ಫಲವಾಗಿ ಶಿವಮೊಗ್ಗ ನಗರದಲ್ಲಿ ಸೋಮವಾರ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಇಬ್ಬರು ಬಡ ಕೂಲಿಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಒಳಚರಂಡಿ ಕಾಮಗಾರಿ ಪೂರ್ಣಗೊಂಡು, ಹೊಸ ಮ್ಯಾನ್‌ಹೋಲ್‌ಗಳ ಸ್ವಚ್ಛತೆ ಪರಿಶೀಲನೆ ವೇಳೆ ಈ ದುರಂತ ಸಂಭವಿಸಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಡೆಯುತ್ತಿರುವ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆ, ಕಳೆದ ಕೆಲವು ತಿಂಗಳ ಹಿಂದೆ ಪೂರ್ಣಗೊಂಡ ಕಾಮಗಾರಿಯನ್ನು ಇದೀಗ ನಡುಮಳೆಗಾಲದಲ್ಲಿ ಪರಿಶೀಲನೆ ಆರಂಭಿಸಿತ್ತು. ೧೮-೨೦ ಅಡಿ ಆಳದ, ಎರಡು ಅಡಿ ಅಗಲದ ಕಿರಿದಾದ ಅಪಾಯಕಾರಿ ಮ್ಯಾನ್‌ಹೋಲ್‌ಗಳಲ್ಲಿ ಕಟ್ಟಿಕೊಂಡಿದ್ದ ಕಸ-ಮಣ್ಣು ಸ್ವಚ್ಛತೆಗಾಗಿ ನೆರೆಯ ಜಿಲ್ಲೆ ದಾವಣಗೆರೆಯ ಜಗಳೂರಿನಿಂದ ಕೂಲಿಕಾರ್ಮಿಕರನ್ನು ಕರೆತಂದು ಬಳಸಿಕೊಳ್ಳಲಾಗಿತ್ತು. ಹಾಗೆ ಜೀವಕಂಟಕ ಮ್ಯಾನ್‌ಹೋಲ್‌ಗೆ ಇಳಿದ ಜಗಳೂರು ತಾಲೂಕು ಬಿಳಿಚೋಡು ಗ್ರಾಮದ ಅಪ್ರಾಪ್ತ ವೆಂಕಟೇಶ್ (೧೭) ಮತ್ತು ಅಂಜನಪ್ಪ (೩೭) ಎಂಬುವರು ಗುಂಡಿಯಲ್ಲೇ ಸಾವು ಕಂಡಿದ್ದಾರೆ.

ಶಿವಮೊಗ್ಗ ನಗರದ ನ್ಯೂಮಂಡ್ಲಿ ಪ್ರದೇಶದಲ್ಲಿ ಒಳಚರಂಡಿ ಸ್ವಚ್ಛತೆ ವೇಳೆ ಈ ದುರಂತ ಸಂಭವಿಸಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೆ, ಅನನುಭವಿ ಕಾರ್ಮಿಕರನ್ನು ಇಂತಹ ಅಪಾಯಕಾರಿ ಕೆಲಸಕ್ಕೆ ಬಳಸಿಕೊಂಡಿರುವ ಆಂಧ್ರಪ್ರದೇಶ ಮೂಲದ ಕಾಮಗಾರಿ ಗುತ್ತಿಗೆ ಪಡೆದಿರುವ ವೆಂಕಟಸಾಯಿ ಅಸೋಸಿಯೇಟ್ಸ್ ಸಂಸ್ಥೆ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರುಗಳು ಕಾಮಗಾರಿಯ ವೇಳೆ ಸ್ಥಳದಲ್ಲಿ ಇರದೆ ನಿರ್ಲಕ್ಷ್ಯ ಎಸಗಿದ್ದಾರೆ ಎಂಬುದು ಮೃತರ ಸಹಕಾರ್ಮಿಕರ ಆರೋಪ.

“ಘಟನೆಯ ಸಂಬಂಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ತಿಪ್ಪೇಸ್ವಾಮಿ ಎಂಬಾತನನ್ನು ವಶಕ್ಕೆ ಪಡೆದಿದ್ದು, ಒಳಚರಂಡಿ ಮಂಡಳಿಯ ಎಂಜಿನಿಯರ್ ತಲೆಮರೆಸಿಕೊಂಡಿದ್ದಾನೆ. ಒಳಚರಂಡಿ ಮಂಡಳಿ ಅಧಿಕಾರಿಗಳು ಮತ್ತು ಗುತ್ತಿಗೆ ಸಂಸ್ಥೆ ಮಾಲೀಕರ ವಿರುದ್ಧ ಮ್ಯಾನ್ಯುವಲ್ ಸ್ಕೇವೇಂಜರ್ ನಿಷೇಧ ಕಾಯ್ದೆ, ಪರಿಶಿಷ್ಟ ಜಾತಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ೩೦೪ರ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ,” ಎಂದು ಸಿಪಿಐ ಹರೀಶ್ ಪಟೇಲ್ ಅವರು ದಿ ಸ್ಟೇಟ್’ಗೆ ಮಾಹಿತಿ ನೀಡಿದ್ದಾರೆ.

ಆದರೆ, ಈ ಗುತ್ತಿಗೆದಾರರು ಚಿತ್ರದುರ್ಗ ಮತ್ತು ದಾವಣಗೆರೆಯ ಗಡಿಭಾಗದ ಹಳ್ಳಿಗಳಿಂದ ಸುಮಾರು ೪೦ ಮಂದಿ ಕೂಲಿಕಾರ್ಮಿಕರನ್ನು ಕರೆತಂದು ಈ ಅಪಾಯಕಾರಿ ಕೆಲಸಕ್ಕೆ ಬಳಸಿಕೊಂಡಿದ್ದು, ಕಳೆದ ೨೦ ದಿನಗಳಿಂದ ನಿರಂತರವಾಗಿ ವಾರ್ಡ್ ನಂಬರ್ ೨೮ರಲ್ಲಿ ಇತ್ತೀಚೆಗೆ ನಿರ್ಮಾಣ ಪೂರ್ಣವಾಗಿದ್ದ ಒಳಚರಂಡಿಯ ಅಂತಿಮ ಪರಿಶೀಲನೆ ನಡೆಸುತ್ತಿದ್ದರು. ಆ ಕಾರ್ಮಿಕರೆಲ್ಲ ಮೂಲತಃ ಕೃಷಿ ಮತ್ತು ಗಾರೆ ಕೆಲಸದವರಾಗಿದ್ದು, ಒಳಚರಂಡಿ ವ್ಯವಸ್ಥೆ ಬಗ್ಗೆಯಾಗಲೀ, ಆ ಕೆಲಸದ ಬಗ್ಗೆಯಾಗಲೀ ಯಾವುದೇ ಮಾಹಿತಿ ಇರಲಿಲ್ಲ. ಗುತ್ತಿಗೆದಾರರಾಗಲೀ, ಮೇಸ್ತ್ರಿಯಾಗಲೀ, ಕನಿಷ್ಠ ಸರ್ಕಾರಿ ಎಂಜಿನಿಯರುಗಳಾಗಲೀ, ಯಾರೂ ಆ ಅಮಾಯಕ ಕೂಲಿಗಳಿಗೆ ಈ ಕೆಲಸದ ಅಪಾಯ ಮತ್ತು ಮುಂಜಾಗ್ರತೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸ್ವತಃ ಕಾರ್ಮಿಕರೇ ಹೇಳಿದ್ದಾರೆ.

“ಆರಂಭದಲ್ಲಿ ಕೂಲಿ ಕೆಲಸ ಅರಸುತ್ತಿದ್ದ ಈ ಕಾರ್ಮಿಕರನ್ನು ಯುಜಿಡಿ ಕಾಮಗಾರಿ ಸ್ಥಳದಲ್ಲಿದ್ದ ಹೆಚ್ಚುವರಿ ಮಣ್ಣು ತೆರವು ಮಾಡುವ ಕೆಲಸಕ್ಕೆಂದು ಕರೆತಂದಿದ್ದ ಮೇಸ್ತ್ರಿ ವೀರೇಶ್ ಎಂಬಾತ, ಬಳಿಕ ಮ್ಯಾನ್‌ಹೋಲ್‌ಗಳಿಗೆ ಇಳಿದು ಸ್ವಚ್ಛಗೊಳಿಸುವಂತೆ ಮತ್ತು ಸಕ್ಕರ್ ಮಷೀನ್ ಕೊಳವೆ ಜೋಡಿಸುವಂತೆ ಒತ್ತಾಯಿಸಿದ್ದ. ಅದಕ್ಕೆ ಕಾರ್ಮಿಕರು ಒಪ್ಪದಿದ್ದಾಗ ಅವರಿಗೆ ಸಂಬಳವನ್ನೇ ನೀಡುವುದಿಲ್ಲ ಎಂದು ಬೆದರಿಸಿದ್ದ. ಹಾಗಾಗಿ, ಅನಿವಾರ್ಯವಾಗಿ ಅವರು ಈ ಅಪಾಯಕಾರಿ ಕೆಲಸಕ್ಕೆ ಇಳಿದಿದ್ದರು. ಆದರೆ, ಅವರಿಗೆ ಆಮ್ಲಜನಕ ಸಿಲಿಂಡರ್, ಹೆಲ್ಮೆಟ್, ಶೂ ಮತ್ತಿತರ ಕನಿಷ್ಠ ಸಲಕರಣೆಗಳನ್ನು ಕೂಡ ಒದಗಿಸಿರಲಿಲ್ಲ. ಅಷ್ಟಕ್ಕೂ ಈ ಘಟನೆ ನಡೆದಾಗ ಸ್ಥಳದಲ್ಲಿ ಮೇಸ್ತ್ರಿಯಾಗಲೀ, ಎಂಜಿನಿಯರ್‌ಗಳಾಗಲೀ ಯಾರೂ ಇರಲೇ ಇಲ್ಲ. ಜೀವಕಂಟಕ ಮ್ಯಾನ್‌ಹೋಲ್‌ಗಳಿಗೆ ಅಮಾಯಕರನ್ನು ಇಳಿಸಿ ಅವರೆಲ್ಲ ಮನೆ ಸೇರಿಕೊಂಡಿದ್ದರು,” ಎಂಬುದು ಮೃತ ಕಾರ್ಮಿಕರ ಸ್ನೇಹಿತ ಮಂಜು ಅವರ ಆರೋಪ.

ಅಪ್ರಾಪ್ತನನ್ನು ಕರೆತಂದು, ಯಾವ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೆ ಆತನನ್ನು ಅಪಾಯಕಾರಿ ಕೆಲಸಕ್ಕೆ ಬಳಸಿಕೊಂಡಿರುವ ಗುತ್ತಿಗೆದಾರ ಮತ್ತು ಆತನ ಕೆಲಸದ ಉಸ್ತುವಾರಿ ನೋಡಬೇಕಾದ ಹೊಣೆಗಾರಿಕೆಯ ಒಳಚರಂಡಿ ಮಂಡಳಿಯ ಎಂಜಿನಿಯರ್ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸಬೇಕಿದೆ. ಈ ದುರಂತಕ್ಕೆ ಅಧಿಕಾರಿಗಳನ್ನೂ ಸಮಾನ ಹೊಣೆಗಾರರನ್ನಾಗಿ ಮಾಡಬೇಕಿದೆ. ಮ್ಯಾನುವಲ್ ಸ್ಕೇವೇಂಜರ್ ಪ್ರಿವೆನ್ಷನ್ ಆಕ್ಟ್ ಅಡಿ ಕಠಿಣ ಕ್ರಮ ಜಾರಿಯಾಗಬೇಕು ಎಂದು ಆಗ್ರಹಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಮತ್ತು ನಗರಪಾಲಿಕೆಗಳು, ನ್ಯಾಯಾಲಯಗಳ ಆದೇಶದ ಪ್ರಕಾರ ಮೃತರಿಗೆ ಪರಿಹಾರ ವಿತರಣೆ ಮಾಡಿದ್ದು, ನಗರಪಾಲಿಕೆಯಿಂದ ತಲಾ ಹತ್ತು ಲಕ್ಷ ರು. ಪರಿಹಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ಎಂಟು ಲಕ್ಷ ರು. ಪರಿಹಾರ ಮಂಜೂರು ಮಾಡಲಾಗಿದೆ.

ಒಳಚರಂಡಿ ಮತ್ತು ಶೌಚಾಲಯ ಗುಂಡಿಗಳ ಸ್ವಚ್ಛತೆಗೆ ಮಾನವ ಬಳಕೆ ಮಾಡಕೂಡದು. ಹಾಗೊಂದು ವೇಳೆ, ತೀರಾ ಅನಿವಾರ್ಯವೆನಿಸಿದ್ದಲ್ಲಿ ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಅಪಾಯದ ಅರಿವು ಮತ್ತು ಸುರಕ್ಷತಾ ಕ್ರಮಗಳ ತರಬೇತಿ ನೀಡಿ ಎಲ್ಲ ಸುರಕ್ಷಿತ ಮತ್ತು ತುರ್ತು ಚಿಕಿತ್ಸೆಯ ಸೌಲಭ್ಯಗಳೊಂದಿಗೆ ಕಾರ್ಮಿಕರನ್ನು ಬಳಸಿಕೊಳ್ಳಬಹುದು. ಆದರೆ, ಅಂತಹ ಸಂದರ್ಭದಲ್ಲಿ ಒಂದು ವೇಳೆ ಪ್ರಾಣಹಾನಿ ಸಂಭವಿಸಿದ್ದಲ್ಲಿ ಸರ್ಕಾರ ನತದೃಷ್ಟರ ಕುಟುಂಬಕ್ಕೆ ೧೦ ಲಕ್ಷ ರು. ಪರಿಹಾರ ನೀಡಬೇಕು ಎಂಬ ನ್ಯಾಯಾಲಯಗಳ ಆದೇಶಗಳಿವೆ. ಆದರೆ, ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನೂ, ಕಾನೂನು ನಿಯಮಗಳನ್ನೂ, ಕೊನೆಗೆ ಕನಿಷ್ಠ ಮನುಷ್ಯತ್ವದ ಪ್ರಶ್ನೆಯನ್ನೂ ಕೂಡ ಗಾಳಿಗೆ ತೂರಲಾಗಿದೆ.

ಇದನ್ನೂ ಓದಿ : ಸ್ವಚ್ಛ ಭಾರತ ಗುರಿ ಸಾಧನೆಗಾಗಿ ಬಡವರಿಗೆ ಬರೆ ಎಳೆಯುತ್ತಿವೆ ಸರ್ಕಾರಗಳು

ಆದರೆ, ಹಣಕಾಸಿನ ಪರಿಹಾರಗಳು ಆದ ಜೀವಹಾನಿಯನ್ನು ಸರಿದೂಗಿಸಬಲ್ಲವೇ ಎಂಬುದು ಪ್ರಶ್ನೆ. ಆ ಪ್ರಶ್ನೆಯೊಂದಿಗೇ ಕೇಳಲೇಬೇಕಾದ ಹಲವು ಪ್ರಶ್ನೆಗಳ ಸರಣಿ ಕೂಡ ಬಿಚ್ಚಿಕೊಳ್ಳದೆ ಇರದು. ಮಹಾತ್ಮ ಗಾಂಧಿಯವರ ಆದರ್ಶದ ಮಾತನಾಡುತ್ತ, ಸ್ವಚ್ಛ ಭಾರತದ ಆಂದೋಲನಕ್ಕೆ ಚಾಲನೆ ನೀಡಿರುವುದು ನಿಜಕ್ಕೂ ಸ್ವಾಗತಾರ್ಹ ಕ್ರಮವೇ. ಆದರೆ, ಎರಡು ಲಕ್ಷ ಕೋಟಿ ಅನುದಾನದ ಅಂಥದ್ದೊಂದು ಬೃಹತ್‌ ಮಹತ್ವಾಕಾಂಕ್ಷಿ ಅಭಿಯಾನ ಕೇವಲ ರಸ್ತೆ ಕಸ ಗುಡಿಸುವ, ಶೌಚಾಲಯ ನಿರ್ಮಾಣಕ್ಕೆ ನೆರವು ನೀಡುವ ಮಟ್ಟಿಗೆ ಮಾತ್ರ ಸೀಮಿತವಾದರೆ, ದೇಶದ ಸ್ವಚ್ಛತಾ ವ್ಯವಸ್ಥೆಯ ಮೂಲದಲ್ಲಿರುವ ಇಂತಹ ಮಲ ಹೊರುವ, ಮಲ ಬಾಚುವಂತಹ ಅನಾಗರಿಕ ಮತ್ತು ಅವಮಾನಕಾರಿ ಅಪಾಯದ ಕೆಲಸಗಳಿಗೆ ಇತಿಶ್ರೀ ಹಾಡುವುದು ಯಾವಾಗ? ನಾಗರಿಕ ಸಮಾಜವಾಗಿ ನಾವು ತಲೆತಗ್ಗಿಸುವಂತಹ ಅತ್ಯಂತ ಅಮಾನವೀಯ ಕೃತ್ಯಗಳನ್ನು ಪರೋಕ್ಷವಾಗಿ ಪೋಷಿಸಿಕೊಳ್ಳುತ್ತಲೇ ಸ್ವಚ್ಛ ಭಾರತದ ಜಪ ಮಾಡುವುದು ನಾಚಿಕೆಗೇಡಲ್ಲವೇ? ವಾರ್ಷಿಕ ಆಂದೋಲನದ ಪ್ರಚಾರಕ್ಕಾಗಿಯೇ ಸರಾಸರಿ ಐದು ನೂರು ಕೋಟಿ ವ್ಯಯ ಮಾಡುವ ಸ್ವಚ್ಛ ಭಾರತ್ ಮಿಷನ್‌ಗೆ, ಒಳಚರಂಡಿ, ಮ್ಯಾನ್‌ಹೋಲ್‌ ಮತ್ತು ಶೌಚಾಲಯ ಗುಂಡಿ ಸ್ವಚ್ಛತೆಗೆ ಅಗತ್ಯ ಯಂತ್ರೋಪಕರಣಗಳನ್ನು ಸರಬರಾಜು ಮಾಡಲಾಗುವುದಿಲ್ಲವೇ? ಅಥವಾ ಆ ಕೆಲಸಗಳನ್ನು ಮಾಡುವ ತಳಮಟ್ಟದ ಜನರ ಬದುಕಿನ ನೈರ್ಮಲ್ಯದ ಬಗ್ಗೆ, ಅವರ ಶಾಪಗ್ರಸ್ಥ ಸ್ಥಿತಿಯ ಮುಕ್ತಿಗೆ ಲಕ್ಷಾಂತರ ಕೋಟಿ ಯೋಜನೆಯಲ್ಲಿ ಅವಕಾಶವಿಲ್ಲವೇ? ಎಂಬ ಸಾಲು-ಸಾಲು ಪ್ರಶ್ನೆಗಳು ಏಳುತ್ತವೆ.

ಸದ್ಯಕ್ಕೆ ಈ ಇಂತಹ ಪ್ರಶ್ನೆಗಳ ಸರಣಿ ಬೆಳೆಯುತ್ತಲೇ ಇದೆ. ಈ ನಡುವೆ, ವೆಂಕಟೇಶ ಮತ್ತು ಅಂಜನಪ್ಪ ಅವರಂಥ ಅಮಾಯಕ ಶಾಪಗ್ರಸ್ಥರ ಬದುಕು ಕಮರುತ್ತಲೇ ಇದೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More