ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಸುಪ್ರೀಂ ನ್ಯಾಯಮೂರ್ತಿಯಾಗಿ ಕೆ ಎಂ ಜೋಸೆಫ್ ಅಧಿಕಾರ ಸ್ವೀಕಾರ

ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ಕೆ ಎಂ ಜೋಸೆಫ್ ಅವರು ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿಲಿದ್ದಾರೆ. ಇವರೊಂದಿಗೆ ಇಂದಿರಾ ಬ್ಯಾನರ್ಜಿ ಹಾಗೂ ವಿನೀತ್ ಶರಣ್ ಅವರು ಕೂಡ ಅಧಿಕಾರ ಸ್ವೀಕರಿಸಲಿದ್ದಾರೆ. ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡುವ ಹಾಗೂ ಅವರ ಸೇವಾ ಹಿರಿತನ ಸ್ಥಾನವನ್ನು ಕೆಳಗಿಳಿಸಿದ ಕೇಂದ್ರ ಸರ್ಕಾರ ವಿರುದ್ಧ ಕೊಲಿಜಿಯಂ ಅಸಮಾಧಾನ ವ್ಯಕ್ತಪಡಿಸುತ್ತಲೇ ಇತ್ತು. ಪ್ರಮಾಣ ಸ್ವೀಕಾರ ಪಟ್ಟಿಯಲ್ಲಿ ಜೋಸೆಫ್ ಅವರಿಗಿಂತ ವಯಸ್ಸಿನಲ್ಲಿ ಕಿರಿಯರಾದವರ ಹೆಸರನ್ನು ಮೊದಲು ಸೇರಿಸಲಾಗಿತ್ತು. ಆದರೆ ಕೊಲಿಜಿಯಂ ಆಕ್ಷೇಪಣೆ ನಂತರ ಸೇವಾ ಹಿರಿತನದ ಆಧಾರದ ಮೇಲೆ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಶಾಸಕರು, ಸಂಸದರನ್ನು ಭೇಟಿಯಾಗಲಿರುವ ಸಿಎಂ ಎಚ್‌ಡಿಕೆ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಶಾಸಕರು ಹಾಗೂ ಸಂಸದರನ್ನು ಭೇಟಿಯಾಗಲಿದ್ದಾರೆ. ಸಂಸದರು ಮತ್ತು‌ ಶಾಸಕರ ಭೇಟಿಯ ಸಂದರ್ಭದಲ್ಲಿ ವಿವಿಧ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಯಾವೆಲ್ಲ ಶಾಸಕರು ಮತ್ತು ಸಂಸದರು ಪಾಲ್ಗೊಳ್ಳಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ಮೋಟಾರು ವಾಹನ ತಿದ್ದುಪಡಿ ಮಸೂದೆ-೨೦೧೭ ಹಿಂಪಡೆಯಬೇಕು ಹಾಗೂ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಿಬೇಕು ಎಂದು ಒತ್ತಾಯಿಸಿ ಇಂದು ರಾಷ್ಟ್ರಾದ್ಯಂತ ಸಾರಿಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಆದರೆ ಕರ್ನಾಟಕದಲ್ಲಿ, ಕೆಲ ವಾಹನ ಮಾಲೀಕರ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬಸ್ ಮತ್ತು ಟ್ಯಾಕ್ಸಿ ಸೇವೆ ಇರಲಿದೆ.

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಹಾರಾಷ್ಟ್ರ ಸರ್ಕಾರಿ ನೌಕರರ ಮುಷ್ಕರ

ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರ ಸರ್ಕಾರಿ ನೌಕರರ ಸಂಘಟನೆ ಇಂದಿನಿಂದ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. 1.5 ಲಕ್ಷ ಗೆಜೆಟೆಡ್ ಗ್ರೂಪ್ ನೌಕರರು ಸೇರಿದಂತೆ ಒಟ್ಟು 4. 5 ಲಕ್ಷ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. 7ನೇ ವೇತನ ಆಯೋಗ ಜಾರಿ ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ಈವರೆಗೂ ಪ್ರತಿಭಟನೆ ನಡೆದಿದ್ದು, ಸರ್ಕಾರ ಮಾತ್ರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಮೂರು ದಿನಗಳ ಮುಷ್ಕರಕ್ಕೆ ಸರ್ಕಾರಿ ನೌಕರರು ಮುಂದಾಗಿದ್ದಾರೆ.

ಪೆಟ್ರಾ ಕ್ವಿಟೋವಾ, ಕೊಂಟಾವಿಟ್ ಹಣಾಹಣಿ

ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿಂದು ಮಾಜಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೊವಾ, ಅನೆಟ್ ಕೊಂಟಾವಿಟ್ ವಿರುದ್ಧ ಸೆಣಸಲಿದ್ದಾರೆ. ಇಸ್ಟೋನಿಯಾದ ಕೊಂಟಾವಿಟ್ ಎದುರು ಜೆಕ್ ಗಣರಾಜ್ಯದ ಕ್ವಿಟೋವಾ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮೊದಲ ಸುತ್ತಿನ ಪಂದ್ಯದಲ್ಲಿ ಕೊಂಟಾವಿಟ್, ರಷ್ಯಾದ ಎಕ್ತರಿನಾ ಮಕರೋವಾ ವಿರುದ್ಧ ೪-೬, ೬-೩, ೬-೧ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು, ಪ್ರಬಲ ಪ್ರತಿರೋಧ ಒಡ್ಡುವ ಸಾಧ್ಯತೆ ಇದೆ. ಇನ್ನು, ಮರಿಯಾ ಶರಪೋವಾ ಕೂಡಾ ಇಂದು ಕಣಕ್ಕಿಳಿಯಲಿದ್ದಾರೆ. ಸೋಮವಾರ ನಡೆದ ಬಲ್ಗೇರಿಯಾದ ಸೆಸಿಲ್ ಕರಾಂಟ್‌ಚೇವಾ ವಿರುದ್ಧದ ಹಣಾಹಣಿಯಲ್ಲಿ ಶರಪೋವಾ ೪-೧ ಮುನ್ನಡೆ ಸಾಧಿಸಿದ್ದ ವೇಳೆ ಪಂದ್ಯ ಅಮಾನತುಗೊಂಡಿದ್ದು, ಇಂದು ಮುಂದುವರೆಯಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More