ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಳ; ಸುಪ್ರೀಂ ಕೋರ್ಟ್‌ ಆಕ್ರೋಶ

ಪ್ರಕರಣವೊಂದರ ವಿಚಾರಣೆ ವೇಳೆ, ಅತ್ಯಾಚಾರ ಹೆಚ್ಚಳದ ಕುರಿತು ಆತಂಕ ವ್ಯಕ್ತಪಡಿಸಿರುವ ಜಸ್ಟೀಸ್‌ ಎಂ ಬಿ ಲೋಕೂರ್‌‌, ದೀಪಕ್‌ ಗುಪ್ತಾ ಹಾಗೂ ಕೆ ಎಂ ಜೋಸೆಫ್‌ ಅವರನ್ನೊಳಗೊಂಡ ಪೀಠವು, ಬಿಹಾರ ಮತ್ತು ಉ.ಪ್ರದೇಶಗಳಲ್ಲಿ ಬೆಳಕಿಗೆ ಬಂದ ಆಘಾತಕಾರಿ ಪ್ರಕರಣ ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದೆ

ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಘಟನೆಗಳ ಬಗ್ಗೆ ಧ್ವನಿ ಎತ್ತಿರುವ ಸುಪ್ರೀಂ ಕೋರ್ಟ್, ದೇಶದ ಎಲ್ಲೆಡೆ ವ್ಯಾಪಿಸಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಇಲಾಖೆಯ ದತ್ತಾಂಶಗಳನ್ನು ಉಲ್ಲೇಖಿಸಿರುವ ಪೀಠವು, ಪ್ರತಿ ಆರು ಗಂಟೆಗೆ ಒಬ್ಬ ಮಹಿಳೆಯ ಅತ್ಯಾಚಾರವಾಗುತ್ತದೆ ಎಂದು ತಿಳಿಸಿದೆ.

ಜಸ್ಟೀಸ್‌ ಎಂ ಬಿ ಲೋಕೂರ್‌‌, ದೀಪಕ್‌ ಗುಪ್ತಾ ಹಾಗೂ ಕೆ ಎಂ ಜೋಸೆಫ್‌ ಅವರನ್ನೊಳಗೊಂಡ ಪೀಠವು, “2016ರಲ್ಲಿ 38,947 ಮಹಿಳೆಯರ ಅತ್ಯಾಚಾರವಾಗಿದ್ದು, ದೇಶದ ಎಲ್ಲ ಪ್ರದೇಶಗಳಲ್ಲೂ ಲೈಂಗಿಕ ದೌರ್ಜನ್ಯದ ಬಗ್ಗೆ ವರದಿಯಾಗಿದೆ,” ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ವಾರ ಬಿಹಾರದ ಮುಜಫರ್ಪುರ ಬಾಲಕಿಯರ ಆಶ್ರಯ ಗೃಹದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದ್ದಲ್ಲದೆ, ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಬಿಹಾರ ಸರ್ಕಾರ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ನೋಟಿಸ್‌ ಜಾರಿ ಮಾಡಿದೆ.

ಮುಜಫರ್‌ಪುರ ಬಾಲಕಿಯರ ಗೃಹದಲ್ಲಿ ಆಶ್ರಯ ಪಡೆದಿದ್ದ 34 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಈ ಹಿಂದೆ ಬೆಳಕಿಗೆ ಬಂದು, ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, 34 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಖಚಿತವಾಗಿದೆ. ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಆಶ್ರಯ ಗೃಹದಲ್ಲಿರುವ ಅಧಿಕಾರರೂಢರಿಗೆ ಹತ್ತಿರವಿರುವವರು ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಪ್ರಕರಣವನ್ನು ಮುಂಬೈ ಮೂಲದ ಟಾಟಾ ಇನ್ಸ್‌ಟಿಟ್ಯೂಟ್ ಆಫ್‌ ಸೋಶಿಯಲ್‌ ಸೈನ್ಸ್‌‌ ಸಂಸ್ಥೆ ಬಯಲಿಗೆಳೆದಿತ್ತು.

ಇದೇ ಮಾದರಿಯ ಘಟನೆ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ ನಡೆದದ್ದು ಬೆಳಕಿಗೆ ಬಂದು, ಮಂಗಳವಾರ ಸಂಸತ್‌ನಲ್ಲಿ ಕೋಲಾಹಲ ಸೃಷ್ಟಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು, “ದಿಯೋರಿಯಾ ಜಿಲ್ಲೆಯ ಆಶ್ರಯ ಗೃಹದಲ್ಲಿ ನಡೆದ ಘಟನೆ ದುರದೃಷ್ಟಕರ ಮತ್ತು ಗಂಭೀರವಾದದ್ದು,” ಎಂದು ಹೇಳಿದ್ದಾರೆ. ಜೊತೆಗೆ, “ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರು ಹಾಗೂ ಈ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದವರು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರರು,” ಎಂದು ಆಶ್ವಾಸನೆ ನೀಡಿದ್ದಾರೆ.

ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಸುಮಾರು 300 ಕಿಮೀ ದೂರದಲ್ಲಿರುವ ದಿಯೋರಿಯಾ ಜಿಲ್ಲೆಯ ಆಶ್ರಯ ಗೃಹದಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪ ಕೇಳಿಬಂದಿತ್ತು. ಆಶ್ರಯ ಗೃಹದಿಂದ ತಪ್ಪಿಸಿಕೊಂಡಿದ್ದ ಬಾಲಕಿಯೋರ್ವಳು ಸಮೀಪದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. “ಆಶ್ರಯ ಗೃಹಕ್ಕೆ ರಾತ್ರಿ ವೇಳೆ ಕೆಂಪು, ಬಿಳಿ ಹಾಗೂ ಕಪ್ಪು ಕಾರುಗಳಲ್ಲಿ ಬರುತ್ತಿದ್ದ ಅಪರಿಚಿತ ವ್ಯಕ್ತಿಗಳು ಹುಡುಗಿಯರನ್ನು ಕರೆದುಕೊಂಡು ಹೋಗಿ ಮರುದಿನ ಬೆಳಿಗ್ಗೆ ವಾಪಸ್ಸು ತಂದುಬಿಡುತ್ತಿದ್ದರು. ಆಶ್ರಯ ಗೃಹದಲ್ಲಿ 15 ರಿಂದ 18 ವರ್ಷ ವಯಸ್ಸಿನ ಹುಡುಗಿಯರು ಸಹ ಆಶ್ರಯ ಪಡೆದಿದ್ದಾರೆ. ಅವರನ್ನು ಒತ್ತಾಯಪೂರ್ವಕವಾಗಿ ಲೈಂಗಿಕ ದಂದೆಗೆ ತಳ್ಳಲಾಗುತ್ತಿದೆ. ತನ್ನನ್ನು ಕೆಲಸದಾಳಿನಂತೆ ನಡೆಸಿಕೊಳ್ಳಲಾಗುತ್ತದೆ. ಇಲ್ಲಿ ಅಕ್ರಮ ದತ್ತು ಪಡೆಯುವ ಪ್ರಕ್ರಿಯೆಯೂ ಜಾರಿಯಲ್ಲಿದೆ,” ಎಂದು ಪೊಲೀಸರಿಗೆ ಹೇಳಿದ್ದಳು.

ಇದನ್ನೂ ಓದಿ : ಬಿಹಾರದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು ನೀಡಿದ ಮನಕಲಕುವ ವಿವರಗಳು

ಸಂತಸ್ತ್ರ ಬಾಲಕಿಯು ನೀಡಿದ ದೂರಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಆಶ್ರಯ ಗೃಹದ ಮೇಲೆ ದಾಳಿ ನಡೆಸಿ 24 ಹುಡುಗಿಯರನ್ನು ಪೊಲೀಸರು ರಕ್ಷಿಸಿದ್ದರು. ಇಲ್ಲಿ ಆಶ್ರಯ ಪಡೆದಿದ್ದ ಹುಡುಗಿಯರಲ್ಲಿ 8 ಮಂದಿ ಕಾಣೆಯಾಗಿದ್ದಾರೆಂದು ತಿಳಿಬಂದಿತ್ತು. ಈ ವಿಚಾರವಾಗಿ ಆಶ್ರಯ ಗೃಹವನ್ನು ನಡೆಸುತ್ತಿದ್ದ ಗಿರಿಜಾ ತ್ರಿಪಾಠಿ ಹಾಗೂ ಮೋಹನ ತ್ರಿಪಾಠಿ ದಂಪತಿಗಳನ್ನು ಬಂಧಿಸಲಾಗಿತ್ತು.

ಈ ಪ್ರಕರಣವು ಉತ್ತರ ಪ್ರದೇಶದಲ್ಲಿ ದೊಡ್ಡದೊಂದು ಕೊಲಾಹಲವನೇ ಸೃಷ್ಟಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಗುರಿಯಾಗಿಸಿ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿ, ಯೋಗಿ ಆದಿತ್ಯನಾಥ ಅವರ ರಾಜಿನಾಮೆಗೆ ಒತ್ತಾಯಿಸಿವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಯೋಗಿ ನೇತೃತ್ವದ ಸರ್ಕಾರ, ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸುಜಿತ್‌‌ ಕುಮಾರ್‌ ಸೇರಿದಂತೆ ಹಲವು ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. 12 ಗಂಟೆಯೊಳಗೆ ರಾಜ್ಯದಲ್ಲಿರುವ ಸುಮಾರು 72 ಆಶ್ರಯ ಗೃಹಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿ ವರದಿ ಒಪ್ಪಿಸುವಂತೆ ಸಿಎಂ ಯೋಗಿ ಆದಿತ್ಯನಾಥ್‌ ಸೂಚಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More