ಸ್ಮರಣೆ | ನವ್ಯ-ರಮ್ಯಗಳ ಬೆರೆಸಿ ಕಾವ್ಯಕೃಷಿ ಮಾಡಿದ ಕವಿ ಸುಮತೀಂದ್ರ ನಾಡಿಗ

ತೀವ್ರ ಅನಾರೋಗ್ಯದಿಂದ ಬಳಲಿದ್ದ ಕವಿ, ವಿಮರ್ಶಕ, ಅನುವಾದಕ ಸುಮತೀಂದ್ರ ನಾಡಿಗರು ಮಂಗಳವಾರ ನಿಧನ ಹೊಂದಿದರು. ಪತ್ನಿ, ಪುತ್ರಿಯರು ಹಾಗೂ ಪುತ್ರರನ್ನು ಅಗಲಿದ ನಾಡಿಗ ಅವರು, ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಬಿಟ್ಟುಹೋದವರು

ಕನ್ನಡದ ನವ್ಯ ಸಾಹಿತ್ಯದ ಘಟಾನುಘಟಿ ಕವಿ ಸಾಹಿತಿಗಳ ಜೊತೆಗಿದ್ದ ಸುಮತೀಂದ್ರ ನಾಡಿಗರು, ಕಾವ್ಯ, ವಿಮರ್ಶೆಯ ಮೂಲಕ ಹೆಚ್ಚು ಚಿರಪರಿಚಿತರು. "ಒಂದು ರೀತಿಯಲ್ಲಿ ಹುಂಬ, ಇನ್ನೊಂದು ರೀತಿಯಲ್ಲಿ ಮುಗ್ಧ ಅನ್ನಿಸಿಕೊಳ್ಳುವ ನಾಡಿಗರಲ್ಲಿ ಅವರ ಜೊತೆಯ ಕವಿಗಳಲ್ಲಿ ಕಾಣದಿರುವ ಕಣ್ಣಿಗೆ ಕಟ್ಟುವ ಸಾಲುಗಳು, ಮನಸ್ಸು ಮುಟ್ಟುವ ನಿಗೂಢಗಳು ಕಂಡುಬರುತ್ತವೆ,” ಎನ್ನುವ ಲಂಕೇಶರ ಸಾಲುಗಳು ಸುಮತೀಂದ್ರ ನಾಡಿಗರ ಕಾವ್ಯದ ಶಕ್ತಿ ಮತ್ತು ಮಿತಿಯನ್ನು ಹೇಳುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ೧೯೩೫ರ ಮೇ ೪ರಂದು ಜನಿಸಿದ ನಾಡಿಗರು, ಮೈಸೂರಿನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳನ್ನು ಅಭ್ಯಾಸ ಮಾಡಿದರು. ಅಮೆರಿಕದ ಫಿಲೆಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್ ಎಂಎ ಪದವಿ ಪಡೆದರು. ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ವಿಷಯದಲ್ಲಿ ಪ್ರೌಢ ಪ್ರಬಂಧ ಬರೆದು ೧೯೫೮ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದುಕೊಂಡರು. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ ಎಸ್ ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ಸುಮತೀಂದ್ರ ನಾಡಿಗರು ವಿಶೇಷವಾದ ಅಧ್ಯಯನ ನಡೆಸಿದರು.

ಕನ್ನಡ, ಹಿಂದಿ, ಮರಾಠಿ, ಕೊಂಕಣಿ, ಬಂಗಾಳಿ ಭಾಷೆಗಳನ್ನು ಬಲ್ಲವರಾಗಿದ್ದ ನಾಡಿಗ್‌ ಹಲವು ಕೃತಿಗಳನ್ನು ಅನುವಾದಿಸಿ ಕನ್ನಡಕ್ಕೆ ತಂದರು. ಚಾರ್ಲ್ಸ್‌ ಡಿಕೆನ್ಸನ್‌ 'ಹಾರ್ಡ್‌ ಟೈಮ್ಸ್‌', ರವೀಂದ್ರನಾಥ ಟಾಗೋರರ 'ತಿನ್‌ ಸಂಗಿ', ನರೇಂದ್ರನಾಥ ಚಕ್ರವರ್ತಿಯವರ 'ಉಲಂಗ್‌ ರಾಜಾ', ಸ್ಟ್ರಿಂಡ್‌ಬರ್ಗ್‌ ಅವರ 'ಮಿಸ್‌ ಜೂಲಿ' ಕೃತಿಗಳನ್ನು ಕನ್ನಡಕ್ಕೆ ತಂದರು.

ಹಾಗೆಯೇ, ಕನ್ನಡದಿಂದ ಕೆಲವು ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಗೋಪಾಲಕೃಷ್ಣ ಅಡಿಗರ ಆಯ್ದ ಕವಿತೆಗಳ ಸಂಕಲನ, 'ಸೆಲೆಕ್ಟೆಡ್‌ ಪೊಯೆಮ್ಸ್‌ ಆಫ್‌ ಗೋಪಾಲಕೃಷ್ಣ ಅಡಿಗ', ಪಿ ಶ್ರೀನಿವಾಸ್‌ ಅವರೊಂದಗಿಗೆ 'ದಿ ಬುದ್ಧ ಸ್ಮೈಲ್‌', ಜಿ ಎಸ್‌ ಶಿವರುದ್ರಪ್ಪ ಅವರ ಆಯ್ದ ಕವಿತೆಗಳ ಸಂಗ್ರಹ, 'ಪೊಯೆಮ್ಸ್‌ ಆಫ್‌ ಜಿ ಎಸ್‌ ಶಿವರುದ್ರಪ್ಪ', 'ಟ್ವೆಂಟಿಯತ್‌ ಸೆಂಚ್ಯುರಿ ಕನ್ನಡ ಪೊಯೆಟ್ರಿ' ಪ್ರಮುಖ ಕೃತಿಗಳು.

ನಾಡಿಗರ ಕಾವ್ಯಕೃಷಿಯಲ್ಲಿ ಬಹುಮುಖ್ಯ ಕೃತಿ ‘ದಾಂಪತ್ಯಗೀತೆ.’ "ಸದಾ ಬಹಿರಂಗ ಬದುಕಿನಲ್ಲೇ ಚಲಿಸುತ್ತಿರುವಂತೆ ಕಾಣುವ ನಾಡಿಗರು ತಮ್ಮ ಜೀವನ ಒರೆಗೆ ಹಚ್ಚುವ ರೀತಿ ಕುತೂಹಲ ಹುಟ್ಟಿಸುತ್ತದೆ,'' ಎಂದು ಲಂಕೇಶ್‌ ಈ ಸಂಕಲನದ ಬಗ್ಗೆ ಬರೆಯುತ್ತಾರೆ. ‘ಜಡ ಮತ್ತು ಚೇತನ’, ‘ಪಂಚಭೂತಗಳು’, ‘ನಟರಾಜ ಕಂಡ ಕಾಮನಬಿಲ್ಲು’, ‘ಕುಹೂ ಗೀತ’, ‘ತಮಾಷೆ ಪದ್ಯಗಳು’, ‘ಕಪ್ಪುದೇವತೆ’ ಇತರ ಸಂಕಲನಗಳು.

‘ಗಿಳಿ ಮತ್ತು ದುಂಬಿ’, ‘ಕಾರ್ಕೋಟಕ’, ‘ಸ್ಥಿತಪ್ರಜ್ಞ’ ನಾಡಿಗರ ಕಥಾ ಸಂಕಲನಗಳು. 'ಮೌನದಾಚೆಯ ಮಾತು’, ‘ಅಡಿಗರು ಮತ್ತು ನವ್ಯಕಾವ್ಯ’ ಸೇರಿದಂತೆ ಹಲವು ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದರು. ನ್ಯಾಷನಲ್‌ ಬುಕ್‌ ಟ್ರಸ್ಟ್‌ ಅಧ್ಯಕ್ಷರಾಗಿ ೧೯೯೬ರಿಂದ ಮೂರು ವರ್ಷಗಳ ಸೇವೆ ಸಲ್ಲಿಸಿದ ನಾಡಿಗರು, ಬಾಲಸಾಹಿತ್ಯಕ್ಕೆ ನೀಡಿದ ಕೊಡುಗೆ ಗುರುತಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿಯು ಬಾಲ ಸಾಹಿತ್ಯ ಪುರಸ್ಕಾರ ನೀಡಿತು. ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ ಎಂ ಇನಾಂದಾರ್‌ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಇವರಿಗೆ ಸಂದಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More