ಸರ್ಕಾರಿ ಭೂಮಿ ಒತ್ತುವರಿ ತೆರವಿನಲ್ಲಿ ಮುಂದುವರಿದ ಜಿಲ್ಲಾಡಳಿತಗಳ ನಿರ್ಲಕ್ಷ್ಯ

ಒತ್ತುವರಿಗೆ ಒಳಗಾಗಿರುವ ಸರ್ಕಾರಿ ಭೂಮಿ ತೆರವುಗೊಳಿಸುವಲ್ಲಿ ಜಿಲ್ಲಾಡಳಿತಗಳು ಹಿಂದೆ ಬಿದ್ದಿವೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ೨ ತಿಂಗಳಾದರೂ ಈ ವಿಷಯದಲ್ಲಿ ಪ್ರಗತಿ ಕಂಡಿಲ್ಲ. ಜಿಲ್ಲಾಡಳಿತಗಳ ಇಚ್ಛಾಶಕ್ತಿ ಕೊರತೆಯಿಂದ ಲಕ್ಷಕ್ಕೂ ಅಧಿಕ ಎಕರೆ ಒತ್ತುವರಿದಾರರ ವಶದಲ್ಲೇ ಇದೆ

ರಾಜ್ಯಾದ್ಯಂತ ಒತ್ತುವರಿ ಆಗಿರುವ ಲಕ್ಷಾಂತರ ಎಕರೆ ವಿಸ್ತೀರ್ಣದ ಸರ್ಕಾರಿ ಭೂಮಿಯನ್ನು ಒತ್ತುವರಿಯಿಂದ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತಗಳು ಮಂದಗತಿಯಲ್ಲಿ ಸಾಗಿವೆ. ಒತ್ತುವರಿಯಿಂದ ತೆರವುಗೊಳಿಸುವ ಪ್ರಕ್ರಿಯೆಗಳಿಗೆ ವಿವಿಧ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿಲ್ಲ. ಹೀಗಾಗಿ, ೧,೭೭,೮೯೩ ಎಕರೆ ಸರ್ಕಾರಿ ಭೂಮಿ (೨೦೧೮ರ ಜೂ.೩೦ರ ಅಂತ್ಯಕ್ಕೆ) ಇನ್ನೂ ಒತ್ತುವರಿದಾರರ ವಶದಲ್ಲೇ ಇದೆ.

ರಾಜ್ಯದ ವಿವಿಧೆಡೆ ಒಟ್ಟು ೬೩ ಲಕ್ಷ ಎಕರೆ ವಿಸ್ತೀರ್ಣದಲ್ಲಿ ಸರ್ಕಾರಿ ಜಮೀನಿದೆ. ಈ ಪೈಕಿ, ೧೧,೭೭,೫೦೩ ಎಕರೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ಸಂಪೂರ್ಣವಾಗಿ ತೆರವುಗೊಳಿಸಲು ಜಿಲ್ಲಾಡಳಿತ ಕಾರ್ಯಪಡೆ ಮುಂದಾಗಿಲ್ಲ.

ಪ್ರಭಾವಿಗಳು, ಸಂಘ-ಸಂಸ್ಥೆಗಳು ಸೇರಿದಂತೆ ಇನ್ನಿತರರು ಒತ್ತುವರಿ ಮಾಡಿಕೊಂಡಿರುವ ಸಾರ್ವಜನಿಕ ಭೂಮಿಯನ್ನು ತೆರವುಗೊಳಿಸಿರುವ ಸಂಬಂಧ ಜಿಲ್ಲಾಡಳಿತಗಳು, ಕರ್ನಾಟಕ ಸಾರ್ವಜನಿಕ ಭೂಮಿ ಸಂರಕ್ಷಣಾ ನಿಗಮಕ್ಕೆ ವರದಿ ಸಲ್ಲಿಸಿವೆ.

ಡಿಸೆಂಬರ್ ೩೧,೨೦೧೩ರವರೆಗೆ ೧,೦೩,೨೦೨ ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿಯಿಂದ ತೆರವುಗೊಳಿಸಿದ್ದರೆ, ೨೦೧೪ರಿಂದ ೨೦೧೮ರವರೆಗಿನ ೪ ವರ್ಷಗಳಲ್ಲಿ ಕೇವಲ ೧,೬೮,೪೪೭ ಎಕರೆ ಜಮೀನನ್ನು ತೆರವುಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒತ್ತುವರಿಗೊಳಗಾಗಿದ್ದ ೩೬,೨೨೯ ಎಕರೆ ಸರ್ಕಾರಿ ಭೂಮಿಯನ್ನು ಸಂಪೂರ್ಣವಾಗಿ ತೆರವುಗೊಳಿಲಾಗಿದೆ ಎಂದು ಜಿಲ್ಲಾಡಳಿತ ನಿಗಮಕ್ಕೆ ವರದಿ ಮಾಡಿದೆ.

ಇದನ್ನೂ ಓದಿ : ಪ್ರಭಾವಿಗಳಿಂದ ಜಮೀನು ಒತ್ತುವರಿ; ವಿಶೇಷ ನ್ಯಾಯಾಲಯಕ್ಕೆ ಮೊರೆ ಇಟ್ಟ ಬಿಬಿಎಂಪಿ

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ೨ ತಿಂಗಳು ಪೂರ್ಣಗೊಳಿಸಿದ್ದರೂ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ೪೮,೦೭೩ ಎಕರೆ, ಹಾಸನ ಜಿಲ್ಲೆಯಲ್ಲಿ ೨೮,೨೬೪ ಎಕರೆ, ಶಿವಮೊಗ್ಗ ಜಿಲ್ಲೆಯಲ್ಲಿ ೨೬,೭೫೮ ಎಕರೆ ಸರ್ಕಾರಿ ಜಮೀನು ಒತ್ತುವರಿದಾರರ ವಶದಲ್ಲಿದೆ ಎಂದು ಗೊತ್ತಾಗಿದೆ. ಅದೇ ರೀತಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ೪ ವರ್ಷಗಳಲ್ಲಿ ೭,೬೯೧ ಎಕರೆ, ಹಾಸನದಲ್ಲಿ ೨,೭೫೯ ಎಕರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ೫,೮೪೪ ಎಕರೆ ಮಾತ್ರ ಒತ್ತುವರಿಯಿಂದ ತೆರವುಗೊಂಡಿದೆ.

ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವ ಸಂಬಂಧ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮವು (ಕೆಪಿಎಲ್‌ಸಿ) ನಿರ್ದೇಶನ ನೀಡುತ್ತಿದೆಯಾದರೂ ಜಿಲ್ಲಾ ಮಟ್ಟದಲ್ಲಿ ಪ್ರಗತಿ ಕಂಡುಬರುತ್ತಿಲ್ಲ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ ಶಂಕರ್ ಅವಧಿಯಲ್ಲಿ ಒತ್ತುವರಿ ತೆರವು ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದ ಕಾರಣ, ಜೂನ್ ೩೦,೨೦೧೮ರ ಅಂತ್ಯಕ್ಕೆ ೩೯೧ ಎಕರೆ ಮಾತ್ರ ತೆರವಿಗೆ ಬಾಕಿ ಇದೆ. ಕಳೆದ ೪ ವರ್ಷದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಈವರೆವಿಗೆ ೧೬,೦೨೯ ಎಕರೆ ಸರ್ಕಾರಿ ಭೂಮಿ ಒತ್ತುವರಿಯಿಂದ ತೆರವುಗೊಂಡಿದೆ. ತೆರವುಗೊಳಿಸಿರುವ ಸರ್ಕಾರಿ ಜಮೀನಿನ ಮೌಲ್ಯ ೫೨,೦೦೦ ಕೋಟಿ ರು.ಗೂ ಅಧಿಕ ಎಂದು ಹೇಳಲಾಗಿದೆ.

ಇನ್ನು, ಕಳೆದ ೪ ವರ್ಷಗಳಲ್ಲಿ ಬಳ್ಳಾರಿ ಜಿಲ್ಲಾಡಳಿತ ೫೬,೮೯೫ ಎಕರೆ, ಹಾವೇರಿ ಜಿಲ್ಲಾಡಳಿತ ೬೧,೮೫೩ ಎಕರೆ ತೆರವುಗೊಳಿಸಿರುವ ಬಗ್ಗೆ ನಿಗಮಕ್ಕೆ ವರದಿ ಮಾಡಿವೆ. ಈ ಜಿಲ್ಲೆಗಳ ಹೊರತು ಉಳಿದ ಜಿಲ್ಲೆಗಳಲ್ಲಿ ಒತ್ತುವರಿ ತೆರವು ಆಮೆಗತಿಯಲ್ಲಿದೆ. ಇದೇ ಸ್ಥಿತಿ ಮುಂದುವರಿದರೆ, ಒತ್ತುವರಿಯಿಂದ ತೆರವುಗೊಳಿಸಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More