ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ವಾಪಸ್‌ ಕಳುಹಿಸಲಾಗುವುದು: ಪರಮೇಶ್ವರ್‌

“ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಮಾಡಲಾಗಿದೆ. ಆಫ್ರಿಕಾದ ೧೦೦ಕ್ಕೂ ಹೆಚ್ಚು ಪ್ರಜೆಗಳು ರಾಜ್ಯದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ವಾಪಸ್‌ ಕಳುಹಿಸಲಾಗುವುದು,” ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್‌ ಹೇಳಿದ್ದಾರೆ. ವೀಸಾ ಮುಗಿದ ಮೇಲೂ ರಾಜ್ಯದಲ್ಲಿ ನೆಲೆಸಿರುವ ಆಫ್ರಿಕಾ ಪ್ರಜೆಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ರಾಜ್ಯದಲ್ಲಿ ೧,೦೭೬ ಅಕ್ರಮ ವಿದೇಶಿಗರಿದ್ದಾರೆ ಎನ್ನಲಾಗಿದೆ.

ಇರಾನ್ ಜೊತೆ ವ್ಯವಹರಿಸುವ ರಾಷ್ಟ್ರಗಳು ಅಮೆರಿಕ ಜೊತೆ ವ್ಯವಹರಿಸಕೂಡದು ಎಂದ ಟ್ರಂಪ್

ಇರಾನ್‌ ಮೇಲೆ ಆರ್ಥಿಕ ಹಾಗೂ ಕೈಗಾರಿಕಾ ನಿರ್ಬಂಧಗಳನ್ನು ಹೇರಿ ಅಧ್ಯಕ್ಷ ಅಮೆರಿಕ ಡೊನಾಲ್ಡ್ ಟ್ರಂಪ್ ತನ್ನ ಮಿತ್ರರಾಷ್ಟ್ರಗಳಿಗೆ ಇಂದು ಹೊಸ ಎಚ್ಚರಿಕೆ ನೀಡಿದ್ದಾರೆ. “ಒಂದು ವೇಳೆ ಯಾರಾದರೂ ಇರಾನ್ ಜೊತೆ ವ್ಯವಹಾರ ನಡೆಸಿದಲ್ಲಿ ಅಮೆರಿಕ ಜೊತೆ ವ್ಯವಹಾರ ಕಡಿದುಕೊಳ್ಳಬೇಕು. ನಾನು ಜಗತ್ತಿನ ಶಾಂತಿಯನ್ನು ಬಯಸುತ್ತೇನೆ,” ಎಂದು ಟ್ರಂಪ್ ಹೇಳಿದ್ದಾರೆ. ಎರಡನೇ ಹಂತದ ನಿರ್ಬಂಧ ಹೇರಿಕೆಯಲ್ಲಿ ತೈಲ ವಲಯವೂ ಸೇರಿದೆ.

ನಟನೆಗೆ ವಿದಾಯ ಘೋಷಿಸಿದ ರಾಬರ್ಟ್‌ ರೆಡ್‌ಫೋರ್ಡ್‌

ಖ್ಯಾತ ಹಾಲಿವುಡ್ ನಟ ರಾಬರ್ಟ್‌ ರೆಡ್‌ಫೋರ್ಡ್‌ ನಟನೆಗೆ ವಿದಾಯ ಹೇಳಿದ್ದಾರೆ. 81ರ ಹರೆಯದ ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ ರಾಬರ್ಟ್‌, 21ರ ಹರೆಯದಲ್ಲಿ ನಟನಾಗಿ ಸಿನಿಮಾ ಪ್ರವೇಶಿಸಿದವರು. ‘ದಿ ಓಲ್ಡ್‌ ಮ್ಯಾನ್‌ ಅಂಡ್‌ ದಿ ಗನ್‌’ ಅವರ ಕೊನೆಯ ಚಿತ್ರವಾಗಲಿದೆ. ಚಿತ್ರನಿರ್ದೇಶನ, ನಿರ್ಮಾಣದಲ್ಲೂ ಅವರು ಗುರುತಿಸಿಕೊಂಡಿದ್ದರು. ‘ದಿ ಸ್ಟಿಂಗ್‌’, ‘ಬೇರ್‌ಫೂಟ್‌ ಇನ್ ದಿ ಪಾರ್ಕ್‌’, ‘ದ ವೇ ವಿ ವರ್‌’, ಅಲ್‌ ದಿ ಪ್ರೆಸಿಡೆಂಟ್ಸ್ ಮೆನ್‌ ಅಂಡ್ ಆಲ್ ಈಸ್‌ ಲಾಸ್ಟ್‌’, ‘ಅವರ್ ಸೋಲ್ಸ್‌ ಅಟ್‌ ನೈಟ್ಸ್‌’ ರಾಬರ್ಟ್‌ರ ಜನಪ್ರಿಯ ಚಿತ್ರಗಳು.

ಅಸ್ಸಾಂ ಪೌರತ್ವ ನೋಂದಣಿ ಅಧಿಕಾರಿಯನ್ನು ತರಾಟೆ ತಗೆದುಕೊಂಡ ಸುಪ್ರೀಂ

ಅಸ್ಸಾಂ ಪೌರತ್ವ ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಮುಗಿಯುವ ಮುನ್ನ ಮಾಧ್ಯಮದವರೆದುರು ಅಭಿಪ್ರಾಯ ನೀಡಿದ ಎನ್‌ಆರ್‌ಸಿ ಸಂಯೋಜಕ ಪ್ರತೀಕ್ ಹಜೇಲಾ ಅವರನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ. ಸುಪ್ರೀಂ ಕೊರ್ಟ್ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಹಾಗೂ ಆರ್‌ ಎಫ್ ನಾರಿಮನ್ ಅವರಿದ್ದ ಪೀಠ, “೪೦ ಲಕ್ಷ ಜನರನ್ನು ಪೌರತ್ವ ನೋಂದಣಿಯಿಂದ ಕೈಬಿಟ್ಟದ್ದರಿಂದ ಅಸ್ಸಾಂನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ವಿವಾದ ಸಂಪೂರ್ಣವಾಗಿ ತಾರ್ಕಿಕ ಅಂತ್ಯ ಕಾಣದೆ ಇದ್ದಾಗ ಅದ್ಹೇಗೆ ಅಭಿಪ್ರಾಯ ನೀಡುತ್ತೀರಿ?” ಎಂದು ಹಜೇಲಾರನ್ನು ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತಿನಲ್ಲೇ ಹೆಚ್ಚು ನಕಲಿ ನೋಟು ಪತ್ತೆ!

ಅಪನಗದೀಕರಣದ ನಂತರ ದೇಶದಲ್ಲಿ 13.8 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾದ ಗುಜರಾತಿನಲ್ಲೇ ಅತಿ ಹೆಚ್ಚು ಅಂದರೆ, 5.94 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೃಹಖಾತೆ ರಾಜ್ಯ ಸಚಿವ ಹಂನ್ಸರಾಜ್ ಗಂಗಾರಾಮ್ ಅಹಿರ್ ಅವರು, ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಅಂಕಿ ಅಂಶಗಳನ್ನು ಉಲ್ಲೇಖಿಸಿ ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ. ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ ಅಪನಗದೀಕರಣದ ನಂತರ ಇದುವರೆಗೆ 13.87 ಕೋಟಿ ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ. ಗುಜರಾತ್ ನಲ್ಲಿ 5.94 ಕೋಟಿ, ಉತ್ತರ ಪ್ರದೇಶ 2.19 ಕೋಟಿ, ಪಶ್ಚಿಮ ಬಂಗಾಳದಲ್ಲಿ 1 ಕೋಟಿ ಮತ್ತು ಮಿಜೋರಾಂನಲ್ಲಿ 1 ಕೋಟಿ ಮೌಲ್ಯದ ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಬಿಜೆಪಿ ಶಾಸಕರಿಂದ ಹೆಣ್ಣುಮಕ್ಕಳನ್ನು ರಕ್ಷಿಸಬೇಕಿದೆ: ರಾಹುಲ್‌ ಗಾಂಧಿ

ದೇಶದಲ್ಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ಶಾಸಕರಿಂದ ಹೆಣ್ಣುಮಕ್ಕಳನ್ನು ರಕ್ಷಿಸಬೇಕಿದೆ ಎಂದಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಮಹಿಳಾ ಘಟಕದ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, “ಕಳೆದ ನಾಲ್ಕು ವರ್ಷಗಳಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು, ಸ್ವತಂತ್ರ ಭಾರತದ 70 ವರ್ಷಗಳ ಅವಧಿಯಲ್ಲೂ ನಡೆದಿರಲಿಲ್ಲ,” ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಏಷ್ಯಾ ಕ್ರೀಡಾಕೂಟದಿಂದ ಹೊರಬಿದ್ದ ಮೀರಾ ಬಾಯಿ ಚಾನು

ವಿಶ್ವ ಚಾಂಪಿಯನ್ ಹಾಗೂ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ವಿಜೇತೆ ಮೀರಾಬಾಯಿ ಚಾನು ಸದ್ಯದಲ್ಲೇ ಶುರುವಾಗಲಿರುವ ಏಷ್ಯಾ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಸಂಪೂರ್ಣವಾಗಿ ದೈಹಿಕ ಕ್ಷಮತೆಯಿಂದ ಕೂಡಿಲ್ಲದ ಹಿನ್ನೆಲೆಯಲ್ಲಿ ಆಕೆ ಏಷ್ಯಾಡ್‌ನಲ್ಲಿ ಪಾಲ್ಗೊಳ್ಳದಿರುವುದೇ ಲೇಸೆಂದು ರಾಷ್ಟ್ರೀಯ ಕೋಚ್ ಸಲಹೆ ಇತ್ತಿದ್ದರು. ಜತೆಗೆ ಆಕೆಯ ದೈಹಿಕ ಕ್ಷಮತೆಯ ಕುರಿತು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ಗೆ (ಐಡಬ್ಲ್ಯೂಎಲ್‌ಎಫ್) ವರದಿ ಸಲ್ಲಿಸಿದ್ದರು. ಈ ಕುರಿತು ಗುರುವಾರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಐಡಬ್ಲ್ಯೂಎಲ್‌ಎಫ್ ಕೂಡಾ ತಿಳಿಸಿತ್ತು "ಹೌದು, ಮೀರಾಬಾಯಿ ಏಷ್ಯಾ ಕೂಟದಲ್ಲಿ ಭಾಗವಹಿಸುತ್ತಿಲ್ಲ,'' ಎಂದು ಐಡಬ್ಲ್ಯೂಎಲ್‌ಎಫ್ ಕಾರ್ಯದರ್ಶಿ ಸಹದೇವ್ ಯಾದವ್ ಪಿಟಿಐಗೆ ಖಚಿತಪಡಿಸಿದ್ದಾರೆ.

ಪ್ರತಿಭೆಯ ಮುಂದೆ ವಯಸ್ಸು ನಗಣ್ಯ ಎಂದ ಸಚಿನ್ ತೆಂಡೂಲ್ಕರ್

ಯಾವುದೇ ಆಟಗಾರ ಪ್ರತಿಭಾಶಾಲಿಯಾಗಿದ್ದರೆ, ಆತನನ್ನು ವಯಸ್ಸಿನ ಆಧಾರದ ಮೇಲೆ ಆಯ್ಕೆಸಮಿತಿ ಕಡೆಗಣಿಸುವುದು ಸಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯ ಕಂಡ ಎಜ್‌ಬ್ಯಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಲ್ರೌಂಡರ್ ಸ್ಯಾಮ್ ಕರನ್‌ಗೆ ಕೇವಲ ೨೦ರ ಹರೆಯವಷ್ಟೆ. ಈ ಮಧ್ಯೆ, ಗುರುವಾರದಿಂದ (ಆಗಸ್ಟ್ ೯) ಶುರುವಾಗಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಮತ್ತೋರ್ವ ೨೦ರ ಹರೆಯದ ಓಲ್ಲಿ ಪೋಪ್‌ಗೆ ಇಂಗ್ಲೆಂಡ್ ಆಯ್ಕೆಸಮಿತಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಕಲ್ಪಿಸಿದೆ. ಇದಕ್ಕೆ ಸಚಿನ್ ಸ್ವತಃ ತನ್ನದೇ ನಿದರ್ಶನದೊಂದಿಗೆ, "ರಾಷ್ಟ್ರೀಯ ತಂಡದಲ್ಲಿ ಆಡಿದಾಗ ನನಗೆ ಕೇವಲ ೧೬ರ ಹರೆಯ. ವಾಸೀಂ ಅಕ್ರಮ್, ವಕಾರ್ ಯೂನಿಸ್, ಇಮ್ರಾನ್ ಖಾನ್ ಹಾಗೂ ಅಬ್ದುಲ್‌ ಖಾದಿರ್‌ರವಂಥ ವಿಶ್ವದರ್ಜೆ ಬೌಲರ್‌ಗಳನ್ನು ಎದುರಿಸಬೇಕಿರುತ್ತದೆ ಎಂದೇನೂ ನಾನು ಹೆಚ್ಚು ಚಿಂತಿಸಲಿಲ್ಲ. ಓರ್ವ ಆಟಗಾರ ಪ್ರತಿಭಾನ್ವಿತನಾಗಿದ್ದರೆ, ಆಯ್ಕೆಗೆ ಆತನ ವಯಸ್ಸು ಅಡ್ಡಿಬರಬಾರದು,'' ಎಂದು ಸಚಿನ್ ಪುನರುಚ್ಚರಿಸಿದ್ದಾರೆ.

ಕಾಶ್ಮೀರದಲ್ಲಿ ಗುಂಡಿನ ಚಕಮಕಿ, ಐದು ಜನರ ಸಾವು

ಜಮ್ಮುಕಾಶ್ಮೀರದ ಗುರೇಝ್ ವಲಯದ ಗೋವಿಂದ ನಲ್ಲಾ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ನುಸುಳುಕೋರರ ವಿರುದ್ಧ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮೇಜರ್ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದು, ಘಟನೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಲೋಕಸಭೆಯಲ್ಲಿಂದು, ಕಾಶ್ಮೀರದಲ್ಲಿನ ಅಕ್ರಮ ಒಳನುಸುಳುಕೋರರ ಬಗ್ಗೆ ಮಾಹಿತಿ ನೀಡಿದ  ಗೃಹಖಾತೆ ರಾಜ್ಯ ಸಚಿವ ಹನ್ಸರಾಜ್‌ ಗಂಗಾರಾಮ್‌ ಅಹಿರ್‌, ಜೂನ್‌ ಅಂತ್ಯದವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ 69 ಉಗ್ರರು ಅಕ್ರಮವಾಗಿ ಒಳನುಸುಳಿದ್ದಾರೆ ಎಂದು ಮಾಹಿತಿ ನೀಡಿದರು. “ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಸ್ಥಳೀಯರು ಉಗ್ರರಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು,” ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More