ಎಫ್ಆರ್‌ಡಿಐ ಮಸೂದೆ ಕೈಬಿಟ್ಟ ಕೇಂದ್ರ: ಬ್ಯಾಂಕ್ ನಲ್ಲಿರುವ ನಿಮ್ಮ ಠೇವಣಿ ಸುರಕ್ಷಿತ

ಬ್ಯಾಂಕ್‌, ಹಣಕಾಸು ಸಂಸ್ಥೆಗಳು ವಿಫಲಗೊಂಡಾಗ ಗ್ರಾಹಕರ ಠೇವಣಿ ಬಳಸಿಕೊಳ್ಳಲು ಮತ್ತು ಠೇವಣಿಗಳ ಅವಧಿ ವಿಸ್ತರಿಸಲು ಅವಕಾಶ ನೀಡುವ ಅಂಶಗಳಿದ್ದ ಎಫ್ಆರ್‌ಡಿಐ ಮಸೂದೆಯನ್ನು ಕೊನೆಗೂ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಇನ್ನು ನಿಶ್ಚಿಂತೆಯಿಂದಿರಬಹುದು!

ಗ್ರಾಹಕರಲ್ಲಿ ಆಂತಕ ಮೂಡಿಸಿದ್ದ, ಹಲವು ಗಾಳಿಸುದ್ದಿಗಳು ಹರಡಲು ಮತ್ತು ಬ್ಯಾಂಕುಗಳಲ್ಲಿ ಠೇವಣಿ ಪ್ರಮಾಣ ತಗ್ಗಲು ಕಾರಣವಾಗಿದ್ದ ವಿವಾದಾತ್ಮಕ ಎಫ್ಆರ್‌ಡಿಐ (ಹಣಕಾಸು ನಿರ್ವಹಣೆ ಮತ್ತು ಠೇವಣಿ ವಿಮಾ) ಮಸೂದೆ (2017) ಅನ್ನು ಕೇಂದ್ರ ಸರ್ಕಾರ ಕೊನೆಗೂ ಕೈಬಿಟ್ಟಿದೆ. ಮಂಗಳವಾರ ಲೋಕಸಭೆಯಲ್ಲಿ ಉದ್ದೇಶಿತ ಮಸೂದೆಯನ್ನು ಹಿಂದಕ್ಕೆ ಪಡೆದಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಎಫ್ಆರ್‌ಡಿಐ ಮಸೂದೆಯನ್ನು ಮಂಡಿಸಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ರವಾನಿಸಲಾಗಿತ್ತು. ಹಂಗಾಮಿ ಹಣಕಾಸು ಸಚಿವ ಪಿಯೂಷ್‌ ಗೋಯಲ್ ಅವರು ಎಫ್ಆರ್‌ಡಿಐ ಮಸೂದೆ ಕೈಬಿಟ್ಟಿರುವ ಸರ್ಕಾರದ ನಿರ್ಧಾರವನ್ನು ಜಂಟಿ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ. ನಷ್ಟಕ್ಕೀಡಾದ ಬ್ಯಾಂಕುಗಳನ್ನು ರಕ್ಷಿಸಲು ಗ್ರಾಹಕರ ಠೇವಣಿಯನ್ನು ಬಳಸಿಕೊಳ್ಳಲಾಗುತ್ತೆಂಬ ಅಂಶವು ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದ್ದರಿಂದಾಗಿ ಆ ಉದ್ದೇಶಿತ ಮಸೂದೆ ಕೈಬಿಡಲಾಗಿದೆ.

ಪ್ರಸ್ತುತ ಮಂಡಿಸಿದ್ದ ಮಸೂದೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ವೈಫಲ್ಯಗೊಂಡಾಗ ಅವುಗಳ ಸಂರಕ್ಷಿಸುವ ಕುರಿತ ಪ್ರಸ್ತಾವಗಳ ಸಂರಚನೆ ಮತ್ತು ಠೇವಣಿಗಳ ಸುರಕ್ಷತೆ ಬಗ್ಗೆ ಕೆಲವು ಸಂಶಯಗಳಿದ್ದವು. ಇದು ದೊಡ್ಡ ವಿಷಯಗಳಾದ್ದರಿಂದ ಉದ್ದೇಶಿತ ಮಸೂದೆಯನ್ನೇ ಹಿಂದಕ್ಕೆ ಪಡೆದು, ವಿವಾದಿತ ಅಂಶಗಳಲ್ಲಿನ ಅನುಮಾನಗಳನ್ನು ನಿವಾರಿಸಿ ಪರಿಷ್ಕೃತ ಮಸೂದೆ ಮಂಡಿಸಲಾಗುತ್ತದೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ತಿಳಿಸಿದ್ದಾರೆ ಎಂದು ಡಿಎನ್ಎ ವರದಿ ಮಾಡಿದೆ.

ಮಸೂದೆ ಮಂಡಿಸಿದಾಗ ಅದಲ್ಲಿದ್ದ ಪ್ರಸ್ತಾಪವಾಗಿದ್ದ ಬ್ಯಾಂಕುಗಳು ವಿಫಲವಾದಾಗ ಅವುಗಳನ್ನು ಸಂರಕ್ಷಿಸಲು ಗ್ರಾಹಕರ ಠೇವಣಿಯನ್ನು ಬಳಸಿಕೊಳ್ಳಬಹುದು ಮತ್ತು ಅಂತಹ ವಿಶೇಷ ಸಂದರ್ಭದಲ್ಲಿ ಗ್ರಾಹಕರಿಗೆ ಠೇವಣಿ ಮರುಪಾವತಿಸುವ ಅವಧಿಯನ್ನು ಮುಂದೂಡುವ ಅಂಶಗಳು ಗ್ರಾಹಕರಲ್ಲಿ ಆತಂಕವನ್ನುಂಟು ಮಾಡಿದ್ದವು. ಈ ಬಗ್ಗೆ ಈಗ ವಿಶ್ರಾಂತಿಯಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟನೆ ನೀಡಿ ಗ್ರಾಹಕರ ಆತಂಕ ದೂರಮಾಡಲು ಪ್ರಯತ್ನಿಸಿದ್ದರು.

ಗ್ರಾಹಕರ ಠೇವಣಿ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಗ್ರಾಹಕರು ಬ್ಯಾಂಕಿನಲ್ಲಿಟ್ಟ ಠೇವಣಿಯನ್ನು ಸರ್ಕಾರ ಸಂಪೂರ್ಣವಾಗಿ ರಕ್ಷಿಸುತ್ತದೆ, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಈಗ ವಿವಾದಕ್ಕೆ ಕಾರಣವಾಗಿರುವ ಫೈನಾನ್ಷಿಯಲ್ ರೆಸಲೂಶನ್ ಅಂಡ್ ಡಿಪಾಸಿಟ್ ಇನ್ಸುರೆನ್ಸ್ (ಎಫ್ಆರ್‌ಡಿಐ) ಮಸೂದೆಗೆ ಅಗತ್ಯಬಿದ್ದರೆ ಬದಲಾವಣೆ ಮಾಡಲು ಪರಿಗಣಿಸುತ್ತೇವೆ. ಕೇಂದ್ರ ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಸ್ಪಷ್ಟಪಡಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸದೃಢಗೊಳಿಸಲು ಬದ್ಧವಾಗಿದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ₹2.21 ಲಕ್ಷ ಕೋಟಿ ಹಣ ವಿನಿಯೋಗಿಸುತ್ತಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರ ಪ್ರಸ್ತುತ ಎಫ್ಆರ್‌ಡಿಐ ಮಸೂದೆ ಕೈಬಿಟ್ಟಿದ್ದರೂ ಬ್ಯಾಂಕುಗಳು ನಷ್ಟಕ್ಕೀಡಾದಾಗ ಅವುಗಳನ್ನು ಸಂರಕ್ಷಿಸುವ ಮಾರ್ಗಸೂಚಿಗಳನ್ನು ಕೈಬಿಟ್ಟಿದೆ ಎಂದು ಅರ್ಥವಲ್ಲ. ಕೇಂದ್ರ ಸರ್ಕಾರವು ಬರುವ ದಿನಗಳಲ್ಲಿ ಈ ಮಸೂದೆಯನ್ನು ಬೇರೆ ರೂಪದಲ್ಲಿ ತರಲಿದೆ. ಆದರೆ, ಖಾಸಗಿ ವಲಯದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ದಿವಾಳಿಯಾಗಿದ್ದು ಬಿಟ್ಟರೆ ಬೇರಾವ ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ದಿವಾಳಿಯಾಗಿರುವ ಯಾವ ಉದಾಹರಣೆಗಳೂ ನಮ್ಮ ಮುಂದಿಲ್ಲ.

ಕೇಂದ್ರ ಸರ್ಕಾರ ಬಂಡವಾಳ ಉತ್ತೇಜನ ನೀಡುತ್ತಿರುವುದರಿಂದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ವೈಫಲ್ಯಗೊಳ್ಳುವ ಸಾಧ್ಯತೆ ಕಡಮೆ. ದೇಶದಲ್ಲಿ ಸಾಮಾನ್ಯ ಜನರ ಶೇ.95ರಷ್ಟು ಬಂಡವಾಳ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಲ್ಲೇ ಇದೆ. ಈಗ ಆತಂಕಕ್ಕೆ ಕಾರಣವಾಗಿರುವುದು ಏರುತ್ತಲೇ ಇರುವ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ. ಕಳೆದ ವರ್ಷಕ್ಕೆ ಹೋಲಿಸಿದರೆ 2017-18ನೇ ಸಾಲಿನಲ್ಲಿ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ ಶೇ.54ರಷ್ಟು ಏರಿದೆ. ನಿಷ್ಕ್ರಿಯ ಸಾಲದ ಪ್ರಮಾಣ ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ರೂಪಿಸಿದೆ.

ಇದನ್ನೂ ಓದಿ : ಒಂದು ಲಕ್ಷ ರು.ಗಿಂತ ಹೆಚ್ಚಿನ ನಿಮ್ಮ ಬ್ಯಾಂಕ್ ಠೇವಣಿಗೆ ಯಾವ ಖಾತರಿ ಇಲ್ಲ!

ಎಫ್ಆರ್‌ಡಿಐ ಮಸೂದೆಯನ್ನು ಆಗಸ್ಟ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಿದ ನಂತರ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ವಿಫಲಗೊಂಡಾಗ ಅವುಗಳಲ್ಲಿರುವ ಗ್ರಾಹಕರ ಠೇವಣಿಯನ್ನೇ ಬಳಸಿಕೊಳ್ಳಲು ಅವಕಾಶ ನೀಡುವುದು ಮತ್ತು ಠೇವಣಿಗಳ ಅವಧಿಗಳನ್ನು ವಿಸ್ತರಿಸುವ ಅಂಶಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದವು.

ಎಫ್ಆರ್‌ಡಿಐ ಮಸೂದೆ ಕುರಿತಂತೆ ಪ್ರತಿಕ್ರಿಯಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ವೈ ವಿ ರೆಡ್ಡಿ, “ಈಗಾಗಲೇ ಸುರಕ್ಷತಾ ವ್ಯವಸ್ಥೆ ಇರುವಾಗ ಹೊಸ ಕಾನೂನಿನ ಔಚಿತ್ಯವೇನಿದೆ?” ಎಂದಿದ್ದಾರೆ. “ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ವೈಫಲ್ಯವಾದಾಗ ಕೇಂದ್ರ ಸರ್ಕಾರ ಗ್ರಾಹಕರ ಠೇವಣಿ ರಕ್ಷಿಸಲಿಲ್ಲವೇ, ಹಾಲಿ ಇರುವ ಕಾನೂನಿನ ಅನ್ವಯವೇ ಗ್ರಾಹಕರನ್ನು ರಕ್ಷಿಸಿದೆ,” ಎಂದಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More