ಯುಜಿಸಿ ಬದಲಿಗೆ ಯೋಜಿಸಿರುವ ಉನ್ನತ ಶಿಕ್ಷಣ ಆಯೋಗ ಮಸೂದೆ ಅಪಾಯಕಾರಿ

ಯುಜಿಸಿ ಬದಲಿಗೆ ಭಾರತದ ಉನ್ನತ ಶಿಕ್ಷಣ ಆಯೋಗ ಸ್ಥಾಪಿಸುವ ಉದ್ದೇಶದಿಂದ ಜಾರಿಗೆ ತರಲು ಹೊರಟಿರುವ ‘2018ರ ಭಾರತದ ಉನ್ನತ ಶಿಕ್ಷಣ ಆಯೋಗ ಮಸೂದೆ’ ರೋಗಕ್ಕಿಂತ ಔಷಧಿಯೇ ಭಯಾನಕ ಎನ್ನುವ ಸ್ಥಿತಿಗೆ ಅತ್ಯುತ್ತಮ ಉದಾಹರಣೆ ಎಂಬ ‘ಸ್ಕ್ರಾಲ್‌’ ಲೇಖನದ ಭಾವಾನುವಾದ

1956ರ ವಿಶ್ವವಿದ್ಯಾಲಯ ಧನಸಹಾಯ ಆಯೋಗವನ್ನು (ಯುಜಿಸಿ) ರದ್ದುಗೊಳಿಸಿ ಅದರ ಬದಲಿಗೆ ಭಾರತದ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸುವ ಉದ್ದೇಶದಿಂದ ಜಾರಿಗೆ ತರಲು ಹೊರಟಿರುವ “2018ರ ಭಾರತದ ಉನ್ನತ ಶಿಕ್ಷಣ ಆಯೋಗ ಮಸೂದೆ”ಯು ರೋಗಕ್ಕಿಂತ ಔಷಧಿಯೇ ಭಯಾನಕವಾಗಿರುವ ಸ್ಥಿತಿಗೆ ಅತ್ಯುತ್ತಮ ಉದಾಹರಣೆ ಎಂದು ಹೇಳಬಹುದು. ಹಳೆಯ ಲೈಸನ್ಸ್ ರಾಜ್ ದುರ್ದಿನಗಳನ್ನು ಮರಳಿ ತರುವುದಕ್ಕೆ ಹೊರಟಿರುವ ಈ ಮಸೂದೆಯು ನಮ್ಮ ವಿಶ್ವವಿದ್ಯಾಲಯಗಳು ಹೊಂದಿರುವ ಅಲ್ಪಸ್ವಲ್ಪ ಸ್ವಾಯತ್ತತೆಯನ್ನೂ ಕಿತ್ತುಕೊಳ್ಳುವ ಇರಾದೆ ಹೊಂದಿದೆ.

ಭಾರತದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವುದಕ್ಕೆ, ಸಮನ್ವಯಗೊಳಿಸುವುದಕ್ಕೆ ಹಾಗೂ ಉಸ್ತುವಾರಿ ಮಾಡುವುದಕ್ಕೆ ಯುಜಿಸಿಯನ್ನು ಸ್ಥಾಪಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಬೋಧನೆ, ಪರೀಕ್ಷೆ ಮತ್ತು ಸಂಶೋಧನೆಗಳ ಗುಣಮಟ್ಟವನ್ನು ನಿರ್ಧರಿಸಿ ಅದನ್ನು ವಿಶ್ವವಿದ್ಯಾಲಯಗಳು ಕಾಪಾಡುವಂತೆ ನೋಡಿಕೊಳ್ಳುವುದು ಹಾಗೂ ಕನಿಷ್ಠ ಬೋಧನಾ ಗುಣಮಟ್ಟ ಕಾಪಾಡುವುದು, ಮೂಲಸೌಕರ್ಯಗಳ ಅಭಿವೃದ್ಧಿಗೊಳಿಸುವುದು, ಬೋಧನಾಂಗಗಳ ಸುಧಾರಣೆ ಮತ್ತು ವಿದ್ಯಾರ್ಥಿಗಳಿಗೆ ಸ್ಕಾಲರ್‍ಷಿಪ್ ವಿತರಿಸುವುದು ಮುಂತಾದವುಗಳು ಅದರ ಪ್ರಮುಖ ಕೆಲಸಗಳಾಗಿವೆ. ಈ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಯುಜಿಸಿ ಸಾಕಷ್ಟು ಯಶಸ್ಸು ಕಂಡಿದೆ. ಅದರಲ್ಲಿ ಕೆಲವು ಸಮಸ್ಯೆಗಳೂ ಇವೆ. ಅಸಮರ್ಪಕ ಧನಸಹಾಯ, ವಿಸ್ತೃತ ನಿಯಮಾವಳಿಗಳ ಮೂಲಕ ವಿಶ್ವವಿದ್ಯಾಲಯಗಳನ್ನು ಮತ್ತು ಕಾಲೇಜುಗಳನ್ನು ತಳಮಟ್ಟದಲ್ಲಿ ಅತಿಯಾಗಿ ನಿಯಂತ್ರಿಸುವುದು, ಅತಿಯಾದ ಅಧಿಕಾರಿಶಾಹಿತನದ ಕಾರಣದಿಂದ ಅನಗತ್ಯ ವಿಳಂಬ ಮಾಡುವುದು ಹಾಗೂ ಬಲಾಢ್ಯರು ಮತ್ತು ಪ್ರಭಾವಿ ರಾಜಕಾರಣ ಗಳು ನಡೆಸುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವಲ್ಲಿನ ಅದರ ಅಸಮರ್ಥತೆ ಮುಂತಾದ ಕೊರತೆಗಳಿರುವುದು ನಿಜ.

ಆದರೆ, ಭಾರತದ ಉನ್ನತ ಶಿಕ್ಷಣ ಆಯೋಗ ಮಸೂದೆಯೂ ಈ ಮುಖ್ಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಸಂಪೂರ್ಣವಾಗಿ ವಿಫಲವಾಗಿದೆ. ಬದಲಿಗೆ, ಅದು ಈ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿದರೂ ಅಚ್ಚರಿಪಡಬೇಕಿಲ್ಲ. ವಿಶ್ವವಿದ್ಯಾಲಯಗಳ ಮೇಲಿನ ರಾಜ್ಯಗಳ ಹಿಡಿತವನ್ನು ಕೊನೆಗಾಣಿಸಿ ಹಾಗೂ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಕಸಿದುಕೊಂಡು ಅವುಗಳ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣವನ್ನು ಹೇರುವ ಮೂಲಕ ಅವುಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಕೈಗೊಂಬೆಗಳಂತೆ ಮಾರ್ಪಡಿಸುವುದೇ ಈ ಮಸೂದೆಯ ಉದ್ದೇಶವಾಗಿದೆ.

ದೇಶದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೇಂದ್ರ ವಿಶ್ವವಿದ್ಯಾಲಯಗಳ ಪ್ರಮಾಣ ಕೇವಲ ಶೇಕಡ 6ರಷ್ಟು ಇರುವುದರಿಂದ ಈ ಮಸೂದೆಯಲ್ಲಿ ಅವುಗಳನ್ನು ಅನುಕೂಲಕರವಾಗಿ “ರಾಷ್ಟ್ರೀಯ ಮಹತ್ವದ ಸಂಸ್ಥೆಗಳ” ಅಡಿಯಲ್ಲಿ ತಂದು ಅವುಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವುದನ್ನು ನೋಡಿದರೆ ಈ ಮಸೂದೆ ರಾಜ್ಯ ವಿಶ್ವವಿದ್ಯಾಲಯಗಳನ್ನು, ಖಾಸಗಿ ವಿಶ್ವವಿದ್ಯಾಲಯಗಳನ್ನು, ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಮತ್ತು ಕಾಲೇಜುಗಳನ್ನು ನಿಯಂತ್ರಿಸುವುದಕ್ಕಾಗಿಯೇ ತರುತ್ತಿರುವುದು ಸ್ಪಷ್ಟವಾಗಿದೆ.

ಅಮೆರಿಕ, ಆಸ್ಟ್ರೇಲಿಯಾ ಮತ್ತು ಚೀನಾ ಥರದ ಶೈಕ್ಷಣ ಕವಾಗಿ ಮುಂದುವರಿದ ದೇಶಗಳೂ ಕೂಡ ಭಾರತದ ರೀತಿಯಲ್ಲೇ ಒಕ್ಕೂಟ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದು ಅಲ್ಲಿ ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ನೆರವನ್ನು ನೀಡಿದರೂ ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಪ್ರಾಥಮಿಕವಾಗಿ ರಾಜ್ಯಗಳ ಕೈಗೇ ಕೊಡಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೀಡುವ ಹಣಕಾಸಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದ್ದರೂ ಅವುಗಳ ಮೇಲಿನ ಕೇಂದ್ರದ ಹಿಡಿತ ಮಾತ್ರ ಹೆಚ್ಚಾಗುತ್ತಾ ಹೋಗುತ್ತಿದೆ.

2016-17ರ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ ಪ್ರಕಾರ 864 ವಿಶ್ವವಿದ್ಯಾಲಯಗಳನ್ನು, 40,026 ಕಾಲೇಜುಗಳನ್ನು ಹಾಗೂ 11,669 ಸ್ವತಂತ್ರ ಸಂಸ್ಥೆಗಳನ್ನು ಹೊಂದಿರುವ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯು ಹೆಚ್ಚೆಚ್ಚು ಕೇಂದ್ರೀಕರಣವಾಗುವುದು ಅಕಾಡೆಮಿಕ್ ಗುಣಮಟ್ಟ ಸುಧಾರಣೆಯಾಗುವುದಕ್ಕೆ ನೆರವಾಗುವುದಿಲ್ಲ; ಬದಲಿಗೆ, ಅತಿ-ಅಧಿಕಾರಶಾಹೀಕರಣವಾಗಿ ಅವುಗಳ ನಿರ್ವಹಣೆಯೂ ಹಾಳಾಗುತ್ತದೆಯಲ್ಲದೇ ಅದು ಭ್ರಷ್ಟಾಚಾರಕ್ಕೂ ಹಾದಿ ಮಾಡಿಕೊಡುತ್ತದೆ.

ಭಾರತದ ಉನ್ನತ ಶಿಕ್ಷಣ ಆಯೋಗ ಮಸೂದೆಯಲ್ಲಿರುವ ಅತ್ಯಂತ ಆಘಾತಕಾರಿ ಅಂಶ ಎಂದರೆ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳೆರಡನ್ನೂ “ಉನ್ನತ ಶಿಕ್ಷಣ ಸಂಸ್ಥೆಗಳು” ಎಂಬ ವಿಭಾಗದಡಿಯಲ್ಲಿ ಏಕೀಭವಿಸಿ ಎರಡಕ್ಕೂ ಒಂದೇ ರೀತಿಯ ನಿಯಮಾವಳಿಗಳನ್ನು ಹೇರುವ ಮೂಲಕ ವಿಶ್ವವಿದ್ಯಾಲಯಗಳನ್ನು ಕಾಲೇಜುಗಳ ಮಟ್ಟಕ್ಕೆ ಇಳಿಸಿರುವುದು.

ಈಗಿರುವ ನಿಯಮಾವಳಿಗಳ ಪ್ರಕಾರ ತಮ್ಮದೇ ಆದ ಹೊಸ ಕೋರ್ಸುಗಳನ್ನು ಪ್ರಾರಂಭಿಸುವುದಕ್ಕೆ ವಿಶ್ವವಿದ್ಯಾಲಯಗಳಿಗೆ ಅಧಿಕಾರವಿದೆ. ವಿಶ್ವವಿದ್ಯಾಲಯಕ್ಕೆ ಸೇರಿರುವ ಯಾವುದಾದರೂ ಕಾಲೇಜು ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲು ಇಚ್ಛಿಸಿದರೆ ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಆದರೆ, ಈ ಮಸೂದೆಯ ಪ್ರಕಾರ ಹೊಸ ಕೋರ್ಸುಗಳನ್ನು ಪ್ರಾರಂಭಿಸುವುದಕ್ಕೆ ವಿಶ್ವವಿದ್ಯಾಲಯಗಳೂ ಕೂಡ ಭಾರತದ ಉನ್ನತ ಶಿಕ್ಷಣ ಆಯೋಗದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.

ಈಗ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳು ಎಷ್ಟೇ ಹಳೆಯವಾಗಿದ್ದರೂ, ಎಷ್ಟೇ ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದರೂ ಅವುಗಳಲ್ಲಿ ಈಗಾಗಲೇ ಜಾಲ್ತಿಯಲ್ಲಿರುವ ಕೋರ್ಸುಗಳಿಗೂ ಕೂಡ ಮೂರು ವರ್ಷಗಳ ಒಳಗೆ ಅನುಮತಿಯನ್ನು ಪಡೆಯಬೇಕು. ಇಲ್ಲದಿದ್ದರೆ ಅಂತಹ ಕೋರ್ಸುಗಳು ರದ್ದಾಗಿ ಹೋಗುತ್ತವೆ. ಯಾವುದೇ ಕೋರ್ಸುಗಳಿಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವ ಅಧಿಕಾರವೂ ಈ ಆಯೋಗಕ್ಕಿರುತ್ತದೆ. ಮಾತ್ರವಲ್ಲ, ಮಸೂದೆಯ ಸೆಕ್ಷನ್ 20ರ ಪ್ರಕಾರ ಆಯೋಗದ ನಿಯಮಾವಳಿಗೆ ಬದ್ಧವಾಗಿಲ್ಲದ ವಿಶ್ವವಿದ್ಯಾಲಯಗಳಿಗೆ ದಂಡ ವಿಧಿಸುವ ಅಥವಾ ಕ್ರಿಮಿನಲ್ ಮೊಕದ್ದಮೆ ಹಾಕುವ ಅಧಿಕಾರವೂ ಆಯೋಗಕ್ಕಿದೆ. ಸೆಕ್ಷನ್ 16ರಿಂದ 20 ರವರೆಗಿನ ಕಲಮುಗಳ ಅಡಿಯಲ್ಲಿ ಉನ್ನತ ಶಿಕ್ಷಣ ಆಯೋಗವು ಹೊರಡಿಸುವ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೂ ಅವಕಾಶವಿಲ್ಲ. ಆಯೋಗದ ನಿರ್ಧಾರದಿಂದ ಯಾವುದಾದರೂ ಶಿಕ್ಷಣ ಸಂಸ್ಥೆಗೆ ತೊಂದರೆಯಾಗಿದ್ದರೆ ಶಿಕ್ಷಣ ಸಂಸ್ಥೆಯು ಅದನ್ನು ಪ್ರಶ್ನಿಸಿ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಸಾಂವಿಧಾನಾತ್ಮಕ ಪರಿಹಾರ ಕೋರಿ ಹೈಕೋರ್ಟಿಗೆ ಹೋಗಬೇಕಾಗುತ್ತದೆ. ಭಾರತದ ಉನ್ನತ ಶಿಕ್ಷಣ ಆಯೋಗವು ಇಷ್ಟು ಕೆಳಹಂತಕ್ಕೆ ಇಳಿದು ನಿಯಂತ್ರಣ ಮಾಡುವುದು ಅನಗತ್ಯ ಮಾತ್ರವಲ್ಲ ಅದು ಸ್ವಾಭಿಮಾನಿ ಶಿಕ್ಷಣ ಸಂಸ್ಥೆಗಳಿಗೆ ಮಾಡುವ ಅವಮಾನ ಕೂಡ.

ವಿವಿಧ ಕೋರ್ಸುಗಳಿಗೆ ಅನುಮತಿ ಕೋರಿ ಪ್ರತೀ ವರ್ಷ ದೇಶದಾದ್ಯಂತ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಲಕ್ಷಾಂತರ ಅರ್ಜಿಗಳು ಬರಲಾರಂಭಿಸುತ್ತವೆ. ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಷ್ಟು ಪರಿಣತಿಯಾಗಲೀ ಅಥವಾ ಸಮಯವಾಗಲೀ ಉನ್ನತ ಶಿಕ್ಷಣ ಆಯೋಗಕ್ಕೆ ಇಲ್ಲ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಅವುಗಳನ್ನು ಸಿಬ್ಬಂದಿಯೇ ಭೌತಿಕವಾಗಿ ಪರಿಷ್ಕರಿಸಬೇಕಾಗುತ್ತದೆ. ನಂತರದಲ್ಲಿ ತಜ್ಞರ ಸಮಿತಿಗಳನ್ನು ರಚಿಸಿ ಪರಿಶೀಲನೆಗಾಗಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಕಳಿಸಬೇಕಾಗುತ್ತದೆ. ಈ ಸುದೀರ್ಘ ಮತ್ತು ತ್ರಾಸದಾಯಕ ಪ್ರಕ್ರಿಯೆಯ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ ಕೆಲಸಗಳು ಬಾಧಿತವಾಗುತ್ತವೆಯಲ್ಲದೇ ಅವುಗಳ ಮೇಲೆ ಅನಗತ್ಯ ಹೊರೆ ಹೇರಿದಂತಾಗುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಕೇಂದ್ರ ಮತ್ತು ರಾಜ್ಯಗಳ ನಡೆಯುತ್ತಾ ಬಂದಿರುವ ಸುದೀರ್ಘ ತಿಕ್ಕಾಟವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಈ ಮಸೂದೆಯ 16 ರಿಂದ 20ರ ವರೆಗಿನ ಕಲಮುಗಳು ಈ ಸಂಘರ್ಷವನ್ನು ಇನ್ನಷ್ಟು ಉಲ್ಬಣಗೊಳಿಸಲಿವೆ.

ಉತ್ತಮ ಆಡಳಿತದ ಮೂಲಭೂತ ತತ್ವಗಳನ್ನೂ ಈ ಮಸೂದೆ ಉಲ್ಲಂಘಿಸುತ್ತದೆ. ಇಲ್ಲಿಯ ತನಕ ಪಾಲಿಸಿಕೊಂಡು ಬಂದಿರುವ ಆಚರಣೆಯ ಪ್ರಕಾರ ತಳಮಟ್ಟದಲ್ಲಿ ಸ್ಥಳೀಯ ಸರ್ಕಾರಗಳಿಗೆ ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗದಂತಹ ಕೆಲಸಗಳನ್ನು ಮಾತ್ರವೇ ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು. ಆದರೆ, ಭಾರತದ ಉನ್ನತ ಶಿಕ್ಷಣ ಆಯೋಗದ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಶಾಸನಸಭೆಗಳು ರೂಪಿಸಿರುವ ವಿಶ್ವವಿದ್ಯಾಲಯಗಳ ಮೇಲೂ ಸವಾರಿ ಮಾಡುತ್ತಾ ಒಕ್ಕೂಟ ಸಾಮರಸ್ಯಕ್ಕೆ ಕೊಡಲಿ ಏಟು ನೀಡಲು ಹೊರಟಿರುವುದು ಆಕ್ಷೇಪಣೀಯ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ “ಸಲಹಾ ಮಂಡಳಿ”ಯೊಂದನ್ನು ಸ್ಥಾಪಿಸಬೇಕು ಹಾಗೂ ಈ ಮಂಡಳಿಯ ನಿರ್ದೇಶನಗಳನ್ನು ಜಾರಿಗೊಳಿಸುವುದಕ್ಕೆ ಉನ್ನತ ಶಿಕ್ಷಣ ಆಯೋಗವು ಕ್ರಮ ಕೈಗೊಳ್ಳಬೇಕು ಎಂದು ಈ ಮಸೂದೆಯ 24ನೇ ಕಲಮಿನಲ್ಲಿ ಪ್ರಸ್ತಾಪಿಸಲಾಗಿದೆ. ಈಗಿರುವ ಯುಜಿಸಿ ಕಾಯ್ದೆಯಲ್ಲಿ ಅಂತಹ ಯಾವುದೇ ಸಲಹಾ ಮಂಡಳಿಯಿಲ್ಲ. ಯುಜಿಸಿ ಕಾರ್ಯನಿರ್ವಹಣೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಯಾವುದೇ ರೀತಿಯ ನೇರ ಪಾಲ್ಗೊಳ್ಳುವಿಕೆ ಇಲ್ಲ. ಹೊಸ ಮಸೂದೆಯ ಪ್ರಕಾರ ಕೇಂದ್ರ ಸಚಿವರು ನೇರವಾಗಿ ಉನ್ನತ ಶಿಕ್ಷಣ ಆಯೋಗದ ಕಾರ್ಯನಿರ್ವಹಣೆಯಲ್ಲಿ ಪಾಲ್ಗೊಳ್ಳುವುದು ಆಯೋಗದ ಸ್ವಾಯತ್ತತೆಯ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಉನ್ನತ ಶಿಕ್ಷಣ ಕುರಿತ ನೀತಿಗಳನ್ನು ರೂಪಿಸುವ ರಾಷ್ಟ್ರದ ಅತ್ಯುನ್ನತ ಅಂಗವೊಂದರ ಸಲಹಾ ಸಮಿತಿಯ ಅಧ್ಯಕ್ಷತೆಯನ್ನು ಕೇಂದ್ರ ಸಚಿವರೊಬ್ಬರು ವಹಿಸುವುದು ಹಾಗೂ ಆ ಸಮಿತಿಯ ತೀರ್ಮಾನಗಳಿಗೆ ಆಯೋಗವೂ ಹಾಗೂ ರಾಜ್ಯಗಳೂ ಬದ್ಧವಾಗಿರಬೇಕೆಂದು ಕಟ್ಟುಪಾಡು ವಿಧಿಸುವುದು ಆಯೋಗದ ಸ್ವಾಯತ್ತತೆಯ ಹಿತದೃಷ್ಟಿಯಿಂದಾಗಲೀ ಅಥವಾ ಒಕ್ಕೂಟ ವ್ಯವಸ್ಥೆಯ ಹಿತದೃಷ್ಟಿಯಿಂದಾಗಲೀ ಸರಿಯಾದುದಲ್ಲ.

ಸಮಸ್ಯೆಗಳೇನೇ ಇರಲಿ, ಯುಜಿಸಿ ಅಕಾಡೆಮಿಕ್ ವ್ಯಕ್ತಿಗಳಿಂದಲೇ ನಡೆಯಲ್ಪಡುತ್ತಿರುವ ಒಂದು ಅಕಾಡೆಮಿಕ್ ಸಂಸ್ಥೆ. ಯುಜಿಸಿ ಕಾಯ್ದೆಯ ಪ್ರಕಾರ ಅದಕ್ಕೆ ಒಬ್ಬ ಅಧ್ಯಕ್ಷ, ಒಬ್ಬ ಉಪಾಧ್ಯಕ್ಷ ಮತ್ತು 10 ಜನ ಸದಸ್ಯರು ಇರಬೇಕು. ಅಧ್ಯಕ್ಷರಾದವರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಸದಸ್ಯರಾಗಿರುವಂತಿಲ್ಲ. 10 ಮಂದಿ ಸದಸ್ಯರಲ್ಲಿ ಕನಿಷ್ಠ ನಾಲ್ಕು ಮಂದಿ ಪ್ರೊಫೆಸರುಗಳಿರಬೇಕು ಹಾಗೂ ಕನಿಷ್ಠ ಆರು ಮಂದಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಅಧಿಕಾರಿಗಳಾಗಿರುವಂತಿಲ್ಲ. ಆದರೆ, ಈಗ ಪ್ರಸ್ತಾಪಿತವಾಗಿರುವ ಮಸೂದೆಯ ಕಲಂ 3ರ ಪ್ರಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹೊರತುಪಡಿಸಿ ಉನ್ನತ ಶಿಕ್ಷಣ ಆಯೋಗದಲ್ಲಿ 12 ಸದಸ್ಯರಿದ್ದು ಅವರಲ್ಲಿ ಕೇವಲ ನಾಲ್ಕು ಜನ ಮಾತ್ರವೇ ಶಿಕ್ಷಕರಾಗಿರುತ್ತಾರೆ (ಇಬ್ಬರು ಉಪಕುಲಪತಿಗಳು ಮತ್ತು ಇಬ್ಬರು ಪ್ರೊಫೇಸರುಗಳು. ಉಳಿದ ಎಂಟು ಮಂದಿಯನ್ನು ನಾಗರಿಕ ಸೇವಾ ಸಿಬ್ಬಂದಿ, ಅಕಾಡೆಮಿಕ್ ನಿಯಂತ್ರಣ ಪ್ರಾಧಿಕಾರಗಳ ಮುಖ್ಯಸ್ಥರು, ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಸಂಸ್ಥೆಗಳು ಮತ್ತು ಉದ್ಯಮ ವಲಯಗಳಿಂದ ಆಯ್ಕೆ ಮಾಡಲಾಗುತ್ತದೆ. ಹೀಗೆ, ಇಲ್ಲಿ ಶಿಕ್ಷಕರೇ ಅಲ್ಪಸಂಖ್ಯಾತರಾಗಿದ್ದು ನಾಗರಿಕ ಸೇವಾ ಅಧಿಕಾರಿಳು ಮತ್ತು ಅಕಾಡೆಮಿಕ್ ನಿಯಂತ್ರಕರೇ ಇದರ ಉಸ್ತುವಾರಿ ನಡೆಸುತ್ತಾರೆ. ಇದು ಸ್ವೀಕಾರರ್ಹವಲ್ಲ. ಭಾರತದ ಉನ್ನತ ಶಿಕ್ಷಣ ಆಯೋಗವು ಪರಿಣಾಮಕಾರಿ ಅಕಾಡೆಮಿಕ್ ನಿಯಂತ್ರಕನಾಗಿ ಕಾರ್ಯನಿರ್ವಹಿಸಬೇಕೆಂದರೆ ಎಂಟು ಶಿಕ್ಷಕರು ಅದರ ಸದಸ್ಯರಾಗಿರಬೇಕು. ಈ ಎಂಟು ಮಂದಿಯಲ್ಲಿ ನಾಲ್ಕು ಉಪಕುಲಪತಿಗಳು ಮತ್ತು ನಾಲ್ಕು ಪ್ರೊಫೆಸರುಗಳು ಇರಬೇಕು ಹಾಗೂ ಅವರಲ್ಲಿ ಇಬ್ಬರು ಕುಲಪತಿಗಳು ಹಾಗೂ ಇಬ್ಬರು ಪ್ರೊಫೆಸರುಗಳು ರಾಜ್ಯ ವಿಶ್ವವಿದ್ಯಾಲಯಗಳಿಗೆ ಸೇರಿದವರಾಗಿರಬೇಕು.

ಇದನ್ನೂ ಓದಿ : ಶಿಕ್ಷಣ ನೀತಿಯಲ್ಲಿ ಹಿಂದಿಗೆ ಆದ್ಯತೆ ಎಂದ ಕೇಂದ್ರ ಸಚಿವರ ಮಾತಿಗೆ ಆಕ್ರೋಶ

ಯುಜಿಸಿಗೂ ಹಾಗೂ ಪ್ರಸ್ತಾಪಿತ ಉನ್ನತ ಶಿಕ್ಷಣ ಆಯೋಗಕ್ಕೂ ಇರುವ ಮೂಲಭೂತ ವ್ಯತ್ಯಾಸ ಎಂದರೆ ಉನ್ನತ ಶಿಕ್ಷಣ ಆಯೋಗವು ಕೇವಲ ಶಿಕ್ಷಣದ ಗುಣಮಟ್ಟ ಕಾಪಾಡುವುದಕ್ಕೆ ಪ್ರಯತ್ನಿಸುತ್ತದೆಯೇ ಹೊರತು ಯುಜಿಸಿಯಂತೆ ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯ ಮಾಡುವ ಕೆಲಸ ಮಾಡುವುದಿಲ್ಲ. ಯುಜಿಸಿ ಮತ್ತು ಉನ್ನತ ಶಿಕ್ಷಣ ಆಯೋಗ ಎರಡನ್ನೂ ಸೇರಿಸಿ ಹೊಸ ಅಂಗವೊಂದನ್ನು ಸೃಷ್ಟಿಸಿದ್ದರೆ ಗುಣಮಟ್ಟ ನಿಯಂತ್ರಣದ ನಿಯಮಾವಳಿ ಮತ್ತು ಹಣಸಹಾಯ ಎರಡೂ ಅಂಶಗಳಿಗೆ ಒತ್ತು ನೀಡುಬಹುದಿತ್ತಾದ್ದರಿಂದ ಅಂತಹ ಒಂದು ಪ್ರಯತ್ನಕ್ಕೆ ಒಂದಿಷ್ಟು ಮನ್ನಣೆ ಸಿಗುತ್ತಿತ್ತು. ಉನ್ನತ ಶಿಕ್ಷಣ ಆಯೋಗ ಸ್ಥಾಪಿಸಲು ಹೊರಟಿರುವವರು ನೀಡುತ್ತಿರುವ ಕಾರಣ ಏನೆಂದರೆ ಯುಜಿಸಿಯು ಕೇವಲ ಧನಸಹಾಯ ಪ್ರಕ್ರಿಯೆಯಲ್ಲೇ ಮುಳುಗಿರುವುದರಿಂದ ಶಿಕ್ಷಣ ಗುಣಮಟ್ಟ ಕುರಿತ ಕೆಲಸಗಳು ಕಡೆಗಣ ಸಲ್ಪಟ್ಟಿವೆ ಎಂಬುದು. ಇದು ಆಧಾರರಹಿತ ವಾದ. ಈಗ ಉನ್ನತ ಶಿಕ್ಷಣ ಆಯೋಗ ಅಸ್ತಿತ್ವಕ್ಕೆ ಬಂದರೆ ಈ ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯ ಮಾಡುವುದಕ್ಕೆ ಯಾವ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗುತ್ತದೆ ಎಂಬ ಬಗ್ಗೆ ಖಚಿತತೆಯೇ ಇಲ್ಲವಾದ್ದರಿಂದ ಈ ವಿಷಯದಲ್ಲಿ ಮತ್ತಷ್ಟು ಗೊಂದಲವೇರ್ಪಟ್ಟಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯ ಮಾಡುವ ಜವಾಬ್ದಾರಿಯನ್ನು ಈಗ ಯುಜಿಸಿಯ ಜೊತೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯೂ ಸ್ವಲ್ಪ ಮಟ್ಟಿಗೆ ಹೊತ್ತುಕೊಂಡಿದ್ದು ತನ್ನ ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನದ ಮೂಲಕ ಹಣ ಸಹಾಯ ಮಾಡುತ್ತಿದೆ. ಉನ್ನತ ಶಿಕ್ಷಣ ಆಯೋಗವು ಅಸ್ತಿತ್ವಕ್ಕೆ ಬಂದರೆ ಕೇಂದ್ರದ ನೆರವಿನ ಈ ಕಾರ್ಯಕ್ರಮ ಯಥಾಸ್ಥಿತಿಯಲ್ಲೇ ಮುಂದುವರೆಯುತ್ತದೆಯೇ ಎಂಬುದರ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ. ಅಕಾಡೆಮಿಕ್ ಕ್ಷೇತ್ರಕ್ಕೆ ಉತ್ತಮ ಮಾನವ ಸಂಪನ್ಮೂಲಗಳನ್ನು ಸೆಳೆಯುವಲ್ಲಿ ಯುಜಿಸಿ ವೇತನಶ್ರೇಣಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಾ ಬಂದಿದೆ. ಬೋಧಕರ ಸಂಬಳ ಮತ್ತು ಸೇವೆಗಳ ವಿಷಯದಲ್ಲಿ ಉನ್ನತ ಶಿಕ್ಷಣ ಆಯೋಗ ಮಸೂದೆ ಏನನ್ನೂ ಹೇಳಿಲ್ಲ.

ತನ್ನ ಬಜೆಟ್‌ನಲ್ಲಿ ಕೇವಲ ಶೇಕಡ 3.8ರಷ್ಟನ್ನು ಮಾತ್ರ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಮೂಲಕ ಭಾರತವು ಶಿಕ್ಷಣಕ್ಕೆ ಹಣ ನೀಡುವ ವಿಷಯದಲ್ಲಿ 121ನೇ ಸ್ಥಾನದಲ್ಲಿದೆ. ಅದರಲ್ಲಿ ಉನ್ನತ ಶಿಕ್ಷಣಕ್ಕೆ ಬರುವ ಪಾಲು ಇನ್ನೂ ಕಡಿಮೆ ಇದ್ದು ಅದರಲ್ಲೂ ಹೆಚ್ಚಿನ ಪ್ರಮಾಣವನ್ನು “ರಾಷ್ಟ್ರೀಯ ಮಹತ್ವದ ಸಂಸ್ಥೆಗಳು” ಕಬಳಿಸುತ್ತವೆ. ಅಗತ್ಯವಿರುವ ಹಣಕಾಸು ನೀಡದೇ ಕೇವಲ ಶಿಕ್ಷಣ ಗುಣಮಟ್ಟ ಕಾಪಾಡುವುದಕ್ಕೆ ಮಾತ್ರ ನಿಯಂತ್ರಣಗಳ ಮೇಲೆ ನಿಯಂತ್ರಣಗಳನ್ನು ಹೇರುತ್ತಾ ಹೋಗುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಭಾವಿಸುವುದು ಬೋಳೆತನವಾಗುತ್ತದೆ. ಸರ್ಕಾರವು ವಿಶ್ವವಿದ್ಯಾಲಯಗಳಿಗೆ ಹಣ ನೀಡುವ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಹಣ ಹೊಂದಿಸಿಕೊಳ್ಳುವ ತಾಪತ್ರಯವನ್ನು ವಿಶ್ವವಿದ್ಯಾಲಯಗಳಿಗೇ ಬಿಟ್ಟರೆ ಬಡ ಮತ್ತು ಮಧ್ಯಮ ವರ್ಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಬಹಳ ದುಬಾರಿಯಾಗಿಬಿಡುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ಜನಮೂಹಗಳಿಂದ ಬರುವ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಹೇಗೆ ನಿಭಾಯಿಸಬೇಕು ಎಂಬ ವಿಷಯದಲ್ಲಿ ಈ ಮಸೂದೆ ಏನನ್ನೂ ಹೇಳುವುದಿಲ್ಲ.

ಅಲ್ಲದೇ, ವಿದ್ಯಾರ್ಥಿಗಳು ಸಂಶೋಧನಾ ಚಟುವಟಿಕೆಗಳಿಗನ್ನು ಕೈಗೆತ್ತಿಕೊಳ್ಳುವಂತೆ ಉತ್ತೇಜಿಸುವುದಕ್ಕಾಗಿ ಯುಜಿಸಿ ಅನೇಕ ಬಿಡಿಬಿಡಿ ಫೆಲೋಷಿಫ್‍ಗಳನ್ನು ನೀಡುತ್ತದೆ. ಆದರೆ, ಪ್ರಸ್ತಾಪಿತ ಉನ್ನತ ಶಿಕ್ಷಣ ಆಯೋಗವು “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದಕ್ಕೆ ಹಾಗೂ ಸಂಶೋಧನೆಗೆ ಹಣ ನೀಡುವಂತೆ ಸರ್ಕಾರದೊಂದಿಗೆ ಸಮನ್ವಯ ಮಾಡುವುದಕ್ಕೆ ಮಾತ್ರ” ಒತ್ತು ನೀಡುತ್ತದೆ ಎಂದು ಪ್ರಸ್ತಾಪಿತ ಮಸೂದೆಯಲ್ಲಿ ಹೇಳಲಾಗಿದೆ. ಅಂದರೆ, ಅಕೆಡೆಮಿಕ್ ವಲಯದ ಬಿಡಿ ಬಿಡಿ ಸಂಶೋಧನೆಗಳು ಉನ್ನತ ಶಿಕ್ಷಣ ಆಯೋಗಕ್ಕೆ ಆದ್ಯತೆಯ ವಿಷಯವಾಗಿಲ್ಲ ಎಂದರ್ಥ. ಈ ವಿಷಯದಲ್ಲಿ ಭಾರತ ಈಗಾಗಲೇ ಇತರ ದೇಶಗಳಿಗಿಂತ ಬಹಳಷ್ಟು ಹಿಂದುಳಿದಿದ್ದು ಇದ್ದರಿಂದ ಇನ್ನಷ್ಟು ಹಿಂದುಳಿಯುವ ಸಾಧ್ಯತೆಯಿದೆ.

ಬ್ರಿಟನ್ನಿನ 2017ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕಾಯ್ದೆಯೊಂದಿಗೆ ಹೋಲಿಸುವ ಮೂಲಕ ಭಾರತದ ಉನ್ನತ ಶಿಕ್ಷಣ ಆಯೋಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. 1919ರಿಂದ 1989ರ ನಡುವೆ ಬ್ರಿಟನ್ನಿನಲ್ಲಿ ಅಸ್ತಿತ್ವದಲ್ಲಿದ್ದ ಯೂನಿವರ್ಸಿಟಿ ಗ್ರಾಂಟ್ ಕಮೀಷನ್ ಆಫ್ ಯುನೈಟೆಡ್ ಕಿಂಗ್‍ಡಂ ಅನ್ನೇ ಮಾದರಿಯಾಗಿಟ್ಟುಕೊಂಡು ಯೂನಿವರ್ಸಿಟಿ ಗ್ರಾಂಟ್ ಕಮೀಷನ್ (ಯುಜಿಸಿ) ಅನ್ನು ಭಾರತದಲ್ಲಿ ಪ್ರಾರಂಭಿಸಲಾಗಿತ್ತು. ನಂತರ 2017ರಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕಾಯ್ದೆ ಜಾರಿಗೆ ಬಂತು. ಈ ಕಾಯ್ದೆಯ ಪ್ರಕಾರ ಬ್ರಿಟನ್ನಿನಲ್ಲಿ ಆಫೀಸ್ ಆಫ್ ಸ್ಟೂಡೆಂಟ್ಸ್ ಎಂಬ ಸಂರಚನೆಯೊಂದು ರೂಪುಗೊಂಡು ಅದೇ ಬ್ರಿಟನ್ನಿನ ಎಲ್ಲಾ ಸಂಶೋಧನೆಗಳನ್ನು ನಿಯಂತ್ರಿಸುವ ಮತ್ತು ಅವುಗಳಿಗೆ ಧನಸಹಾಯ ಮಾಡುವ ಕೆಲಸ ಮಾಡಲಾರಂಭಿಸಿದೆ. ಭಾರತದಲ್ಲಿ ಉನ್ನತ ಶಿಕ್ಷಣದ ವಿವಿಧ ವಿಭಾಗಗಳಿಗೆ ಹಣ ನೀಡುವುದಕ್ಕೆ ವಿವಿಧ ಸಂಸ್ಥೆಗಳಿದ್ದರೆ ಬ್ರಿಟನ್ನಿನಲ್ಲಿ ಉನ್ನತ ಶಿಕ್ಷಣದ ಎಲ್ಲಾ ವಿಭಾಗಗಳಿಗೆ ಹಣಕಾಸು ಒದಗಿಸುವ ಮತ್ತು ಅವುಗಳನ್ನು ನಿಯಂತ್ರಿಸುವ ಎಲ್ಲಾ ಕೆಲಸವನ್ನು ಈ ಆಫೀಸ್ ಆಫ್ ಸ್ಟೂಡೆಂಟ್ಸ್ ಸಂಸ್ಥೆಯೇ ಮಾಡುತ್ತದೆ.

ನಾಗರಿಕ ಸೇವಾ ಅಧಿಕಾರಿಗಳು ಆಫೀಸ್ ಆಫ್ ಸ್ಟೂಡೆಂಟ್ಸ್ ಸಂಸ್ಥೆಯಲ್ಲಿ ಸದಸ್ಯರಾಗುವುದಕ್ಕೆ ಬ್ರಿಟನ್ನಿನ ಈ ಕಾಯ್ದೆ ಅವಕಾಶ ಕೊಡುವುದಿಲ್ಲ. ಶಿಕ್ಷಣ ಸಂಸ್ಥೆಗಳ ಬಗ್ಗೆ, ಅವುಗಳ ಕೋರ್ಸುಗಳ ಬಗ್ಗೆ ಮತ್ತು ಅಲ್ಲಿನ ಬೋಧಕರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಮಾಜದ ದುರ್ಬಲ ವರ್ಗಗಳಿಗೂ ಉನ್ನತ ಶಿಕ್ಷಣದ ಅವಕಾಶಗಳು ಸರಿಸಮನಾಗಿ ದೊರೆಯುವಂತೆ ಇದರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಶಿಕ್ಷಣ ಸಂಸ್ಥೆಯೊಂದನ್ನು ಮುಚ್ಚಬೇಕಾದರೆ ಅಂತಹ ಸಂಸ್ಥೆಯು “ವಿದ್ಯಾರ್ಥಿಗಳ ರಕ್ಷಣಾ ಅಗತ್ಯಗಳನ್ನು” ಕಡ್ಡಾಯವಾಗಿ ಪೂರೈಸಸಬೇಕೆಂದು ಈ ಕಾಯ್ದೆ ತಾಕೀತು ಮಾಡುತ್ತದೆ. ಅಲ್ಲದೇ, ಪ್ರವೇಶಾತಿ ವಿಷಯದಲ್ಲಿ ವಿದ್ಯಾರ್ಥಿಗಳು ಎಲ್ಲಾ ಮಾಹಿತಿಯನ್ನು ಅರಿತು ವಿವೇಕದ ತೀರ್ಮಾನ ಕೈಗೊಳ್ಳುವುದಕ್ಕೆ ಅನುಕೂಲವಾಗುವಂತೆ ಎಲ್ಲಾ ಮಾಹಿತಿ ವಿದ್ಯಾರ್ಥಿಗಳಿಗೆ ಸಿಗುವಂತೆ ಪ್ರಕಟಿಸಬೇಕೆಂದೂ ಅದು ತಾಕೀತು ಮಾಡುತ್ತದೆ. ತಮ್ಮ ಸಂಸ್ಥೆಯಲ್ಲಿ ಶಿಕ್ಷಣ ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸುವಂತೆ ಅವುಗಳನ್ನು ಈ ಕಾನೂನು ಸದಾ ಪ್ರೇರೇಪಿಸುತ್ತದೆ. ಹೀಗೆ, ಬ್ರಿಟನ್ನಿನ ಈ ಕಾಯ್ದೆಯು ಉನ್ನತ ಶಿಕ್ಷಣದ ಎಲ್ಲಾ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳೇ ಕೇಂದ್ರಸ್ಥಾನದಲ್ಲಿರುವಂತೆ ನೋಡಿಕೊಳ್ಳುತ್ತದೆ.

ಆದರೆ ಭಾರತದಲ್ಲಿ ಈಗ ಪ್ರಸ್ತಾಪಿತವಾಗಿರುವ ಉನ್ನತ ಶಿಕ್ಷಣ ಆಯೋಗ ಇದಕ್ಕೆ ತದ್ವಿರುದ್ದವಾಗಿದ್ದು ಉನ್ನತ ಶಿಕ್ಷಣ ಕ್ಷೇತ್ರವನ್ನೇ ಹಾಳುಮಾಡುವ ಸಾಧ್ಯತೆಯಿದೆ. ನಮಗೆ ಬೇಕಿರುವುದು “1956ರ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಕಾಯ್ದೆ”ಯನ್ನು ರದ್ದುಗೊಳಿಸುವುದಲ್ಲ; ಬದಲಿಗೆ ಅದಕ್ಕೆ ಅಗತ್ಯ ತಿದ್ದುಪಡಿ ತರುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇನ್ನಷ್ಟು ಸ್ವಾಯತ್ತತೆ ನೀಡುವುದು ಹಾಗೂ ಖಾಸಗಿ ಸಂಸ್ಥೆಗಳ ಆಟೋಪಗಳನ್ನು ನಿಯಂತ್ರಿಸುವುದಕ್ಕೆ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುವುದು. ಜೊತೆಗೆ, ಬೋಧನೆ ಮತ್ತು ಸಂಶೋಧನೆಗೆ ಕೇಂದ್ರ ಸರ್ಕಾರ ನೀಡುವ ಹಣವನ್ನು ಗಣನೀಯವಾಗಿ ಹೆಚ್ಚಿಸುವ ಅವಶ್ಯಕತೆಯಿದೆಯಲ್ಲದೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೂ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವುದಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅತ್ಯಂತ ನಿಕೃಷ್ಟವಾಗಿ ರೂಪುಗೊಂಡಿರುವ “ಭಾರತದ ಉನ್ನತ ಶಿಕ್ಷಣ ಆಯೋಗ ಮಸೂದೆ”ಯನ್ನು ಕೂಡಲೇ ಹಿಂಪಡೆಬೇಕು.

ಲೇಖನದ ಮೂಲ ಲೇಖಕರು ಕೆ ಅಶೋಕವರ್ಧನ ಶೆಟ್ಟಿ ನಿವೃತ್ತ ಐಎಎಸ್ ಅಧಿಕಾರಿ, ಮದ್ರಾಸ್ ಯೂನಿವರ್ಸಿಟಿಯ ಮಾಜಿ ರಿಜಿಸ್ಟ್ರಾರ್ ಹಾಗೂ ಚೆನ್ನೈನ ಇಂಡಿಯನ್ ಮೇರಿಟೈಂ ಯೂನಿವರ್ಸಿಟಿಯ ಮಾಜಿ ಉಪಕುಲಪತಿ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More