ಸಾಂವಿಧಾನಿಕ ಮಾನ್ಯತೆ ಪಡೆದ ಹಿಂದುಳಿದ ವರ್ಗಗಳ ಆಯೋಗ ಮುಂಬರುವ ಸವಾಲುಗಳನ್ನು ಎದುರಿಸಬಲ್ಲದೇ?  

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ವಿಧೇಯಕಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ದೇಶದುದ್ದಗಲಕ್ಕೂ ಪ್ರಬಲ ಜಾತಿಗಳು ತಮ್ಮನ್ನೂ ಒಬಿಸಿ ಅಡಿ ತರಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಮಾನ್ಯತೆ ನೀಡುವ ವಿಧೇಯಕಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತ ಬೆನ್ನಿಗೇ ಬಿಜೆಪಿಯು ‘ಹಿಂದುಳಿದ ವರ್ಗಗಳ ಅಭಿವೃದ್ಧಿ ಸಪ್ತಾಹ’ವನ್ನು ಆಚರಿಸಲು ಮುಂದಾಗಿದೆ. ಆ.೧೫ರಿಂದ ೩೦ರವರೆಗೆ ನಡೆಯಲಿರುವ ಈ ಸಪ್ತಾಹದ ವೇಳೆ ಪಕ್ಷವು, ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಯಲು ಬಿಜೆಪಿ ನೇತೃತ್ವದ ಪ್ರಸಕ್ತ ಕೇಂದ್ರ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸಲು ದೇಶಾದ್ಯಂತ ವಿವಿಧೆಡೆ ಸಮಾವೇಶಗಳನ್ನು ಆಯೋಜಿಸಲಿದೆ.

ವಿಧೇಯಕದ ಅನುಮೋದನೆಯನ್ನು, ಪ್ರಧಾನಿ ನರೇಂದ್ರ ಮೋದಿಯವರು ಇದಾಗಲೇ, ‘ನಿಜವಾದ ಆಗಸ್ಟ್‌ ಕ್ರಾಂತಿ’ ಎಂದು ಕರೆದಿದ್ದಾರೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯ ಮೂಲ ನಿಬಂಧನೆಗಳನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರವು ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದ ಬೆನ್ನಿಗೇ ಎನ್‌ಸಿಬಿಸಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಈ ಹಿಂದೆ ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾದ ಕೂಡಲೇ ಸಂಬಂಧಪಟ್ಟವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ, ಇದು ಕಾಯಿದೆಯ ಒಟ್ಟು ಆಶಯವನ್ನೇ ದುರ್ಬಲಗೊಳಿಸುತ್ತದೆ ಎಂದು ರಾಷ್ಟ್ರಾದ್ಯಂತ ದಲಿತ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗಳನ್ನು ನಡೆಸಿದ್ದವು. ಇದೀಗ, ಯಾವುದೇ ನ್ಯಾಯಾಂಗ ಆದೇಶಗಳಿಗೆ ಒಳಪಡದಂತೆ ಮೂಲ ನಿಬಂಧನೆಗಳನ್ನು ಮರುಜಾರಿಗೊಳಿಸಿ ಸರ್ಕಾರವು ಹೊಸ ವಿಧೇಯಕವನ್ನು ಜಾರಿಗೊಳಿಸಿದೆ. ಹೀಗೆ ಎರಡು ದಿನದ ಅವಧಿಯಲ್ಲಿಯೇ ದಲಿತ ಹಾಗೂ ಹಿಂದುಳಿದವರ್ಗಗಳೆರಡರ ಹಕ್ಕುಗಳನ್ನು ರಕ್ಷಿಸಲು ಪೂರಕವಾದ ವಿಧೇಯಕಗಳನ್ನು ಜಾರಿಗೊಳಿಸಿರುವ ಶ್ರೇಯವನ್ನು ಪಡೆಯಲು ಸಹಜವಾಗಿಯೇ ಬಿಜೆಪಿಯು ಉತ್ಸುಕವಾಗಿದೆ.

ಈ ವರ್ಷಾಂತ್ಯದ ವೇಳೆಗೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಮೂರೂ ರಾಜ್ಯಗಳಲ್ಲಿ ದಲಿತ ಹಾಗೂ ಹಿಂದುಳಿದವರ್ಗಗಳ ಸಮುದಾಯಗಳ ಬಾಹುಳ್ಯ ಹೆಚ್ಚಿದೆ. ಅಲ್ಲದೆ, ಮುಂಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳುವ ಬಗ್ಗೆ ವ್ಯಾಪಕ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಹಿಂದುಳಿದವರ್ಗಗಳು ಮತ್ತು ದಲಿತರನ್ನು ತಲುಪುವುದು ಪಕ್ಷಕ್ಕೆ ಹೆಚ್ಚು ಅಗತ್ಯವಾಗಿದೆ. ಇದೇ ವೇಳೆ, ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳಲ್ಲಿ ಪ್ರಬಲ ಸಮುದಾಯಗಳು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಒತ್ತಡವನ್ನು ಹೇರಿವೆ. ಗುಜರಾತ್‌ನಲ್ಲಿ ಪಟೇಲ್‌ ಸಮುದಾಯ, ಹರಿಯಾಣ, ಉತ್ತರ ಪ್ರದೇಶ, ರಾಜಾಸ್ಥಾನಗಳಲ್ಲಿ ಜಾಟ್‌ ಸಮುದಾಯ, ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಗಳು ಒಬಿಸಿ ವ್ಯಾಪ್ತಿಯಡಿ ತಮ್ಮನ್ನು ತರುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿವೆ. ಈ ಎಲ್ಲ ಪ್ರತಿಭಟನೆಗಳೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿರುಸನ್ನು ಪಡೆದಿರುವುದನ್ನು ಗಮನಿಸಬಹುದು. ಸಮಾಜದ ಮೇಲ್ವರ್ಗಗಳಲ್ಲಿ ಗಣನೀಯ ಬೆಂಬಲವನ್ನು ಪಡೆದಿರುವ ಬಿಜೆಪಿಯು ಅಧಿಕಾರದಲ್ಲಿರುವ ವೇಳೆ ತಮ್ಮ ಹಿತಾಸಕ್ತಿಯನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು ಎನ್ನುವ ಒತ್ತಾಸೆ ಈ ಸಮುದಾಯಗಳಲ್ಲಿದೆ. ಬಹುತೇಕವಾಗಿ ಕೃಷಿ ಹಾಗೂ ವ್ಯಾಪಾರದಲ್ಲಿ ತೊಡಗಿಕೊಂಡಿರುವ, ಭೂಮಿಯ ಒಡೆತನ ಹೊಂದಿರುವ ಈ ಸಮುದಾಯಗಳು ರಾಜಕೀಯವಾಗಿಯೂ ಪ್ರಬಲವಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಈ ಸಮುದಾಯಗಳಲ್ಲಿನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಜಾಗತೀಕರಣದ ನಂತರದ ದಿನಮಾನಗಳಲ್ಲಿನ ಬದಲಾವಣೆಗಳಿಂದಾಗಿ ಸಾಮಾಜಿಕ ಸ್ಥಾನಮಾನಗಳ ವಿಚಾರದಲ್ಲಿ ಸ್ಪರ್ಧೆಯನ್ನು ಎದುರಿಸುತ್ತಿರುವ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳಲ್ಲಿ ಹತಾಶೆ ಹೆಚ್ಚುತ್ತಿದೆ. ತಮ್ಮದೇ ಸಮುದಾಯದೊಳಗೆ ತಮ್ಮನ್ನು ಅಲಕ್ಷಿಸುತ್ತಿರುವುದು ಹಾಗೂ ಈ ಹಿಂದೆ ಸಾಮಾಜಿಕವಾಗಿ ಜಾತಿ ದೊರಕಿಸುತ್ತಿದ್ದ ಸ್ಥಾನಮಾನಗಳು ಇಂದಿನ ಜಾಗತೀಕರಣದ ಯುಗದಲ್ಲಿ ತೀವ್ರವಾಗಿ ಕುಸಿಯುತ್ತಿರುವುದು ಈ ವರ್ಗಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಜಾತಿ ಶ್ರೇಣೀಕರಣದಲ್ಲಿ ಒಂದೊಮ್ಮೆ ತಮಗಿಂತ ಕೆಳಗಿದ್ದ ಸಮುದಾಯಗಳ ಮಂದಿ ಮೀಸಲಾತಿ ಸೌಲಭ್ಯದ ಕಾರಣದಿಂದಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ದಾಪುಗಾಲು ಹಾಕುತ್ತಿರುವುದು ಈ ಪ್ರಬಲ ಜಾತಿಗಳೊಳಗಿನ ಆರ್ಥಿಕವಾಗಿ ಅಷ್ಟೇನೂ ಸಶಕ್ತವಾಗಿಲ್ಲದ ವರ್ಗಗಳಲ್ಲಿ ತಮ್ಮನ್ನೂ ಮೀಸಲಾತಿಯ ಸೌಲಭ್ಯದಡಿ ತರಬೇಕು ಎಂದು ಆಗ್ರಹಿಸುವಂತೆ ಮಾಡಿದೆ.

ಇದನ್ನೂ ಓದಿ : ಹಿಂದುಳಿದ ಕೆಲ ನಿರ್ಲಕ್ಷಿತ ಜಾತಿಗಳು ರಾಜಕೀಯ ಪ್ರಾತಿನಿಧ್ಯವನ್ನೂ ಪಡೆದಿಲ್ಲ!

ವಿಪರ್ಯಾಸವೆಂದರೆ, ಇದನ್ನು ಸಾಧ್ಯವಾಗಿಸುವ ದಿಕ್ಕಿನಲ್ಲಿ ಸಾಕಷ್ಟು ಸಾಂವಿಧಾನಿಕ ಎಡರುತೊಡರುಗಳಿವೆ. ಮೀಸಲಾತಿ ಕುರಿತಾಗಿ ಇರುವ ಸಾಂವಿಧಾನಿಕ ನಿಬಂಧನೆಗೊಳಪಟ್ಟೇ ಇದೆಲ್ಲವನ್ನೂ ಸಾಧ್ಯವಾಗಿಸಬೇಕಾದ ಅನಿವಾರ್ಯತೆ ಇದೆ. ನೂತನ ವಿಧೇಯಕದ ಮೂಲಕ ಸಾಂವಿಧಾನಿಕ ಸ್ಥಾನಮಾನ ಪಡೆಯಲಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಭವಿಷ್ಯದಲ್ಲಿ ಪ್ರಬಲ ಜಾತಿಗಳು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಮನವಿಗಳನ್ನು ಮಾಡಬಹುದು, ಒತ್ತಡವನ್ನೂ ಹೇರಬಹುದು. ವಿವಿಧ ರಾಜ್ಯ ಸರ್ಕಾರಗಳೂ ಸಹ ಆಯೋಗದ ಮುಂದೆ ತಮ್ಮ ಶಿಫಾರಸ್ಸುಗಳನ್ನು, ವಾದಗಳನ್ನೂ ಒಯ್ಯಬಹುದು. ಆಗ ನಿಜಕ್ಕೂ ಹಿಂದುಳಿದ ವರ್ಗಗಳ ಹಿತವನ್ನು ಕಾಪಾಡುವಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಧ್ಯವಾಗಲಿದೆಯೇ ಎನ್ನುವುದನ್ನು ಕಾದುನೋಡಬೇಕು.

ಇತ್ತ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನದ ಲಭ್ಯತೆಯಿಂದಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಬಲಬರಬಹುದು ಎನ್ನುವ ನಿರೀಕ್ಷೆ ಪ್ರಬಲ ಜಾತಿಗಳಲ್ಲಿಯೂ ಇದೆ. ಮತ್ತೊಂದೆಡೆ, ಇದಾಗಲೇ ಒಬಿಸಿ ವ್ಯಾಪ್ತಿಗೊಳಪಟ್ಟಿರುವ ಸಮುದಾಯಗಳಲ್ಲಿ ಪ್ರಬಲ ಜಾತಿಗಳ ಈ ವರಸೆ ಆತಂಕಕ್ಕೆ ಕಾರಣವಾಗಿದೆ. ಮೀಸಲಾತಿಯನ್ನು ಶೇ.೫೦ರ ಆಚೆಗೆ ವಿಸ್ತರಿಸುವುದು ನ್ಯಾಯಾಲಯದ ತೀರ್ಪಿನನ್ವಯ ಸಾಧ್ಯವಿಲ್ಲದೆ ಇರುವುದರಿಂದ ಇರುವ ಮೀಸಲಾತಿಯೊಳಗೆ ಹೊಸದಾಗಿ ಬೇಡಿಕೆ ಮಂಡಿಸಿರುವ ಈ ಸಮುದಾಯಗಳನ್ನೂ ತರುವ ಅನಿವಾರ್ಯತೆ ಎದುರಾಗಬಹುದು. ಇದಾಗಲೇ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಬಿಸಿ ಅಡಿ ಒಳಮೀಸಲಾತಿಗೆ ಆಗ್ರಹಿಸಲಾಗುತ್ತಿದೆ.

ಒಬಿಸಿಯಲ್ಲಿಯೇ ಕೆನೆಪದರದಲ್ಲಿರುವ ಜಾತಿಗಳು ಮೀಸಲಾತಿಯ ಪ್ರಯೋಜನವನ್ನು ವ್ಯಾಪಕವಾಗಿ ಪಡೆಯುತ್ತಿವೆ, ಇದನ್ನು ತಪ್ಪಿಸಲು ತಮ್ಮ ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸಿ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿ ನೀಡಬೇಕು ಎನ್ನುವ ವಾದವಿದೆ. ಈ ಸವಾಲುಗಳನ್ನು ಮುಂದಿನ ದಿನಗಳಲ್ಲಿ ಆಯೋಗ ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಕಾದುನೋಡಬೇಕು. ಇದೇ ವೇಳೆ, ಆಯೋಗದ ಮೂಲಕ ಬಿಜೆಪಿಯು ತನ್ನನ್ನು ನೆಚ್ಚಿಕೊಂಡಿರುವ ಪ್ರಬಲ ಜಾತಿಗಳ ಹಿತಾಸಕ್ತಿಯನ್ನು ಕಾಯಲು, ಅವುಗಳ ನಿರೀಕ್ಷೆಯನ್ನು ತಣಿಸಲು ಯಶಸ್ವಿಯಾಗಲಿದೆಯೇ, ಆ ಮೂಲಕ ರಾಜಕೀಯ ಮೇಲುಗೈ ಸಾಧಿಸಲಿದೆಯೇ ಎನ್ನುವುದನ್ನೂ ಗಮನಿಸಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More