ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ ೧೦ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ರಾಜ್ಯಸಭಾ ಉಪಸಭಾಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿ ಕರ್ನಾಟಕದ ಬಿ ಕೆ ಹರಿಪ್ರಸಾದ್‌

ರಾಜ್ಯಸಭಾ ಉಪಸಭಾಪತಿ ಹುದ್ದೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಯುನ ಹರಿವಂಶ್‌ ನಾರಾಯಣ್‌ ಸಿಂಗ್‌ ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕರ್ನಾಟಕದ ಬಿ ಕೆ ಹರಿಪ್ರಸಾದ್‌ ಕಣಕ್ಕಿಳಿದಿದ್ದಾರೆ. ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಚುನಾವಣೆ ನಡೆಯಲಿದೆ. ಕಳೆದ ಚುಲೈನಲ್ಲಿ ಪಿ ಜೆ ಕುರಿಯನ್‌ ನಿವೃತ್ತರಾದ ನಂತರ ಉಪಸಭಾಪತಿ ಹುದ್ದೆ ಖಾಲಿಯಾಗಿದೆ. ರಾಜ್ಯಸಭೆಯು ೨೪೫ ಸದಸ್ಯರ ಬಲ ಹೊಂದಿದೆ. ಒಂದು ಸ್ಥಾನ ಖಾಲಿ ಇರುವುದರಿಂದ ಗೆಲುವಿಗೆ ೧೨೨ ಸದಸ್ಯರ ಬೆಂಬಲ ಅಗತ್ಯ. ಸದ್ಯ ಬಿಜೆಪಿ ನೇತೃತ್ವದ ಎನ್‌ಡಿಎ ಬಲ ೧೦೮ ಇದ್ದು, ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಬಲ ೧೨೧ ಇದೆ. ೯ ಸದಸ್ಯರನ್ನು ಹೊಂದಿರುವ ಬಿಜೆಡಿ ಹಾಗೂ ೬ ಸದಸ್ಯರ ಬಲ ಹೊಂದಿರುವ ಟಿಆರ್‌ಎಸ್‌ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ. ೬ ಸದಸ್ಯರ ಬಲ ಹೊಂದಿರುವ ತೆಲಗುದೇಶಂ ಪಕ್ಷವು ವಿರೋಧ ಪಕ್ಷಗಳ ಅಭ್ಯರ್ಥಿ ಬೆಂಬಲಿಸುವ ಸಾಧ್ಯತೆ ಇದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಗುರಿ: ಬಿಎಸ್‌ವೈ

ಮಾಸಾಂತ್ಯದಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಹಾಗೂ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಾಗಬೇಕಾದ ಕೆಲಸಗಳಿಗೆ ವಿಶೇಷ ಗಮನ ನೀಡಬೇಕು ಎಂದು ಮನವಿ ಮಾಡಿದ್ದಾಗಿ ಯಡಿಯೂರಪ್ಪ ಹೇಳಿದ್ದಾರೆ.

ನೆಹರೂ ಅವರ ಸ್ವಕೇಂದ್ರಿತ ದೃಷ್ಟಿಕೋನದಿಂದ ಭಾರತ-ಪಾಕಿಸ್ತಾನ ವಿಭಜನೆಯಾಯಿತು- ದಲೈಲಾಮ

ಮಹಾತ್ಮಾಗಾಂಧೀಜಿ ಅವರಿಗೆ ಜವಾಹರಲಾಲ್ ನೆಹರೂ ಅವರ ಬದಲಿಗೆ ಮಹಮ್ಮದ್ ಅಲಿ ಜಿನ್ನಾ ಅವರು ದೇಶದ ಪ್ರಧಾನಿಯಾಗಬೇಕು ಎಂಬ ಬಯಕೆ ಇತ್ತು. ಆದರೆ ಜವಹಾರಲಾಲ್ ನೆಹರೂ ಅವರ ಸ್ವಕೇಂದ್ರಿತ ದೃಷ್ಟಿಕೋನ ಹೊಂದಿದ್ದರಿಂದ ಇದು ಸಾಧ್ಯವಾಗಲಿಲ್ಲ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ಪಣಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದಲೈಲಾಮ , ನೆಹರೂ ದೇಶದ ಮೊದಲ ಪ್ರಧಾನಿಯಾಗಬೇಕು ಎಂಬ ಹಟಕ್ಕೆ ಬಿದ್ದಿದ್ದರಿಂದ ಮಹಾತ್ಮಾಗಾಂಧಿಜಿಯವರ ಆಸೆ ಈಡೇರಲಿಲ್ಲ. ಒಂದು ವೇಳೆ ಜಿನ್ನಾ ಪ್ರಧಾನಿಯಾಗಿದ್ದರೆ, ಭಾರತ -ಪಾಕಿಸ್ತಾನ ಒಂದಾಗಿ ಉಳಿಯುತ್ತಿತ್ತು ಎಂದಿದ್ದಾರೆ. ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ದಲೈ ಲಾಮ ಪ್ರಜಾಪ್ರಭುತ್ವ ವ್ಯವಸ್ಥೆ, ಊಳಿಗಮಾನ್ಯ ಪದ್ದತಿಗಿಂತ ಅತ್ಯುತ್ತಮವಾದದ್ದು ಎಂದವರು ಹೇಳಿದ್ದಾರೆ. ಇದೇ ವೇಳೆ ಇಸ್ಲಾಂ ಧರ್ಮದೊಳಗಿನ ಪಂಥೀಯ ಭಿನ್ನಮತಗಳಿಂದಾಗಿ ರಕ್ತಪಾತವಾಗುತ್ತಿದ್ದು, ಇದರ ನಿವಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಕ್ತ ಪತ್ರಿಕೋದ್ಯಮದ ಮೇಲೆ ಸರ್ಕಾರದ ಸವಾರಿ; ಸಂಪಾದಕರ ಒಕ್ಕೂಟದ ಆಕ್ರೋಶ

ರಾಜಕೀಯ ಹಾಗೂ ವ್ಯಾವಹಾರಿಕ ಹಿತಾಸಕ್ತಿಯಿಂದ ಕೆಲ ಮಾಧ್ಯಮ ಸಂಸ್ಥೆಗಳು ಸ್ವತಂತ್ರ ಪತ್ರಿಕೋದ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಭಾರತದ ಸಂಪಾದಕರ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಡಿಸಿದೆ. ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ಸಂಪಾದಕರ ಒಕ್ಕೂಟವು , “ಮುಕ್ತ ಪತ್ರಿಕೋದ್ಯಮದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಸುದ್ಧಿ ಸಂಸ್ಥೆಗಳ ಮೇಲೆ ರಾಜಕೀಯ ಒತ್ತಡ ಹೇರುತ್ತಿದೆ. ಇದು ಸ್ವತಂತ್ರ ಪತ್ರಿಕೋದ್ಯಮಕ್ಕೆ ಮಾರಕ,” ಎಂದು ತಿಳಿಸಿದೆ. ಕಳೆದ ವಾರ ಎಬಿಪಿ ನ್ಯೂಸ್‌ನ ಹಿರಿಯ ಪತ್ರಕರ್ತರಿಬ್ಬರ ರಾಜೀನಾಮೆ ಹಿನ್ನೆಲೆಯಲ್ಲಿ ಸಂಪಾದಕರ ಒಕ್ಕೂಟವು ಈ ಹೇಳಿಕೆ ನೀಡಿದೆ.

ಕೇಂಬ್ರಿಜ್ ಅನಾಲಿಟಿಕಾ ವಿರುದ್ಧ ಪ್ರಾಥಮಿಕ ವಿಚಾರಣೆಗೆ ಆದೇಶಿಸಿದ ಸಿಬಿಐ

ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಕುರಿತಂತೆ ಸಿಬಿಐ ಬುಧವಾರ ಕೇಂಬ್ರಿಡ್ಜ್‌ ಅನಾಲಿಟಿಕಾ ಹಾಗೂ ಗ್ಲೋಬಲ್ ಸ್ಲೈನ್ಸ್ ರಿಸರ್ಚ್ ಸಂಸ್ಥೆಗಳ ವಿರುದ್ಧ ಪ್ರಾಥಮಿಕ ವಿಚಾರಣೆ ನಡೆಸಲು ಆದೇಶಿಸಿದೆ. ಕೇಂಬ್ರಿಜ್ ಅನಾಲಿಟಿಕಾ ೮೭ ಕೋಟಿ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ನಿಂದ ಅಕ್ರಮವಾಗಿ ಸಂಗ್ರಹಿಸಿದ ಸುದ್ದಿ ಕಳೆದ ತಿಂಗಳು ಆತಂಕ ಸೃಷ್ಟಿಸಿತ್ತು. ಕಳೆದ ಜುಲೈ ತಿಂಗಳಲ್ಲೇ ಕೇಂದ್ರ ಸರ್ಕಾರ ಕೇಂಬ್ರಿಜ್ ಅನಾಲಿಟಿಕಾ ವಿರುದ್ಧ ತನಿಖೆ ಆರಂಭಿಸುವಂತೆ ಸಿಬಿಐಗೆ ಹೇಳಿತ್ತು.

ನವೆಂಬರ್‌ ೨ಕ್ಕೆ ‘ಹೌಸ್‌ ಆಫ್‌ ಕಾರ್ಡ್ಸ್‌’ ಕೊನೆಯ ಸರಣಿ

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸರಣಿ ‘ಹೌಸ್ ಆಫ್ ಕಾರ್ಡ್ಸ್‌’ 6ನೇ ಮತ್ತು ಕೊನೆಯ ಸೀಸನ್‌ ಇದೇ ನವೆಂಬರ್ 2ಕ್ಕೆ ಪ್ರಸಾರವಾಗಲಿದೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್‌, ಎಮ್ಮಿ ಪುರಸ್ಕಾರಗಳಿಗೆ ಪಾತ್ರರಾಗಿರುವ ನಟಿ ರಾಬಿನ್ ರೈಟ್‌ ಸರಣಿಯಲ್ಲಿ ಅಮೆರಿಕದ ಅಧ್ಯಕ್ಷೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡೇನ್ ಲ್ಯಾನ್‌, ಗ್ರೆಗ್‌ ಕಿನ್ನೆರ್‌, ಮೈಖೇಲ್ ಕೆಲ್ಲಿ, ಜೇನ್‌ ಅಟ್ಕಿನ್ಸನ್‌, ಪ್ಯಾಟ್ರಿಷಿಯಾ ಕ್ಲಾರ್ಕ್‌ಸನ್‌ ಮತ್ತಿತರರು ಸರಣಿಯಲ್ಲಿ ನಟಿಸಿದ್ದಾರೆ. ಈ ಸರಣಿಯ ಮೊದಲ ಸೀಸನ್‌ 2013ರಲ್ಲಿ ಮೂಡಿಬಂದಿತ್ತು.

ತಂಡದ ಎಲ್ಲ ಸದಸ್ಯರನ್ನೂ ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ಕೊಹ್ಲಿ ಮನವಿ

ಈ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಮಿಶ್ರಫಲ ಅನುಭವಿಸುತ್ತಾ ಮುನ್ನಡೆದಿರುವ ಟೀಂ ಇಂಡಿಯಾದ ಪ್ರತೀ ಸದಸ್ಯರನ್ನೂ ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ''ಒಬ್ಬ ಇಲ್ಲವೇ ಇಬ್ಬರು ಆಟಗಾರರು ಇಲ್ಲಿ ಮುಖ್ಯವಲ್ಲ. ಬದಲಿಗೆ, ಇದು ಟೀಂ ಇಂಡಿಯಾ ಮಾತ್ರ. ತಂಡದ ಪ್ರತಿಯೊಬ್ಬ ಸದಸ್ಯನೂ ಗೆಲುವಿಗಾಗಿ ಶಕ್ತಿ ಮೀರಿ ಹೋರಾಡುತ್ತಿದ್ದಾರೆ. ನಾನಂತೂ ನನ್ನ ಸಹ ಆಟಗಾರರ ಪ್ರದರ್ಶನದಿಂದ ಸಂತೃಪ್ತನಾಗಿದ್ದೇನೆ,'' ಎಂದು ಲಾರ್ಡ್ಸ್ ಪಂದ್ಯದ ಮುನ್ನಾ ದಿನವಾದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಅಭಿಪ್ರಾಯಿಸಿದರು. ಅಂದಹಾಗೆ, ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ೩೧ ರನ್ ಸೋಲನುಭವಿಸಿದೆ.

ಬೆಳ್ಳಿ ಪದಕ ಗೆದ್ದೆ ಎಂಬ ಹೆಮ್ಮೆ ಇದೆ: ಸಿಂಧು

ಇತ್ತೀಚೆಗಷ್ಟೇ ಚೀನಾದ ನ್ಯಾನ್‌ಜಿಂಗ್‌ನಲ್ಲಿ ಮುಕ್ತಾಯ ಕಂಡ ಪ್ರತಿಷ್ಠಿತ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದದ್ದು ತನ್ನಲ್ಲಿ ಹೆಮ್ಮೆ ಮೂಡಿಸಿದೆ ಎಂದು ಪಿ ವಿ ಸಿಂಧು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಆಕೆ ಬರೆದುಕೊಂಡಿದ್ದಾರೆ. "ಸತತ ಎರಡನೇ ಬಾರಿಗೆ ಬೆಳ್ಳಿ ಪದಕ ಗೆದ್ದದ್ದು ನನ್ನಲ್ಲಿ ಸಂತಸ ತರಿಸಿದೆ. ನಾನು ಚಿನ್ನವನ್ನೇನೂ ಕಳೆದುಕೊಂಡಿಲ್ಲ. ನಾನು ಬೆಳ್ಳಿ ಗೆದ್ದೆ. ಮತ್ತು ನಾನು ಗೆದ್ದ ಈ ಬೆಳ್ಳಿ ಪದಕ ಹೊಳೆಯುತ್ತಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ,'' ಎಂದು ಸಿಂಧು ತಿಳಿಸಿದ್ದಾರೆ. ಬಿಡಬ್ಲ್ಯೂಎಫ್ ವಿಶ್ವಕಪ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಸಿಂಧು, ಸ್ಪೇನ್ ಆಟಗಾರ್ತಿ ಕೆರೊಲಿನಾ ಮರಿನ್ ವಿರುದ್ಧ ಎರಡು ನೇರ ಗೇಮ್‌ಗಳಲ್ಲಿ ಸೋಲನುಭವಿಸಿದ್ದರು.

ಜಮ್ಮು ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ

ಜಮ್ಮು ಕಾಶ್ಮೀರದ ಅವಾಂತಿ ಪೋರ ಬಳಿ ಅಕ್ರಮವಾಗಿ ಗಡಿ ನುಸುಳುತ್ತಿರುವ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಭಾರತೀಯ ಗಡಿ ಭದ್ರತಾ ಪಡೆಯ ಸಿಬ್ಬಂದಿ ಬುಧವಾರ ನಾಲ್ಕು ಮಂದಿ ಉಗ್ರರನ್ನು ಹೊಡೆದುರುಳಿಸಿದೆ. ಈ ಭಾಗದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಸ್ಥಳಿಯರ ಸಹಕಾರದೊಂದಿಗೆ ಪಾಕಿಸ್ತಾನದಿಂದ, ಗಡಿ ಮೂಲಕ ಅಕ್ರಮವಾಗಿ ಉಗ್ರರು ಭಾರತ ಕಣಿವೆ ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ ಎಂದು ಸೇನಾ ಸಿಬ್ಬಂದಿಗಳು ತಿಳಿಸಿದ್ದಾರೆ

ಮುಂಬೈ ಭಾರತ್ ಪೆಟ್ರೋಲಿಯಂನಲ್ಲಿ ಬೆಂಕಿ ಅವಘಡ; ೪೩ ಜನರಿಗೆ ಗಾಯ

ಮುಂಬೈನ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟಿಡ್(ಬಿಪಿಸಿಎಲ್) ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ೪೩ ಜನರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನದ ಸುಮಾರಿಗೆ ಚೆಂಬೂರ್‌ನ ಮಹಲ್‌ಗಾಂವ್‌ನಲ್ಲಿರುವ ಬಿಪಿಸಿಎಲ್ ಘಟಕದಲ್ಲಿ ಅವಘಡ ಸಂಭವಿಸಿದೆ. ಗಾಯಾಳುಗಳ ಪೈಕಿ 22 ಕಾರ್ಮಿಕರಿಗೆ ಬಿಪಿಸಿಎಲ್ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲೇ ಚಿಕಿತ್ಸೆ ನೀಡಿಲಾಗಿದೆ. ಉಳಿದ 21 ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚೆಂಬೂರ್ ನಲ್ಲಿರುವ ಇಂಡೆಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ಅಯ್ಯಪ್ಪನ ಸನ್ನಿಧಾನದಲ್ಲಿ ಹಿಂಸಾಚಾರ; ಮಹಿಳೆಯರ ಪ್ರವೇಶಕ್ಕೆ ಅಡ್ಡಿ
ಲೈಂಗಿಕ ಶೋಷಣೆ ಆರೋಪ; ಕೊನೆಗೂ ರಾಜೀನಾಮೆ ಕೊಟ್ಟ ಕೇಂದ್ರ ಸಚಿವ ಎಂ ಜೆ ಅಕ್ಬರ್‌
Editor’s Pick More