ಇಂದಿರಾ ನೂಯಿ ಅಧಿಕಾರ ತ್ಯಜಿಸಿದ ಮೇಲೆ ಕುಸಿಯಲಿದೆ ಮಹಿಳಾ ಸಿಇಒ ಪ್ರಾಬಲ್ಯ

ವಿಶ್ವದ ಟಾಪ್ 500 ಸಂಸ್ಥೆಗಳಲ್ಲಿ ಸದ್ಯ ಇಂದಿರಾ ನೂಯಿ ಸೇರಿದಂತೆ 24 ಮಹಿಳಾ ಸಿಇಒಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮಹಿಳಾ ಸಿಇಒಗಳು ಅಧಿಕಾರ ತ್ಯಜಿಸಿದಾಗ ಪುರುಷರೇ ಅಧಿಕಾರ ಸ್ವೀಕರಿಸುವುದು ಉನ್ನತ ಸ್ಥಾನಗಳಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಕಡಿಮೆಗೊಳಿಸಿದೆ

ಪೆಪ್ಸಿ ಕೋ ಸಂಸ್ಥೆಯ ಸಿಇಒ (ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ) ಇಂದಿರಾ ನೂಯಿ ಅಕ್ಟೋಬರ್ 3 ರಂದು ನಿವೃತ್ತಿಯಾಗುವ ಮೂಲಕ ಮತ್ತೊಬ್ಬ ಮಹಿಳಾ ಸಿಇಒ ಅಧಿಕಾರ ತ್ಯಜಿಸಲಿದ್ದಾರೆ. ಉದ್ಯಮ ಲೋಕದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುವ ಮಹಿಳೆಯರ ಗುರಿಗೆ ಆದರ್ಶಪ್ರಾಯರಾಗಿ ಇಂದಿರಾ ನೂಯಿ ಕಳೆದ ೧೨ ವರ್ಷಗಳಿಂದ ಪೆಪ್ಸಿ ಸಂಸ್ಥೆಯ ಸಿಇಒ ಆಗಿದ್ದರು. ಜಗತ್ತಿನ ಎರಡನೇ ಅತೀ ದೊಡ್ಡ ಆಹಾರ ಮತ್ತು ಪಾನೀಯ ಸಂಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿರುವ ಇಂದಿರಾ ನೂಯಿ ಈ ವರ್ಷಾಂತ್ಯದೊಳಗೆ ರಾಮೋನ್ ಲಗೌರ್ತರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ಭಾರತದಲ್ಲಿ ಮತ್ತು ಜಾಗತಿಕವಾಗಿ ಅತ್ಯಧಿಕ ವೇತನ ಪಡೆಯುತ್ತಿದ್ದ ಮಹಿಳಾ ಸಿಇಒಗಳ ಪಟ್ಟಿಯಲ್ಲಿ ಇಂದಿರಾ ನೂಯಿ ಅವರ ಹೆಸರು ಪ್ರಥಮ ಸ್ಥಾನದಲ್ಲಿದೆ. ಇಂದಿರಾ ನೂಯಿ ಉದ್ಯಮ ಲೋಕದಲ್ಲಿ ಮಹಿಳೆಯರ ಸಾಧನೆಯ ಪ್ರತೀಕವಾಗಿರುವಂತೆಯೇ, ಅವರ ನಿವೃತ್ತಿ ಉದ್ಯಮ ಲೋಕದ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಪುರುಷರಿಗೆ ಅಧಿಕಾರ ಬಿಟ್ಟುಕೊಡುತ್ತಿರುವ ಮತ್ತೊಂದು ಟ್ರೆಂಡ್‌ಗೂ ಸಾಕ್ಷಿಯಾಗಿದ್ದಾರೆ. 2009ರಿಂದೀಚೆಗೆ ಎಸ್‌&ಪಿ 500 ಸಂಸ್ಥೆಗಳ (ಅಮೆರಿಕದ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಮಾಡಲಾಗಿರುವ ೫೦೦ ಟಾಪ್ ಸಂಸ್ಥೆಗಳು) ಸುಮಾರು ೨೪ ಮಂದಿ ಮಹಿಳಾ ಸಿಇಒಗಳು ಅಧಿಕಾರ ತ್ಯಜಿಸಿದ್ದಾರೆ. ಆದರೆ ಇವರಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಪುರುಷ ಸಿಇಒಗಳಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಹೀಗಾಗಿ ಉನ್ನತ ಸ್ಥಾನಗಳಲ್ಲಿ ಮಹಿಳಾ ಸಿಇಒಗಳ ಪ್ರಾಬಲ್ಯ ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಉದ್ಯೋಗ ನೇಮಕಾತಿ ವೃತ್ತಿಪರ ಸ್ಪೆನ್ಸರ್ ಸ್ಟುವರ್ಟ್ ತಿಳಿಸಿರುವ ಪ್ರಕಾರ ಈ ವರ್ಷ ಇಂದಿರಾ ನೂಯಿ ಹೊರತುಪಡಿಸಿ ಇನ್ನೂ ನಾಲ್ವರು ಸಿಇಒಗಳು ಅಧಿಕಾರ ತ್ಯಜಿಸಲಿದ್ದಾರೆ. ಆದರೆ ಒಬ್ಬ ಮಹಿಳೆ ಮಾತ್ರ ಮುಂದಿನ ವರ್ಷಾರಂಭದಲ್ಲಿ ಉನ್ನತ ಸ್ಥಾನಕ್ಕೇರಲಿದ್ದಾರೆ.

ಪುರುಷ ಪ್ರಾಬಲ್ಯದ ಉದ್ಯಮದಲ್ಲಿ ಮಹಿಳೆಯರು ಉನ್ನತ ಸ್ಥಾನಕ್ಕೇರಬೇಕೆಂದರೆ ಕೇವಲ ಪ್ರತಿಭೆ ಮಾತ್ರ ಸಾಲದು. ಬಹುತೇಕ ಮಹಿಳೆಯರು, ಅದರಲ್ಲೂ ಮುಖ್ಯವಾಗಿ ಭಾರತೀಯ ಉದ್ಯಮಿ ಮಹಿಳೆಯರು ಕೌಟುಂಬಿಕ ಉದ್ಯಮ, ಪೂರ್ವಜರ ಆಸ್ತಿ ಅಥವಾ ಸ್ವಂತ ಉದ್ಯಮದ ಮೂಲಕವೇ ಟಾಪ್ ಸಿಇಒಗಳಾಗಿ ಗುರುತಿಸಿಕೊಂಡವರು. ಕಳೆದ ಕೆಲ ವರ್ಷಗಳಲ್ಲಿ ಜಾಗತಿಕವಾಗಿ ಸುದ್ದಿಯಾಗಿರುವ ‘ಮಿ ಟೂ’ನಂತಹ ಪ್ರಚಾರಾಭಿಯಾನಗಳು ಉದ್ಯಮ ಲೋಕದಲ್ಲಿ ಮಹಿಳೆಯರು ಉನ್ನತ ಸ್ಥಾನಕ್ಕೆ ಏರಲು ಏನೆಲ್ಲಾ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದನ್ನೂ ಬಹಿರಂಗಪಡಿಸಿದೆ. ಸದ್ಯ ಜಾಗತಿಕವಾಗಿ ಔದ್ಯಮಿಕ ಲೋಕದಲ್ಲಿ ಶೇ.5ರಷ್ಟು ಮಾತ್ರ ಮಹಿಳಾ ಸಿಇಒಗಳು, ಉಳಿದಂತೆ ಟಾಪ್ ಸ್ಥಾನಗಳಲ್ಲಿ ಪುರುಷರೇ ತುಂಬಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಮುಖ್ಯವಾಗಿ ಮಹಿಳಾ ಸಿಇಒಗಳು ಅಧಿಕಾರ ತ್ಯಜಿಸಿದಾಗ ಶೇ. ೯೦ರಷ್ಟು ಪ್ರಕರಣಗಳಲ್ಲಿ ಪುರುಷರೇ ಅಧಿಕಾರ ಸ್ವೀಕರಿಸುವುದು ಜಾಗತಿಕವಾಗಿ ಉನ್ನತ ಸ್ಥಾನದಲ್ಲಿ ಮಹಿಳೆಯರ ಸಂಖ್ಯೆ ವಿರಳವಾಗುತ್ತಾ ಹೋಗಲು ಮತ್ತಷ್ಟು ಕೊಡುಗೆ ನೀಡಿದೆ. ಸದ್ಯ ಎಸ್‌&ಪಿ 500 ಸಂಸ್ಥೆಗಳಲ್ಲಿ ೨೪ ಮಹಿಳಾ ಸಿಇಒಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್ ಸಂಸ್ಥೆ ಮಾಡಿರುವ ವಿಶ್ಲೇಷಣೆಯೊಂದು ಹೇಳಿದೆ.

ಕಳೆದ ದಶಕದಲ್ಲಿ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಿಳಾ ಸಿಇಒಗಳು ಪುರುಷರ ಸಮಾನವಾಗಿ ಸಾಧನೆ ಮೆರೆದಿರುವ ಬಗ್ಗೆ ಬಹಳಷ್ಟು ಸಕಾರಾತ್ಮಕ ಸುದ್ದಿಗಳು ಪ್ರಕಟವಾಗಿವೆ. ಆದರೆ ಕಳೆದೆರಡು ವರ್ಷಗಳಿಂದ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಮಹಿಳಾ ಸಿಇಒಗಳು ಇತರ ಕಾರಣಗಳಿಗೇ ಹೆಚ್ಚು ಸುದ್ದಿ ಮಾಡಿದ್ದರು. ೨೦೧೭ ಅಕ್ಟೋಬರ್‌ನಲ್ಲಿ ಆರುಂದತಿ ಭಟ್ಟಾಚಾರ್ಯ ಎಸ್‌ಬಿಐ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಪಡೆದರು. ಆಕ್ಸಿಸ್‌ ಬ್ಯಾಂಕ್‌ನ ಅತೀ ಧೀರ್ಘ ಕಾಲದ ಸಿಒಒ ಆಗಿದ್ದ ಶಿಖಾ ಶರ್ಮಾ ಇದೇ ವರ್ಷಾಂತ್ಯದಲ್ಲಿ ಅಧಿಕಾರ ತ್ಯಜಿಸಲಿದ್ದಾರೆ. ನೀರವ್ ಮೋದಿ ಪ್ರಕರಣದ ಬಿಸಿಯೂ ಶಿಖಾ ಶರ್ಮಾರನ್ನು ತಟ್ಟಿತ್ತು. ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ತಮ್ಮ ಪತಿಯ ಉದ್ಯಮ ವ್ಯವಹಾರಗಳಿಂದಾಗಿ ವಿಚಾರಣೆ ಎದುರಿಸುತ್ತಿದ್ದು, ವಿಸ್ತರಿತ ರಜಾದಲ್ಲಿದ್ದಾರೆ. ಇದೇ ಆಗಸ್ಟ್‌ನಲ್ಲಿ ಅಲಹಾಬಾದ್ ಬ್ಯಾಂಕ್‌ನ ಸಿಇಒ ಆಗಿದ್ದ ಉಷಾ ಅನಂತಸುಬ್ರಹ್ಮಣ್ಯಂ ನಿವೃತ್ತಿಯಾಗಲಿದ್ದಾರೆ.

ಹೀಗಾಗಿ ಸದ್ಯ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಮಹಿಳಾ ಸಿಇಒಗಳ ಪ್ರಾಬಲ್ಯ ಇಳಿದಿದೆ. ಭಾರತದ ಇತರ ಪ್ರಮುಖ ಸಿಇಒಗಳ ಬಗ್ಗೆ ಗಮನಹರಿಸಿದರೆ, ಇಂದಿರಾ ನೂಯಿ ಅವರ ಸಮಕ್ಕೆ ಬೆಳೆದವರೆಂದರೆ ಕಿರಣ್ ಮಜುಂದಾರ್ ಶಾ, ಕಾವೇರಿ ಕಲಾನಿಧಿ ಮತ್ತು ಊರ್ವಿ ಪಿರಮಳ್. ಮಾಧ್ಯಮ ದೈತ್ಯ ಕಲಾನಿಧಿ ಮಾರನ್ ಅವರ ಪತ್ನಿ ಕಾವೇರಿ ಕಲಾನಿಧಿ ಭಾರತದಲ್ಲಿ ಅತೀ ಹೆಚ್ಚು ವೇತನ ಪಡೆಯುವ ಸಿಇಒಗಳಲ್ಲಿ ಒಬ್ಬರು. ಸನ್ ಟಿವಿ ನೆಟ್ವರ್ಕ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರು ಬರೋಬ್ಬರಿ 78 ಕೋಟಿ ರೂಪಾಯಿಗಳ ವಾರ್ಷಿಕ ವೇತನ ಪಡೆಯುತ್ತಾರೆ. ಇನ್ಫೋಸಿಸ್ ಸಿಇಒ ಆಗಿದ್ದ ವಿಶಾಲ್ ಸಿಕ್ಕರನ್ನೂ ಮೀರಿಸಿದ ವರಮಾನ ಕಾವೇರಿ ಅವರದ್ದಾಗಿತ್ತು. ಕಾವೇರಿ ಹಿಂದೆ ಸ್ಪೈಸ್‌ ಜೆಟ್ ಲಿಮಿಟೆಡ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಊರ್ವಿ ಎ ಪಿರಮಳ್ ಅವರು ಅಶೋಕ್ ಪಿರಮಳ್ ಗ್ರೂಪ್‌ನ ಅಧ್ಯಕ್ಷೆ. 32ನೇ ವಯಸ್ಸಿನಲ್ಲಿ ಪತಿಯ ಮರಣದ ನಂತರ ಕುಟುಂಬದ ಉದ್ಯಮದ ನೇತೃತ್ವ ವಹಿಸಿದವರು ಊರ್ವಿ. ಅಶೋಕ್ ಪಿರಮಳ್ ಗ್ರೂಪ್‌ನ ವಾರ್ಷಿಕ ಆದಾಯವನ್ನು ದುಪ್ಪಟ್ಟು ಮಾಡಿದ ಊರ್ವಿ ಅವರ ವಾರ್ಷಿಕ ವೇತನ 10 ಕೋಟಿ ರೂಪಾಯಿಗಳನ್ನು ಮೀರುತ್ತದೆ. ಮತ್ತೊಬ್ಬ ಜನಪ್ರಿಯ ಭಾರತೀಯ ಮಹಿಳಾ ಸಿಇಒ ಕಿರಣ್ ಮಜುಂದಾರ್ ಶಾ ಬಯೋಕಾನ್ ಸಂಸ್ಥೆಯ ಸಿಇಒ. ಅವರು ವಾರ್ಷಿಕವಾಗಿ 16 ಕೋಟಿ ರೂಪಾಯಿಗಳಿಗೂ ಮೀರಿ ವೇತನ ಪಡೆಯುತ್ತಾರೆ.

ಇದನ್ನೂ ಓದಿ : ಬಿಜೆಪಿಯ ಮಹಿಳಾ ರಾಜಕಾರಣಿಗಳೂ ಸಂವೇದನೆ ಕಳೆದುಕೊಂಡರೇ?

ಜಾಗತಿಕವಾಗಿಯೂ ಅತೀ ಹೆಚ್ಚು ಆದಾಯ ಗಳಿಸುವ ಮಹಿಳಾ ಸಿಇಒಗಳು ಈಗ ಬೆರಳೆಣಿಕೆಯಲ್ಲಷ್ಟೇ ಇದ್ದಾರೆ. ಇಂದಿರಾ ನೂಯಿ ಪೆಪ್ಸಿಕೋ ಸಂಸ್ಥೆಯ ಅಧಿಕಾರ ತ್ಯಜಿಸಿದ ನಂತರ ವಿಶ್ವದ ಟಾಪ್ ಸಿಇಒಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಸಿಇಒಗಳೆಂದರೆ ಹಾರ್ಷ್ಲೇ ಸಂಸ್ಥೆಯ ಸಿಇಒ ಮಿಷೆಲ್ ಬಕ್, ಅಲ್ಟಾದ ಮೇರಿ ಡಿಲ್ಲನ್, ಕೊಹ್ಲ್ಸ್‌ನ ಮಿಷೆಲ್ ಗಾಸ್. ಆರೋಗ್ಯ, ಆಟೋಮೊಬೈಲ್ ಮತ್ತು ಔದ್ಯಮಿಕ ಕ್ಷೇತ್ರಗಳಲ್ಲು ಕೆಲವು ಪ್ರಮುಖ ಮಹಿಳೆಯರು ಟಾಪ್ ಸ್ಥಾನದಲ್ಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ನಾರ್ಥ್‌ರಾಪ್ ಗ್ರೂಮನ್‌ ಸಂಸ್ಥೆಗೆ ಕ್ಯಾಥಿ ವಾರ್ಡನ್ ಸಿಇಒ ಆಗಿ ನೇಮಕವಾಗಲಿದ್ದಾರೆ. ಇವರನ್ನು ಹೊರತಾಗಿ ಮಹಿಳಾ ಸಿಇಒಗಳು ವಿಶ್ವದ ಟಾಪ್ ಸಂಸ್ಥೆಗಳ ನೇತೃತ್ವ ವಹಿಸುವ ಸಾಧ್ಯತೆಗಳು ಸದ್ಯದ ಮಟ್ಟಿಗೆ ಕಡಿಮೆಯೇ ಇದೆ.

ಭಾರತ ಅಥವಾ ಜಾಗತಿಕವಾಗಿ ಗಮನಿಸಿದಲ್ಲಿ ಉದ್ಯಮ ಲೋಕದಲ್ಲಿ ಎಲ್ಲಾ ರೀತಿಯ ಹುದ್ದೆಗಳಲ್ಲೂ ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಉದ್ಯಮಗಳಲ್ಲಿ ಪುರುಷ ಕಾರ್ಮಿಕರಿಗೆ ಹೋಲಿಸಿದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಅರ್ಧದಷ್ಟೂ ಇಲ್ಲ. ಇದರ ಜೊತೆಯಲ್ಲಿ ಕಾರ್ಯಸ್ಥಳಗಳಲ್ಲಿ ಬಡ್ತಿ ಅಥವಾ ಆದಾಯ ವೃದ್ಧಿಯ ಸಂದರ್ಭ ಮಹಿಳೆಯರಿಗೆ ಅತಿ ಕಡಿಮೆ ಪ್ರಾಮುಖ್ಯತೆ ಸಿಗುತ್ತದೆ. ಸಂಸ್ಥೆಗಳ ಬೋರ್ಡ್‌ಗಳಲ್ಲಿ ಇಂದಿಗೂ ಪುರುಷ ಸರ್ವಾಧಿಕಾರವೇ ಇದೆ. ಪುರುಷರಂತೆ ಪ್ರತಿಭೆ ಮತ್ತು ಸಾಮರ್ಥ್ಯ ಮಾತ್ರದಿಂದ ಅನಾಯಾಸವಾಗಿ ಸಂಸ್ಥೆಗಳ ಬೋರ್ಡ್ ಸದಸ್ಯರಾಗುವುದು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಸ್ವಲ್ಪ ಹೆಚ್ಚುವರಿ ಪರಿಶ್ರಮ ಮತ್ತು ಪ್ರತ್ಯೇಕವಾಗಿ ನಿಲ್ಲಬಹುದಾದಂತಹ ಸಾಮರ್ಥ್ಯವಿದ್ದಾಗ ಮಾತ್ರ ಬೋರ್ಡ್‌ಗಳಲ್ಲಿ ಸ್ಥಾನ ಸಿಗಬಹುದು. ಹಾಗಿದ್ದರೂ ವಿಶ್ವದ ಟಾಪ್ ೫೦೦ ಸಂಸ್ಥೆಗಳಲ್ಲಿ ಸದ್ಯ ಇಂದಿರಾ ನೂಯಿ ಸೇರಿದಂತೆ ೨೪ ಮಹಿಳಾ ಸಿಇಒಗಳು ಕಾರ್ಯನಿರ್ವಹಿಸುತ್ತಿರುವುದು ಸಮಾಧಾನಕರ ಬೆಳವಣಿಗೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More