ಆರ್‌ಬಿಐಗೆ ನಿರ್ದೇಶಕರಾಗಿ ಗುರುಮೂರ್ತಿ ನೇಮಕಾತಿ ಹಿಂದಿನ ಕಾರ್ಯಸೂಚಿ ಯಾವುದು?

ಹಿಂದುತ್ವದ ಆಧಾರದ ಮೇಲೇ ದೇಶದ ಆರ್ಥಿಕ ನೀತಿಗಳು ನೆಲೆಯಾಗಿರಬೇಕು ಎಂಬ ಪ್ರಬಲ ನಂಬಿಕೆಯ ಗುರುಮೂರ್ತಿ ಮತ್ತು ಮರಾಠೆ ಅವರನ್ನೇ ಆರ್‌ಬಿಐಗೆ ನೇಮಿಸುವ ಮೂಲಕ, ಬಿಜೆಪಿ, ಹಿಂದೂ ರಾಷ್ಟ್ರೀಯ ವಾದದ ಮುಂದುವರಿಕೆಯಾಗಿ ‘ಆರ್ಥಿಕ ರಾಷ್ಟ್ರೀಯವಾದ’ ಬಲಪಡಿಸುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ

“ಭಾರತದಲ್ಲಿ ಸಂವಿಧಾನಕ್ಕಿಂತ ಹಿಂದುತ್ವವೇ ಪರಮೋಚ್ಛ” ಎಂಬ ಧೋರಣೆಯ(೨೦೦೨ರ ಸೆಪ್ಟೆಂಬರ್ ೧೩ರ ಔಟ್‌ಲುಕ್ ಸಂದರ್ಶನ) ಮತ್ತು ಅದೇ ಕಾರಣಕ್ಕಾಗಿ ಅಂಬೇಡ್ಕರ್ ಅವರ ದೂರದೃಷ್ಟಿಯ ಮೇಲೆ ರಚಿತವಾಗಿರುವ ಸಂವಿಧಾನದ ಪುನರ್ ಪರಿಶೀಲನೆ ಪ್ರತಿಪಾದಿಸುವ ಲೆಕ್ಕಿಗ ಎಸ್ ಗುರುಮೂರ್ತಿ ಅವರನ್ನು ಬಿಜೆಪಿ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಸಮಿತಿಯ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

ಕಟ್ಟಾ ಆರ್‌ಎಸ್‌ಎಸ್‌ ವ್ಯಕ್ತಿಯಾಗಿರುವ ಮತ್ತು ಅದರ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್‌ ಸಂಚಾಲಕರೂ ಆಗಿರುವ ಸ್ವಾಮಿನಾಥನ್ ಗುರುಮೂರ್ತಿ ಅವರು, ದೇಶದ ಅರ್ಥವ್ಯವಸ್ಥೆಯೂ ಸೇರಿದಂತೆ ಎಲ್ಲವೂ ಹಿಂದುತ್ವವಾದಿ ಭಾರತೀಯತೆಯ ತಳಹದಿಯ ಮೇಲೆ ನಡೆಯಬೇಕು ಎಂಬ ಧೋರಣೆಯವರು. ಹಾಗೇ ಬ್ಯಾಂಕಿಂಗ್ ಉದ್ಯಮ ತಜ್ಞ ಹಾಗೂ ಆರ್‌ಎಸ್‌ಎಸ್ ಅಂಗಸಂಸ್ಥೆ ಸಹಕಾರ ಭಾರತಿ ಸಂಸ್ಥಾಪಕ ಹಾಗೂ ಎಬಿವಿಪಿಯೊಂದಿಗೆ ದಶಕಗಳ ನಂಟು ಹೊಂದಿರುವ ಸತೀಶ್ ಮರಾಠೆ ಅವರನ್ನು ಕೂಡ ಆರ್‌ಬಿಐನ ಕೇಂದ್ರ ಸಮಿತಿಗೆ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ಇಬ್ಬರ ಅಧಿಕಾರವಧಿ ನಾಲ್ಕು ವರ್ಷಗಳಾಗಿದ್ದು, ಆರ್‌ಬಿಐ ನೀತಿ ಅಥವಾ ಆಡಳಿತದ ವಿಷಯದಲ್ಲಿ ನೇರ ಹಸ್ತಕ್ಷೇಪದ ಅಧಿಕಾರವಿಲ್ಲದ ಆ ಸಮಿತಿ, ಹಣಕಾಸು ನೀತಿಗಳ ಕುರಿತ ಸಂವಾದ, ಚರ್ಚೆಯ ಅಧಿಕಾರವನ್ನು ಮಾತ್ರ ಹೊಂದಿದೆ.

ಆದರೆ, ಯಾವುದೇ ರಾಜಕೀಯ ಪಕ್ಷದೊಂದಿಗೆ ನೇರವಾಗಿ ಗುರುತಿಸಿಕೊಳ್ಳದೇ ಇರುವ ಹಣಕಾಸು, ಉದ್ಯಮ, ವ್ಯವಹಾರ, ಅರ್ಥಿಕ ವಲಯಗಳಲ್ಲಿ ದಶಕಗಳ ಅನುಭವ ಹೊಂದಿರುವ ಅಥವಾ ಸ್ವತಃ ಅರ್ಥಶಾಸ್ತ್ರ ಪರಿಣತಿ ಹೊಂದಿರುವವರನ್ನು ಈ ಸ್ಥಾನಗಳಿಗೆ ಈವರೆಗೆ ನೇಮಕ ಮಾಡಲಾಗುತ್ತಿತ್ತು. ಪಕ್ಷ ಮತ್ತು ಸಿದ್ಧಾಂತಗಳನ್ನು ಮೀರಿ ಆಯಾ ವಲಯದ ಪರಿಣಿತರನ್ನು ಪಕ್ಷಾತೀತವಾಗಿ ಹಿಂದಿನ ಸರ್ಕಾರಗಳು ನೇಮಕ ಮಾಡುತ್ತಿದ್ದವು. ಮೋದಿಯವ ಸರ್ಕಾರ ಕೂಡ ಈ ನಾಲ್ಕು ವರ್ಷಗಳಲ್ಲಿ ಅಂತಹ ಕೆಲವು ಅನುಭವಿ ಮತ್ತು ತಜ್ಞರನ್ನು ಆ ಸಮಿತಿಗೆ ನೇಮಕ ಮಾಡಿತ್ತು. ಆದರೆ, ಇದೀಗ ಏಕಾಏಕಿ ಆ ಸಂಪ್ರದಾಯವನ್ನು ಮುರಿದು, ಬಿಜೆಪಿ ಪಕ್ಷದೊಂದಿಗೆ ದಶಕಗಳಿಂದ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇಬ್ಬರನ್ನು ಆ ಸ್ಥಾನಕ್ಕೆ ನೇಮಕ ಮಾಡಿರುವುದು ಹಲವರ ಹುಬ್ಬೇರಿಸಿದೆ.

ಆರ್‌ಬಿಐನಂತಹ ನಿರ್ಣಾಯಕ ಸಂಸ್ಥೆಗೂ ಬಿಜೆಪಿ ನಿಷ್ಠೆಯನ್ನೇ ಮಾನದಂಡವಾಗಿಸಿಕೊಂಡು ಮಾಡಿರುವ ಈ ನೇಮಕವನ್ನು ಈಗಾಗಲೇ ಮಾಧ್ಯಮಗಳು ‘ರಾಜಕೀಯ ನೇಮಕ’ ಎಂದು ವ್ಯಾಖ್ಯಾನಿಸತೊಡಗಿವೆ. ಮೂಲತಃ ಲೆಕ್ಕಪತ್ರ ತಜ್ಞರಾದ ಗುರುಮೂರ್ತಿ ಅವರು, ಪತ್ರಕರ್ತರಾಗಿಯೂ, ಅಂಕಣಕಾರರಾಗಿಯೂ ದೇಶದ ಹಲವು ರಾಜಕೀಯ ಮತ್ತು ಆರ್ಥಿಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆದರೆ, ಈವರೆಗೆ ಸರ್ಕಾರಿ ಅಥವಾ ಅರೆ ಸರ್ಕಾರಿ ಸ್ಥಾನಮಾನಗಳಿಂದ ದೂರವೇ ಉಳಿದು, ಆರ್‌ಎಸ್ಎಸ್ ಸಂಘಟನೆಯನ್ನು ತೊಡಗಿಸಿಕೊಂಡಿದ್ದ ಅವರು, ಇದೀಗ ಇಂತಹ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ. ಆ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಈವರೆಗೆ ಯಾವುದೇ ಸರ್ಕಾರಿ ಸ್ಥಾನಮಾನದಿಂದ ಅಂತರ ಕಾಯ್ದುಕೊಂಡಿದ್ದೆ. ಆದರೆ, ಈಗ ಹೆಚ್ಚಿದ ಒತ್ತಡಕ್ಕೆ ಮಣಿದು ಈ ಸ್ಥಾನ ಒಪ್ಪಿಕೊಂಡಿದ್ದೇನೆ” ಎಂದು ಸ್ವತಃ ಹೇಳಿದ್ದಾರೆ.

ಆದರೆ, ಅವರ ಅಂತಹ ಹೇಳಿಕೆಗಳ ಹೊರತಾಗಿಯೂ ಆ ನೇಮಕ ವಿವಾದ ಸ್ವರೂಪ ಪಡೆಯುತ್ತಿದ್ದು, ಪ್ರಮುಖವಾಗಿ ನೋಟು ಅಮಾನ್ಯೀಕರಣದ ಪ್ರಧಾನಿ ಮೋದಿಯವರ ದುಡುಕಿನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡು ದೇಶದ ಮೊದಲಿಗರಾದ ಗುರುಮೂರ್ತಿ ಅವರಿಗೆ ಆ ಸ್ವಾಮಿನಿಷ್ಠೆಯ ಕಾರಣಕ್ಕಾಗಿ ಈ ಹುದ್ದೆ ಕಲ್ಪಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ನೋಟು ಅಮಾನ್ಯೀಕರಣದ ಅವಾಂತರಗಳು ಮತ್ತು ಆರ್ಥಿಕತೆಗೆ ಅದು ನೀಡಿದ ಪೆಟ್ಟಿನ ಕುರಿತು ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಅರ್ಥಶಾಸ್ತ್ರಜ್ಞರು, ಆರ್ಥಿಕ ವಿಶ್ಲೇಷಕರುಗಳು ಆತಂಕ ವ್ಯಕ್ತಪಡಿಸುತ್ತಿರುವಾಗ, ಗುರುಮೂರ್ತಿ ಅವರು ಏಕಾಂಗಿಯಾಗಿ ಆ ಮೋದಿಯವರ ಆ ಕ್ರಮವನ್ನು ಹಾಡಿಹೊಗಳಿದ್ದರು. ತೀರಾ ಇತ್ತೀಚೆಗೆ, ೨೦೧೭ರ ನವೆಂಬರ್‌ನಲ್ಲಿ ಕೂಡ ಅವರು “೧೯೯೦ರ ಉದಾರೀಕರಣದ ನೀತಿಯಂತೆ, ನೋಟು ಅಮಾನ್ಯೀಕರಣ ಕೂಡ ಭಾರತೀಯ ಅರ್ಥ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಆಮೂಲಾಗ್ರ ಕ್ರಮ” ಎಂದು ತಮ್ಮ ಲೇಖನವೊಂದರಲ್ಲಿ ಸಮರ್ಥಿಸಿಕೊಂಡಿದ್ದರು. ಅಲ್ಲದೆ, ನೋಟು ಅಮಾನ್ಯೀಕರಣದ ಬಳಿಕ ನಿರಂತರವಾಗಿ ದೇಶಾದ್ಯಂತ ಸುತ್ತಾಡಿ ಮೋದಿ ಅವರ ಕ್ರಮವನ್ನು ದೊಡ್ಡ ಸುಧಾರಣೆಯ ನಡೆ ಎಂದು ಪ್ರತಿಪಾದಿಸಿದ್ದರು.

ಸ್ವತಃ ಗುರುಮೂರ್ತಿಯವರೇ ನೋಟು ಅಮಾನ್ಯೀಕರಣದ ಸಲಹೆ ನೀಡಿದ್ದರು ಎಂಬ ಮಾತು ಕೂಡ ಆಗ ಚಾಲ್ತಿಯಲ್ಲಿತ್ತು. ಅಲ್ಲದೆ, ಮೋದಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಯೋಜನಾ ಆಯೋಗವನ್ನು ಬರಖಾಸ್ತುಗೊಳಿಸಿ, ಅದರ ಬದಲಿಗೆ ನೀತಿ ಆಯೋಗ ರಚನೆ ಸೇರಿದಂತೆ ಹಲವು ಸರ್ಕಾರಿ ನೀತಿಗಳ ಬದಲಾವಣೆಯಲ್ಲಿಯೂ ಗುರುಮೂರ್ತಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಅಭಿಪ್ರಾಯಗಳೂ ಇವೆ. ಜೊತೆಗೆ ಆರ್‌ಬಿಐನ ಹಿಂದಿನ ಗವರ್ನರ್ ರಘುರಾಂ ರಾಜನ್ ಅವರನ್ನು ಎರಡನೇ ಅವಧಿಗೆ ಮುಂದುವರಿಸದೇ ಇರುವ ಸರ್ಕಾರದ ನಿಲುವಿನ ಹಿಂದೆಯೂ ಗುರುಮೂರ್ತಿ ಅವರ ಪ್ರಭಾವ ಕೆಲಸ ಮಾಡಿತ್ತು ಎಂಬ ಮಾತೂ ಇದೆ. ಯುಪಿಎ ಅವಧಿಯಲ್ಲಿ ರಘುರಾಂ ರಾಜನ್ ಅವರ ಬಗ್ಗೆಯಾಗಲೀ, ಆರ್‌ಬಿಐ ಕಾರ್ಯನಿರ್ವಹಣೆಯ ಬಗ್ಗೆಯಾಗಲೀ ಹೆಚ್ಚು ಮಾತನಾಡದ ಎಸ್ ಗುರುಮೂರ್ತಿ ಅವರು, ಸರ್ಕಾರ ಬದಲಾಗಿ, ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ರಾಜನ್ ಮತ್ತು ಅವರ ಅವಧಿಯ ಆರ್‌ಬಿಐ ಹಣಕಾಸು ನೀತಿಗಳ ವಿರುದ್ಧ ಪುಂಖಾನುಪುಂಖವಾಗಿ ಟೀಕಿಸತೊಡಗಿದ್ದರು. ಅವರೊಂದಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹಾಗೂ ಸ್ವತಃ ಹಣಕಾಸು ಸಚಿವ ಜೇಟ್ಲಿ ಕೂಡ ದನಿಗೂಡಿಸಿದ್ದರು ಎಂಬುದು ಈಗ ಇತಿಹಾಸ.

ಇಂತಹ ಪೂರ್ವಗ್ರಹಪೀಡಿತ ಮನಸ್ಥಿತಿ ಮತ್ತು ಸೀಮಿತ ಸಿದ್ಧಾಂತಪ್ರೇರಿತ ಆರ್ಥಿಕ ದೃಷ್ಟಿಕೋನದ ವ್ಯಕ್ತಿಯೊಬ್ಬರು ಆರ್‌ಬಿಐ ನಂತಹ ಮಹತ್ವದ ಸಂಸ್ಥೆಯ ಕೇಂದ್ರ ಸಮಿತಿಯ ನಿರ್ದೇಶಕರಾದರೆ, ಅವರ ಆ ಒಲವು-ನಿಲುವುಗಳ ಪ್ರಭಾವ ದೇಶದ ಉನ್ನತ ಹಣಕಾಸು ಕಣ್ಗಾವಲು ವ್ಯವಸ್ಥೆಯಲ್ಲೂ ಕಾಣಿಸಿಕೊಳ್ಳಬಹುದು ಎಂಬ ಆತಂಕ ಕೂಡ ಎದುರಾಗಿದೆ. ಅಲ್ಲದೆ, ಒಂದು ಕಾಲದಲ್ಲಿ ರಿಲಯನ್ಸ್‌ ನಂತಹ ಕಾರ್ಪೊರೇಟ್ ಸಂಸ್ಥೆಯ ಅಕ್ರಮಗಳ ವಿರುದ್ಧದ ವರದಿಗಾರಿಕೆಯ ಮೂಲಕವೇ ಪತ್ರಿಕೋದ್ಯಮದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಗುರುಮೂರ್ತಿಯವರು, ಇದೀಗ ಮೋದಿಯವರ ಆಪ್ತ ವಲಯದಲ್ಲಿರುವ ಆ ಉದ್ಯಮ ಸಂಸ್ಥೆಯ ವಿಷಯದಲ್ಲಿ ಯಾವ ನಿಲುವು ತಳೆಯಬಹುದು? ಅಂತಹ ಅವರ ನಿಲುವು ಆರ್‌ಬಿಐ ನೀತಿಗಳ ಮೇಲೆ ಪ್ರಭಾವ ಬೀರಬಲ್ಲದೆ? ಎಂಬ ಚರ್ಚೆಗಳಿಗೂ ಈ ನೇಮಕಾತಿ ಅವಕಾಶ ಮಾಡಿಕೊಟ್ಟಿದೆ.

ಅಲ್ಲದೆ, ಹಿಂದುತ್ವ ಪ್ರೇರಿತ ರಾಷ್ಟ್ರೀಯತಾವಾದದ ಪ್ರಬಲ ಪ್ರವರ್ತಕರೂ, ಅಂತಹ ಹಿಂದುತ್ವವಾದಿ ‘ಭಾರತೀಯತೆ’ಯ ಆಧಾರದ ಮೇಲೆಯೇ ದೇಶದ ಆರ್ಥಿಕ ನೀತಿಗಳು ಸೇರಿದಂತೆ ಎಲ್ಲಾ ಬಗೆಯ ವಿಷಯಗಳು ನೆಲೆಯಾಗಿರಬೇಕು ಎಂಬ ಪ್ರಬಲ ನಂಬಿಕೆಯ ಗುರುಮೂರ್ತಿ ಮತ್ತು ಮರಾಠೆ ಅವರ ಈ ನೇಮಕದ ಮೂಲಕ, ಹಿಂದೂ ರಾಷ್ಟ್ರೀಯತೆಯ ವಾದದ ಮುಂದುವರಿಕೆಯಾಗಿ ‘ಆರ್ಥಿಕ ರಾಷ್ಟ್ರೀಯತಾವಾದ’ವನ್ನು ಬಿಜೆಪಿ ಮತ್ತು ನರೇಂದ್ರ ಮೋದಿಯವರು ಬಲಪಡಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಕೂಡ ಹುಟ್ಟಿದೆ.

ಏಕೆಂದರೆ, ಹಿಂದಿನ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ಸಂವಿಧಾನ ಪರಾಮರ್ಶನ ಕಾರ್ಯವನ್ನು ಇದೀಗ ತೆರೆಮರೆಯಲ್ಲಿ ಮುಂದುವರಿಸಿರುವ ಸಂಘಪರಿವಾರದ ಕೆ ಎನ್ ಗೋವಿಂದಾಚಾರ್ಯ ನೇತೃತ್ವದ ಸಮಿತಿಯಲ್ಲಿ ಗುರುಮೂರ್ತಿ ಅವರೂ ಒಬ್ಬರಾಗಿದ್ದು, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಆಶಯದ ಅಂಬೇಡ್ಕರ್ ಅವರ ಸಂವಿಧಾನವನ್ನು ಹಿಂದೂ ರಾಷ್ಟ್ರೀಯತಾವಾದದ ನೆಲೆಯ ಮೇಲೆ ಪುನರ್ ರಚಿಸುವ ಗುಪ್ತಕಾರ್ಯಸೂಚಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಿಷಯವನ್ನು ಎರಡು ವರ್ಷಗಳ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ಸ್ವತಃ ಗೋವಿಂದಾಚಾರ್ಯರೇ ಬಹಿರಂಗಪಡಿಸಿದ್ದರು. ಅಲ್ಲದೆ, ಗುರುಮೂರ್ತಿ ಅವರು ಕೂಡ ಸಂವಿಧಾನ ಪರಾಮರ್ಶೆಯನ್ನು ಹಲವು ಬಾರಿ ಸಮರ್ಥಿಸಿಕೊಂಡಿದ್ದಾರೆ ಕೂಡ.

ಇದನ್ನೂ ಓದಿ : ನ್ಯಾ.ಜೋಸೆಫ್ ಪದೋನ್ನತಿ ವಿಚಾರ: ಕೇಂದ್ರ ಮತ್ತು ಕೊಲಿಜಿಯಂ ಸಂಘರ್ಷ ಅಂತ್ಯ

ಆ ಹಿನ್ನೆಲೆಯಲ್ಲಿ; ಆರ್‌ಬಿಐನ ಈ ನೇಮಕ ಕೇವಲ ಸರ್ಕಾರದ ಆಡಳಿತಾತ್ಮಕ ಕ್ರಮವಾಗಿ ಮಾತ್ರವಲ್ಲದೆ; ಹಿಂದೂ ರಾಷ್ಟ್ರೀಯತಾ ವಾದದ ಮೇಲೆ ದೇಶದ ಎಲ್ಲಾ ನಿರ್ಣಾಯಕ ಆಯಕಟ್ಟಿನ ಸಂಸ್ಥೆಗಳನ್ನು ಪುನರ್ ರಚಿಸುವ, ನೀತಿಗಳನ್ನು ರೂಪಿಸುವ ಮತ್ತು ಅಂತಿಮವಾಗಿ ಹಿಂದೂರಾಷ್ಟ್ರದ ತನ್ನ ಅಜೆಂಡಾವನ್ನು ನಿಜಗೊಳಿಸುವ ಆರ್‌ ಎಸ್‌ ಎಸ್ ಮತ್ತು ಅದರ ಆಜ್ಞಾನುವರ್ತಿಯಾದ ಪ್ರಧಾನಿ ಮೋದಿಯವರ ದೂರದೃಷ್ಟಿಯ ಕಾರ್ಯಸೂಚಿಯ ಭಾಗವೆ ಎಂಬುದನ್ನು ಕಾದುನೋಡಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More