ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ; ಸಿಎಜಿ ತನಿಖೆಗೆ ಸಿನ್ಹಾ, ಶೌರಿ ಆಗ್ರಹ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ. ಇದರ ಸತ್ಯಾಸತ್ಯತೆ ತಿಳಿಯಲು ಸಿಎಜಿ ತನಿಖೆ ನಡೆಸಿ, ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್ ಶೌರಿ ಆಗ್ರಹಿಸಿದ್ದಾರೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ. ಈ ಸಂಬಂಧ ಪ್ರಧಾನ ಮಹಾಲೆಕ್ಕ ಪರಿಶೋಧಕರು (ಸಿಎಜಿ) ಒಪ್ಪಂದದ ಸಂಪೂರ್ಣ ತನಿಖೆ ನಡೆಸಿ ಮೂರು ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಮಾಜಿ ಕೇಂದ್ರ ಸಚಿವರಾದ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

“ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಹಿಂದಿನ ಸತ್ಯವನ್ನು ಕೇಂದ್ರ ಸರ್ಕಾರವು ಮರೆಮಾಚುತ್ತಿದೆ. ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ರಫೇಲ್‌ ಒಪ್ಪಂದ ವಿಚಾರವನ್ನು ಸಂಸತ್‌ನಲ್ಲಿ ಪದೇಪದೇ ಪ್ರಸ್ತಾಪಿಸುತ್ತಿದ್ದು, ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ತನಿಖೆ ನಡೆಸಬೇಕು” ಎಂದು ಯಶವಂತ್‌ ಸಿನ್ಹಾ ಒತ್ತಾಯಿಸಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಯಶವಂತ್ ಸಿನ್ಹಾ ಮತ್ತು ಅರುಣ್‌ ಶೌರಿ ಅವರು ಬಿಜೆಪಿಯಿಂದ ದೂರಾಗಿ ಮೋದಿ ಸರ್ಕಾರವನ್ನು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕಟುವಿಮರ್ಶೆಗೆ ಒಡ್ಡುತ್ತಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ನಾಯಕರು ಪ್ರಸ್ತಾಪಿಸಿರುವ ಪ್ರಮುಖ ಅಂಶಗಳು ಹೀಗಿವೆ:

  • ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಅಂಶಗಳು ಅದರಲ್ಲೂ ವಿಶೇಷವಾಗಿ ಯುದ್ಧ ವಿಮಾನಗಳಿಗೆ ಸರ್ಕಾರದ ಬೊಕ್ಕಸದಿಂದ ಪಾವತಿಸಲಾಗಿರುವ ಹಣದ ಬಗ್ಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು.
  • ಹಣಕಾಸಿನ ವಿಚಾರದಾಚೆಗೆ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಸರ್ಕಾರಿ ಸಂಸ್ಥೆಗಳನ್ನು ಮೀರಿ ವ್ಯವಹರಿಸಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದೆ. ಆದ್ದರಿಂದ ಈ ಸಂಬಂಧ ವಿರೋಧ ಪಕ್ಷಗಳು ಸರ್ಕಾರದ ಮೇಲೆ ನಿರಂತವಾಗಿ ಒತ್ತಡ ಹೇರಬೇಕು.
  • ವಾಯುಪಡೆಯ ಬೇಡಿಕೆಯ ಮೇರೆಗೆ ಹಿಂದಿನ ಯುಪಿಎ ಸರ್ಕಾರವು ೨೦೦೭ರಲ್ಲಿ ೧೨೬ ಮಧ್ಯಮ ಬಹುಕಾರ್ಯ ನಿರ್ವಹಿಸಬಲ್ಲ ವಿಮಾನಗಳ ಪೂರೈಕೆಗಾಗಿ ಪ್ರಸ್ತಾವ ಸಲ್ಲಿಸಲು ಆದೇಶಿಸಿತ್ತು. ಇದರಲ್ಲಿ ವಿಮಾನಗಳ ಆರಂಭದ ಖರೀದಿ, ತಂತ್ರಜ್ಞಾನ ವರ್ಗಾವಣೆ, ಪರವಾನಗಿ ಉತ್ಪಾದನೆ ಇತ್ಯಾದ ವಿಚಾರಗಳೆಲ್ಲವೂ ಸೇರಿದ್ದವು. ಆದರೆ, ಈಗ ಸರ್ಕಾರವು ಒಪ್ಪಂದಕ್ಕೆ ಇನ್ನೂ ಸಾಕಷ್ಟು ಅಂಶಗಳು ಸೇರಿರುವುದರಿಂದ ಡಸ್ಸಾಲ್ಟ್‌ ಕಂಪನಿಗೆ ವಿಮಾನ ಖರೀದಿಗೆ ಪಾವತಿಸುವ ಮೊತ್ತದಲ್ಲಿ ಹೆಚ್ಚಳವಾಗಿದೆ ಎನ್ನುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ.
  • ಯುದ್ಧ ವಿಮಾನ ಪೂರೈಕೆಗಾಗಿ ಆರು ಕಂಪೆನಿಗಳು ಬಿಡ್‌ ಸಲ್ಲಿಸಿದ್ದವು. ವಿಮಾನಗಳ ಪರಿಶೀಲನೆ ಮತ್ತು ತಾಂತ್ರಿಕ ವಿಶ್ಲೇಷಣೆಯ ನಂತರ ಡಸಾಲ್ಟ್‌ನ ರಫೇಲ್‌ ಮತ್ತು ಏರೋಫೈಟರ್‌ನ ಜಿಎಂಬಿಎಚ್‌ ಟೈಫೂನ್‌ ವಿಮಾನಗಳು ಐಎಎಫ್‌ನ ಬೇಡಿಕೆಗೆ ಪೂರಕವಾಗಿವೆ ಎಂದು ೨೦೧೧ರಲ್ಲಿ ಐಎಎಫ್‌ ಘೋಷಿಸಿತ್ತು. ಡಸಾಲ್ಟ್‌ ಬಿಡ್‌ ಆರ್ಥಿಕವಾಗಿ ಕಡಿಮೆ ಇದ್ದುದರಿಂದ ಭಾರತ ಸರ್ಕಾರವು ಡಸಾಲ್ಟ್‌ ಜೊತೆ ಮಾತುಕತೆಗೆ ಮುಂದಾಗಿತ್ತು.
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ೨೦೧೫ರ ಏಪ್ರಿಲ್‌ನಲ್ಲಿ ಹೊಸ ಒಪ್ಪಂದ ಘೋಷಿಸಿ, ಫ್ರಾನ್ಸ್‌ ಮತ್ತು ಭಾರತ ಜಂಟಿ ಹೇಳಿಕೆ ಬಿಡುಗಡೆ ಮಾಡುವುದಕ್ಕೂ ಮುನ್ನ ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್‌ ಸಮಿತಿಯ ಒಪ್ಪಿಗೆ ಪಡೆದಿದ್ದರೆ ಎನ್ನುವುದನ್ನು ತಿಳಿಸಬೇಕು.
  • ರಫೇಲ್ ಹೊಸ ಒಪ್ಪಂದ ಎಂದು ಸರ್ಕಾರವೇ ಹೇಳುತ್ತಿರುವುದರಿಂದ ಹೊಸ ಟೆಂಡರ್‌ ಏಕೆ ಆಹ್ವಾನಿಸಿಲ್ಲ? ಏರೊಫೈಟರ್‌ ಜಿಎಂನಿಎಚ್‌ ೨೦೧೪ರ ಜುಲೈ ೪ರಂದು ಅಂದಿನ ರಕ್ಷಣಾ ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರಿಗೆ ಔಪಚಾರಿಕವಾಗಿ ಪತ್ರ ಬರೆದು ಏರೊಫೈಟರ್‌ ಟೈಫೂನ್‌ಗೆ ಶೇ.೨೦ರಷ್ಟು ಬೆಲೆ ಕಡಿತಗೊಳಿಸುವುದಾಗಿ ಹೇಳಿದ್ದರೂ ಹೊಸ ಟೆಂಡರ್‌ ಏಕೆ ಆಹ್ವಾನಿಸಲಿಲ್ಲ?
  • ವಿಮಾನ ತಯಾರಿಕೆಯಲ್ಲಿ ದಶಕಗಳ ಅನುಭವವಿರುವ ಸಾರ್ವಜನಿಕ ಉದ್ದಿಮೆ ಸಂಸ್ಥೆಯಾದ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ಯನ್ನು (ಎಚ್‌ಎಎಲ್‌) ಕೈಬಿಟ್ಟು ವಿಮಾನ ತಯಾರಿಕೆಯಲ್ಲಿ ಅನುಭವವೇ ಇಲ್ಲದ, ಬೃಹತ್‌ ಯೋಜನೆಗಳಲ್ಲಿ ವಿಫಲವಾಗಿರುವ, ಸಾಲದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಕಂಪೆನಿಯನ್ನು ಸೇರಿಸಿಕೊಂಡಿದ್ದೇಕೆ?
ಇದನ್ನೂ ಓದಿ : ಉದ್ಯಮಿಗಳ ಒಡನಾಟ ಸಮರ್ಥಿಸಿಕೊಂಡ ಪ್ರಧಾನಿ, ರಫೇಲ್ ಬಗ್ಗೆ ಏಕೆ ತುಟಿಬಿಚ್ಚುತ್ತಿಲ್ಲ?
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More