‘ಎಬಿಪಿ ನ್ಯೂಸ್‌’ ಮಾಜಿ ಸುದ್ದಿವಾಚಕ ಬಾಜ್‌ಪೈ ಬಿಚ್ಚಿಟ್ಟ ರಹಸ್ಯಗಳು | ಭಾಗ 2

‘ಎಬಿಪಿ ನ್ಯೂಸ್‌’ ವರದಿಯೊಂದರ ಹಿನ್ನೆಲೆಯಲ್ಲಿ ಪುಣ್ಯ ಪ್ರಸೂನ್‌ ಬಾಜ್‌ಪೈ ಮತ್ತು ಅವರ ಕೆಲ ಸಹೋದ್ಯೋಗಿಗಳು ಕಳೆದ ವಾರ ರಾಜಿನಾಮೆ ನೀಡಬೇಕಾಯಿತು. ರಾಜಿನಾಮೆಗೂ ಮೊದಲು ನಡೆದಿದ್ದು ಏನೆಂದು ಸ್ವತಃ ಬಾಜ್‌ಪೈ ‘ದಿ ವೈರ್‌’ನಲ್ಲಿ ಬರೆದಿದ್ದಾರೆ. ಅದರ ಭಾವಾನುವಾದ ಇಲ್ಲಿದೆ

ಪ್ರಧಾನಮಂತ್ರಿಗಳ ಚಿತ್ರ ಮತ್ತು ಹೆಸರನ್ನು ಪ್ರದರ್ಶಿಸಿದಂತೆ ಒತ್ತಡ ಎದುರಿಸುತ್ತಿರುವ ಎಬಿಪಿ ನ್ಯೂಸ್‌ನ ಮಾಲೀಕರು ಎದುರಿಸುತ್ತಿರುವ ಬಿಕ್ಕಟ್ಟಾದರೂ ಏನು? ವಾಸ್ತವದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ, ಮೋದಿ ಸರ್ಕಾರದಲ್ಲಿ ಎಲ್ಲವೂ ಮೋದಿ ಅವರ ಸುತ್ತಲೇ ಗಿರಕಿ ಹೊಡೆದಿವೆ; ಮತ್ತು ಭಾರತದಂತಹ ದೇಶದಲ್ಲಿ ಉಳಿದವರನ್ನೆಲ್ಲ ಹೊರತುಪಡಿಸಿ ಅವರನ್ನು ಚಾನೆಲ್‌ಗಳು ಬಿಂಬಿಸಿರುವ ರೀತಿಯೂ ಹಾಗೇ ಇದೆ. ಮೋದಿ ಚಿತ್ರಗಳು ಮತ್ತು ಭಾಷಣಗಳು ಮತ್ತು ಹೇಳಿಕೆಗಳನ್ನು ಅತಿಯಾಗಿಯೇ ಬಿಂಬಿಸಲಾಯಿತು. ಇದನ್ನು ನೋಡಿದ ವೀಕ್ಷಕರಿಗೆ ಅದೇ ಚಟವಾಗಿಹೋಗಿದೆ. ಇದರ ಪರಿಣಾಮವೇನೆಂದರೆ, ಪ್ರಧಾನಿ ಮೋದಿಯವರು ಸುದ್ದಿವಾಹಿನಿಗಳ ಟಿಆರ್‌ಪಿ ಏರಲು ಅನಿವಾರ್ಯವಾಗಿಬಿಟ್ಟರು.

'ಅಚ್ಛೆ ದಿನ್‌' ಎನ್ನುತ್ತ, ದೇಶದ ಪ್ರಗತಿ ಸೂಚಕ ಸಂಕಥನವನ್ನು ವ್ಯಾಪಿಸಿಕೊಳ್ಳಲಾರಂಭಿಸಿದ ಮೇಲೆ ಸುದ್ದಿವಾಹಿನಿಗಳಿಗೂ ಇದು ಅಭ್ಯಾಸವಾಗಿಬಿಟ್ಟಿತು. ಈ 'ಅತಿ' ಕಡಿಮೆ ಆಗದಂತೆ ಎಚ್ಚರ ವಹಿಸಲು ಮೋದಿ ಸರ್ಕಾರವು ೨೦೦ ಸದಸ್ಯರ ಮೇಲ್ವಿಚಾರಕರ ತಂಡ ರಚನೆ ಮಾಡಿದೆ. ವಾರ್ತಾ ಮತ್ತು ಪ್ರಸಾರ ಇಲಾಖೆಯ ಪ್ರಧಾನ ನಿರ್ದೇಶಕರ ಅಡಿ ಕಾರ್ಯನಿರ್ವಹಿಸುವ ಈ ತಂಡವು ಸಂಬಂಧಪಟ್ಟ ಸಚಿವರಿಗೆ ವರದಿಯನ್ನು ಒಪ್ಪಿಸುತ್ತದೆ.

ಈ ೨೦೦ ಸದಸ್ಯರ ತಂಡವು ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ೧೫೦ ಸದಸ್ಯರು ಚಾನೆಲ್‌ಗಳ ಮೇಲೆ ಕಣ್ಣಿಡುತ್ತಾರೆ. ೨೫ ಸದಸ್ಯರು ಸರ್ಕಾರಕ್ಕೆ ಬೇಕಾಗಿರುವ ಒಂದು ರೂಪ ಕೊಡುವ ಕೆಲಸವನ್ನು ಮಾಡುತ್ತಾರೆ. ಉಳಿದ ೨೫ ಸದಸ್ಯರು ಸಿದ್ಧವಾಗಿರುವ ವರದಿಯನ್ನು ಪರಿಶೀಲಿಸುತ್ತಾರೆ. ಈ ವರದಿಯನ್ನು ಆಧರಿಸಿ ಉಪ ಕಾರ್ಯದರ್ಶಿ ಹಂತದ ಮೂವರು ಅಧಿಕಾರಿಗಳು ಒಂದು ವರದಿಯನ್ನು ಸಿದ್ಧ ಮಾಡಿ ವಾರ್ತಾ ಮತ್ತು ಪ್ರಸಾರ ಮಂತ್ರಿಗೆ ಕಳಿಸಿಕೊಡುತ್ತಾರೆ. ಈ ಮೂಲಕ, ಪ್ರಧಾನಿ ಕಚೇರಿಯಲ್ಲಿರುವ ಅಧಿಕಾರಿಗಳು ಕ್ರಿಯಾಶೀಲರಾಗಿ, ಸುದ್ದಿವಾಹಿನಿಗಳ ಸಂಪಾದಕರಿಗೆ ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬ ಸೂಚನೆಗಳನ್ನು ರವಾನಿಸುತ್ತಾರೆ.

ಒಂದು ವೇಳೆ, ಸಂಪಾದಕರೊಬ್ಬರು ಸುದ್ದಿ ಯೋಗ್ಯವೆಂದು ಯಾವುದಾದರೂ ವಿಷಯವನ್ನು ಚಾನೆಲ್‌ನಲ್ಲಿ ಬಿತ್ತರಿಸಿದರೆ, ಸಚಿವಾಲಯ ಅಥವಾ ಪ್ರಧಾನಿ ಕಚೇರಿಯ ಅಧಿಕಾರಿಗಳು ಸಂಬಂಧಪಟ್ಟ ಚಾನೆಲ್‌ನ ಮಾಲೀಕರಿಗೆ ವಿಷಯ ಮುಟ್ಟಿಸುತ್ತಾರೆ. ಈ ಒತ್ತಡದಲ್ಲಿ ಕುಂದಾಗದಿರಲು, ಅವರು ಮೇಲ್ವಿಚಾರಣೆಯ ವರದಿಯ ಜೊತೆಗೇ, ೨೦೧೪ರ ಚುನಾವಣೆಯ ವೇಳೆ ನೀಡಿದ ಭರವಸೆಗಳಿಂದ ಹಿಡಿದು ಅಪನದೀಕರಣದ ಸಮರ್ಥನೆಗಳವರೆಗೆ, ಸರ್ಜಿಕಲ್‌ ಸ್ಟ್ರೈಕ್‌ ಅಥವಾ ಜಿಎಸ್‌ಟಿ ಕುರಿತು ಹಲವು ವಿಷಯಗಳನ್ನು ಕುರಿತು ಪ್ರಧಾನಮಂತ್ರಿಗಳ ಹೇಳಿಕೆಗಳನ್ನು ಹೇಗೆ ಬಿಂಬಿಸಬೇಕು ಎಂಬ ವಿವರಗಳನ್ನು ನೀಡುತ್ತಾರೆ ಅಥವಾ ಸದ್ಯ ಚಾಲ್ತಿಯಲ್ಲಿರುವ ಯೋಜನೆಯೊಂದನ್ನು ಕುರಿತು ವರದಿಯಲ್ಲಿ ಮೋದಿಯವರ ಹಳೆಯ ಹೇಳಿಕೆಯನ್ನು ಹೇಗೆ ಸೇರಿಸಬೇಕು ಎಂಬುದರ ಸೂಚನೆ ನೀಡಲಾಗುತ್ತದೆ. ವಾಸ್ತವದಲ್ಲಿ ಡಜನ್‌ನಷ್ಟು ವಾರ್ತಾ ಮತ್ತು ಪ್ರಸಾರ ಇಲಾಖೆ ಅಧಿಕಾರಿಗಳು ಮತ್ತು ಪ್ರಧಾನಿ ಕಚೇರಿ ಮೊದಲ ಹಂತದಲ್ಲಿ ಕಾರ್ಯನಿರ್ವಹಿಸಿ, ಮೋದಿ ಸರ್ಕಾರದ ಕಥನವು ಯಶಸ್ವಿಯಾಗಿ ಬಿಂಬಿಸುವುದಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕೆಲಸ ಮಾಡುತ್ತವೆ. ಇದು ವಾರ್ತಾ ಮತ್ತು ಪ್ರಸಾರ ಮಂತ್ರಿಗಳ ಸೂಚನೆಯಂತೆ ನಡೆಯುತ್ತದೆ. ಇದು ಹೆಚ್ಚಾಗಿ ಆದೇಶವೇ ಆಗಿರುತ್ತದೆ. ಮೂರನೆಯ ಹಂತದಲ್ಲಿ ಬಿಜೆಪಿಯದ್ದೇ ವಿವಿಧ ಧ್ವನಿಗಳನ್ನು ದಾಖಲಿಸಲಾಗುತ್ತದೆ.

ಆರ್‌ಎಸ್‌ಎಸ್‌, ಬಿಜೆಪಿ ಬಹಿಷ್ಕಾರ

ಒಂದು ವಾಹಿನಿ ಮೋದಿ ಸರ್ಕಾರವನ್ನು ಗುಣಾತ್ಮಕವಾಗಿ ಮಾತ್ರ ಬಿಂಬಿಸದೆ, ವಿಮರ್ಶಾತ್ಮಕವಾಗಿ, ಸತ್ಯಾಂಶಗಳನ್ನು ಆಧರಿಸಿ, ಮೋದಿ ಸರ್ಕಾರದ ಸತ್ಯವು ವಾಸ್ತವದಲ್ಲಿ ಸುಳ್ಳು ಎಂದು ಬಿಂಬಿಸುವ ವರದಿಗಳನ್ನು ಬಿತ್ತರಿಸಿದರೆ, ಕೂಡಲೇ ಬಿಜೆಪಿ ವಕ್ತಾರರಿಗೆ ವಾಹಿನಿಯ ಚರ್ಚೆಗಳಲ್ಲಿ ಪಾಲ್ಗೊಳ್ಳದಿರಲು ಸೂಚಿಸಲಾಗುವುದು. ಚಾನೆಲ್‌ ನಡೆಸುವ ರಾಜಕೀಯ ಚರ್ಚೆಗಳಲ್ಲಿ ಭಾಗಿಯಾಗಿದಂತೆ ಆದೇಶಿಸಲಾಗುತ್ತದೆ. ಇದು ಶುರುವಾಗಿದ್ದು ಇದೇ ವರ್ಷ ಜೂನ್‌ ತಿಂಗಳಲ್ಲಿ ‘ಎಬಿಪಿ’ ನ್ಯೂಸ್‌ನಿಂದಲೇ. ಬಿಜೆಪಿ ವಕ್ತಾರರು ಚಾನೆಲ್‌ ಚರ್ಚೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದರು. ಕೆಲವು ದಿನಗಳ ಬಳಿಕ ಚಾನೆಲ್‌ ಬೈಟ್‌ಗಳನ್ನು ಕೊಡುವುದನ್ನೂ ನಿಲ್ಲಿಸಿದರು. 'ಮಾಸ್ಟರ್‌ ಸ್ಟ್ರೋಕ್‌' ಕಾರ್ಯಕ್ರಮದಲ್ಲಿ 'ಮನ್‌ ಕಿ ಬಾತ್‌' ಕುರಿತು ವಿಶ್ಲೇಷಣೆ ಬಿತ್ತರವಾದ ಮೇಲೆ ಆರ್‌ಎಸ್‌ಎಸ್‌ ಸದಸ್ಯರಿಗೂ ಚಾನೆಲ್‌ ಬಹಿಷ್ಕರಿಸುವಂತೆ ಸೂಚನೆ ಹೋಯಿತು. ಜುಲೈ ೯ರಂದು ಪ್ರೊಫೆಸರ್‌ವೊಬ್ಬರು ಆರ್‌ಎಸ್‌ಎಸ್‌ ಪರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸ್ಟುಡಿಯೋದಲ್ಲಿ ಕೂತಿರುವಾಗಲೇ ಆರ್‌ಎಸ್‌ಎಸ್‌ ಕರೆ ಬಂದು, ಕಾರ್ಯಕ್ರಮದ ಮಧ್ಯೆಯೇ ಎದ್ದುಹೋದರು!

ಇಷ್ಟೆಲ್ಲ ನಡೆಯುತ್ತಿದ್ದರೂ ಚಾನೆಲ್‌ನ ಟಿಆರ್‌ಪಿಯಲ್ಲೇನೂ ಬದಲಾವಣೆ ಆಗಲಿಲ್ಲ. ಬಿಜೆಪಿ ನಾಯಕರ ಗೈರು ಅಥವಾ ಹಾಜರಿ ಮಹತ್ವ ಎನಿಸಲೇ ಇಲ್ಲ. ಈ ಹೊತ್ತಿನಲ್ಲೇ, ಜುಲೈ ೫-೧೨ರ ಅವಧಿಯ ಟಿಆರ್‌ಪಿ ವರದಿ ಬಂತು. ಇದರಲ್ಲಿ ದೇಶದ ಎರಡನೇ ಅತಿದೊಡ್ಡ ಹಿಂದಿ ವಾಹಿನಿ ‘ಎಬಿಪಿ ನ್ಯೂಸ್’ ಆಗಿತ್ತು. ಈ ಅವಧಿಯಲ್ಲೇ ಜಾರ್ಖಂಡ್‌ ಗೊಡ್ಡಾ ವಿದ್ಯುತ್‌ ಸ್ಥಾವರ ಕುರಿತ ವರದಿ ಪ್ರಸಾರವಾಗಿತ್ತು. ಅದಾನಿ ಮತ್ತು ಪ್ರಧಾನಿಗಳ ಸ್ನೇಹದಿಂದಾಗಿ ಹೇಗೆ ರಾಜ್ಯ ಸರ್ಕಾರ ನಿಯಮಗಳನ್ನು ಬದಲಿಸುತ್ತಿದೆ, ಇದರಿಂದಾಗಿ ಸ್ಥಳೀಯರಿಗೆ ಮತ್ತು ಮುಖ್ಯವಾಗಿ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ಮಾತನಾಡಿದ್ದರು. ಹೀಗಾಗಿ ‘ಮಾಸ್ಟರ್‌ ಸ್ಟ್ರೋಕ್‌’ ಸಾಮಾನ್ಯವಾಗಿ ಪಡೆಯುತ್ತಿದ್ದ ರೇಟಿಂಗ್‌ಗಿಂತ ೫ ಪಾಯಿಂಟ್‌ ಹೆಚ್ಚು ಪಡೆದಿತ್ತು.

ಆಗಸ್ಟ್‌ ೩ರಂದು ವಿಕ್ಷದ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಸಂಸತ್ತಿನಲ್ಲಿ, ಸರ್ಕಾರವು ‘ಎಬಿಪಿ’ ಚಾನೆಲ್‌ ಮೇಲೆ ಒತ್ತಡ ತರುತ್ತಿರುವುದು ಮತ್ತು ಬೆದರಿಸುತ್ತಿರುವುದನ್ನು ಪ್ರಸ್ತಾಪಿಸಿ ಖಂಡಿಸಿದರು. ಪತ್ರಕರ್ತರನ್ನು ಕೆಲಸದಿಂದ ತೆಗೆದುಹಾಕುವುದರ ಹಿಂದೆ ಸರ್ಕಾರದ ಪಾತ್ರವಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ತಾ ಮತ್ತು ಪ್ರಸಾರ ಮಂತ್ರಿ ಹೇಳಿದ್ದು ಹೀಗೆ: "ಮಾಸ್ಟರ್‌ ಸ್ಟ್ರೋಕ್‌’ ಕಾರ್ಯಕ್ರಮದಿಂದ ಚಾನೆಲ್‌ಗೆ ಟಿಆರ್‌ಪಿ ಹೆಚ್ಚೇನೂ ಸಿಗುತ್ತಿಲ್ಲ ಎಂದು ಕಾರ್ಯಕ್ರಮವನ್ನು ಸ್ವತಃ ಚಾನೆಲ್‌ ಸ್ಥಗಿತಗೊಳಿಸಿತು.''

ವಾಸ್ತವದಲ್ಲಿ ಚಾನೆಲ್‌ನ ಟಿಆರ್‌ಪಿ ಹೆಚ್ಚುತ್ತಿತ್ತು. ಎಬಿಪಿಯ ‘ಮಾಸ್ಟರ್‌ ಸ್ಟ್ರೋಕ್‌’ ಕಾರ್ಯಕ್ರಮ ಜನಪ್ರಿಯವಾಗಿದ್ದಷ್ಟೇ ಅಲ್ಲ, ಚಾನೆಲ್‌ ಟಿಆರ್‌ಪಿ ಏರಿತ್ತು. ‘ಮಾಸ್ಟರ್‌ ಸ್ಟ್ರೋಕ್‌’ ನಿಖರವಾಗಿ ಮೋದಿ ಸರ್ಕಾರದ ಘೋಷಣೆಗಳ ಸತ್ಯಾಸತ್ಯತೆಯನ್ನು ವರದಿ ಮಾಡಲಾರಂಭಿಸಿತ್ತು. ಈ ಎಲ್ಲ ವರದಿಗಳು ಮೋದಿ ಸರ್ಕಾರದ ಘೋಷಣೆಗಳ ಟೊಳ್ಳುತನವನ್ನು ಎತ್ತಿಹಿಡಿಯಲಾರಂಭಿಸಿದವು.

ಸರ್ಕಾರಕ್ಕೆ ಬಿಕ್ಕಟ್ಟು ಎದುರಾಗುತ್ತಿರುವ ಸುಳಿವು ಸಿಕ್ಕಿತು. ಇತರ ಚಾನೆಲ್‌ ವರದಿಗಳು ಮತ್ತು ಮೋದಿ ಸಮರ್ಥನೆಗಳು ಸುಳ್ಳು ಎಂದು ಹೇಳಿದ್ದನ್ನು ವೀಕ್ಷಕರು ಮೆಚ್ಚಿಕೊಳ್ಳಲಾರಂಭಿಸಿದ್ದರು. ಇದರ ಜೊತೆಗೇ ಚಾನೆಲ್‌ ಟಿಆರ್‌ಪಿಯೂ ಏರುತ್ತಿತ್ತು. ಮುಂದಿನ ದಿನಗಳಲ್ಲಿ ಉಳಿದ ಚಾನೆಲ್‌ಗಳು ಏನು ಮಾಡಬಹುದು ಎಂಬ ಪ್ರಶ್ನೆ ಕಾಡಲಾರಂಭಿಸಿತ್ತು.

ಜೂನ್‌ ೨೦ರಂದು ಪ್ರಧಾನಿ ಮೋದಿಯವರು ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಾರ್ಖಂಡ್‌ನ ಕನ್ಹಾರಿ ಗ್ರಾಮದ ಚಂದ್ರಮಣಿ ಕೌಶಿಕ್‌ ಅವರೊಂದಿಗೆ ಮಾತನಾಡಿದ್ದರು. ಆಕೆ ಆದಾಯ ದುಪ್ಪಟ್ಟಾಗಿರುವುದಾಗಿ ಮೋದಿಗೆ ತಿಳಿಸಿದ್ದರು. ಅದನ್ನು ಮೆಚ್ಚಿ ಮೋದಿ ಮಾತನಾಡಿದರು. ಈ ಸಂವಾದದ ಸತ್ಯಾಸತ್ಯತೆ ಅರಿಯಲು ಸ್ಥಳಕ್ಕೆ ಹೋದ ‘ಎಬಿಪಿ’ ವರದಿಗಾರರು ಹಲವು ಸತ್ಯಾಂಶಗಳೊಂದಿಗೆ ಮರಳಿದ್ದರು. ಜುಲೈ ೬ರಂದು ಪ್ರಸಾರವಾದ ವರದಿಯಲ್ಲಿ ದೆಹಲಿ ಅಧಿಕಾರಿ ಹೇಳಿಕೊಟ್ಟಿದ್ದನ್ನು ರೈತ ಮಹಿಳೆ ಹೇಳಿದ್ದು ಎಂಬ ಅಂಶ ಹೊರಬಿತ್ತು. ವರದಿಯ ಮೂಲಕ ನಾವು ಇದನ್ನೆಲ್ಲ ಅಧಿಕಾರಿಗಳು ಪ್ರಧಾನಿ ಮೋದಿಯವರನ್ನು ಖುಷಿಪಡಿಸುವುದಕ್ಕೆ ಮಾಡುತ್ತಾರಾ? ಮೋದಿಯವರು ಹೊಗಳಿಕೆಯನ್ನಲ್ಲದೆ ಬೇರೇನೂ ಇಷ್ಟಪಡುವುದಿಲ್ಲ ಎಂದು ಜನರಿಂದ ಸುಳ್ಳು ಹೇಳಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಚಾನೆಲ್‌ ವೀಕ್ಷಕರ ಮುಂದಿಟ್ಟಿತು. ಇದು ಚತ್ತೀಸ್‌ಗಢ ಸರ್ಕಾರದ ಕೋಪಕ್ಕೆ ಕಾರಣವಾಯಿತು. ಮೂವರು ಕೇಂದ್ರ ಮಂತ್ರಿಗಳು ‘ಎಬಿಪಿ’ ವರದಿಯನ್ನು ಅಲ್ಲಗಳೆದು ಟ್ವೀಟ್‌ ಮಾಡಿದರು. ಚಾನೆಲ್‌ನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದರು.

ಇದನ್ನೂ ಓದಿ : ‘ಎಬಿಪಿ ನ್ಯೂಸ್‌’ ಮಾಜಿ ಸುದ್ದಿವಾಚಕ ಬಾಜ್‌ಪೈ ಬಿಚ್ಚಿಟ್ಟ ರಹಸ್ಯಗಳು | ಭಾಗ ೧

ಇದು ಒತ್ತಡವಲ್ಲದೆ ಮತ್ತೇನು? ನಮ್ಮ ವರದಿಗಾರ ಗ್ಯಾನೇಂದ್ರ ತಿವಾರಿಯನ್ನು ಮತ್ತೊಂದು ವರದಿಗೆಂದು ಗ್ರಾಮಕ್ಕೆ ಕಳಿಸಿದಾಗ ಅಲ್ಲಿ ಕಂಡ ದೃಶ್ಯವೇ ಬೇರೆ. ಪೊಲೀಸರ ಪಹರೆ ಇತ್ತು. ಹಿರಿಯ ಅಧಿಕಾರಿಗಳನ್ನು ಕಳಿಸಿಕೊಡಲಾಗಿತ್ತು. ನಮ್ಮ ವರದಿಗಾರ ಮತ್ತೊಮ್ಮೆ ಚಂದ್ರಮಣಿ ಕೌಶಿಕ್‌ ಅವರನ್ನು ಭೇಟಿಯಾಗದಂತೆ ನೋಡಿಕೊಳ್ಳುವುದಕ್ಕೆ ಅವರಿಗೆ ಸೂಚಿಸಲಾಗಿತ್ತು.

ಮತ್ತಷ್ಟು ಬೆಳವಣಿಗೆಗಳ ಬಳಿಕ ಮಾಲೀಕರೂ ಆದ ಸಂಪಾದಕರು ನಿಮ್ಮ ಮುಂದೆ ಕೈ ಕಟ್ಟಿ ನಿಂತು, ಏನು ಮಾಡುವುದು ಎಂದು ಕೇಳಿದರೆ ಏನು ಮಾಡುತ್ತೀರಿ? ನೀವೇನು ಮಾಡುತ್ತೀರಿ? ಒಂದೋ, ರಜೆಯ ಮೇಲೆ ಹೋಗುತ್ತೀರಿ ಇಲ್ಲವೇ ರಾಜಿನಾಮೆ ನೀಡುತ್ತೀರಿ. ಪವಾಡಗಳ ಪವಾಡವೆಂದರೆ, ನೀವು ರಾಜಿನಾಮೆ ಕೊಟ್ಟ ಮರುಕ್ಷಣದಿಂದ ಪತಂಜಲಿಯ ಜಾಹೀರಾತುಗಳು ಚಾನೆಲ್‌ಗೆ ಮರಳುತ್ತವೆ. ‘ಮಾಸ್ಟರ್‌ ಸ್ಟ್ರೋಕ್‌’ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜಾಹೀರಾತುಗಳು ಬರುತ್ತವೆ. ೧೫ ನಿಮಿಷಗಳ ಜಾಹೀರಾತು ಅವಧಿ, ೨೦ ನಿಮಿಷಗಳಿಗೆ ಹಿಗ್ಗುತ್ತದೆ. ನಾನಿನ್ನೂ ರಾಜಿನಾಮೆ ನೀಡಿರಲಿಲ್ಲ. ಆಗ, ಸಂಸತ್ತಿಗೆ ತೆರಳಿದ್ದ ಪತ್ರಕರ್ತರ ಮುಂದೆ, ‘ಎಬಿಪಿ’ಗೆ ಸರಿಯಾದ ಪಾಠ ಕಲಿಸುವುದಾಗಿಯೂ, ಈ ಪುಣ್ಯ ಪ್ರಸೂನ್‌ ತನ್ನನ್ನು ತಾನು ಏನೆಂದುಕೊಂಡಿದ್ದಾನೆ ಎಂದೂ ಮಾತುಗಳಿ ಕೇಳಿಬಂದಿದ್ದವಂತೆ. ಬಿಜೆಪಿ ಅಧ್ಯಕ್ಷರು ರಾಂಚಿ ಮತ್ತು ಪಟನಾದಲ್ಲಿರುವ ತಮ್ಮ ಸೋಷಿಯಲ್‌ ಮೀಡಿಯಾ ಟೀಮ್‌ಗೆ, "ಪುಣ್ಯ ಪ್ರಸೂನ್‌ ಬಿಡಬೇಡಿ,” ಎಂದು ಸೂಚನೆ ನೀಡಿದ್ದರಂತೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More