ಸಾಹಿತಿಗಳ ಕುರಿತ ರಂಗಕರ್ಮಿ ಪ್ರಕಾಶ್ ಬೆಳವಾಡಿ ಟೀಕೆಗೆ ಪ್ರತಿರೋಧ

ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ ಅವರು ಯುಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದ ಆಯ್ದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ‘ದೊಡ್ಡ ಬಾಯಿ ಸಾಹಿತಿಗಳ ಮೈ ಚಳಿ ಬಿಡಿಸಿದ ಪ್ರಕಾಶ್ ಬೆಳವಾಡಿ’ ತಲೆಬರಹದಡಿ ಪ್ರಕಟವಾಗಿರುವ ವಿಡಿಯೋ ವೈರಲ್ ಆಗುತ್ತಿದೆ

ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ ಅವರು ಯುಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದ ಆಯ್ದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ, ಸಾಹಿತಿಗಳನ್ನು ಗುರಿಯಾಗಿಸಿಕೊಂಡು ಅವರು ಮಾತನಾಡಿದ ೩.೫೧ ನಿಮಿಷದ ವಿಡಿಯೋ, ‘ದೊಡ್ಡ ಬಾಯಿ ಸಾಹಿತಿಗಳ ಮೈ ಚಳಿ ಬಿಡಿಸಿದ ಪ್ರಕಾಶ್ ಬೆಳವಾಡಿ’ ತಲೆಬರಹದಡಿ ವೈರಲ್ ಆಗುತ್ತಿದೆ. ವೈರಲ್ ಆದ ಪ್ರಕಾಶ್ ಅವರ ಮಾತುಗಳಿಗೆ ರಾಜ್ಯ ಮಹಿಳಾ ಜನವಾದಿ ಸಂಘಟನೆಯ ಉಪಾಧ್ಯಕ್ಷೆ ಕೆ ನೀಲಾ ಸೇರಿದಂತೆ ಹಲವರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ಬೆಳವಾಡಿ ಅವರ ೨೪.೫೦ ನಿಮಿಷದ ಆ ಸಂದರ್ಶನದಲ್ಲಿ ಸಾಹಿತಿ, ಸಿನಿಮಾ, ಜಾತಿ-ಧರ್ಮ ಹಾಗೂ ರಾಜಕೀಯ ಕುರಿತು ಮಾತನಾಡಿದ್ದನ್ನು ಗಮನಿಸಬಹುದು. ಸಾಹಿತಿಗಳ ಕುರಿತು ಅವರಾಡಿದ ಮಾತುಗಳನ್ನು ಇಲ್ಲಿ ನೆನೆಯುವುದಾರೆ, “ದೊಡ್ಡ ಅಪಾಯವೊಂದು ನಮ್ಮೆದುರಿಗಿದೆ. ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಅಲ್ಲಿ ಸಾಹಿತಿಗಳ ಫೋಟೊಗಳು ರಾರಾಜಿಸುತ್ತವೆ. ಆದರೆ, ಸಾಧನೆ ಮಾಡಿದ ಎಂಜಿನಿಯರ್‌ಗಳ, ವೈದ್ಯರ, ಸಂಗೀತಗಾರರ, ರೈತರ, ವಿಜ್ಞಾನಿಗಳ ಹಾಗೂ ಸಂಶೋಧಕರ ಭಾವಚಿತ್ರಗಳು ಇರುವುದಿಲ್ಲ. ಆದರೆ, ಈ ದೊಡ್ಡ ಬಾಯಿ ಸಾಹಿತಿಗಳನ್ನು ಮಾತ್ರ ಎಲ್ಲದಕ್ಕೂ ಕರೆಯಲಾಗುತ್ತದೆ. ಇವರಿಗೆ ಬದನೆಕಾಯಿ ಕೂಡ ಬೆಳೆಯೋಕೆ ಬರಲ್ಲ. ನಮ್ಮ ಮಣ್ಣಿನ ಬಗ್ಗೆಯಾಗಲೀ, ನೀರಿನ ಸಮಸ್ಯೆ, ರೈತರಿಗೆ ನ್ಯಾಯವಾದ ಬೆಲೆ ಒದಗಿಸುವುದು, ತಂತ್ರಜ್ಞಾನ ಬಗ್ಗೆ ಎಳ್ಳಷ್ಟೂ ಗೊತ್ತಿರುವುದಿಲ್ಲ. ನಮ್ಮ ದೇವೇಗೌಡರಿಗೆ ಇರುವ ಕರ್ನಾಟಕದ ಅರಿವು ಯಾವ ಸಾಹಿತಿಗೂ ಇಲ್ಲ. ಈ ಸಾಹಿತಿಗಳಿಗೆ ಓದೋದು, ಬರೆಯೋದು ಬಿಟ್ಟು ಮತ್ತೇನೂ ಬರಲ್ಲ. ಅಕಸ್ಮಾತ್ ನಿಮ್ಮ ಮಕ್ಕಳನ್ನು ಸಾಹಿತಿಗಳ ಬಳಿ ಟ್ಯೂಶನ್‌ಗೆ ಕಳುಹಿಸಿದರೆ ಆ ಮಕ್ಕಳನ್ನು ಕೂಡ ನಾಶ ಮಾಡುತ್ತಾರೆ. ಅಲ್ಲದೆ, ತಮ್ಮ ಮಕ್ಕಳಿಗೂ ಎಡ-ಬಲ ಅಂತ ತಲೆಯಲ್ಲಿ ತುಂಬಿ ಅವರನ್ನು ಹಾಳು ಮಾಡುತ್ತಾರೆ. ಅದಕ್ಕಾಗಿ ಸಾಹಿತಿಗಳು ಕಡ್ಡಾಯವಾಗಿ ಐದು ವರ್ಷ ಮೌನವ್ರತ ಆಚರಿಸಿದರೆ ಅವರ ಜ್ಞಾನ ವೃದ್ಧಿಯಾಗುತ್ತದೆ,” ಎಂದಿದ್ದಾರೆ.

ಸಾಹಿತಿಗಳನ್ನು ಬೈದು , ಅವರಿಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಾ ತಾನು ಅವರಿಗಿಂತ ಬುದ್ದಿವಂತ ಎಂದು ತೋರಿಸಿಕೊಳ್ಳಬೇಕೆಂಬ ಚಪಲ ಈ ಮನುಷ್ಯನಿಗೆ....

Posted by Ramananda Ankola on Wednesday, August 8, 2018

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆ ನೀಲಾ, “ವಿಜಯಪುರದ ಸಂಘಿ ಯತ್ನಾಳಗಿಂತಲೂ ಈ ಬೆಳವಾಡಿಯಣ್ಣ ಬೆಸ್ಟು. ಯತ್ನಾಳು ‘ಸಾಹಿತಿ ಬುದ್ದಿಜೀವಿಗಳನ್ನು ತಾನು ಗೃಹಮಂತ್ರಿ ಆಗಿದ್ರೆ ಉಡಾಯಿಸಿಬಿಡ್ತಿದ್ದೆ’ ಅಂದಿದ್ದ. ಈಯಪ್ಪ, ತಮ್ಮ ಮಕ್ಕಳನ್ನು ಲೆಪ್ಟಿಸ್ಟು, ರೈಟಿಸ್ಟು ಮಾಡುವ ಸಾಹಿತಿಗಳೆಲ್ಲ ಐದು ವರ್ಷ ಬಾಯ್ಮುಚ್ಚಿಕೊಂಡು ಜ್ಞಾನ ಸಂಪಾದಿಸಲು ಹೇಳಿದ್ದಾರೆ. ಸಿಲೆಬಸ್ಸು ನಾಗಪುರದಿಂದ ತರಿಸಿಕೊಡುವ ಹೊಣೆ ಇವ್ರೇ ಹೊರಬಹುದು. ಕಡೆಗೂ ತಾವೇನು ಅನ್ನುವ ವಾಸ್ತವ ಹೀಗಾದರೂ ಅನಾವರಣ ಆಯ್ತಲ್ಲ,” ಎಂದಿದ್ದಾರೆ.

ಗಮನಾರ್ಹ ಸಂಗತಿ ಎಂದರೆ, ಸಂದರ್ಶಕ ಪ್ರಕಾಶ್ ಬೆಳವಾಡಿ ಅವರಿಗೆ ಪ್ರಶ್ನೆ ಕೇಳುತ್ತ, “ಸಾಹಿತಿ ಹಾಗೂ ಪ್ರಗತಿಪರರ ಹತ್ಯೆ ಆಗುತ್ತಿದೆ. ಇಂಥ ಹತ್ಯೆ ಪ್ರಕರಣ ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಯುವುದಕ್ಕೆ ಮುಂಚೆಯೇ ಸಾಹಿತಿಗಳು ಇಂಥವರೇ ಮಾಡಿದ್ದಾರೆ ಎಂದು ಹೇಳಿ ತನಿಖೆಯ ಹಾದಿ ತಪ್ಪಿಸುವುದು ದುರದೃಷ್ಟಕರ. ಈ ಬೆಳವಣಿಗೆ ಹೇಗೆ ಗಮನಿಸುತ್ತಿರಿ?” ಎಂದು ಕೇಳಿದ್ದಾರೆ. ಆದರೆ, ಸಂದರ್ಶಕ ಕೇಳಿದ ಈ ಪ್ರಶ್ನೆಗೆ ಪ್ರಕಾಶ್ ಬೆಳವಾಡಿ ಅವರು ನೇರ ಉತ್ತರ ಹೇಳದೆ ವಿಷಯಾಂತರ ಮಾಡಿ ಸಾಹಿತಿಗಳನ್ನು ಜರಿದು ಮಾತನಾಡುವಲ್ಲಿ ಸಫಲರಾಗಿದ್ದಾರೆ.

ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕರ್ನಾಟಕದಲ್ಲಿ ಕಡೆಗಣಿಸಲಾಗಿದೆ ಎಂಬ ವಿಚಾರ ಕುರಿತು ಪ್ರಕಾಶ್ ಬೆಳವಾಡಿ ಆಡಿರುವ ಮಾತುಗಳು ಪ್ರಸ್ತುತವಾಗಿವೆ. ಆದರೆ, ಸಾಹಿತಿಗಳಿಗೆ ಐದು ವರ್ಷ ಮೌನವ್ರತ ಆಚರಿಸುವ ಕಡ್ಡಾಯ ನಿಯಮ ಜಾರಿಗೆ ಬರಬೇಕು ಎನ್ನುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಕು ಎಂಬ ಆಶಯಕ್ಕೆ ಪ್ರಕಾಶ್ ಬೆಳವಾಡಿ ಅವರು ನೀರೆರೆದರೇ? ಅಥವಾ ತಮ್ಮನ್ನು ಆದಿಯಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಆಲೋಚಿಸುವುದನ್ನು ಅವರು ಮರೆತರೇ?

೧೯೭೫ರಲ್ಲಿ ದೇಶದ ಮೇಲೆ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ಏರುಧ್ವನಿಯಲ್ಲಿ ಕಂಡಿಸಿದವರು ಸಾಹಿತಿಗಳು. ಈ ವಿಚಾರ ಪ್ರಕಾಶ್ ಅವರಿಗೂ ತಿಳಿಯದ ಸಂಗತಿಯೇನಲ್ಲ. ಬೆಳವಾಡಿ ಅವರು ಕೂಡ ಸಾಹಿತ್ಯವನ್ನು ಓದಿಕೊಂಡೇ ಬೆಳೆದವರು. ಇತಿಹಾಸವನ್ನು ಅವಲೋಕಿಸಿದರೆ, ಜನರ ಅರಿವು ಹೆಚ್ಚಿಸುವಲ್ಲಿ, ಹೊಸ ಚಿಂತನೆ ಮೂಡಿಸುವಲ್ಲಿ ಸಾಹಿತ್ಯದ ಪಾತ್ರ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ. ಆದರೆ, ಸಾಹಿತಿಗಳು ಮೌನಕ್ಕೆ ಜಾರಬೇಕು ಎಂದು ಹೇಳುವ ಮೂಲಕ ಹೊಸ ಚಿಂತನೆಗಳೇ ಹುಟ್ಟಬಾರದು ಎಂಬುದು ಪ್ರಕಾಶ್ ಅವರ ಆಶಯವೇ? ಅಥವಾ ಸಮಾಜಘಾತುಕ ಶಕ್ತಿಗಳ ಬಗ್ಗೆಯಾಗಲೀ ಅಥವಾ ಮೋದಿ ಅವರ ಬಗ್ಗೆಯಾಗಲೀ ಯಾರೂ ಟೀಕಿಸಬಾರದು ಎಂಬ ನಿಲುವೇ? ಏಕೆಂದರೆ, ಇದೇ ಸಂದರ್ಶನದಲ್ಲಿ ಅವರು ಮಾತನಾಡುತ್ತ, “೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು. ಅವರಿಗೆ ನನ್ನ ಬೆಂಬಲ,” ಎಂದು ಘೋಷಿಸಿಕೊಂಡಿದ್ದಾರೆ.

ಇದನ್ನೂ ಓದಿ : ಮೋದಿ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕುಸಿತ; ಅಧ್ಯಯನದಿಂದ ಬಹಿರಂಗ

ಇಲ್ಲಿ ನೆನೆಯಲೇಬೇಕಾದ ಸಂಗತಿ ಎಂದರೆ, “ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಭಾರತದ ಪ್ರಜಾಸತ್ತೆಯು ತೀವ್ರ ಕುಸಿತ ಕಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ನಾಗರಿಕ ಸಮಾಜದ ಮೇಲಿನ ದಾಳಿಗಳು ಭಾರತದ ಈ ಕುಸಿತಕ್ಕೆ ಕಾರಣ,” ಎಂದು ಸ್ವೀಡನ್ನನ ಗುಟೆನ್‌ಬರ್ಗ್‌ ವಿಶ್ವವಿದ್ಯಾಲಯದ ವರದಿ ಹೇಳಿದೆ. ಈ ವಿಚಾರದ ಬಗ್ಗೆ ಪ್ರಕಾಶ್ ಅವರ ನಿಲುವೇನು? ಎಂದು ವೀಕ್ಷಕರೊಬ್ಬರು ಪ್ರಶ್ನಿಸಿದ್ದಾರೆ.

ಇದೇ ಸಂದರ್ಶನದಲ್ಲಿ ಪ್ರಕಾಶ್ ಬೆಳವಾಡಿ ಅವರು ಜಾತಿ ಧರ್ಮದ ವಿಚಾರವಾಗಿ ಮಾತನಾಡುತ್ತ, “ಬಲಪಂಥೀಯರು ಹಿಂದೂ ವಿಚಾರದಲ್ಲಿ ನನ್ನ ಮೇಲೆ ಮುಗಿಬಿದ್ದರೆ ನಾನು ಹಿಂದೂ ಅಲ್ಲ ಎಂದೇ ಹೇಳುವೆ. ಏಕೆಂದರೆ, ಹಿಂದೂ ಎನ್ನುವ ಪರಿಕಲ್ಪನೆಯೇ ಇಲ್ಲ. ವೇದ, ಉಪನಿಷತ್‌ಗಳಲ್ಲಿ ಹಿಂದೂ ಪದ ಬಳಕೆ ಇಲ್ಲ. ಅದೇ ಸನಾತನ ಎಂದರೆ ನಾನು ಅದನ್ನು ಒಪ್ಪಿಕೊಳ್ಳುವೆ,” ಎನ್ನುತ್ತಲೇ, “ಈಗಿನ ಜನರೇಶನ್, ದೇಶದಲ್ಲಿ ಜಾತಿ ಮತ್ತು ಭೇದ ಮರೆತು ಒಟ್ಟಾಗಿ ಬೆರೆತು ದೇಶದಲ್ಲಿ ನಾವು ಮೊದಲು,” ಎನ್ನಬೇಕಿದೆ ಎಂದು ತಮ್ಮ ಮಾತು ಮುಗಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More