ನ್ಯಾಯ ನಡಾವಳಿಯನ್ನೂ ನಿಯಂತ್ರಿಸುವ ಕೇಂದ್ರದ ಪ್ರಯತ್ನಕ್ಕೆ ಸುಪ್ರೀಂ ತಿರುಗೇಟು

ಅಧಿಕಾರದ ಮುಂದೆ ಎದುರಾಡುವವರೇ ಇಲ್ಲದ ಸುಭದ್ರ ಸ್ಥಿತಿ ನಿರ್ಮಿಸಿಕೊಳ್ಳುತ್ತಿರುವ ಮೋದಿ ಸರ್ಕಾರದ ನ್ಯಾಯಾಂಗ ನಿಯಂತ್ರಿಸುವ ಪ್ರಯತ್ನಕ್ಕೆ ಇದೀಗ ತಡೆ ಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಕಟು ಪ್ರತಿಕ್ರಿಯೆ ಕೊಟ್ಟಿದ್ದು, ಮತ್ತೊಂದು ಜಟಾಪಟಿಯ ಸೂಚನೆ ನೀಡಿದೆ

ಕೇಂದ್ರ ಸರ್ಕಾರದ ನಡೆ-ನುಡಿಗಳನ್ನು ಟೀಕಿಸುವ ಮತ್ತು ವಿಮರ್ಶಿಸುವ ಮಾಧ್ಯಮಗಳು, ಸಾಮಾಜಿಕ ಹೋರಾಟಗಾರರು ಮತ್ತು ಸ್ವಯಂಸೇವಾ ಸಂಘಟನೆಗಳು ವ್ಯವಸ್ಥಿತವಾಗಿ ಹತ್ತಿಕ್ಕಲ್ಪಡುತ್ತಿವೆ. ಅಧಿಕಾರದ ಸರ್ವಶಕ್ತಿಯ ಮುಂದೆ ಎದುರಾಡುವವರೇ ಇಲ್ಲದಂಥ ಸುಭದ್ರ ಸ್ಥಿತಿಯನ್ನು ನಿರ್ಮಿಸಿಕೊಳ್ಳುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗ ನ್ಯಾಯಾಂಗವನ್ನು ನಿಯಂತ್ರಿಸಲು ಹೊರಟಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ದೇಶದ ಜೈಲುಗಳಲ್ಲಿನ ಅಮಾನವೀಯ ಸ್ಥಿತಿಗತಿಯ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನ್ಯಾ.ಮದನ್‌ ಬಿ ಲೋಕೂರ್ ನೇತೃತ್ವದ ತ್ರಿಸದಸ್ಯ ಪೀಠದೆದುರು ನಡೆಯುತ್ತಿದ್ದಾಗ, ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಸರ್ಕಾರದ ಪರ ವ್ಯಕ್ತಪಡಿಸಿರುವ ಅಭಿಪ್ರಾಯ ಇಂಥದೊಂದು ಗಂಭೀರ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.

ಹೈಕೋರ್ಟ್ ನ್ಯಾಯಾಧೀಶರ ಹುದ್ದೆ ಭರ್ತಿಗೆ ಮೀನಮೇಷ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪದೋನ್ನತಿ ಸಂಬಂಧ ಕೊಲಿಜಿಯಂ ನೀಡಿದ ಶಿಫಾರಸು ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸಿದ್ದು, ಗಂಭೀರ ಪ್ರಕರಣಗಳ ವಿಚಾರಣೆಯಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಆಕ್ಷೇಪ ನ್ಯಾಯಾಂಗದಿಂದಲೇ ವ್ಯಕ್ತವಾಗಿದೆ. ಇದಲ್ಲದೆ, ಹಲವು ನೆಲೆಯಲ್ಲಿ ನ್ಯಾಯಾಂಗದ ಜೊತೆ ಸಂಘರ್ಷಕ್ಕಿಳಿದು ಚರ್ಚೆಗೆ ಗ್ರಾಸವಾಗಿದ್ದ ಕೇಂದ್ರ ಸರ್ಕಾರ ಈಗ, ನ್ಯಾಯಾಂಗದ ನ್ಯಾಯದಾನ ನಡಾವಳಿಗಳನ್ನೇ ನಿರ್ದೇಶಿಸಲು ಹೊರಟಂತೆ ತೋರುತ್ತಿದೆ. ಸರ್ಕಾರದ ಪರ ಅಟಾರ್ನಿ ಜನರಲ್‌ ಹೇಳಿಕೆಗೆ ನ್ಯಾಯಪೀಠ ಕಟು ಪ್ರತಿಕ್ರಿಯೆ ನೀಡಿರುವುದು ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗದ ಮಧ್ಯೆ ಮತ್ತೊಂದು ಸುತ್ತಿನ ಜಟಾಪಟಿ ನಡೆಯುವ ಸಾಧ್ಯತೆಯನ್ನು ಬಿಂಬಿಸಿದೆ.

“ಪಿಐಎಲ್ ವಿಚಾರಣೆ ಸಂದರ್ಭ ನ್ಯಾಯಾಲಯವು ಸರ್ಕಾರದ ವರ್ಚಸ್ಸನ್ನು ಹಾನಿ ಮಾಡುವ ಹೇಳಿಕೆ ನೀಡಬಾರದು. ಕೆಲವು ಪ್ರಕರಣಗಳ ವಿಚಾರಣೆ ವೇಳೆ ಕೋರ್ಟ್ ಮಾಡಿದ ಕಟುಟೀಕೆ, ನೀಡಿದ ತೀರ್ಪುಗಳಿಂದ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಿವೆ,’’ ಎನ್ನುವುದು ಅಟಾರ್ನಿ ಜನರಲ್‌ ವೇಣುಗೋಪಾಲ್ ಅವರು ನ್ಯಾಯಪೀಠದೆದುರು ಮಾಡಿದ ನೇರ ಆಕ್ಷೇಪ. “ನಾನು ನ್ಯಾಯಾಲಯವನ್ನು ಟೀಕಿಸುತ್ತಿಲ್ಲ. ಸರ್ಕಾರದ ಪರವಾಗಿ ಅಭಿಪ್ರಾಯ ತಿಳಿಸಿದ್ದೇನೆ. ಕೋರ್ಟ್ ಇದನ್ನು ಮುಕ್ತ ಮನಸ್ಸಿನಿಂದ ಪರಿಗಣಿಸಬೇಕು,’’ ಎಂದು ಮನವಿ ಮಾಡಿದರಾದರೂ, ಅವರ ಕೆಲವು ಮಾತುಗಳು ದೇಶದ ಸುಪ್ರೀಂ ಕೋರ್ಟ್‌ ವ್ಯವಸ್ಥೆಗೇ ತಾಕೀತು ಮಾಡುವಂತಿದ್ದವು.

“೨ ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ನೀಡಿದ ತೀರ್ಪಿನಿಂದ ವಿದೇಶಿ ಹೂಡಿಕೆಗಳ ಮೇಲೆ ದೊಡ್ಡ ಪರಿಣಾಮ ಬೀರಿತು. ರಾಷ್ಟ್ರೀಯ ಹೆದ್ದಾರಿ ಬದಿ ೫೦೦ಮೀಟರ್‌ ಅಂತರದಲ್ಲಿ ಮದ್ಯ ಮಾರಾಟ ನಿಷೇಧಿಸಿದ ತೀರ್ಪುನಿಂದ ಅಪಾರ ಪ್ರಮಾಣದ ಆರ್ಥಿಕ ಮತ್ತು ಉದ್ಯೋಗ ನಷ್ಟವಾಯಿತು,’’ ಮುಂತಾದ ನಿದರ್ಶನಗಳನ್ನು ನೀಡಿದ ವೇಣುಗೋಪಾಲ್‌, “೧೩೦ ಕೋಟಿ ಜನರಿರುವ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಆರ್ಥಿಕ ಪರಿಣಾಮಗಳನ್ನು ಪರಿಗಣಿಸದೆ ವೈಯಕ್ತಿಕ ಮನವಿಗಳನ್ನಷ್ಟೇ ಆಧರಿಸಿ ಕೋರ್ಟ್ ಆದೇಶ ನೀಡುವುದರಿಂದ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ,’’ ಎಂದೂ ಆಕ್ಷೇಪಿಸಿದರು. “ಸರ್ಕಾರ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳತ್ತಲೂ ಕೋರ್ಟ್ ಗಮನ ಹರಿಸಬೇಕು,’’ ಎಂದೂ ಮನವಿ ರೂಪದ ಸೂಚನೆ ನೀಡಿದರು.

ನ್ಯಾಯಮೂರ್ತಿಗಳಾದ ಮದನ್‌ ಬಿ ಲೋಕೂರ್‌, ಎಸ್ ಅಬ್ದುಲ್ ನಜೀರ್‌ ಹಾಗೂ ದೀಪಕ್‌‌ ಗುಪ್ತಾ ಅವರಿದ್ದ ನ್ಯಾಯಪೀಠ ಇದನ್ನೆಲ್ಲ ಕೇಳಿಸಿಕೊಂಡು ಸುಮ್ಮನೇನೂ ಇರಲಿಲ್ಲ. “ಮಿಸ್ಟರ್‌ ವೇಣುಗೋಪಾಲ್‌, ನ್ಯಾಯಾಧೀಶರಾದ ನಾವೂ ಈ ದೇಶದ ಪ್ರಜೆಗಳು. ನಮಗೂ ದೇಶದ ಸಮಸ್ಯೆಗಳ ಅರಿವಿದೆ. ನಾವೇನು ಎಲ್ಲ ವಿಷಯದಲ್ಲೂ ಸರ್ಕಾರವನ್ನು ಟೀಕಿಸುತ್ತಿಲ್ಲ. ಸರ್ಕಾರಕ್ಕೆ ಕೆಲಸ ಮಾಡಲು ಬಿಡುತ್ತಿಲ್ಲ ಎನ್ನುವಂತೆ ಚಿತ್ರಿಸಬೇಡಿ,’’ ಎಂದು ನ್ಯಾ.ಲೋಕೂರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ನಾವು ಜನರ ಹಕ್ಕುಗಳನ್ನು ಜಾರಿ ಮಾಡುತ್ತಿದ್ದೇವೆ. ದೇಶದ ಸಮಸ್ಯೆಗಳ ಪರಿಹಾರಕ್ಕೆ ಮತ್ತು ವಿಧವೆಯರು, ಮಕ್ಕಳು, ಕೈದಿಗಳ ಹಕ್ಕು ರಕ್ಷಣೆ ವಿಷಯದಲ್ಲಿ ಕೋರ್ಟ್ ಗಮನಹರಿಸಿದೆ. ನ್ಯಾಯಾಲಯದ ಆದೇಶದಿಂದಾಗಿಯೇ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಈ ನೆಲದ ಕಾನೂನನ್ನು ಸರ್ಕಾರ ಪಾಲಿಸಲಿ. ಸಂಸತ್ತು ರೂಪಿಸಿದ ಕಾನೂನುಗಳನ್ನು ಪಾಲಿಸುವಂತೆ ನಿಮ್ಮ ಅಧಿಕಾರಿಗಳಿಗೆ ಮೊದಲು ತಿಳಿಸಿ,’’ ಎಂದೂ ತಾಕೀತು ಮಾಡಿದರು. ಈ ಮೊದಲು ಅನೇಕ ಸಂದರ್ಭದಲ್ಲಿ ನ್ಯಾಯಾಂಗವನ್ನು ಕೆಣಕಿ ಮುಖಭಂಗ ಅನುಭವಿಸಿದ್ದ ಕೇಂದ್ರ ಸರ್ಕಾರ, ತನ್ನ ಕೆಟ್ಟ ಚಾಳಿಯನ್ನು ಮುಂದುವರಿಸುವುದನ್ನು ಬಿಟ್ಟಿಲ್ಲ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನ.

ಸರ್ಕಾರದ ಹಿತಕ್ಕೆ ಅಥವಾ ಸರ್ಕಾರ ಕೈಗೊಳ್ಳುವ ಯೋಜನೆಗಳ ಹಿತಾಸಕ್ತಿಗೆ ಪೂರಕವಾಗಿ ಕೋರ್ಟ್ ತೀರ್ಪು ನೀಡಬೇಕು ಎನ್ನುವುದು ಅತಾರ್ಕಿಕ ವಾದವೇ ಸರಿ. ಯಾವುದೇ ಸರ್ಕಾರದ ಗರಿಷ್ಠ ನಿಷ್ಠೆ, ಬದ್ಧತೆ ಸಾಮಾನ್ಯ ಪ್ರಜೆಯ ಮೇಲಿರಬೇಕು. ಅಭಿವೃದ್ಧಿ ಯೋಜನೆ ರೂಪಿಸಿದರೆ ಅದರ ಗರಿಷ್ಠ ಫಲ ಶ್ರೀಸಾಮಾನ್ಯನಿಗೂ ದಕ್ಕುವಂತಿರಬೇಕು. ಆದರೆ, ಈಗೀಗ ಜನರ ಹೆಸರಿನಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ಯೋಜನೆಗಳು ಬಲಿಷ್ಠರ ಉದ್ಧಾರವನ್ನೇ ಆದ್ಯತೆಯನ್ನಾಗಿಸಿಕೊಂಡಿರುತ್ತವೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ. ಪ್ರಾಕೃತಿಕ ಸಂಪತ್ತು ಲೂಟಿಯಾದರೂ ಸರಿ, ತಮ್ಮನ್ನು, ತಮ್ಮ ನೇತೃತ್ವದ ರಾಜಕೀಯ ಪಕ್ಷವನ್ನು ಪೊರೆಯುವ ಉದ್ದಿಮೆದಾರರ ಹಿತ ಕಾಯಲು ಜನಪ್ರತಿನಿಧಿಗಳು ಟೊಂಕ ಕಟ್ಟಿ ನಿಲ್ಲುವುದನ್ನು ಕಂಡಿದ್ದೇವೆ.

ಇಂಥ ಸ್ಥಿತಿಯಲ್ಲಿ ಜನರಿಗೆ ಉಳಿದ ಒಂದೇ ಭರವಸೆ ಎಂದರೆ ನ್ಯಾಯಾಂಗ. ಕಣ್ಣೆದುರಲ್ಲೇ ಅಧಿಕಾರಸ್ಥರು ನಡೆಸುವ ಅಕ್ರಮ ಮತ್ತು ಹಗಲು ದರೋಡೆಗಳನ್ನು ಪ್ರಶ್ನಿಸಲು, ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ’ ಸಲ್ಲಿಕೆಯೊಂದೇ ಜನಸಾಮಾನ್ಯನಿಗೆ ಇರುವ ನಿರ್ಣಾಯಕ ಅಸ್ತ್ರ. ವ್ಯಕ್ತಿ, ಸಂಘ-ಸಂಸ್ಥೆ ಅಥವಾ ಸ್ವಯಂಸೇವಾ ಸಂಘಟನೆಗಳ ಮೂಲಕ ಸಲ್ಲಿಕೆಯಾಗುವ ಪಿಐಎಲ್‌ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಗರಿಷ್ಠ ಮಟ್ಟದಲ್ಲಿರುತ್ತದೆ. ಹಾಗಂಥ, ಯಾವುದೇ ನ್ಯಾಯಾಲಯಗಳು ಪಿಐಎಲ್‌ಗಳನ್ನು ಸಾರಾಸಗಟು ಪುರಸ್ಕರಿಸಿ ತೀರ್ಪು ನೀಡುವುದಿಲ್ಲ. ಸಾಧಕ-ಬಾಧಕ, ನ್ಯಾಯ-ಅನ್ಯಾಯಗಳನ್ನು ಪರಾಮರ್ಶಿಸಿಯೇ ಅಂತಿಮ ನಿರ್ಣಯ ಪ್ರಕಟಿಸುತ್ತವೆ. ತೀರ್ಪು ಅರ್ಜಿದಾರರಿಗೆ ವ್ಯತಿರಿಕ್ತವಾದ ನಿದರ್ಶನಗಳೂ ಇವೆ. ಹೀಗೆ ಸಲ್ಲಿಕೆಯಾಗುವ ಅರ್ಜಿಗಳಲ್ಲಿ ದುರುದ್ದೇಶ, ಬ್ಲ್ಯಾಕ್‌ಮೇಲ್‌ ತಂತ್ರ ಅಡಗಿದ್ದಲ್ಲಿ ಅರ್ಜಿದಾರರೇ ಕೋರ್ಟಿನಿಂದ ಟೀಕೆಗೆ, ದಂಡನೆಗೆ ಗುರಿಯಾದ ಉದಾಹರಣೆಗಳೂ ಇವೆ. ಹಾಗಿದ್ದಾಗ್ಯೂ, ಕೇಂದ್ರದ ಪರ ಅಟಾರ್ನಿ ಜನರಲ್ ‘ಪಿಐಎಲ್‌’ ತೀರ್ಪುಗಳ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಉಪದೇಶ ನೀಡಿರುವುದು, ಇಂಥ ಪ್ರಕರಣಗಳ ತೀರ್ಪು ಹೀಗೇ ಇರಬೇಕೆಂದು ನಿರ್ದೇಶಿಸಿರುವುದನ್ನು ನೋಡಿದರೆ, ಈ ಸರ್ಕಾರ ಯಾರ ಹಿತಕ್ಕೆ ಬದ್ಧವಾಗಿದೆ ಎಂದು ಕೇಳಬೇಕಾಗುತ್ತದೆ. ವೇಣುಗೋಪಾಲ್‌ ನ್ಯಾಯಪೀಠದೆದುರು ಪ್ರಸ್ತಾಪಿಸಿದ ಕೆಲವು ನಿದರ್ಶನಗಳಿಗಿಂತ ಗಂಭೀರ ಸ್ವರೂಪದ ಪಿಐಎಲ್ ಸಂಬಂಧಿ ಎಡರು-ತೊಡರುಗಳನ್ನು ಸರ್ಕಾರ ಎದುರಿಸಿರುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ದೊಂಬಿ ಹತ್ಯೆ ಅರಾಜಕತೆ ಸೂಚಿಸುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಸಿದ ಸುಪ್ರೀಂ ಕೋರ್ಟ್

ಅದೇನಿದ್ದರೂ, ನರೇಂದ್ರ ಮೋದಿ ನೇತೃತ್ವದ ಬಲಿಷ್ಠ ಸರ್ಕಾರವನ್ನು ಮುಟ್ಟುವುದು, ಅದರ ಬಿಂಬಿತ ಬಲಿಷ್ಠತೆಯ ಹಿಂದೆ ಅಡಗಿರುವ ವಿರೋಧಾಭಾಸಗಳನ್ನು, ಕಟುಸತ್ಯಗಳನ್ನು ಬಹಿರಂಗಗೊಳಿಸಿ ಜೀರ್ಣಿಸಿಕೊಳ್ಳುವುದು ಈಗ ಸುಲಭದ ಮಾತಲ್ಲ. ಸ್ವಪಕ್ಷಿಯರೇ ಮಾತನಾಡಿ ಮೂಲೆಗುಂಪಾಗಿದ್ದಾರೆ. ಅವರು ಮಾತನಾಡಿದ್ದು ಬೆಳಕಿಗೆ ಬಾರದಂತೆ ತಡೆಯುವ ಚಾಣಾಕ್ಷ ಮಾರ್ಗಗಳನ್ನು ಸರ್ಕಾರ ಶೋಧಿಸಿಕೊಂಡಿದೆ. ಹಾಗಿದ್ದೂ, ಕೆಲವು ಮಾಧ್ಯಮಗಳಲ್ಲಿ ಸತ್ಯಾಂಶ ಪ್ರಕಟವಾದರೆ, ಅದರ ಬೆನ್ನಿಗೇ ಆ ಮಾಧ್ಯಮ ಸಂಸ್ಥೆಯಲ್ಲಿ ಒಂದಷ್ಟು ಹುದ್ದರಿಗಳು ಉರುಳುತ್ತವೆ. ಜನಸಂಘಟನೆಗಳು ಮತ್ತು ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳನ್ನು ಬೆದರಿಸಿ, ದುರ್ಬಲಗೊಳಿಸುವ ಪ್ರಯತ್ನವೂ ನಿರಂತರ ನಡೆಯುತ್ತಲೇ ಇದೆ. ಏನೇ ಷಡ್ಯಂತ್ರ ರೂಪಿಸಿಯೂ ದೇಶದ ನ್ಯಾಯಾಂಗ ವ್ಯವಸ್ಥೆ ಈ ವಿಷಯದಲ್ಲಿ ಗಟ್ಟಿತನ ಕಾಯ್ದುಕೊಂಡಿದೆ. ಕೇಂದ್ರ ಸರ್ಕಾರದ ಹುಳುಕುಗಳನ್ನು, ನ್ಯಾಯ ಉಲ್ಲಂಘನೆಯ ಸಂದರ್ಭಗಳನ್ನು, ಹಿತಾಸಕ್ತಿಯ ಸಂಘರ್ಷವನ್ನು ಸಮಯ ಸಿಕ್ಕಾಗಲೆಲ್ಲ ಎತ್ತಿಹಿಡಿದು ಕುಟುಕುತ್ತಲೇ ಇದೆ. ಒಂದರ್ಥದಲ್ಲಿ ದೆಹಲಿಯ ‘ಶಕ್ತಿಪೀಠ’ಕ್ಕೆ ಪಕ್ಕದಲ್ಲಿರುವ ನ್ಯಾಯಪೀಠ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಮೊಂಡುಗೊಳಿಸಲು ಪ್ರಯತ್ನಿಸಿದಷ್ಟೂ ಅದು ಮೊನಚಾಗುತ್ತಿದೆ.

ಅದಕ್ಕೇ, ಅಟಾರ್ನಿ ಜನರಲ್‌ ಅವರ ಮೂಲಕ, “ಸರ್ಕಾರದ ವಿರುದ್ಧ ಹಾನಿಕಾರಕ ಹೇಳಿಕೆ ನೀಡಬಾರದು,’’ ಎಂದು ಹೇಳಿಕೆ ಕೊಡಿಸಿದಂತಿದೆ. ಸರ್ಕಾರದ ಅಭಿವೃದ್ಧಿಯ ವೇಗ ಕುಂಠಿತವಾಗಲು ನ್ಯಾಯಾಲಯದ ಕೆಲವು ತೀರ್ಪುಗಳೇ ಕಾರಣವಾಗುತ್ತಿವೆ ಎನ್ನುವಂತೆ ‘ಅಧಿಕೃತ’ವಾಗಿ ಬಿಂಬಿಸುವ ಪ್ರಯತ್ನ ಇರಲೂಬಹುದು. ಇದರಿಂದ ನ್ಯಾಯಾಂಗ ಸಿಡಿದೇಳುತ್ತದೆ, ಮತ್ತೊಮ್ಮೆ ಜಟಾಪಟಿ ನಡೆಸಬೇಕಾಗುತ್ತದೆ ಎನ್ನುವುದು ಕೇಂದ್ರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ತನ್ನ ಬಲಿಷ್ಠತೆಯನ್ನು ಪೊರೆದುಕೊಳ್ಳಲು ಅದು ಮಾಧ್ಯಮ ಮಾತ್ರವಲ್ಲ ನ್ಯಾಯಾಂಗದ ಮೇಲಿನ ಜನರ ವಿಶ್ವಾಸ, ನಂಬಿಕೆಯನ್ನು ಕುಗ್ಗಿಸಲೂ ಹಿಂಜರಿಯುವುದಿಲ್ಲ ಎನ್ನುವುದು ಈ ಮೂಲಕ ವ್ಯಕ್ತವಾಗಿದೆ. “ಮೋದಿ ಸರ್ಕಾರ ಒಳ್ಳೆಯದನ್ನೇ ಮಾಡುತ್ತಿದೆ. ಮತ್ತಷ್ಟು ಒಳಿತು ಮಾಡಲು ನ್ಯಾಯಾಂಗ ವ್ಯವಸ್ಥೆ ಬಿಡುತ್ತಿಲ್ಲ,’’ ಎನ್ನುವ ಅಭಿಪ್ರಾಯವು ಮುಂದಿನ ದಿನಗಳಲ್ಲಿ ಜನಮಾನಸದಲ್ಲಿ ‘ಭರ್ತಿ’ ಆಗತೊಡಗಿದರೆ ಅಚ್ಚರಿಪಡಬೇಕಿಲ್ಲ. ಇಂಥ ತಂತ್ರಗಳ ಮೂಲಕವೇ ಮೋದಿ ಸರ್ಕಾರ 'ಬಲಿಷ್ಠ'ಗೊಳ್ಳುತ್ತಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More