ಸಹಕಾರಿ ಬ್ಯಾಂಕ್‌ಗಳ 9,448 ಕೋಟಿ ರು. ಚಾಲ್ತಿ ಸಾಲಮನ್ನಾಕ್ಕೆ ಸಂಪುಟ ಅಸ್ತು

ಸಹಕಾರಿ ವಲಯದ ಬ್ಯಾಂಕ್‌ಗಳಲ್ಲಿನ ೧೦,೭೩೪ ಕೋಟಿ ರು. ರೈತರ ಸಾಲದ ಪೈಕಿ ೯,೪೪೮ ಕೋಟಿ ರು. ಮನ್ನಾ ಮಾಡಲು ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇದರಿಂದ ೨೦.೩೮ ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಸಿಎಂ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ

ಸಹಕಾರಿ ಬ್ಯಾಂಕುಗಳಲ್ಲಿ ೨೦೧೮ರ ಜುಲೈ ೧೦ರವರೆಗೆ ರೈತರು ಪಡೆದ 1 ಲಕ್ಷ ರು.ವರೆಗಿನ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ಗುರುವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಒಟ್ಟು 10,734 ಕೋಟಿ ರುಪಾಯಿ ಸಾಲದ ಪೈಕಿ 9,448 ಕೋಟಿ ರು. ಸಾಲ ಮನ್ನಾ ಆಗಲಿದ್ದು, 20.38 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಸಾಲಮನ್ನಾಕ್ಕೆ ಹಣದ ಕೊರತೆ ಇರುವುದಿಲ್ಲ. ಸಾಲ ನವೀಕರಣ ಸಂದರ್ಭದಲ್ಲಿ ಸಹಕಾರ ಇಲಾಖೆ ಪ್ರತಿ ತಿಂಗಳು ಸಲ್ಲಿಸುವ ಬೇಡಿಕೆಗೆ ಅನುಗುಣವಾಗಿ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎರಡನೇ ಹಂತವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6,500 ಕೋಟಿ ರುಪಾಯಿಗಳ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಅಗತ್ಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬ್ಯಾಂಕ್‌ಗಳ ಜೊತೆ ಚರ್ಚಿಸಲಾಗುವುದು,” ಎಂದರು ಸಿಎಂ ಎಚ್‌ಡಿಕೆ.

“ಸಾಲಮನ್ನಾ ಪ್ರಕ್ರಿಯೆ 4 ವರ್ಷಗಳಿಗೆ ಬದಲಾಗಿ ಮುಂದಿನ ವರ್ಷವೇ ಪೂರ್ಣಗೊಳ್ಳಬಹುದು. ಸಾಲಮನ್ನಾ ಕುರಿತ ಮಾರ್ಗಸೂಚಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು. ಒಂದು ಕುಟುಂಬಕ್ಕೆ ಒಂದು ಲಕ್ಷ ರು.ವರೆಗಿನ ಸಾಲಮನ್ನಾ ಎಂಬ ಅಂಶವನ್ನು ಕೈಬಿಡಲಾಗಿದೆ,” ಎಂದು ತಿಳಿಸಿದರು.

ಇದನ್ನೂ ಓದಿ : ಸಂಕಲನ | ರಾಜ್ಯ ರೈತರ ಸಾಲಮನ್ನಾ ವಿವಿಧ ಆಯಾಮಗಳ ವಿಶ್ಲೇಷಣಾ ಲೇಖನಗಳು

ಸಚಿವ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಇಂತಿವೆ

  • ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸನ್ನಡತೆ ಆಧಾರದಲ್ಲಿ 93 ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ.
  • 2018-19 ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ  10.36 ಕೋಟಿ ರುಪಾಯಿ ವೆಚ್ಚದಲ್ಲಿ ಶೂ, ಸಾಕ್ಸ್, ಟೈ, ಬೆಲ್ಟ್‍ಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
  • ಹೊಳೆನರಸೀಪುರ ಮತ್ತು ಮಾವಿನಕೆರೆ ವ್ಯಾಪ್ತಿಯಲ್ಲಿ ಬರುವ ರೈಲ್ವೆ ರಸ್ತೆ ಮೇಲು ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣ ಕಾಮಗಾರಿಗಳನ್ನು 39.93 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡಲು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಲು ತೀರ್ಮಾನ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More