ಜಾಮದಾರ್‌ ಅವರನ್ನು ಜಿನ್ನಾಗೆ ಹೋಲಿಸಿದ ಶಾಮನೂರು ವಿರುದ್ಧ ಲಿಂಗಾಯತರ ಆಕ್ರೋಶ

ಮಾಜಿ ಐಎಎಸ್‌ ಅಧಿಕಾರಿ ಎಸ್ ಎಂ ಜಾಮದಾರ್‌ ಅವರನ್ನು ಪಾಕಿಸ್ತಾನ ಸಂಸ್ಥಾಪಕ ಜಿನ್ನಾ ಅವರಿಗೆ ಹೋಲಿಸಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಗ್ರಾಸವಾಗಿದ್ದು, ಲಿಂಗಾಯತ ಹಾಗೂ ವೀರಶೈವ ಮುಖಂಡರ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ

ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್‌ ಎಂ ಜಾಮದಾರ್‌ ಅವರನ್ನು ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನಾ ಅವರಿಗೆ ಹೋಲಿಸಿ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ವಿಧಾನಸಭೆ ಚುನಾವಣೆ ನಂತರ ತಣ್ಣಗಾಗಿದ್ದ ವೀರಶೈವ ಹಾಗೂ ಲಿಂಗಾಯತ ನಾಯಕರ ನಡುವಿನ ಸಂಘರ್ಷ ಮತ್ತೊಮ್ಮೆ ಭುಗಿಲೇಳುವ ಸಾಧ್ಯತೆಗಳು ಹೆಚ್ಚಾಗಿವೆ. ಶಾಮನೂರು ಹೇಳಿಕೆಯನ್ನು ಖಂಡಿಸಿರುವ ವಿರಕ್ತ ಮಠಾಧೀಶರು, ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಿರುವ ಜಾಮದಾರ್‌ ಅವರನ್ನು ಭಾರತ ವಿಭಜನೆಯ ರೂವಾರಿಗಳಲ್ಲಿ ಒಬ್ಬರಾದ ಜಿನ್ನಾ ಅವರಿಗೆ ಹೋಲಿಸಿರುವುದು ಅತಿರೇಕದ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಂಗಾಯತ ನಾಯಕರನ್ನು ಗುರಿಯಾಗಿಸಿ ಮಾತನಾಡಿರುವ ಶಾಮನೂರು ಶಿವಶಂಕರಪ್ಪ, “ಇತ್ತೀಚಿನ ದಿನಗಳಲ್ಲಿ ಧರ್ಮ ಒಡೆಯುವ ಕೆಲಸ ನಡೆಯುತ್ತಿದೆ. ಅಧಿಕಾರದ ಆಸೆಗಾಗಿ ಅಖಂಡ ಭಾರತವನ್ನು ವಿಭಜಿಸಿದ ಜಿನ್ನಾ ರೀತಿಯಲ್ಲಿ ಮಾಜಿ ಐಎಎಸ್‌ ಅಧಿಕಾರಿಯೊಬ್ಬರು ವೀರಶೈವ-ಲಿಂಗಾಯತ ಧರ್ಮ ಒಡೆಯಲು ಹೊರಟಿದ್ದರು. ಈ ವಿಭಜಕ ಸಂಸ್ಕೃತಿಯನ್ನು ಕೆಲ ಮಾಧ್ಯಮಗಳು ವಿಜೃಂಭಿಸಲು ಆರಂಭಿಸಿದವು,” ಎಂದು ಟೀಕಿಸಿದ್ದರು.

“ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವುದನ್ನು ಕಡ್ಡಾಯಗೊಳಿಸಿದರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವೀರಶೈವ ಮಹಾಸಭಾ ವತಿಯಿಂದ ಸನ್ಮಾನ ಮಾಡಲಾಯಿತು. ಆ ನಂತರವೇ ಭಾರತ-ಪಾಕಿಸ್ತಾನದ ವಿಭಜನೆಯ ರೀತಿಯಲ್ಲಿ ವೀರಶೈವ-ಲಿಂಗಾಯತ ವಿಭಜನೆ ಕಾರ್ಯ ಆರಂಭವಾಯಿತು. ಧರ್ಮ ಒಡೆಯಲು ಪ್ರಯತ್ನಿಸಿದವರು ಕಿತ್ತೂರು ರಾಣಿ ಚೆನ್ನಮ್ಮನ ಪತನಕ್ಕೆ ಕಾರಣವಾದ ಮಲ್ಲಪ್ಪ ಶೆಟ್ಟಿ ತರದವರು,” ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದರು.

ಶಾಮನೂರು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿರಕ್ತ ಮಠಾಧೀಶರು, ಇದೊಂದು ಅತಿರೇಕದ ಪರಮಾವಧಿ ಎಂದಿದ್ದಾರೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಶ್ರೀ, “ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಡುತ್ತಿರುವ ಜಾಮದಾರ್‌ ಅವರನ್ನು ಜಿನ್ನಾ ಅವರಿಗೆ ಹೋಲಿಸಿದ್ದು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಾರರನ್ನು ಮಲ್ಲಪ್ಪ ಶೆಟ್ಟಿಯಂಥವರು ಎಂದು ಹೇಳಿದ್ದು ಅತ್ಯಂತ ಕಳವಳಕಾರಿ ವಿಚಾರ. ತಮ್ಮ ಹೇಳಿಕೆ ಬಗ್ಗೆ ಶಾಮನೂರು ಆತ್ಮವಿಮರ್ಶೆ ಮಾಡಿಕೊಳ್ಳಲಿ,” ಎಂದಿದ್ದಾರೆ.

“ಶಾಮನೂರು ಶಿವಶಂಕರಪ್ಪ ಶ್ರೀಮಂತ ವ್ಯಾಪಾರಿ ಎನ್ನುವ ಕಾರಣ ಅವರನ್ನು ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರಿಗೆ ಲಿಂಗಾಯತ ಧರ್ಮದ ಆಚರಣೆ, ವಿಚಾರ, ವೈಚಾರಿಕತೆ ಬಗ್ಗೆ ಗೊತ್ತಿಲ್ಲ. ಲಿಂಗಾಯತರು ಹಿಂದೂಗಳಲ್ಲ. ಲಿಂಗಾಯತರು ಅವೈಧಿಕ ಧರ್ಮ ಅನುಸರಿಸುತ್ತಾರೆ,” ಎಂದೂ ಅವರು ಕಿಡಿಕಾರಿದ್ದಾರೆ.

ಶಾಮನೂರು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಜಾಗತಿಕ ಲಿಂಗಾಯತ ಮಹಾಸಭಾ, ಧರ್ಮ ವಿಭಜನೆಗೆ ಮಾಜಿ ಐಎಎಸ್‌ ಅಧಿಕಾರಿಯೊಬ್ಬರು ಮುಂದಾಗಿದ್ದರು ಎನ್ನುವ ಶಿವಶಂಕರಪ್ಪನವರಿಗೆ ಲಿಂಗಾಯತ ಧರ್ಮದ ಬಗ್ಗೆ ತಿಳವಳಿಕೆ ಇಲ್ಲವೆಂದು ಟೀಕಿಸಿದೆ. “ವೀರಶೈವ ಮಹಾಸಭಾದ ಅಧ್ಯಕ್ಷರಿಗೆ ಲಿಂಗಾಯತರು ಹಾಗೂ ವೀರಶೈವರು ವಿಭಿನ್ನ ಆಚರಣೆ ಅನುಸರಿಸುತ್ತಾರೆ ಎಂಬುದರ ಬಗ್ಗೆ ಅರಿವಿಲ್ಲ. ವೀರಶೈವ ಮುಖಂಡರು ತಾವು ಹಿಂದೂಗಳಂತೆಯೇ ವೇದ, ಪುರಾಣಗಳನ್ನು ಒಪ್ಪಿಕೊಂಡು ಪಂಚಪೀಠಗಳು ಸ್ಥಾಪಿಸಿದ ಧರ್ಮವನ್ನು ಅನುಸರಿಸುತ್ತ ಬಂದಿರುವುದಾಗಿ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಲಿಂಗಾಯತರು ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಶಾಸ್ತ್ರ ಹಾಗೂ ವೈದಿಕ ಸಂಪ್ರದಾಯಗಳ ವಿರುದ್ಧ ಸಮರ ಸಾರಿದ್ದ ಬಸವಣ್ಣನೇ ಧರ್ಮ ಸ್ಥಾಪಕ. ವಚನಗಳೇ ಧರ್ಮಗ್ರಂಥ ಎಂದು ಒಪ್ಪಿ ಲಿಂಗಾಯತರು ಏಕದೇವೋಪಾಸಕರಾಗಿದ್ದಾರೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮೇಲೆ ಸ್ವಹಿತಾಸಕ್ತಿ ರಾಜಕಾರಣದ ಕರಿನೆರಳು

“ಕೆಲವರು ಸಮಾಜ ವಿಭಜಿಸುವ ಕೆಲಸಕ್ಕೆ ಕೈಹಾಕಿದ್ದಾರೆ,” ಎಂದಿದ್ದ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪನವರ ಹೇಳಿಕೆಗೂ ಕೆಂಡ ಕಾರಿರುವ ಲಿಂಗಾಯತ ಮಹಾಸಭಾ, “2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ವೀರಶೈವ-ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಬಿಜೆಪಿಯ ಬೆಂಬಲವೂ ಇತ್ತು. ಈಗ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸಾಮಾನ್ಯ ಜನರಲ್ಲಿ ವೀರಶೈವ ಹಾಗೂ ಲಿಂಗಾಯತ ಭಿನ್ನ ಎಂಬ ಅರಿವು ಮೂಡಿದರೆ, ತಮ್ಮ ರಾಜಕೀಯ ಭವಿಷ್ಯಕ್ಕೆ ತೊಂದರೆ ಆಗುತ್ತದೆಂಬ ದೃಷ್ಟಿಯಿಂದ ಯಡಿಯೂರಪ್ಪ ಈ ಮಾತುಗಳನ್ನು ಆಡುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ನೇತೃತ್ವ ವಹಿಸಿರುವ ಮಾಜಿ ಐಎಎಸ್‌ ಅಧಿಕಾರಿ ಎಸ್‌ ಎಂ ಜಾಮದಾರ್ ಅವರು, “ಲಿಂಗಾಯತರು ವೀರಶೈವರ ಜೊತೆ ಸಾಗಲು ಸಾಧ್ಯವೇ ಇಲ್ಲ,” ಎಂದು ಈ ಹಿಂದೆ ಹೇಳಿದ್ದರು. ಜಾಮದಾರ್‌ ಅವರ ಮಾರ್ಗದರ್ಶನದಲ್ಲಿ ತಾವು ನಡೆಯುವುದಾಗಿ ಮಾಜಿ ಸಚಿವ ಎಂ ಬಿ ಪಾಟೀಲ್‌ ಸ್ಪಷ್ಟಪಡಿಸಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ವೀರಶೈವ ಹಾಗೂ ಲಿಂಗಾಯತ ನಾಯಕರ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರುವ ಎಲ್ಲ ಸೂಚನೆಗಳು ಕಂಡುಬಂದಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More