೨೫ ಸಚಿವರ ಪ್ರಮಾಣವಚನ ದಿನದಂದು ಉಪಾಹಾರಕ್ಕೆ ಆದ ಖರ್ಚು ೧೨ ಲಕ್ಷ ರು!

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಪರಮೇಶ್ವರ್‌ ಪ್ರಮಾಣವಚನ ಸ್ವೀಕಾರ ಸಮಾರಂಭದ ವೆಚ್ಚದ ವಿವರ ಚರ್ಚೆ ಆಗುತ್ತಿದೆ. ಇದೀಗ ಬಹಿರಂಗಗೊಂಡಿರುವ ಸಚಿವರ ಪ್ರಮಾಣವಚನ ಸಮಾರಂಭದ ಲಘು ಉಪಹಾರದ ಖರ್ಚು ಈ ಚರ್ಚೆಯನ್ನು ವಿಸ್ತರಿಸಿದೆ

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಸಮಾರಂಭದ ವೆಚ್ಚ ಇದೀಗ ಬಹಿರಂಗಗೊಂಡಿದೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದಿದ್ದ ೩ ಗಂಟೆ ಅವಧಿಯ ಈ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ೩,೦೦೦ ಅತಿಥಿಗಳಿಗೆ ನೀಡಿದ್ದ ಸಂಜೆಯ ಉಪಾಹಾರಕ್ಕೆ ಲಕ್ಷಾಂತರ ರುಪಾಯಿ ಖರ್ಚಾಗಿದೆ.

ಮೇ ತಿಂಗಳಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಜಿ ಪರಮೇಶ್ವರ್‌ ಅವರು ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಸಮಾರಂಭಕ್ಕೆ ಆಗಮಿಸಿದ್ದ ಹೊರರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಇನ್ನಿತರ ಗಣ್ಯರ ವಸತಿ, ಊಟೋಪಚಾರಕ್ಕೆ ೪೧ ಲಕ್ಷ ರು. ಖರ್ಚಾಗಿತ್ತು. ಇದರ ಬೆನ್ನಲ್ಲೇ, ಸಚಿವ ಸಂಪುಟದ ಸದಸ್ಯರ ಪ್ರಮಾಣವಚನ ಬೋಧನಾ ಸಮಾರಂಭದ ಸಂಜೆಯ ಉಪಾಹಾರದ ಖರ್ಚಿನ ವಿವರವೂ ಬಹಿರಂಗಗೊಂಡಿರುವುದು ಚರ್ಚೆಯನ್ನು ವಿಸ್ತರಿಸಿದೆ.

ಜೂ.6ರಂದು ನಡೆದಿದ್ದ ಸಚಿವರ ಪ್ರಮಾಣ ವಚನ ಸಮಾರಂಭದ ಆಹ್ವಾನ ಪತ್ರಿಕೆ

ರಾಜಭವನದ ಗಾಜಿನ ಮನೆಯಲ್ಲಿ ಜೂನ್‌ ೬ರಂದು ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ‘೯ ಮಾರ್ಕ್ಸ್‌ಸಿನ್‌’ ಮೂಲಕ ಲಘು ಉಪಾಹಾರ ಸರಬರಾಜಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ೩,೦೦೦ ಅತಿಥಿಗಳಿಗೆ ಸಿಹಿ ಉಪ್ಪಿನ ಬಿಸ್ಕತ್ತು, ವೆಜ್‌ ಕಟ್ಲೆಟ್‌ ಮತ್ತು ಫ್ರೂಟ್‌ ಕೇಕ್‌, ಕೋಕೋನಟ್‌ ಬರ್ಫಿ, ಪೆಪ್ಪರ್‌ ಕ್ಯಾಶ್ಯೂ, ಪೊಟಾಟೋ ಚಿಪ್ಸ್‌, ಕಾಫಿ, ಟೀ ಮತ್ತು ಮಿನರಲ್‌ ವಾಟರ್‌ ಪೂರೈಸಲಾಗಿತ್ತು. ಇದೆಲ್ಲದಕ್ಕೂ ಒಟ್ಟು ಖರ್ಚಾಗಿರುವುದು ೧೨,೭೪,೪೦೦ ರುಪಾಯಿ. ಈ ಮೊತ್ತವನ್ನು ರಾಜ್ಯದ ಆತಿಥ್ಯ ಸಂಸ್ಥೆಯಾಗಿರುವ ಕುಮಾರಕೃಪಾ ಅತಿಥಿ ಸಂಸ್ಥೆಯ ಅಧೀಕ್ಷಕರು ಪಾವತಿಸಿದ್ದಾರೆ. ಪಾವತಿಸಿರುವ ಮೊತ್ತದ ಬಿಲ್‌ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಸಚಿವರ ಪ್ರಮಾಣವಚನ ಸಮಾರಂಭದ ಸಂಜೆ ಉಪಾಹಾರಕ್ಕೆ ಖರ್ಚಾಗಿರುವ ಮೊತ್ತದ ವಿವರ

ಆರ್‌ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್‌, ಕೆ ಜೆ ಜಾರ್ಜ್, ಕೃಷ್ಣ ಬೈರೇ ಗೌಡ, ಎಚ್‌ ಡಿ ರೇವಣ್ಣ, ಬಂಡೆಪ್ಪ ಕಾಶೆಂಪೂರ, ಎನ್‌ ಮಹೇಶ್‌, ಡಿ ಸಿ ತಮ್ಮಣ್ಣ ಸೇರಿದಂತೆ ಒಟ್ಟು ೨೫ ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಮಾರಂಭಕ್ಕೆ ಸಚಿವರ ಕುಟುಂಬದ ಸದಸ್ಯರು, ಅವರ ಆಪ್ತರು, ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
Editor’s Pick More