ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಹೈದರಾಬಾದ್ ಕರ್ನಾಟಕದಲ್ಲಿ ಬಿಎಎಸ್‌ವೈ ನೇತೃತ್ವದ ತಂಡದ ಪ್ರವಾಸ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದ ತಂಡವು ಗುರುವಾರದಿಂದ ಶನಿವಾರದವರೆಗೆ ಮೂರು ದಿನ ಹೈದರಾಬಾದ್ ಕರ್ನಾಟಕದ ೬ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ನಗರ ಸ್ಥಳೀಯ ಸಂಸ್ಥೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿಯ ಮೂರು ತಂಡಗಳು ಪ್ರವಾಸ ಕೈಗೊಳ್ಳಲಿವೆ. ಇದರ ಭಾಗವಾಗಿ ಬಿಎಸ್‌ವೈ ನೇತೃತ್ವದ ತಂಡವು ಮೊದಲ ಹಂತದಲ್ಲಿ ಬೀದರ್‌ನಲ್ಲಿ ಪ್ರವಾಸ ಆರಂಭಿಸಿ, ಕೊಪ್ಪಳದಲ್ಲಿ ಅಂತ್ಯಗೊಳಿಸಲಿದೆ. ಶಾಸಕ ಗೋವಿಂದ ಕಾರಜೋಳ, ಸಂಸದೆ ಶೋಭಾ ಕರಂದ್ಲಾಜೆ,‌ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ತಂಡದಲ್ಲಿದ್ದಾರೆ.

ರಾಜ್ಯಸಭಾ ಉಪಸಭಾಪತಿ ಆಯ್ಕೆಗೆ ಚುನಾವಣೆ

ರಾಜ್ಯಸಭಾ ಉಪಸಭಾಪತಿ ಆಯ್ಕೆಗೆ ಗುರುವಾರ ಬೆಳಗ್ಗೆ ೧೧ ಗಂಟೆಗೆ ಚುನಾವಣೆ ನಿಗದಿಯಾಗಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಯುನ ಹರಿವಂಶ್ ನಾರಾಯಣ್ ಸಿಂಗ್ ಕಣಕ್ಕಿಳಿದಿದ್ದು, ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕರ್ನಾಟಕದ ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ನ ಬಿ ಕೆ ಹರಿಪ್ರಸಾದ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್, ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಬೆಂಬಲ ನೂತನ ಸಭಾಪತಿ ಆಯ್ಕೆಗೆ ನಿರ್ಣಾಯಕವಾಗಲಿದೆ.

ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಜೈಲ್ ಭರೋ ಚಳವಳಿ

ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ಸಾಗುವಳಿದಾರರಿಗೆ ಉಳುಮೆ  ಚೀಟಿ, ನಿವೇಶನ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿ ಇಂದು ಬೆಂಗಳೂರಿನ ಪುರಭವನದ ಎದುರು ಜೈಲ್ ಭರೋ ಚಳವಳಿ ನಡೆಸಲು ಕರ್ನಾಟಕದ ರೈತ ಸಂಘಟನೆಗಳು ನಿರ್ಧರಿಸಿವೆ. ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು. ಬಗರ್‌ಹುಕುಂ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡ ರೈತರಿಗೆ ಸಾಗುವಳಿ ಪತ್ರವನ್ನು ನೀಡಬೇಕು ಎನ್ನುವುದು  ರೈತ ಮುಖಂಡರ ಆಗ್ರಹ.

ವಿಯೆಟ್ನಾಂ ಓಪನ್: ರಿತುಪರ್ಣಾ, ಅಜಯ್ ಜಯರಾಮ್‌ಗೆ ಕ್ವಾರ್ಟರ್‌ ಗುರಿ

ವಿಯೆಟ್ನಾಂ ಬ್ಯಾಡ್ಮಿಂಟನ್ ಓಪನ್ ಪಂದ್ಯಾವಳಿಯ ಪ್ರೀಕ್ವಾರ್ಟರ್‌ಫೈನಲ್ ತಲುಪಿರುವ ಭಾರತದ ಅಜಯ್ ಜಯರಾಮ್ ಹಾಗೂ ರಿತುಪರ್ಣ ದಾಸ್ ಎಂಟರ ಘಟ್ಟದ ಗುರಿ ಹೊತ್ತಿದ್ದಾರೆ. ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ರಿತುಪರ್ಣಾ ದಾಸ್ ಚೈನೀಸ್ ತೈಪೆಯ ಸುಂಗ್ ಶು ಯುನ್ ವಿರುದ್ಧ ಸೆಣಸಲಿದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಂ ದಕ್ಷಿಣ ಆಫ್ರಿಕಾದ ಯಗರ್ ಕೋಲ್ಹೋ ಎದುರು ಸೆಣಸಲಿದ್ದಾರೆ. ಮೊದಲ ಸುತ್ತಿನಲ್ಲಿ ಅಜಯ್, ಇಂಡೋನೇಷ್ಯಾದ ಜಿ ಪಿ ಫಿಕಿಯಿಲಾಹಿ ಕುಪು ವಿರುದ್ಧ ೨೧-೭, ೨೧-೧೬ರಿಂದ ಜಯ ಪಡೆದರೆ, ರಿತುಪರ್ಣಾ ದಾಸ್ ೨೧-೧೩, ೨೧-೧೪ರ ಎರಡು ಗೇಮ್‌ಗಳಲ್ಲಿ ಜಪಾನ್ ಆಟಗಾರ್ತಿ ಶಿಯೊರಿ ಸೈಟೋ ವಿರುದ್ಧ ಜಯ ಸಾಧಿಸಿದರು.

ಇಂದಿನಿಂದ ಲಾರ್ಡ್ಸ್ ಟೆಸ್ಟ್: ಕೊಹ್ಲಿ ಪಡೆಗೆ ಎರಡನೇ ಪರೀಕ್ಷೆ

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ೦-೧ ಹಿನ್ನಡೆ ಅನುಭವಿಸಿರುವ ವಿರಾಟ್ ಕೊಹ್ಲಿ ಪಡೆಗೆ ಲಾರ್ಡ್ಸ್ ಟೆಸ್ಟ್ ಪಂದ್ಯ ಎರಡನೇ ಪರೀಕ್ಷೆಯಾಗಿದೆ. ಭಾರತೀಯ ಕಾಲಮಾನ ಇಂದು ಮಧ್ಯಾಹ್ನ ೩.೨೦ರಿಂದ ಶುರುವಾಗಲಿರುವ ಪಂದ್ಯದಲ್ಲಿ ಗೆಲುವು ಸಾಧಿಸುವ ಗುರಿ ಹೊತ್ತಿರುವ ಭಾರತ ತಂಡ ೧-೧ ಸರಣಿ ಸಮಬಲಕ್ಕೆ ಕಾದಿದೆ. ಆದರೆ, ಮೊದಲ ಪಂದ್ಯದಲ್ಲಿನ ಗೆಲುವಿನಿಂದ ಆತ್ಮವಿಶ್ವಾಸದಲ್ಲಿರುವ ಕೊಹ್ಲಿ ಸಾರಥ್ಯದ ಭಾರತ ತಂಡ, ಸರಣಿಯಲ್ಲಿ ೨-೦ ಮುನ್ನಡೆ ಸಾಧಿಸುವ ಛಲದಲ್ಲಿದೆ. ಒಟ್ಟಾರೆ, ಇಂಡೋ-ಆಂಗ್ಲೋ ನಡುವಣದ ಎರಡನೇ ಟೆಸ್ಟ್ ಪಂದ್ಯ ಅಭಿಮಾನಿಗಳ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More